ಶೆಣೈ ಗ್ಯಾಲರಿ
ಕರ್ನಾಟಕದ ಚಿತ್ರಕಲೆಯ ಚರಿತ್ರೆಯಲ್ಲಿ ಜಿ.ಎಸ್.ಶೆಣೈ ಅವರದೊಂದು ವಿಶಿಷ್ಟ ಹೆಸರು. ಹಾದಿ ಇರುವಲ್ಲಿ ಹೋಗದೆ, ತಾವು ನಡೆದಲ್ಲೇ ಹಾದಿ ಸೃಷ್ಟಿಸುವ ಕೆಲವೇ ಧೀಮಂತರ ವರ್ಗಕ್ಕೆ ಸೇರಿದವರು.
1938ರಲ್ಲಿ ಉಡುಪಿಯಲ್ಲಿ ಜನಿಸಿ, ಮುಂಬಯಿಯ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ನಲ್ಲಿ ಪದವಿ ಪಡೆದು ಬಂದ ಮೇಲೆ, ಕರ್ನಾಟಕದ ಕಲಾಲೋಕದಲ್ಲಿ ಪ್ರಮುಖ ಪಾತ್ರ ವಹಿಸತೊಡಗಿದರು. ಬದುಕಿಗಾಗಿ ಉಡುಪಿಯಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದರೂ, ಅವರ ಚಟುವಟಿಕೆಗಳಲ್ಲಿ ಕಲಾವಿದರ ಸ್ಥಿತಿಗತಿಗಳ ಕುರಿತ ಚಿಂತನೆ, ಹೋರಾಟವೇ ಪ್ರಧಾನ ಪಾತ್ರ ವಹಿಸಿತ್ತು. ಇತರ ಕಲಾವಿದರೊಂದಿಗೆ ಬೀದಿಗಳಲ್ಲಿ ಚಿತ್ರಪ್ರದರ್ಶನ ನಡೆಸುವ ಮೂಲಕ, ಕಲಾವಿದರ ಪಾಡಿನ ಬಗ್ಗೆ ಗಮನ ಸೆಳೆದರು. ಶ್ರೀಸಾಮಾನ್ಯನ ಬಳಿಗೆ ಕಲೆಯನ್ನು ಕೊಂಡೊಯ್ಯುವ ಬಗ್ಗೆಯೇ ಸದಾ ಚಿಂತಿಸಿದ ಅವರು, ಹಲವಾರು ಸಂಸ್ಥೆಗಳ ಮುಖ್ಯ ಹುದ್ದೆಗಳನ್ನೂ ಅಲಂಕರಿಸಿದ್ದಾರೆ.
ಶೆಣೈ ಎಂದ ಕೂಡಲೆ, ಹಂಪಿಯ ಬಂಡೆಗಳನ್ನು ಸರಣಿಯಾಗಿ ಅವರು ಚಿತ್ರಿಸಿಟ್ಟ ರೀತಿಯೇ ಕಣ್ಣಿಗೆ ಕಟ್ಟುತ್ತದೆ ಎನ್ನುವವರೇ ಅಧಿಕ. ಇದಲ್ಲದೆಯೂ ಅವರು ಮ್ಯೂರಲ್, ಚಿತ್ರಗಳ ಮೈವಳಿಕೆಗಳಲ್ಲಿ ನಡೆಸಿದ ವಿಶಿಷ್ಟ ಪ್ರಯೋಗಗಳಿಂದಾಗಿಯೂ ನೆನಪಾಗುತ್ತಾರೆ. ಶೆಣೈ ಬಹುಮಾಧ್ಯಮಗಳೊಂದಿಗೆ ನಡೆಸಿದ ಸತತ ಪ್ರಯೋಗಗಳು, ವರ್ಣ ಮತ್ತು ವಿನ್ಯಾಸದಲ್ಲಿ ಅವರಿಗಿದ್ದ ಅನನ್ಯ ಪ್ರತಿಭೆ, ಭಾವನೆಗಳ ಸುಂದರ ಅಭಿವ್ಯಕ್ತಿಗಳನ್ನು ಸಾದರಪಡಿಸುವ ಕಲಾಪುಸ್ತಕ ಇಂದು ಬಿಡುಗಡೆಯಾಗುತ್ತಿದೆ.
ಕಲಾಪ್ರೇಮಿಗಳ ಪಾಲಿಗೆ ಸಂಗ್ರಹಯೋಗ್ಯವಾದ 'ಫುಟ್ಪ್ರಿಂಟ್ಸ್' ಕೃತಿಯಲ್ಲಿ ಶೆಣೈ ಅವರ ಕಲಾಜೀವನದ ನಾನಾ ಹಂತಗಳ ಪ್ರಾತಿನಿಧಿಕ ಕೃತಿಗಳನ್ನು ಕ್ರೋಢೀಕರಿಸಿ ನೀಡಲಾಗಿದೆ. ಗುರುದಾಸ್ ಶೆಣೈ, ಅಮಿತಾ ಶೆಣೈ, ಸುಧೀಂದ್ರ ಭಟ್ ಮತ್ತು ಸಂತೋಷ್ ಅಂದಾನಿ ಅವರ ತಂಡ ಕೃತಿಯನ್ನು ಸಿದ್ಧಪಡಿಸಿದೆ. 300 ಪುಟಗಳ ಈ ಪುಸ್ತಕದಲ್ಲಿ ಶೆಣೈ ಅವರನ್ನು ಪುತ್ರ ಗುರುದಾಸ್ ಶೆಣೈ, ಗೋಪಾಲ ಅಡಿವ್ರೇಕರ್, ಮಿಲಿಂದ ನಾಯಕ್, ಗಿರಿಧರ ಖಾಸನೀಸ್ ನೆನೆದುಕೊಂಡಿದ್ದಾರೆ. ಶೆಣೈ ಅವರ ಬಹುಕಾಲದ ಮಿತ್ರ ಎಂ.ಎಫ್.ಹುಸೇನ್ ಅವರ ಪತ್ರವಿದೆ. ಬೆಂಗಳೂರಿನಲ್ಲಿ ಕಲಾವಿದರಿಗೆ ತಮ್ಮ ಕಲಾಕೃತಿಗಳ ಪ್ರದರ್ಶನಕ್ಕೆ ಸದಭಿರುಚಿಯ ಗ್ಯಾಲರಿಯೊಂದರ ಅಗತ್ಯವಿದೆ ಎಂದು ಹೋರಾಟ ನಡೆಸಿದ್ದರು ಶೆಣೈ. ಅದು ಸಾಕಾರಗೊಂಡದ್ದರ ಸವಿನೆನಪಿನಲ್ಲಿ, ಶೆಣೈ ಅವರ 75ನೇ ಜನ್ಮದಿನದ ಸ್ಮರಣೆಯಾಗಿ ಈ ಕಾರ್ಯಕ್ರಮ 'ವೆಂಕಟಪ್ಪ ಆರ್ಟ್ ಗ್ಯಾಲರಿ'ಯಲ್ಲೇ ನಡೆಯುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.