ಸಾಪ್ತಾಹಿಕಪ್ರಭ

ಕಮಲ ಸಂಭವ

ಎಂಟು ಸಂಪುಟಗಳಲ್ಲಿ ಕಮಲಾ ಹಂಪನಾ ಕೃತಿ ಶ್ರೇಣಿ
ಕನ್ನಡದ ಬಹುಶ್ರುತ ವಿದ್ವಾಂಸರಲ್ಲಿ ಒಬ್ಬರಾದ ಡಾ. ಕಮಲಾ ಹಂಪನಾ ಅವರ ಸಮಗ್ರ ಬರೆಹಗಳ ಸಂಪುಟಗಳನ್ನು ಹೊರತರುವ ಯೋಜನೆಯನ್ನು ಸಪ್ನ ಬುಕ್‌ಹೌಸ್ ರೂಪಿಸಿದೆ. ಅವುಗಳಲ್ಲಿ 'ಭೂಮಿಕಾ' ಎಂಬ ಮೊದಲ ಸಂಪುಟ, 'ಭರಣ' ಎಂಬ ಐದನೆಯ ಸಂಪುಟ ಪರಿಶೀಲನೆಗೆ ಲಭ್ಯವಾಗಿದೆ. ಇದರ ಜತೆಗೆ ಆಚಾರ್ಯ ಸೋಮದೇವ ಸೂರಿಯ 'ನೀತಿ ವಾಕ್ಯಾಮೃತ' ಕೃತಿಯ ತಿಳಿಗನ್ನಡ ಭಾವಾನುವಾದವೂ ಪ್ರಕಟವಾಗಿದೆ.
ಹಿರಿಯ ಸಾಹಿತಿಗಳ ಸಮಗ್ರ ಸಾಹಿತ್ಯದ ಪ್ರಕಟಣೆ ಒಂದು ಸ್ವಾಗತಾರ್ಹವಾದ ಕಾರ್ಯವಾಗಿದೆ. ಕಮಲಾ ಹಂಪನಾ ಅವರ ಸಂಪುಟಗಳಲ್ಲಿ ಸೇರಿರುವ ಲೇಖನಗಳೆಲ್ಲ ಈಗಾಗಲೇ ಪ್ರಕಟವಾಗಿ ವಿದ್ವಾಂಸರ ಪರಿಶೀಲನೆಗೆ ಒಳಪಟ್ಟವುಗಳು. ಅವುಗಳ ವಿಮರ್ಶೆ ಇಲ್ಲಿಯ ಉದ್ದೇಶವಲ್ಲ. 'ಭೂಮಿಕಾ' ಸಂಶೋಧನ ಪ್ರಬಂಧಗಳ ಸಂಪುಟವಾಗಿದೆ. ಈಗಾಗಲೆ ಪ್ರಕಟವಾಗಿರುವ ಒಂಬತ್ತು ಪುಸ್ತಕಗಳ ಕ್ರೋಡೀಕೃತ ಕೃತಿ ಇದು. ಮೂವತ್ತೈದು ಪ್ರಬಂಧಗಳು ಕಮಲಾ ಅವರದು. ಉಳಿದ ಆರು ಪ್ರಬಂಧಗಳು ಬಿತ್ತರ, ಬದ್ಧವಣ, ಬೊಂಬಾಳ, ರೋಣಬಸದಿ, ಚಾವುಂಡರಾಯ ಪುರಾಣ ಮತ್ತು ಸಮಗ್ರ ಜೈನ ಸಾಹಿತ್ಯ ಸಂಪಟ-2 ಈ ಕೃತಿಗಳ ಪ್ರಧಾನ ಸಂಪಾದಕರು ಬರೆದ ಮುನ್ನುಡಿಯ ಮಾತುಗಳು.
ಉದ್ದೇಶಿಸಲಾದ ಎಂಟು ಸಂಪುಟಗಳಲ್ಲಿ ಎರಡನೆಯದು 'ಬತೇರಿ'. ಇದರಲ್ಲಿ ವಿಮರ್ಶಾ ಪ್ರಬಂಧಗಳಿರುತ್ತವೆ. ಮೂರನೆಯದು 'ಬತ್ತಳಿಕೆ'. ಇದರಲ್ಲಿ ವೈಚಾರಿಕ ಪ್ರಬಂಧಗಳು ಇರುತ್ತವೆ. ನಾಲ್ಕನೆಯದು 'ಬೆರಗು'. ಇದರಲ್ಲಿ  ಕಮಲಾ ಬರೆದ ವ್ಯಕ್ತಿಚಿತ್ರಗಳಿರುತ್ತವೆ.
'ಭರಣ' ಐದನೆಯ ಸಂಪುಟ. ಇದು ಸ್ತ್ರೀ ಸಂವೇದನೆಗೆ ಮೀಸಲು. ಹೆಣ್ಣಿಗೆ ಸಂಬಂಧಿಸಿದ ವೈಚಾರಿಕ, ವಿಮರ್ಶಾತ್ಮಕ, ಸಂಶೋಧನಾತ್ಮಕ ಪ್ರಬಂಧಗಳು, ವ್ಯಕ್ತಿಚಿತ್ರಗಳು, ಮಹಿಳಾ ಸಾಹಿತಿಗಳ ಕೃತಿಗಳಿಗೆ ಬರೆದ ಮುನ್ನುಡಿಗಳು, ಅಭಿಪ್ರಾಯಗಳೆಲ್ಲ ಇದರಲ್ಲಿ ಸೇರಿವೆ. 'ಭರಣ'- ಇದು ಕೇವಲ ಬರಿಯ ಮಾತಲ್ಲ. ಬರಿಯ ಬರಹವಲ್ಲ. ಇದೊಂದು ಹೊರ ಜಗತ್ತಿಗೂ ಮಹಿಳೆಯ ಅಂತರಂಗಕ್ಕೂ ನಡೆದ ನಿರಂತರ ಹೋರಾಟ. ದಿಕ್ಕುಗಳ ಧ್ವನಿತರಂಗಗಳ ಮೊಳಗಿನ ಮೊತ್ತ. ಇದು ಅಂದು, ಇಂದು, ಎಂದೆಂದೂ ವಿವಿಧ ರೂಪ, ಆಕಾರಗಳಲ್ಲಿ ಧುತ್ತೆಂದು ಪ್ರತ್ಯಕ್ಷವಾಗುವ ಮಿಂಚು, ಆರ್ಭಟಿಸುವ ಗುಡುಗು- ಸಿಡಿಲುಗಳು ಎಂದು ಅದರ ಮುನ್ನುಡಿಯಲ್ಲಿ ಸ್ವತಃ ಕಮಲಾ ಅವರೇ ಹೇಳಿಕೊಂಡಿದ್ದಾರೆ.
ಆರನೆಯ ಸಂಪುಟ 'ಬಹುಳ'. ಕಥಾಗುಚ್ಛವಾಗಿದೆ. ಇದರಲ್ಲಿ ಸಾಮಾಜಿಕ, ಚಾರಿತ್ರಿಕ, ಜನಪದ ಕಥೆಗಳು ಹಾಗೂ ಮಕ್ಕಳ ನೀಳ್ಗತೆಗಳಿರುತ್ತವೆ. 'ಬಹುಧಾ' ಏಳನೆಯ ಸಂಪುಟ. ಇದರಲ್ಲಿ ಆಕಾಶವಾಣಿಯ ಭಾಷಣಗಳು, ಚಿಂತನಗಳು, ನಾಟಕಗಳು, ರೂಪಕಗಳು ಒಂದು ಭಾಗದಲ್ಲಿ ಹಾಗೂ ಅನುವಾದಿಸಿದ ಎರಡು ಕವನ ಗುಚ್ಛ ಇನ್ನೊಂದು ಭಾಗದಲ್ಲಿ. ಕೊನೆಯ ಭಾಗದಲ್ಲಿ ಕಮಲಾ ಅವರು ಬರೆದ ಆಧುನಿಕ ವಚನಗಳು ಹಾಗೂ ಕವನಗಳಿರುತ್ತವೆ. ಎಂಟನೆಯ ಸಂಪುಟ 'ಬೇರು-ಬಿಳಿಲು' ಆತ್ಮಕಥೆಯ ರೂಪದಲ್ಲಿ ಹೊರಬರಲಿದೆ.
ಕಮಲಾ ಅವರ ಐವತ್ತು ವರ್ಷಗಳ ಸಾಹಿತ್ಯ ಕೃಷಿಯ ಫಸಲನ್ನು ಈ ಸಂಪುಟಗಳಲ್ಲಿ ನೋಡಬಹುದು. ಅವರ ಅರವತ್ತು ಪುಸ್ತಕಗಳು ಸಾಹಿತ್ಯದ ಹದಿಮೂರು ಪ್ರಕಾರಗಳಲ್ಲಿ ಪ್ರಕಾಶಗೊಂಡಿವೆ. ಒಬ್ಬ ಸಾಹಿತಿಯ ಬದುಕಿನಲ್ಲಿ ಇದು ಸಂಭ್ರಮಪಡುವ ಸಂಗತಿಯೇ ಹೌದು.
ಇದೇ ಸಂದರ್ಭದಲ್ಲಿ ಪ್ರಕಟಗೊಂಡಿರುವ ಕಮಲಾ ಅವರ ಇನ್ನೊಂದು ಗ್ರಂಥ 'ಆಚಾರ್ಯ ಸೋಮದೇವ ಸೂರಿಯ ನೀತಿವಾಕ್ಯಾಮೃತ'. ಮೂಲ ಸಂಸ್ಕೃತದಲ್ಲಿರುವ ಈ ಕೃತಿಗೆ ನೇಮಿನಾಥ ಕವಿಯು ಹಳಗನ್ನಡದಲ್ಲಿ ಪದಶಃ ಅರ್ಥವನ್ನು ಬರೆದಿರುವರು. ರಾಜನೀತಿಯ ಜತೆಗೆ ಸಾಮಾಜಿಕ ಕಳಕಳಿಯ, ಜನಮುಖಿ ಚಿಂತನೆಯ ಅನೇಕ ಅಂಶಗಳು ಇಂದಿಗೂ ಪ್ರಸ್ತುತವಾಗಿವೆ. ಸೋಮದೇವ ಸೂರಿಯ ನಿಶದಿ ಶಾಸನ ಇತ್ತೀಚೆಗೆ ಕೊಪ್ಪಳದಲ್ಲಿ ಪತ್ತೆಯಾಗಿದೆ. ಅದನ್ನೆಲ್ಲ ಸೇರಿಸಿ ಇದಕ್ಕೆ ಪ್ರಸ್ತಾವನೆಯನ್ನು ಬರೆದು ಹೊಸಗನ್ನಡದಲ್ಲಿ ಮೂಲ ಸಂಸ್ಕೃತ ಸೂಕ್ತಿಗಳಿಗೆ ಅರ್ಥವನ್ನು ಬರೆದಿದ್ದಾರೆ. ಆ ಕಾಲಕ್ಕೆ ಕ್ರಾಂತಿಕಾರಿ ಎನಿಸುವಂಥ ಹಲವು ಸಲಹೆಗಳನ್ನು ಸೋಮದೇವ ಸೂರಿ ನೀಡಿದ್ದರು.
ಆಧುನಿಕ ಕನ್ನಡದ ಪ್ರಮುಖ ಲೇಖಕಿಯಾಗಿರುವ ಕಮಲಾ ಹಂಪನಾ ತಮ್ಮ ನೆಚ್ಚಿನ ಗುರುಗಳಾದ ಹಾ.ಮಾ.ನಾಯಕರ ಹಾಗೆಯೇ ತಮ್ಮ ಕೃತಿ ಸಂಪುಟಕ್ಕೆ 'ಬ'ಕಾರದಿಂದ ಹೆಸರುಗಳನ್ನು ಇಟ್ಟಿದ್ದಾರೆ. ಹಾಮಾನಾ ತಮ್ಮ ಕೃತಿಗಳಿಗೆಲ್ಲ 'ಸ'ಕಾರದಿಂದ ಹೆಸರನ್ನಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೊಂದು ರೀತಿಯಲ್ಲಿ ಕಮಲಾ ಅವರ ಗುರುಸ್ಮರಣೆ.
ಸಮಕಾಲೀನ ಆಗುಹೋಗುಗಳಿಗೆ ಸಕ್ರಿಯವಾಗಿ ಮುಖಾಮುಖಿಯಾಗುವ ಮನೋಧರ್ಮ ಹೊಂದಿರುವ ಕಮಲಾ ಅವರು ಇನ್ನಷ್ಟು ಕೃತಿಗಳ ಮೂಲಕ ಕನ್ನಡ ವಾಗ್ದೇವಿಯ ಭಂಡಾರವನ್ನು ತುಂಬಲಿ ಎಂದು ಹಾರೈಕೆ.

ಕೊಡಗಿನ ಗೌರಮ್ಮ
ಕೊಡಗಿನ ಹಾಲೇರಿ ವಂಶದ ಕೊನೆಯ ದೊರೆ ಚಿಕವೀರರಾಜೇಂದ್ರ ಮತ್ತು ದೇವಮ್ಮ ಅವರ ಮಗಳು ಗೌರಮ್ಮ. ಪಂಜಾಬಿನ ಮಹಾರಾಜ ರಣಜಿತ್ ಸಿಂಗ್ ಅವರ ಮಗ ದುಲೀಪ್‌ಸಿಂಗ್. ಈ ಇಬ್ಬರನ್ನು ಇಂಗ್ಲೆಂಡಿನ ಮಹಾರಾಣಿ ವಿಕ್ಟೋರಿಯಾ ತನ್ನ ಸಾಕುಮಕ್ಕಳನ್ನಾಗಿ ಮಾಡಿಕೊಂಡು ಪೋಷಿಸಿದ್ದನ್ನು ಸಿ.ಪಿ. ಬೆಳ್ಳಿಯಪ್ಪ 'ವಿಕ್ಟೋರಿಯಾ ಗೌರಮ್ಮ' ಕಥಾನಕದಲ್ಲಿ ಹೇಳಿದ್ದಾರೆ. ಈ ಇಬ್ಬರನ್ನು ಇಂಗ್ಲೆಂಡಿನಲ್ಲಿ ಮತಾಂತರಗೊಳಿಸಲಾಗುತ್ತದೆ. ಇವರಿಬ್ಬರ ಮದುವೆ ಮಾಡಿಸಬೇಕು ಎಂದು ರಾಣಿ ಬಯಸುತ್ತಾಳೆ. ಆದರೆ ಅದು ಆಗುವುದಿಲ್ಲ. ಆ ಕಾಲದ ಭಾರತದ ರಾಜಕೀಯ ಪರಿಸ್ಥಿತಿ, ಈಸ್ಟ್ ಇಂಡಿಯಾ ಕಂಪನಿಯ ಒಳತಂತ್ರಗಳು, ಇಂಗ್ಲೆಂಡಿನ ರಾಣಿಯ ಮಾನವೀಯ ಮುಖ ಇವೆಲ್ಲ ಈ ಕೃತಿಯಲ್ಲಿ ಅನಾವರಣಗೊಂಡಿವೆ. ಬ್ರಿಟಿಷ್ ಇಂಡಿಯಾ ಮತ್ತು ವಿಕ್ಟೋರಿಯಾ ರಾಣಿಯ ಅಂತರಂಗದ ದರ್ಶನಕ್ಕೆ ಇದೊಂದು ಒಳಗನ್ನಡಿ. ಬಹಳ ಅಧ್ಯಯನದಿಂದ ಇಲ್ಲಿ ವಿವರಗಳನ್ನು ಕಲೆಹಾಕಲಾಗಿದೆ.
ಕೃತಿ: ವಿಕ್ಟೋರಿಯಾ ಗೌರಮ್ಮ, ಪ್ರಕಾರ: ಇತಿಹಾಸ
ಏಕೆ ಓದಬೇಕು?: ಹತ್ತೊಂಬತ್ತನೆ ಶತಮಾನದ ಭಾರತದ ಚರಿತ್ರೆ ಅರಿಯಲು, ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 208, ಬೆಲೆ ರು. 150

ವ್ಯಾಕರಣ ರಹಸ್ಯ
ಹಳೆಗನ್ನಡ ವ್ಯಾಕರಣದಲ್ಲಿ ಪಾಂಡಿತ್ಯವನ್ನು ಹೊಂದಿದವರಲ್ಲಿ ಪ್ರೊ.ಪಿ. ಶ್ರೀಕೃಷ್ಣ ಭಟ್ ಪ್ರಮುಖರು. ಹಳೆಗನ್ನಡ ವ್ಯಾಕರಣವನ್ನು ಆಧುನಿಕ ಭಾಷಾವಿಜ್ಞಾನದ ನೆಲೆಯಲ್ಲಿ ಸೊಗಸಾಗಿ ವಿವೇಚಿಸಬಲ್ಲವರು ಅವರು. ಪ್ರಸ್ತುತ ಅವರ 'ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು' ಕೃತಿಯಲ್ಲಿ ಕನ್ನಡದ ವ್ಯಾಕರಣ ಪರಂಪರೆಯನ್ನು ವಿವರಿಸಲಾಗಿದೆ. ವ್ಯಾಕರಣವು ಕಾಲಕಾಲಕ್ಕೆ ಬದಲಾಗುವಂಥದ್ದು. ಭಾಷೆಯು ಬದಲಾದಂತೆ ವ್ಯಾಕರಣವೂ ಬದಲಾಗುತ್ತದೆ. ಭಾಷೆ ಮೊದಲು. ವ್ಯಾಕರಣವು ನಂತರದ್ದು. ಕಾಲದಿಂದ ಕಾಲಕ್ಕೆ ಕನ್ನಡದಲ್ಲಿ ಬದಲಾಗುತ್ತ ಬಂದ ವ್ಯಾಕರಣವನ್ನು ಭಟ್ಟರು ಸೋದಾಹರಣವಾಗಿ ಇಲ್ಲಿ ವಿವೇಚಿಸಿದ್ದಾರೆ. ವ್ಯಾಕರಣವು ಇಂದು ವಿದ್ಯಾರ್ಥಿಗಳು ಪರೀಕ್ಷೆಗಾಗಿ ಮಾತ್ರ ಓದುವ ಭಾಗವಾಗಿದೆ. ಕನ್ನಡ ವ್ಯಾಕರಣಕ್ಕೆ ಸಂಸ್ಕೃತ ವ್ಯಾಕರಣವೇ ಮಾದರಿಯಾದರೂ ಕನ್ನಡದ ವಿಶೇಷತೆಗಳನ್ನು ಯಾರು ಯಾರು ಹೇಗೆ ಗುರುತಿಸಿದ್ದಾರೆ, ಅದು ಎಷ್ಟರಮಟ್ಟಿಗೆ ಸರಿ ಎಂಬಂಥ ವಿವೇಚನೆ ಈ ಕೃತಿಯಲ್ಲಿದೆ.
ಕೃತಿ: ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು
ಪ್ರಕಾರ: ವ್ಯಾಕರಣ
ಏಕೆ ಓದಬೇಕು?: ಕನ್ನಡ ಭಾಷೆ ಅರಿಯಲು
ಪ್ರ: ಯಾಜಿ ಪ್ರಕಾಶನ, ಹೊಸಪೇಟೆ, ಪುಟಗಳು 364, ಬೆಲೆ ರು. 300

ಭೂಮಿಪುತ್ರ
ಗೊಬ್ಬರ ತುಂಬಿದ ಕೈಬರೆದ/ ಮಣ್ಣಿನ ಹಾಡು ನನ್ನದು/ ಬೆವರು ಸುರಿಸಿ ಕಷ್ಟದಿ ದುಡಿದ/ ನೆಲದಪದ ನನ್ನದು/ ಮುದ್ದೆಸೊಪ್ಪಿನ ಸಾರು ಕಂಡ/ ರೈತರ ಮುದ ನನ್ನದು- ಎಂದು ತಮ್ಮ ಕಾವ್ಯವನ್ನು ವಿಶ್ಲೇಷಿಸಿಕೊಂಡಿರುವ ಡಾ.ದೊಡ್ಡರಂಗೇಗೌಡರು ತಮ್ಮ ಕಾವ್ಯದಲ್ಲಿ ಬಡವರಿಗಾಗಿ ಮಿಡಿದಿದ್ದಾರೆ. ಅವರೊಬ್ಬ ಜನತಾ ಕವಿ. ನಿಂತಲ್ಲಿಯೇ ಒಂದು ವಿಷಯದ ಮೇಲೆ ಕಾವ್ಯ ರಚಿಸುವಂಥ ಆಶುಕವಿತ್ವ ಅವರಲ್ಲಿದೆ. ಎಲ್ಲರನ್ನೂ ಪ್ರೀತಿಯಿಂದ ಕಾಣುವ ದೊಡ್ಡರಂಗೇಗೌಡರ ಬದುಕು ಮತ್ತು ಬರೆಹದ ಕೃತಿ 'ಭೂಮಿಪುತ್ರ' ವನ್ನು ಡಾ.ಟಿ.ಎಸ್. ವಿಶ್ವನಾಥ್ ಅವರು ಸಂಪಾದಿಸಿಕೊಟ್ಟಿದ್ದಾರೆ. ಇದರಲ್ಲಿ 118 ಲೇಖನಗಳಿವೆ. ಡಾ. ಸಿದ್ಧಲಿಂಗಯ್ಯನವರು ಇದಕ್ಕೊಂದು ಮುನ್ನುಡಿಯನ್ನು ಬರೆದಿದ್ದಾರೆ. ನಾಡಿನ ದೊಡ್ಡದೊಡ್ಡ ವಿದ್ವಾಂಸರೆಲ್ಲ ಬರೆದ ಲೇಖನಗಳು ಇಲ್ಲಿವೆ. ಸಾಹಿತ್ಯ, ಸಂಸ್ಕೃತಿಯ ಪರಿಚಾರಕರಾದ ದೊಡ್ಡರಂಗೇಗೌಡರ ವ್ಯಕ್ತಿತ್ವ ಮತ್ತು ಅವರ ಸಾಹಿತ್ಯವನ್ನೆಲ್ಲ ಅರಿತುಕೊಳ್ಳಲು ಈ ಗ್ರಂಥ ಉಪಯುಕ್ತವಾಗಿದೆ. 
ಕೃತಿ: ಭೂಮಿಪುತ್ರ
ಪ್ರಕಾರ: ವ್ಯಕ್ತಿಚಿತ್ರ, ವಿಮರ್ಶೆ
ಏಕೆ ಓದಬೇಕು?: ದೊಡ್ಡರಂಗೇಗೌಡರ ಅಧ್ಯಯನಕ್ಕೆ
ಪ್ರ: ಶ್ರೀಬೀರೇಶ್ವರ ಪ್ರಕಾಶನ, ಸುದ್ದೇಕುಂಟೆ, ಮಧುಗಿರಿ, ಪುಟಗಳು 544, ಬೆಲೆ ರು. 300

ಅನಿವಾಸಿಗಳೇ ವಾಸಿ
ಡುಂಡಿರಾಜ್ ಅವರು ಅಮೆರಿಕದ ಅಕ್ಕ ಸಮ್ಮೇಳನಕ್ಕೆ ಹೋಗಿದ್ದರು. ಆಗಿನ ಅಮೆರಿಕದ ಅನುಭವಗಳನ್ನು ಕಣ್ಣಿಗೆ ಕಂಡಷ್ಟು ಅಕಲಿಗೆ ಇಳಿದಷ್ಟು ತಮ್ಮ ನವಿರಾದ ಹಾಸ್ಯಶೈಲಿಯಲ್ಲಿ 'ಅನಿವಾಸಿಗಳೇ ವಾಸಿ' ಕೃತಿಯಲ್ಲಿ ನೀಡಿದ್ದಾರೆ. ನಾಡಿಗೇರ ಕೃಷ್ಣರಾಯರು, ಝ್ಛ್ಝೀಯುವರ ಹಾಸ್ಯ ಬರೆವಣಿಗೆಯ ಮುಂದುವರಿದ ಭಾಗವಾಗಿ ಡುಂಡಿರಾಜರು ಕನ್ನಡ ಸಾಹಿತ್ಯಕ್ಕೆ ಒದಗಿ ಬಂದರು. ಹನಿಗಾರಿಕೆಯಲ್ಲಿ ತಮ್ಮ ಚಾಪು ಮೂಡಿಸಿರುವ ಡುಂಡಿರಾಜರ ಸೊಗಸಾದ ಗದ್ಯ ಇಲ್ಲಿದೆ. ಅಮೆರಿಕಕ್ಕೆ ಹೋಗಿಬಂದ ಹಲವರು ಈಗಾಗಲೆ ಪ್ರವಾಸ ಕಥನಗಳನ್ನು ಬರೆದಿರುವರು. ಡುಂಡಿರಾಜರ ಕೃತಿಯು 'ಕೇವಲ ಪ್ರವಾಸಕಥನವಾಗಿರದೆ ಅಮೆರಿಕದ ಪ್ರಚಲಿತ ಜನಜೀವನ, ವ್ಯಕ್ತಿಗಳ ಸ್ವಭಾವ, ಕಾರ್ಯಕರ್ತರ ಸಂಘಟನಾ ಚಾತುರ್ಯ, ಸ್ನೇಹಸೌಹಾರ್ದ ಮುಂತಾದವುಗಳು ನಮ್ಮ ಕಣ್ಣಮುಂದೆ ಕಟ್ಟಿದಂತೆ ಚಿತ್ರಿತವಾಗಿವೆ' ಎಂದು ಎಂ.ಎಸ್. ನರಸಿಂಹಮೂರ್ತಿ 'ಟೇಕಾಫ್‌ಗೆ ಮೊದಲು' ಹೇಳಿದ್ದಾರೆ. ಬರೆಹಗಳೆಲ್ಲ ಪುಟ್ಟದಾಗಿದ್ದು ಚುಟುಕುತನ ಕಾಣುವುದು.
ಕೃತಿ: ಅನಿವಾಸಿಗಳೇ ವಾಸಿ, ಪ್ರಕಾರ: ಪ್ರವಾಸಕಥನ
ಏಕೆ ಓದಬೇಕು?: ಅಮೆರಿಕದ ಬಗ್ಗೆ ಇನ್ನಷ್ಟು ತಿಳಿಯಲು
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 88, ಬೆಲೆ ರು. 70

ಮೂಡಲಪಾಯ ಯಕ್ಷಗಾನ
ಕರಾವಳಿ ಯಕ್ಷಗಾನಕ್ಕೆ ಇರುವ ಪ್ರಚಾರ ಮತ್ತು ಪ್ರಸಿದ್ಧಿ ಮೂಡಲಪಾಯ ಯಕ್ಷಗಾನ ಪ್ರಕಾರಕ್ಕೆ ಇಲ್ಲ. ಇದು ಮೌಖಿಕ ಪರಂಪರೆಯ ಅನಂತ ಸಾಧ್ಯತೆಗಳನ್ನು ದುಡಿಸಿಕೊಂಡಿರುತ್ತದಾದರೂ ಪಂಡಿತ ಮಂಡಳಿಯ ತಿರಸ್ಕಾರಕ್ಕೆ ಒಳಗಾಗಿದೆ. ಮೂಡಲಪಾಯ ಯಕ್ಷಗಾನ ಕೃತಿಗಳನ್ನು ರಚಿಸಿದವರಲ್ಲಿ ದೊಡ್ಡಬಳ್ಳಾಪುರದ ಸುಬ್ಬರಾಯಪ್ಪನವರು ಪ್ರಮುಖರು. ಮೂಡಲಪಾಯ ಯಕ್ಷಗಾನವು ಕೇವಲ ಮನರಂಜನೆಯ ಪ್ರಕಾರವಾಗಿರದೆ ಜನಪದರ ಬದುಕಿನ ಅವಿಭಾಜ್ಯ ಅಂಗವಾಗಿದ್ದಿತು. ಸುಬ್ಬರಾಯಪ್ಪನವರು ರಚಿಸಿದ ಕೃತಿಗಳು ಎಂಟು. ಅದರಲ್ಲಿ ಒಂದು ಏಸುಸ್ವಾಮಿಯ ಕಥೆ. ಇದು ಕುತೂಹಲಕಾರಿಯಾಗಿದೆ. ಈ ಕೃತಿಯಲ್ಲಿ ಬಭ್ರುವಾಹನ ಕಾಳಗ, ತಾಮ್ರಧ್ವಜನ ಕಾಳಗ, ಸುವರ್ಣಾದೇವಿ ಪರಿಣಯ, ಸ್ವಾಹಾದೇವಿ ಪರಿಣಯ, ಸುಭದ್ರಾ ಪರಿಣಯ ಎಂಬ ಐದು ಪ್ರಸಂಗಗಳಷ್ಟೇ ಇವೆ. ಈ ಕೃತಿಯನ್ನು ಸಂಪಾದಿಸಿರುವ ಡಾ. ಚಕ್ಕೆರೆ ಶಿವಶಂಕರ್ ಅವರು ಇದಕ್ಕೆ ಅಧ್ಯಯನಪೂರ್ಣ ಪ್ರಸ್ತಾವನೆಯನ್ನು ಬರೆದಿರುವರು. 
ಕೃತಿ: ಹಿರೇಬಳ್ಳಾಪುರ ಸುಬ್ಬರಾಯಪ್ಪನವರ ಮೂಡಲಪಾಯ ಯಕ್ಷಗಾನ ಪ್ರಸಂಗಗಳು, ಪ್ರಕಾರ: ಯಕ್ಷಗಾನ
ಏಕೆ ಓದಬೇಕು?: ಮೂಡಲಪಾಯ ಯಕ್ಷಗಾನ ಅರಿಯಲು, ಪ್ರ: ಸಾಗರ್ ಪ್ರಕಾಶನ, ಬೆಂಗಳೂರು, ಪುಟಗಳು 568, ಬೆಲೆ ರು. 310

ನಗುವ ಜಗತ್ತು
ನಗುವುದು ಸಹಜ ಧರ್ಮ, ನಗಿಸುವುದು ಪರ ಧರ್ಮ, ನಗುವ ಕೇಳುತ ನಕ್ಕು ನಲಿವುದು ಅತಿಶಯದ ಧರ್ಮ ಎಂದು ಡಿ.ವಿ.ಜಿ.ಯವರು ಹೇಳಿದ್ದಾರೆ. 'ನಕ್ಕರೇ ಅದೇ ಸ್ವರ್ಗ' ಎಂಬ ಸಿನಿವೊಂದು ಹಿಂದೆ ಬಂದಿತ್ತು. ಇವೆಲ್ಲ ನಗುವಿನ ಮಹತ್ವವನ್ನು ಹೇಳುತ್ತವೆ. ಇಂದಿನ ಒತ್ತಡದ ಜೀವನಶೈಲಿಯಿಂದ ಕೊಂಚ ನಿರಾಳತೆಯನ್ನು ಅನುಭವಿಸಲಿಕ್ಕೆ ಹಾಸ್ಯದ ಅಗತ್ಯವಿದೆ. ಕೆಲವು ರೋಗ ಶಮನಕ್ಕೆ ನಗುವಿನ ಥೆರಪಿಗಳೂ ಬಂದಿವೆ. ಪ್ರೊ.ವಿ.ಎ. ಜೋಶಿಯವರು ಬರೆದ ಐವತ್ತು ಹಾಸ್ಯ ಲೇಖನಗಳ ಸಂಕಲನ 'ಜೈ ಜಗತ್‌' ಇದೀಗ ಬಂದಿದೆ. ಇವೆಲ್ಲ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಲೇಖನಗಳೇ. ನವಿರಾದ ಹಾಸ್ಯ ಜಿನುಗುವಂತೆ ಬರೆಯುವ ಶೈಲಿಯು ಜೋಶಿಯವರಿಗೆ ಸಿದ್ಧಿಸಿದೆ. ಹಾಸ್ಯ ಸಾಹಿತಿಗೆ ವಸ್ತುವನ್ನು ಹುಡುಕಿಕೊಂಡು ಎಲ್ಲಿಯೋ ಹೋಗಬೇಕಾಗಿಲ್ಲ. ಗ್ರಹಿಸುವ ಮನಸ್ಸಿದ್ದರೆ ಆತ ಇದ್ದಲ್ಲಿಯೇ ವಸ್ತುಗಳು ಹೊಳೆಯುತ್ತವೆ. ನೀವೂ ಒಮ್ಮೆ ಓದಿ ನಕ್ಕು ಹಗುರಾಗಿ.
ಕೃತಿ: ಜೈ ಜಗತ್, ಪ್ರಕಾರ: ನಗೆಬರೆಹ, ಏಕೆ ಓದಬೇಕು?: ನಕ್ಕು ಹಗುರಾಗಲು, ಪ್ರ: ಕೌಸ್ತುಭ ಪ್ರಕಾಶನ, ಬೆಂಗಳೂರು, ಪುಟಗಳು 206, ಬೆಲೆ ರು. 105

ಶಿಲಾ ಶಿವಾನಂದ
ಶಿಲ್ಪಕಲೆಯ ಬಗ್ಗೆ ಸಮಕಾಲೀನ ದಿನಗಳಲ್ಲಿ ಕನ್ನಡದಲ್ಲಿ ಬರೆಯುತ್ತಿರುವ ವಿರಳ ವಿದ್ವಾಂಸರಲ್ಲಿ ಒಬ್ಬರಾಗಿರುವ ಡಾ. ಶಿವಾನಂದ ಎಚ್. ಬಂಟನೂರ ಅವರು 'ಮಾಟದೊಳಗಣ ನೋಟ' ಕೃತಿಯಲ್ಲಿ  ಸಾಂಪ್ರದಾಯಿಕ ಶಿಲ್ಪಕಲೆಗಳ ರಚನಾ ವಿಧಾನ, ಹಿನ್ನೆಲೆ, ಅರ್ಥ, ಸ್ವರೂಪ ಇವುಗಳನ್ನು ಉಳಿಸಿಕೊಂಡು ಬಂದಿರುವ ಮನುಷ್ಯನ ನಂಬಿಕೆಗಳನ್ನು ದಾಖಲಿಸಿದ್ದಾರೆ. ದೃಶ್ಯಕಲೆಯಲ್ಲಿ ಚಿತ್ರಕಲೆ ಮತ್ತು ಶಿಲ್ಪಕಲೆ ಎಂದು ಎರಡು ರೀತಿ. ಇವುಗಳ ನಡುವಿನ ವ್ಯತ್ಯಾಸ ತೀರ ತೆಳುವಾಗುವಂಥ ಆಧುನಿಕ ಪ್ರಯೋಗಗಳು ನಡೆದಿವೆ. ಆರಾಧನೆಯಲ್ಲಿ ಲೋಹಶಿಲ್ಪಗಳು, ಸಾಂಪ್ರದಾಯಿಕ ಶಿಲ್ಪಕಲೆ, ಮನೆಯೂ ಹೇಗೆ ಒಂದು ವಾಸ್ತುಶಿಲ್ಪವಾಗುತ್ತದೆ, ಜನಪದ ಶಿಲ್ಪಗಳು, ಮರಶಿಲ್ಪಗಳ ರಚನೆ ಮತ್ತು ಸ್ವರೂಪ ಇವುಗಳ ಚರ್ಚೆಯ ಜತೆಗೆ ಸಮಕಾಲೀನ ಶಿಲ್ಪಕಲೆಯ ಒಳನೋಟವನ್ನು ಹೊಂದಿದ ಲೇಖನಗಳು ಇಲ್ಲಿವೆ. ಶಿಲ್ಪಕಲೆಯ ವಿದ್ಯಾರ್ಥಿಗಳಿಗೆ ಇದು ಉಪಯುಕ್ತ ಕೃತಿ.
ಕೃತಿ: ಮಾಟದೊಳಗಣ ನೋಟ, ಪ್ರಕಾರ: ಲೇಖನಗಳು
ಏಕೆ ಓದಬೇಕು?: ಶಿಲ್ಪಕಲೆಯ ಬಗ್ಗೆಅರಿಯಲು
ಪ್ರ: ಯಾಜಿ ಪ್ರಕಾಶನ, ಹೊಸಪೇಟೆ, ಪುಟಗಳು 108, ಬೆಲೆ ರು. 120

- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ