ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ರಾಮಯ್ಯನ ದುರಾಸೆ

Vishwanath S
Updated On : 30 Mar 2013, 3:19 am

ಬಹಳ ಹಿಂದಿನ ಮಾತು. ಒಂದು ಊರಿನಲ್ಲಿ ರಾಮಯ್ಯನೆಂಬೊಬ್ಬ ಕಡುಬಡವನಿದ್ದ. ಅವನು ಪ್ರತಿದಿನ ಅಡವಿಗೆ ಹೋಗಿ ಸೌದೆ ತಂದು ಮಾರಾಟ ಮಾಡಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದ. ಒಂದು ದಿನ ಕಾಡಿಗೆ ಹೋಗಿ ಸೌದೆ ಸಂಗ್ರಹಿಸಿ ಹೊರೆ ಮಾಡುವ ಹೊತ್ತಿಗೆ ಸುಸ್ತಾಗಿ ದಣಿವಾರಿಸಿಕೊಳ್ಳಲು ಒಂದು ಮರದ ನೆರಳಿನಲ್ಲಿ ಕುಳಿತನು. ಆಗ ಅವನ ಕಣ್ಣಳತೆಯ ದೂರದಲ್ಲಿ ಒಂದು ಮುಳ್ಳುಗಿಡದ ಮೇಲೆ ಸುಂದರವಾದ ಚಿಟ್ಟೆ ಬಿದ್ದು ಹಾರಲಾಗದೆ ಚಡಪಡಿಸುತ್ತಿರುವುದನ್ನು ಕಂಡು ರಾಮಯ್ಯನ ಮನ ಕರಗಿತು. ಅವನು ಎದ್ದುಹೋಗಿ ನಾಜೂಕಿನಿಂದ ಚಿಟ್ಟೆಯನ್ನು ಮುಳ್ಳಿನಿಂದ ಬಿಡಿಸಿ ಹಾರಿಹೋಗಲು ಅನುವು ಮಾಡಿಕೊಟ್ಟನು. ಆಗ ಇದ್ದಕ್ಕಿದ್ದಂತೆ ಚಮತ್ಕಾರವೊಂದು ನಡೆಯಿತು. ಆ ಚಿಟ್ಟೆ ಒಬ್ಬಳು ಸುಂದರ ಕಿನ್ನರಿಯಾಗಿ ಪರಿವರ್ತನೆಗೊಂಡಳು.
ಈ ದೃಶ್ಯವನ್ನು ರಾಮಯ್ಯ ಬೆರಗಾಗಿ ನೋಡುತ್ತಿರುವಂತೆ ಕಿನ್ನರಿ ಮಾತನಾಡಲಾರಂಭಿಸಿದಳು. 'ರಾಮಯ್ಯ, ನೀನು ನನ್ನನ್ನು ಸಾವಿನಿಂದ ಪಾರುಮಾಡಿದ್ದಿ. ನಾನು ದೇವಲೋಕದಿಂದ ಬಂದ ಅಪ್ಸರೆ. ಭೂಲೋಕದ ಸೃಷ್ಟಿಸೌಂದರ್ಯ, ಹೂಗಳ ಅಂದ ಮತ್ತು ಪರಿಮಳಕ್ಕೆ ಮನಸೋತು ಚಿಟ್ಟೆಯ ರೂಪ ಧರಿಸಿ ಬಂದು ಇಲ್ಲಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾಗ ಆಕಸ್ಮಿಕವಾಗಿ ಈ ಮುಳ್ಳುಗಿಡದ ಮೇಲೆ ಬಿದ್ದುಬಿಟ್ಟೆ. ನನ್ನ ಮಂತ್ರದಂಡವೂ ಬಿದ್ದುಹೋಯಿತು. ಈಗ ನಿನ್ನ ಸಹಕಾರದಿಂದ ನನ್ನ ಜೀವ ಉಳಿಯಿತು. ಮಂತ್ರದಂಡವೂ ನನ್ನ ಕೈಸೇರಿತು. ಈ ಉಪಕಾರಕ್ಕೆ ನಾನು ಪ್ರತ್ಯುಪಕಾರ ಮಾಡಲೇಬೇಕಿದೆ' ಎಂದು ಹೇಳಿ ಗಾಳಿಯಲ್ಲಿ ಕೈ ಆಡಿಸಿ ಒಂದು ಯಂತ್ರವನ್ನು ಸೃಷ್ಟಿಸಿ ರಾಮಯ್ಯನಿಗೆ ಕೊಟ್ಟು ಹೇಳಿದಳು, 'ನೋಡು ರಾಮಯ್ಯ, ಇದೊಂದು ಜಾದೂ ಯಂತ್ರ. ನಿನಗೆ ಕಷ್ಟಬಂದಾಗ ನಿಮ್ಮ ಮನೆಯ ಹಿತ್ತಿಲಿನಲ್ಲಿ ಒಂದು ಗಿಡವನ್ನು ನೆಡು. ಗಿಡದ ಮೇಲೆ ಮೂರು ಸಲ ಈ ಯಂತ್ರದಿಂದ ನಿವಾಳಿಸು. ನಿನಗೆ ಆ ಗಿಡದಿಂದ ಐದು ನಾಣ್ಯಗಳು ಸಿಗುತ್ತವೆ. ಆ ನಾಣ್ಯಗಳನ್ನು ಮಾರಿ ನಿನ್ನ ಅಗತ್ಯಗಳನ್ನು ಪೂರೈಸಿಕೊ. ಆದರೆ ಯಾವುದೇ ಕಾರಣಕ್ಕೂ ತಾನು ಒಮ್ಮೆಲೇ ಶ್ರೀಮಂತನಾಗಬೇಕೆಂಬ ದುರಾಸೆಯಿಂದ ಈ ಯಂತ್ರದ ದುರುಪಯೋಗ ಮಾಡಬೇಡ. ಹಾಗೇನಾದರೂ ಮಾಡಿದ್ದೇ ಆದರೆ ಮತ್ತೆ ನೀನು ನಿನ್ನ ಹಿಂದಿನಾವಸ್ಥೆಗೆ ಮರಳುತ್ತಿ, ನೆನಪಿರಲಿ! ನಾನು ಹೇಳಿದಂತೆ ಮಾಡಿ ಈ ಯಂತ್ರದ ಸಹಾಯದಿಂದ ನಿನ್ನ ಬಡತನವನ್ನು ತೊಲಗಿಸಿಕೊಂಡು ಹೆಂಡತಿ ಮಕ್ಕಳೊಂದಿಗೆ ಸುಖವಾಗಿ ಬಾಳು. ಇನ್ನು ನಾನು ಹೊರಡುತ್ತೇನೆ' ಎಂದು ಮಾಯವಾದಳು.
ಮರುದಿನ ಬೆಳಗ್ಗೆ ಅಪ್ಸರೆಯ ಮಾತಿನಂತೆ ತನ್ನ ಮನೆಯ ಅಂಗಳದಲ್ಲಿ ಒಂದು ತುಳಸಿ ಗಿಡವನ್ನು ನೆಡಲು ಪ್ರಾರಂಭಿಸಿದನು. ಇದನ್ನು ನೋಡಿದ ಅವನ ಹೆಂಡತಿಗೆ ಅಚ್ಚರಿಯಾಯಿತು. ಅವಳು ಗಂಡನ ಬಳಿ ಬಂದು 'ಯಾವಾಗಲೂ ನೀವು ಗಿಡಮರಗಳನ್ನು ಕಡಿಯುವವರು. ಆದರೆ ಇಂದೇನು ಗಿಡ ನೋಡುತ್ತಿದ್ದೀರಿ!?' ಎಂದು ಪ್ರಶ್ನಿಸಿದಳು. ಆಗ ರಾಮಯ್ಯನು 'ನೀನು ಸುಮ್ಮನಿರು. ನಿನಗೆ ನಾನೊಂದು ವಿಚಿತ್ರವನ್ನು ತೋರಿಸುತ್ತೇನೆ ನೋಡು' ಎಂದು ತಾನು ನೆಟ್ಟ ತುಳಸಿಗಿಡಕ್ಕೆ ಅಪ್ಸರೆ ಕೊಟ್ಟ ಯಂತ್ರದಿಂದ ಮೂರು ಸುತ್ತು ನಿವಾಳಿಸಿದನು. ಆಗ  ತುಳಸಿ ಗಿಡದಿಂದ ಐದು ಚಿನ್ನದ ನಾಣ್ಯಗಳು ಉದುರಿದವು. ರಾಮಯ್ಯನು ಖುಷಿಯಿಂದ ಆ ನಾಣ್ಯಗಳನ್ನೆಲ್ಲ ಆಯ್ದುಕೊಂಡು ಪೇಟೆಗೆ ಹೋಗಿ ಮಾರಿ ಬಂದ ಹಣದಿಂದ ತನ್ನ ಅಗತ್ಯಗಳನ್ನೆಲ್ಲ ಪೂರೈಸಿಕೊಂಡನು. ಈ ವಿಷಯವನ್ನು ಯಾರಿಗೂ ಹೇಳಬೇಡವೆಂದು ಹೆಂಡತಿಗೆ ತಾಕೀತು ಮಾಡಿದನು.
ಈ ರೀತಿಯಾಗಿ ರಾಮಯ್ಯ ತನ್ನ ನೆಲದಲ್ಲಿ ಅನೇಕ ಗಿಡಗಳನ್ನು ನೆಟ್ಟು ಗಿಡದಿಂದ ಬಂಗಾರದ ನಾಣ್ಯಗಳನ್ನು ಪಡೆದು ತನ್ನ ಬಡತನವನ್ನು ನೀಗಿಸಿಕೊಂಡನು. ಈಗ ಅವನು ರಾಮಯ್ಯನಿಂದ ರಾಮರಾಯನಾಗಿದ್ದನು. ಅವನಿಗೆ ದೊಡ್ಡದಾದ ಬಂಗಲೆ, ಆಳುಕಾಳು, ಒಡವೆ, ನಗನಾಣ್ಯಗಳು, ಮನೆಯ ತುಂಬ ದವಸಧಾನ್ಯಗಳು ತುಂಬಿದ್ದವು. ಹೀಗೆ ರಾಮರಾಯ ನೆಮ್ಮದಿಯ ಜೀವನ ನಡೆಸುತ್ತಿದ್ದನು.
ಕೆಲವು ವರ್ಷ ಕಳೆಯಿತು. ರಾಮರಾಯನಿಗೆ ಈ ಶ್ರೀಮಂತಿಕೆ ಸಾಲದು ಎನಿಸಿತು. ಇನ್ನೂ ಧನಿಕನಾಗಬೇಕು, ಊರಿನಲ್ಲಿ ತನಗಿಂತ ಸಿರಿವಂತರು ಇರಬಾರದು. ತಾನು ಕೋಟ್ಯಧಿಪತಿಯಾಗಬೇಕೆಂಬ ಹಪಾಹಪಿಗೆ ಬಿದ್ದನು. ಅಪ್ಸರೆ ಹೇಳಿದ ಮಾತುಗಳು ಆತನಿಗೆ ಮರೆತುಹೋಗಿದ್ದವು. ತನ್ನ ಮಹತ್ವಾಕಾಂಕ್ಷಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮನೆಯ ಸುತ್ತಮುತ್ತ ದಟ್ಟವಾಗಿ ಬೆಳೆದು ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಳನ್ನೆಲ್ಲ ಕಡಿಸಿಹಾಕಿದನು. ಈ ಮರಗಿಡಗಳಲ್ಲಿ ವಾಸವಾಗಿದ್ದ ಹಕ್ಕಿ ಪಕ್ಷಿಗಳೆಲ್ಲ ಹಾರಿಹೋದವು. ಅವುಗಳ ಗೂಡುಗಳೆಲ್ಲ ನಾಶವಾದವು. ಹಸಿರು ಮರಗಳೆಲ್ಲ ಧರಾಶಾಯಿಯಾದವು. ಮರಗಳನ್ನೆಲ್ಲ ಕಡಿದ ರಾಮರಾಯ ಹೊಸ ಗಿಡಗಳನ್ನು ನೆಡಲು ತಯಾರಿ ನಡೆಸಿದನು. ಊರ ತುಂಬಾ, ನದಿಗುಂಟ ಹೊಸ ಹೊಸ ಗಿಡಗಳನ್ನು ನೆಡಿಸಿದನು. ನಂತರ ಆಳುಗಳನ್ನೆಲ್ಲ ಮನೆಗೆ ಕಳುಹಿಸಿ ಮಂತ್ರದ ಯಂತ್ರದಿಂದ ಎಲ್ಲ ಗಿಡಗಳ ಮೇಲೂ ಮೂರು ಸುತ್ತು ನಿವಾಳಿಸಿದನು. ಆದರೆ ಈ ಬಾರಿ ಅವನಿಗೆ ಯಾವ ಗಿಡದಿಂದಲೂ ಬಂಗಾರದ ನಾಣ್ಯಗಳು ಉದುರಿದ್ದು ಕಂಡುಬರಲಿಲ್ಲ. ರಾಮರಾಯ ಕಂಗಾಲಾದನು. ಅವನಿಗೆ ಅಪ್ಸರೆ ಹೇಳಿದ ಎಚ್ಚರಿಕೆಯ ಮಾತುಗಳು ನೆನಪಾದವು. ತನ್ನ ಬುದ್ಧಿಗೇಡಿತನಕ್ಕೆ ಹಳಹಳಿಸಿದನು. ನಿರಾಶೆಯಿಂದ ಮನೆಗೆ ಬಂದು ನೋಡಿದರೆ.. ಅಲ್ಲೇನಿದೆ? ಮಹಲು, ಆಳುಕಾಳು, ನಗ-ನಾಣ್ಯ, ದವಸಧಾನ್ಯಗಳೆಲ್ಲ ಮಾಯವಾಗಿ ಹಿಂದಿದ್ದ ಹಳೆಯ ಗುಡಿಸಲು ಮಾತ್ರ ಇತ್ತು. ಈಗವನು ಮತ್ತೆ ಹಿಂದಿನ ರಾಮಯ್ಯನೇ ಆಗಿದ್ದ.

-ಎಂ.ಬಿ. ನಾಯಕ, ಮೈಸೂರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments