ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಭವ ಸಾಗರ ದಾಟುವ ಮಾರ್ಗ

Vishwanath S
Updated On : 30 Mar 2013, 3:17 am

ಸಂಗೀತದ ಪ್ರತಿಯೊಂದು ಹಂತದಲ್ಲಿ ವಿಭಿನ್ನವಾದ ತಾತ್ವಿಕ ಚಿಂತನೆಗಳು ಆಳವಾಗಿ ಅಡಕವಾಗಿವೆ. ಅದಕ್ಕೇ ಸಂಗೀತಕ್ಕೆ, ಕಲಾಪ್ರಕಾರಗಳಿಗೆ ಮತ್ತು ತತ್ವಜ್ಞಾನಕ್ಕೆ ಸದಾ ನಂಟು. ಏಕೆಂದರೆ ಕಲಾವಿದನಾಗಲಿ, ತತ್ವಜ್ಞಾನಿಯಾಗಲಿ, ಇಬ್ಬರೂ ಅರಿಯಲು ಪ್ರಯತ್ನಿಸುವುದು 'ಮೂಲ'ವನ್ನೇ, ಅನುಭವಿಸಲು ಹಾತೊರೆಯುವುದೂ ಆ 'ಅನಂತ'ವನ್ನೇ.
ಒಮ್ಮೆ ಸಂದರ್ಶನವೊಂದರಲ್ಲಿ ಒಬ್ಬ ಪ್ರಸಿದ್ಧ ಸಂಗೀತಗಾರರು ನೀಡಿದ ಉತ್ತರ, ಸಂಗೀತದ ಈ ಪರಮ ಗುರಿಯನ್ನು, ಅಂತಿಮ ಸತ್ಯವನ್ನು ಸರಳವಾಗಿ ಸುಂದರವಾಗಿ ನಿದರ್ಶಿಸುವಂತಿತ್ತು. ಸಂದರ್ಶಕ ಕೇಳಿದ ಪ್ರಶ್ನೆಯೇನೋ ಬಹಳ ಸರಳವಾದದ್ದು, ಮಾಮೂಲು ಪ್ರಶ್ನೆ ಅನ್ನಿಸುವಂಥಾದ್ದು. 'ಪಂಡಿತ್‌ಜಿ, ನಿಮಗೆ ಯಾವ ರಾಗ ಬಹಳ ಇಷ್ಟ?' ಇದು ಪ್ರಶ್ನೆ. ಆ ಹಿರಿಯ ಗಾಯಕರ ಉತ್ತರ ಮಾತ್ರ ಬಹಳ ಮಾರ್ಮಿಕ -  'ಇಂಥ ರಾಗ ಇಷ್ಟ, ಇಂಥದ್ದು ಇಷ್ಟವಿಲ್ಲ ಎಂದು ಹೇಗೆ ಹೇಳಲು ಸಾಧ್ಯ?  ಯಾಕೆಂದರೆ ಈ ರಾಗಗಳೆಂದರೆ ಅನಂತವಾದ, ಅನಹತವಾದ ಆ 'ಸ್ವರ- ಶ್ರುತಿ'ಗಳನ್ನು ಅನುಭವಿಸಲು, ಆರಾಧಿಸಲು ಇರುವ ವಿವಿಧ ರೂಪಗಳು ಅಷ್ಟೆ. ರಾಗ ಯಾವುದಾದರೂ ಇರಬಹುದು - ಭೂಪ, ಮಾಲಕೌಂಸ್, ತೋಡಿ, ಮುಲ್ತಾನಿ ಯಾವುದೇ ಇರಲಿ. ನಾವು ಅದರ ಮೂಲಕ ಅರಿಯಲು ಯತ್ನಿಸುವುದು, ಉಪಾಸನೆ ಮಾಡುವುದು ಮಾತ್ರ ಆ ರಾಗದ ಮೂಲಕ ವ್ಯಕ್ತವಾಗುವ 'ಶ್ರುತಿ-ಸ್ವರ' ಎಂಬ ಮೂಲ ತತ್ವವನ್ನೇ. ಪ್ರತಿ ರಾಗವೂ ಅಮೂರ್ತವಾದ ಸ್ವರವನ್ನು  ಆರಾಧಿಸಲು, ತಿಳಿಯಲು ಇರುವ ಒಂದು ಉಪಕರಣ. ನಾನು ಯಾವುದಾದರೂ ರಾಗವನ್ನು ಇಷ್ಟವಿಲ್ಲ ಎಂದರೆ , ಆ 'ನಾದ ಬ್ರಹ್ಮ'ನನ್ನೇ ಇಷ್ಟವಿಲ್ಲ ಎಂದಂತಾಗುತ್ತದೆ ಅಷ್ಟೇ'.
ಇದನ್ನು ಕೇಳುವಾಗ ಮಹಾನ್ ತತ್ವಜ್ಞಾನಿ ಸ್ಪಿನೊಝಾ ನ ನೆನಪಾಯಿತು. ಅವನು ದೇವರನ್ನು ವಿವರಿಸುವಾಗ ಹೇಳುತ್ತಾನೆ - 'ಜ್ಯಾಮಿತಿಯ ವಿವಿಧ ಆಕಾರಗಳಾದ ತ್ರಿಕೋನ, ಚೌಕ, ಆಯತ, ಘನ ಇವುಗಳೆಂದರೆ ಏನು ಎಂಬ ಪ್ರಶ್ನೆಯನ್ನು ಹಾಕಿಕೊಂಡು ನಾವು ಚಿಂತಿಸಿದರೆ ನಮಗೆ ಅರಿವಾಗುವುದು ಏನೆಂದರೆ ಈ ಚೌಕವಾಗಲಿ, ಆಯತವಾಗಲಿ. ಇವುಗಳಿಗೆ ಯಾವ ಅರ್ಥವೂ ಇಲ್ಲ ಅಥವಾ ಈ ಆಕೃತಿಗಳೆಂದರೆ ಏನೂ ಇಲ್ಲ. ಇವು ಆಕಾಶ (ಸ್ಪೇಸ್) ಎಂಬುದನ್ನು ಗ್ರಹಿಸಲು ಹಾಕಿರುವ ಕಾಲ್ಪನಿಕ ಪರಿಧಿಗಳಷ್ಟೇ. ಯಾವ ಅಕೃತಿಯಾದರೂ ಅಲ್ಲಿ ಇರುವುದು ಆಕಾಶ ಅಥವಾ ಜಾಗ. ಈ ಎಲ್ಲ ಆಕೃತಿಗಳು ತಮ್ಮ  ಮಿತಿಯ ಮುಖಾಂತರ ಸಾರಿ ಸಾರಿ ಹೇಳುವುದು ಆ 'ಅನಂತ ಆಕಾಶ' ತತ್ವವನ್ನು. ಹಾಗೆಯೇ ಈ ಜಗತ್ತು, ಇಲ್ಲಿನ ಆಕೃತಿ ವಿಕೃತಿಗಳು. ಎಲ್ಲವೂ ಆ ಅನಂತದ, ಅಮೂರ್ತದ ರಹಸ್ಯವನ್ನು ತಿಳಿಸುವ ಕ್ಷಣಿಕ ಚಿತ್ರಗಳು ಅಷ್ಟೇ. ಇರುವುದು ಆ ಸತ್ಯವೊಂದೇ'.
ಹಾಗೆಯೇ ಈ ರಾಗಗಳು. ರಾಗ ಯಾವುದೇ ಇರಲಿ, ಆ ಸತ್ಯವನ್ನರಿತವನಿಗೆ, ಎಲ್ಲವೂ ಆ ಅನಹತ ನಾದಬ್ರಹ್ಮನನ್ನು ಆರಾಧಿಸುವ ರೂಪಗಳು ಎಂಬ ಅರಿವುಂಟಾಗುತ್ತದೆ.
ಹೀಗೆ ಸಂಗೀತ ಪರತತ್ವದ ಸಾಧನೆಯಾದಾಗ ಅದನ್ನು 'ಮಾರ್ಗ ಸಂಗೀತ' ಎನ್ನಲಾಗುತ್ತಿತ್ತು. ಮಾತಂಗ ರಚಿಸಿರುವ 'ಬೃಹದ್ದೇಶೀ' ಎಂಬ ಗ್ರಂಥದಲ್ಲಿ  ಮಾರ್ಗೀಯ ಹಾಗೂ ದೇಶೀಯ ಎಂಬ ಎರಡು ವಿಧವಾದ ಸಂಗೀತಗಳನ್ನು ಉಲ್ಲೇಖಿಸಲಾಗಿದೆ. ದೇಶೀಯ ಎಂಬುದು ಹೆಚ್ಚು ರಂಜನೆ ಮತ್ತು ಮಾನವನ ಭಾವನೆಗಳ ಜತೆ ಬೆಸೆದುಕೊಂಡರೆ, ಮಾರ್ಗೀಯ ಎಂಬುದು ಭವಸಾಗರವ ದಾಟಿಸುವ, ಪೂರ್ಣತ್ವವನ್ನು ತಲುಪಲು ಇರುವ ಮಾರ್ಗವಾಗಿ ಚಿತ್ರಿತವಾಗುತ್ತದೆ. 'ಸಂಗೀತ ದರ್ಪಣ' ಎಂಬ ವಿಶಿಷ್ಟ ಗ್ರಂಥದಲ್ಲಿ ದಾಮೋದರ ಪಂಡಿತರು ಇದನ್ನು ವಿವರಿಸುತ್ತ, 'ಬ್ರಹ್ಮನು ಯಾವ ಸಂಗೀತವನ್ನು ಕಂಡುಕೊಂಡನೋ, ಭರತ ಮುನಿ ಮಹಾದೇವನ ಎದುರಲ್ಲಿ ಯಾವ ಸಂಗೀತದ ಪ್ರಯೋಗ ಮಾಡಿದನೋ, ಯಾವುದು ಮುಕ್ತಿದಾಯಕವೋ ಅದು  ಮಾರ್ಗೀ ಸಂಗೀತ' ಎಂದು ಉಲ್ಲೇಖಿಸಿದ್ದಾನೆ.

ಶ್ರುತಿ ಭಟ್
shrutikbhat@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments