ಪ್ರೀತಿ ಇಲ್ಲದ ಮಾತಿಗೆ ಅರ್ಥ ಹುಟ್ಟೀತು ಹೇಗೆ?
ಬಹಳಷ್ಟು ಸಲ ಈ ಪ್ರಶ್ನೆ ಕೇಳಿಕೊಂಡದ್ದಿದೆ. ಈ ್ಚಟ್ಟಢಜ ಛಡಿ ಜ್ಝ್ಠಿಡಡಿ ಝ್ಝ್ಜಡಿ' ಅಂತ ಹೇಳ್ತಾರಲ್ಲಾ ಅದು ಎಷ್ಟು ನಿಜ? ಹಾಗೊಮ್ಮೆ ನೋಡಿದ ಕೂಡಲೇ ಪ್ರೀತಿ ಉಕ್ಕಿ ಹರಿದು ಬಿಡಲು ಸಾಧ್ಯವಾ? ಈ ಪ್ರಶ್ನೆಗೆ ಹೇಗೆ ತಿಣುಕಾಡಿದರೂ ಉತ್ತರ ಮಾತ್ರ ಸಿಗುತ್ತಲೇ ಇಲ್ಲ, ಈವರೆಗೂ, ದೇವರಾಣೆ. ಕೆಲವು ಹಾಗೆಯೇ ಇರಬೇಕು. ಅದು ನೋಡಿದ ತಕ್ಷಣ ಫಕ್ಕನೆ ಹೊಳೆಯುತ್ತವೆ. ಹಾಗೆ ಹೊಳೆದದ್ದು ಕಣ್ಣಲ್ಲಿ ಉಳಿಯುವಂತೆ ಹೃದಯಕ್ಕೂ ನಾಟುತ್ತದೆ. ಆದರೆ ಅದೇ ಪ್ರೀತಿನಾ?
ಬಹುತೇಕ ಹುಡುಗರು ಅಲವತ್ತುಕೊಳ್ಳುತ್ತಲೇ ಇರುತ್ತಾರೆ- ಅವಳು ನಿನ್ನೆಯವರೆಗೆ ಚೆನ್ನಾಗಿಯೇ ಮಾತನಾಡಿಸುತ್ತಿದ್ದಳು. ನನ್ನ ಜೊತೆ ಶಾಪಿಂಗ್, ಫಿಲ್ಮ್, ಪಾರ್ಕ್ ಅಂತ ಸುತ್ತಾಟಕ್ಕೂ ಬಂದಿದ್ದಳು. ಮಧ್ಯಾಹ್ನ ಡಬ್ಬೀನೂ ಹಂಚಿಕೊಂಡು ತಿಂದಿದ್ದೇವೆ. ಅವಳು ನನ್ನಿಂದ ಇಂಪ್ರೆಸ್ ಆಗಿದಾಳೆ ಅಂತ ಅಂದ್ಕೊಂಡಿದ್ದೆ. ಮೊನ್ನೆ ಲವರ್ಸ್ ಡೇ ದಿನ ಗ್ರೀಟಿಂಗ್ಸ್ ಸಹ ಇಸಕೊಂಡಿದಾಳೆ ಅಂದರೆ ಪ್ರಪೋಸಲ್ ಅನ್ನು ಅಕ್ಸೆಪ್ಟ್ ಮಾಡಿದಾಳೆ ಅಂತನೆ ಅಲ್ಲವಾ? ಆದರೆ ಇವತ್ತಿಂದ ಇದ್ದಕ್ಕಿದ್ದಂತೆ ಎಸ್ಸೆಮ್ಮೆಸ್ ನಿಂತು ಹೋಗಿದೆ. ಸಿಕ್ಕರೂ ಎಷ್ಟು ಬೇಕೋ ಅಷ್ಟೇ ಮಾತು. ಏನಾಗುತ್ತೇ ಅಂತೀನಿ ಈ ಹುಡುಗೀರಿಗೆ? ನಾವು ಪ್ರಾಣ ಬಿಟ್ಟು ಪ್ರೀತಿ ಮಾಡಿದರೂ ಆಟ ಆಡ್ತಾವೆ. ನನ್ನ ಹಣೆಬರಹವೇ ಇಷ್ಟು, ನಾನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದು ನನಗೆ ಯಾವತ್ತೂ ಸಿಗೋದಿಲ್ಲ...
ಇಂಥ ವಾಕ್ಯಗಳು ಕಾಮನ್. ಹುಡುಗರ ದಡ್ಡತನ ಇಲ್ಲೇ ಇರೋದು. ಅವಳು ತನ್ನ ರೂಪಕ್ಕೆ ಮರುಳಾಗಿದಾಳೆ, ನನ್ನ ಜೊತೆ ಓಡಾಡ್ತಿದಾಳೆ ಅಂತಾದ ತಕ್ಷಣ ಅದನ್ನೇ ಪ್ರೀತಿ ಅಂತ ಭಾವಿಸಿ ಹುಚ್ಚಾಟ ಶುರುವಿಟ್ಟುಕೊಂಡು ಬಿಡುತ್ತಾರೆ. ನಿಜವಾಗಿ ಹುಡುಗಿಯರು ಒಲಿಯೋದು ನಿಮ್ಮ ರೂಪಕ್ಕೆ ಮಾತ್ರವೇನಾ? ಹಾಗಾದರೆ ಕಾಕಾ ಹೋಟೆಲಿನಲ್ಲಿ ಸಪ್ಲೈ ಮಾಡುವ ಮಾಣಿಯನ್ನೋ, ಕೆಲ ಬಿಎಂಟಿಸಿ ಕಂಡಕ್ಟರ್ ಅನ್ನೋ ಹುಡುಗಿಯರು ಮುತ್ತಿಕೊಂಡಿರಬೇಕಿತ್ತು. ಅಮೀರ್ ಖಾನ್ ಸಹ ಒಂದು ಆ್ಯಂಗಲ್‌ನಲ್ಲಿ ಇಷ್ಟವಾಗದೇ ಹೋಗಬಹುದು. ಇವರು ಅವನಿಗೆ ಏನೇನೂ ಕಡಿಮೆ ಇರೋದಿಲ್ಲ. ಅವರೆಲ್ಲರ ಮೇಲೂ ್ಚಟ್ಟಢಜ ಛಡಿ ಜ್ಝ್ಠಿಡಡಿ ಝ್ಝ್ಜಡಿ' ಆಗಬೇಕಿತ್ತು. ಆದರೆ ಹಾಗಾಗೋದಿಲ್ಲ ಏಕೆ? ಹಾಗಂತ ಅವರು ಪ್ರೀತಿಗೆ ಅರ್ಹರಲ್ಲ ಅಂತೇನೂ ಅಲ್ಲ. ಅವರಲ್ಲಿಯೂ ನಮಗೆ ಹುಡುಗಿಯರಿಗೆ ಪ್ರೀತಿ ಹುಟ್ಟುತ್ತೆ ಅಂದರೆ ಅವರ ರೂಪಕ್ಕಷ್ಟೇ ಅಲ್ಲ. ಅವರೊಳಗಿನ ಮನಸ್ಸಿನ ಸೌಂದರ್ಯ ಹುಡುಗಿಯರಿಗೆ ಅರಿವಾಗಬೇಕು. ಹೊಳೆಯುವ ತಾರುಣ್ಯ ಮಾತ್ರವೇ ಪ್ರೀತಿಗೆ ಮಾನದಂಡವಾಗಿರಲು ಸಾಧ್ಯವೇ ಇಲ್ಲ. ಕೆಲವೊಂದು ವ್ಯಕ್ತಿತ್ವ ಥಟ್ಟನೆ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ನಮಗೇ ಅರಿವಿಲ್ಲದೇ ನಾವವರ ಸೆಳೆತಕ್ಕೆ ಒಳಗಾಗುತ್ತೇವೆ. ಅದು ಸಹಜ. ಆದರೆ ಅದನ್ನೇ ಪ್ರೀತಿ ಅನ್ನಲಿಕ್ಕೆ ಸಾಧ್ಯವೇ ಇಲ್ಲ. ಅದು ಕೇವಲ ಆಕರ್ಷಣೆ.
ಹೌದು, ಬಹುತೇಕ ಹರೆಯದಲ್ಲಿ ಹುಟ್ಟುವ ಭಾವನೆಗಳೆಲ್ಲವೂ ಆಕರ್ಷಣೆಗಳಷ್ಟೇ ಆಗಿರುತ್ತವೆ. ಅದು ಅಪ್ಪಟ ಪ್ರೀತಿಯಾಗಿರದೇ ಇನ್‌ಫ್ಯಾಚುಯೇಷನ್ ಮಾತ್ರ ಆಗಿರುವ ಸಾಧ್ಯತೆಗಳೇ ಹೆಚ್ಚು. ಇದನ್ನೇ ಪ್ರೇಮವೆಂದು ಭ್ರಮಿಸಿ ಎಡುವುವ ಅಪಾಯಗಳಿರುತ್ತವೆ. ನಾವು ಹುಡುಗಿಯರು ಈ ವಿಚಾರದಲ್ಲಿ ಬಹಳ ಚಾಲಾಕಿಗಳೆನ್ನಬಹುದು. ಇಂಥ ಇನ್‌ಫ್ಯಾಚುಯೇಷನ್ ಪ್ರೀತಿಯಾಗಿ ಗಟ್ಟಿಗೊಳ್ಳುವ ಮೊದಲು ಅವನೊಳಗಿನ ಸೌಂದರ್ಯ ಹೇಗಿದೆ ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಪ್ರೀತಿ ನಿಜವಾದದ್ದೇ ಆದರೆ ಮೊದಲ ನೋಟದಷ್ಟೇ ಬಲಿಷ್ಠ ನೋಟ ಪ್ರತಿ ಭೇಟಿಯಲ್ಲೂ ಅಗಬೇಕು. ಆದರೆ ಬಹುತೇಕ ಸಂದರ್ಭದಲ್ಲಿ ಅಂಥ ಆಕರ್ಷಣೆ ಒಂದಷ್ಟು ಭೇಟಿಗಳು ಕಳೆಯುತ್ತಿದ್ದಂತೆಯೇ ಬಣ್ಣ ಕಳಕೊಳ್ಳುತ್ತ ಬರುತ್ತವೆ. ಏಕೆಂದರೆ ಹುಡುಗರ ಅಂತಃಸತ್ವ ಅವರ ಹತ್ತಿರಕ್ಕೆ ಹೋದಂತೆಲ್ಲ ಗೊತ್ತಾಗುತ್ತಾ ಬರುತ್ತದೆ. ಅವನ ಚಟಗಳು, ಅವನ ತಾಳ್ಮೆರಹಿತ ವರ್ತನೆ, ಮಾತು ಮಾತಿಗೆ ಸಿಡುಕುವ ಸ್ವಭಾವ, ಪೆದ್ದುತನ, ಆತುರ ಬುದ್ಧಿ, ಕೊಳಕುತನ, ಸಂಶಯ ಬುದ್ಧಿ, ವಿವೇಚನೆ ಅರಿಯದ ನಡತೆ, ಬೇಜವಾಬ್ದಾರಿತನ... ಎಲ್ಲಕ್ಕಿಂತ ಹೆಚ್ಚಾಗಿ ಸಾಮೀಪ್ಯದಲ್ಲಿ ಸಿಗದ ಸೇಫ್ ಎಂಡ್ ಕಂಫರ್ಟ್ ಫೀಲಿಂಗ್... ಇಂಥವೆಲ್ಲ ಗೊತ್ತಾಗುತ್ತಿದ್ದಂತೆ ಹುಡುಗಿ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾಳೆ. ಹುಡುಗನಿಗೆ ಕಡೆಗೂ ಇದು ಅರ್ಥವಾಗದೆ ಹೋಗುತ್ತದೆ. ತನ್ನ ದೌರ್ಬಲ್ಯಗಳನ್ನು ಅರಿಯುವ ಗೋಜಿಗೇ ಹೋಗದ ಹುಡುಗ ತನ್ನ ಗ್ರೀಟಿಂಗ್ ತಗೊಂಡಿದ್ದ, ತನ್ನೊಂದಿಗೆ ಸುತ್ತಾಟಕ್ಕೆ ಬಂದಿದ್ದ ಹುಡುಗಿ ಈಗ ಮೋಸ ಮಾಡುತ್ತಿದ್ದಾಳೆ ಅಂತ ವರಾತ ತೆಗೆಯುತ್ತಾನೆ.
ಹುಡುಗ ಮೈಯಲ್ಲಿ ಗಟ್ಟಿಯಾಗಿದಾನಾ ಅಂತಷ್ಟೇ ಅಲ್ಲ, ಮನಸ್ಸಲ್ಲೂ ಸದೃಢವಾಗಿದಾನಾ ಅನ್ನೋದೇ ನಾನು ಪ್ರೀತಿಗೆ ಬೀಳೋ ಮೊದಲು ಕೇಳಿಕೊಳ್ಳೋ ಪ್ರಶ್ನೆ. ಅದು ಮೊದಲ ನೋಟದಲ್ಲಿ ಗೊತ್ತಾಗಬೇಕಂತೇನಿಲ್ಲ. ಚಿಲ್ಲರೆ ಮಾತು, ಚೀಪ್ ಜೋಕು, ಅಗೌರವದ ನಡತೆ, ಗಾಂಪತನ, ವಂಚಕತನ ನಮಗಿಷ್ಟವಾಗಲ್ಲ. ಅಂಥಲ್ಲಿ ಪ್ರೀತಿ ಬಳ್ಳಿ ಹಬ್ಬಲು ಸಾಧ್ಯವೇ ಇಲ್ಲ. ಹೇಡಿ, ಬಡವ, ಕುರೂಪಿ, ಅಸಹಾಯಕ, ಪೆದ್ದನನ್ನಾದರೂ ನಾವು ಪ್ರೀತಿಸಬಲ್ಲೆವು. ಆದರೆ ಪ್ರೀತಿಯ ವಿಚಾರದಲ್ಲಿ ಅಪ್ರಾಮಾಣಿಕರನ್ನು ಹೇಗೆ ಸಹಿಸೋದು? ಸುಮ್ಮನೆ ಫ್ಲರ್ಟ್ ಮಾಡಿದಾಕ್ಷಣ ಅದೇ ಪ್ರೀತಿ ಅನ್ನಿಸಿಕೊಳ್ಳುತ್ತಾ? ಸ್ನೇಹ ಬಲಿತ ನಂತರವೇ ಪ್ರೀತಿ ಮೊಳೆಯೋದು ಅಲ್ಲವೇ? ಛೆ, ಹುಚ್ಚು ಹುಡುಗರು...
-ರಾಧಾ ಸೋಚನಿ
abhyagatha@yahoo.co.in
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.