ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಅನಿರೀಕ್ಷಿತ ಸುಳಿಯಲ್ಲಿ...ಪವನಕುಮಾರ ಬನ್ಸಾಲ್

Vishwanath S
Updated On : 11 May 2013, 12:37 pm

ಈಗಿನ ರೈಲ್ವೆ ಮಂತ್ರಿ ಪವನಕುಮಾರ ಬನ್ಸಾಲ್ ಅವರ ಮುಖದಿಂದ ಮುಗುಳ್ನಗೆ ಮಾಯವಾಗಿದ್ದನ್ನು ಕಂಡವರೇ ಇರಲಿಲ್ಲ. ಸಂಸದೀಯ ವ್ಯವಹಾರಗಳ ಸಚಿವರಾಗಿ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಅತ್ಯುಗ್ರ ದಾಳಿಯ ಸಮಯದಲ್ಲೂ ಮುಗುಳ್ನಗೆಯನ್ನು ಉಳಿಸಿಕೊಂಡೇ ಪ್ರತಿ ದಾಳಿ ನಡೆಸುತ್ತಿದ್ದ ವ್ಯಕ್ತಿ.
ಆದರೆ, ಈಗ ಕೆಲವು ದಿನಗಳಿಂದಲೂ ಅವರ ನಗೆ ಮುಖವನ್ನು ಕಂಡವರೇ ಇಲ್ಲ. ಯಾವುದೇ ನಾಯಕರ, ಪ್ರತಿಷ್ಠಿತ ವ್ಯಕ್ತಿಗಳ ಬೆಂಬಲವಿಲ್ಲದೇ, ಕಾಂಗ್ರೆಸ್ಸಿನಲ್ಲಿ ತಮ್ಮ ನಡತೆ, ಸಂಯಮ ಹಾಗೂ ಪಕ್ಷ ನಿಷ್ಠೆಯಿಂದಲೇ ಮೇಲೆ ಮೇಲೇರಿ ಬಂದವರು ಈ ಬನ್ಸಾಲ್.
ಅವರ ವಿರುದ್ಧ ಇಷ್ಟು ದಿನವೂ ಒಂದೇ ಒಂದು ಆರೋಪ ಇಲ್ಲದೇ ಇರುವಂತೆ ಕೆಲಸ ಮಾಡಿಕೊಂಡು ಬಂದಿದ್ದೇ ಒಂದು ಹೆಗ್ಗಳಿಕೆ. ಕೇಂದ್ರ ಮಂತ್ರಿ ಮಂಡಲದಲ್ಲಿ ರೈಲ್ವೆ ಮಂತ್ರಾಲಯದ ಅಧಿಪತ್ಯವನ್ನು ಕಾಂಗ್ರೆಸ್ಸಿನಲ್ಲೇ ಒಬ್ಬರಿಗೆ ವಹಿಸಿಕೊಡುವ ಅವಕಾಶ ಸಿಕ್ಕಿದಾಗ, ಪ್ರಧಾನಿ ಮನಮೋಹನ ಸಿಂಗ್ ಅವರೇ ಸ್ವಂತವಾಗಿ ಯಾರ ಶಿಫಾರಸ್ಸೂ ಇಲ್ಲದೇ ಬನ್ಸಾಲ್ ಅವರನ್ನು ಆರಿಸಿದ್ದರು.
ಬನ್ಸಾಲ್ ಮಂಡಿಸಿದ ಮೊದಲ ರೈಲ್ವೆ ಬಜೆಟ್‌ನಲ್ಲೇ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವ ವಿಚಾರದಲ್ಲಿ ಹೆಚ್ಚು ಆಸಕ್ತಿಯನ್ನು ವಹಿಸಿ, ದಶಕದ ನಂತರ ಮೊದಲ ಬಾರಿಗೆ ರೈಲ್ವೆ ಪ್ರಯಾಣದ, ಸರಕು ಸಾಗಣೆ ದರಗಳನ್ನು ಏರಿಸಿದ್ದರು.
ಈಗಿನ ರಾಜಕೀಯ ಸನ್ನಿವೇಶದಲ್ಲಿ, ಅದರಲ್ಲೂ ಹಲವು ಪಕ್ಷಗಳ ಕೂಟ ಸರ್ಕಾರದ ಸಹಜ ಒತ್ತಡಗಳ ಜತೆಯಲ್ಲೇ, ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿರುವ ರಾಷ್ಟ್ರೀಯ ಸಲಹಾ ಸಮಿತಿಯ ಶಿಫಾರಸ್ಸುಗಳ ಒತ್ತಡವನ್ನು ನಿಭಾಯಿಸಬೇಕಾದರೂ ಧೈರ್ಯ ಬೇಕು.
ಬನ್ಸಾಲ್ ಆ ಧೈರ್ಯವನ್ನು ಪ್ರದರ್ಶಿಸಿದರು. ರೈಲ್ವೆ ಮಂತ್ರಾಲಯದ ವ್ಯವಹಾರಗಳನ್ನು ಕುರಿತ ಚರ್ಚೆಯೇ ಆಗದಿದ್ದರೂ, ಬಜೆಟ್ ಅಂಗೀಕಾರವಾಗಿದ್ದರಿಂದ, ಅವರಿಗೆ ಭಾಷಣ ಮಾಡುವ ಅವಕಾಶವೇ ಸಿಗಲಿಲ್ಲ.
ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಪವನಕುಮಾರ ಬನ್ಸಾಲ್ ಚಂಡೀಘಡದ ಲಾ ಕಾಲೇಜಿನಲ್ಲೇ ಕಾನೂನು ಓದಿದ್ದು. ಅವರು ಆ ಕಾಲೇಜಿನಲ್ಲಿದ್ದಾಗಲೇ ಲೋಕಸಭೆಯ ಪ್ರತಿಪಕ್ಷದ ನಾಯಕರಾಗಿರುವ ಸುಷ್ಮಾ ಸ್ವರಾಜ್ ಅವರೂ ಅಲ್ಲಿ ವಿದ್ಯಾರ್ಥಿಯಾಗಿದ್ದರು. ಇಬ್ಬರೂ ಒಂದೇ ತರಗತಿಯಲ್ಲೇನೂ ಇರಲಿಲ್ಲ.
ವಕೀಲರಾಗಿ ಬನ್ಸಾಲ್ ಕೆಲಸ ಮಾಡಿದ್ದು ಕಡಿಮೆ. ಹೇಳಿಕೊಳ್ಳುವಂತಹ ಖ್ಯಾತಿ ಏನೂ ಇರಲಿಲ್ಲ. ಆದರೆ 1976ರಲ್ಲಿ ಯುವ ಕಾಂಗ್ರೆಸ್ ಸಂಪರ್ಕ ಪಡೆದ ಅನಂತರ ತಮ್ಮ ದುಡಿಮೆಯಿಂದಲೇ ರಾಜಕೀಯದಲ್ಲಿ ಮುಂದಕ್ಕೆ ಬಂದವರು.
ಎಐಸಿಸಿ ಕಾರ್ಯದರ್ಶಿಯಾಗಿದ್ದಾಗ ದೆಹಲಿಯಲ್ಲಿ ಅನೇಕ ಹಿರಿಯ ಕಾಂಗ್ರೆಸ್ಸಿಗರ ಸಂಪರ್ಕವಾದದ್ದನ್ನು ಬಳಸಿಕೊಳ್ಳುವ ಚಾಕಚಕ್ಯತೆಯನ್ನು ಪ್ರದರ್ಶಿಸಿದ ಬನ್ಸಾಲ್ ಅವರಿಗೆ ಮೊದಲ ಅವಕಾಶ ಸಿಕ್ಕಿದ್ದು ರಾಜ್ಯ ಸಭೆಯ ಸದಸ್ಯರಾಗಿ.
ಅನಂತರ ಅವರು ಆರು ಬಾರಿ ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಅದರಲ್ಲಿ ಎರಡು ಬಾರಿ ಸೋತಿದ್ದಾರೆ. ನಾಲ್ಕು ಬಾರಿ ಗೆದ್ದಿದ್ದಾರೆ. ಅವರ ರಾಜಕೀಯದ ವೈಶಿಷ್ಟ್ಯವೆಂದರೆ ಎಲ್ಲ ಬಗೆಯ ವಾದ- ವಿವಾದಗಳಿಂದಲೂ ದೂರವಿರುವುದು. ಯಾರ ವಿರೋಧವನ್ನೂ ಕಟ್ಟಿಕೊಳ್ಳದೇ ಇರುವುದು. ಹಲವಾರು ಮಂತ್ರಾಲಯಗಳಲ್ಲಿ ಕೆಲಸ ಮಾಡಿದ್ದಾರೆ.
ಆದರೆ ರಾಜಕೀಯದಲ್ಲಿ ಒಂದು ದೊಡ್ಡ ಸ್ಥಾನಕ್ಕೆ ಏರಿದ ಅನಂತರ ಅಂತಹ ಸರಳವಾದ ರಾಜಕೀಯ- ಜೀವನ ನಡೆಸುವುದು ಸುಲಭವಲ್ಲ. ಇಷ್ಟವಿರಲಿ, ಇಲ್ಲದೇ ಇರಲಿ, ಒತ್ತಡಗಳಿಗೆ ಮಣಿಯಲೇಬೇಕಾಗುತ್ತದೆ. ಕೆಲವೊಮ್ಮೆ ಒತ್ತಡಕ್ಕೆ ಮಣಿದು ಮಾಡಿದ ಕೆಲಸದಿಂದಲೋ ಅಥವಾ ಒತ್ತಡ ತಂದವರು ಮಾಡಿದ ಕೆಟ್ಟ ಕೆಲಸದಿಂದಲೋ ವಿವಾದದ ಸುಳಿಯಲ್ಲಿ ಸಿಕ್ಕಿ ಬೀಳುವ ಸಂಭವವೂ ಇದೆ.
 ಈಗ ಪವನಕುಮಾರ ಬನ್ಸಾಲ್ ಅಂತಹ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಅದು ಸಾಮಾನ್ಯವಾದ ಪ್ರಕರಣವಲ್ಲ. ಕೇಂದ್ರ ರೈಲ್ವೆ ಮಂಡಳಿಯ ಸದಸ್ಯರಾಗಿ, ಒಬ್ಬ ಹಿರಿಯ ಅಧಿಕಾರಿಗೆ ಬಡ್ತಿ ಕೊಡಿಸಲು, ರೈಲ್ವೆ ಮಂತ್ರಿಯ ಪ್ರಭಾವ ಬಳಸುವುದಾಗಿ ಬನ್ಸಾಲ್‌ರ ಸೋದರಳಿಯ (ತಂಗಿಯ ಮಗ) ಶಿಂಗ್ಳಾ ಹತ್ತು ಕೋಟಿ ರುಪಾಯಿಗಳ ವ್ಯವಹಾರವನ್ನು ಕುದುರಿಸಿದ್ದರೆಂದೂ, ಅದರಲ್ಲಿ ಮುಂಗಡವಾಗಿ ತೊಂಬತ್ತು ಲಕ್ಷ ರುಪಾಯಿಗಳನ್ನು ತರುತ್ತಿದ್ದಾಗ ಸಿಬಿಐ ವಶಕ್ಕೆ ಸಿಕ್ಕಿಬಿದ್ದರೆಂದೂ ಹೇಳಲಾದ ಭಾರಿ ಪ್ರಕರಣ. ಈ ಪ್ರಕರಣದಲ್ಲಿ ಪ್ರತಿಪಕ್ಷಗಳು ಬನ್ಸಾಲ್‌ರ ತಲೆದಂಡನ್ನು ಕೇಳಿವೆ.
ಈ ತೊಂಬತ್ತು ಲಕ್ಷ ರುಪಾಯಿಗಳನ್ನು ಹೊಂದಿಸಿದ್ದು ಬೆಂಗಳೂರು ಮೂಲದ ಒಬ್ಬ ರೈಲ್ವೆ ಕಂಟ್ರ್ಯಾಕ್ಟರ್. ಇಂತಹ ಆರೋಪ ಅಪ್ಪಳಿಸಿದಾಗ, ಅದೂ ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ, ಮುಖದ ಮೇಲಿನ ಮುಗುಳ್ನಗೆ ಉಳಿದೀತೇ?
ಸಿಬಿಐ ಈ ಆರೋಪದ ತನಿಖೆ ನಡೆಸುತ್ತಿದೆ. ಅಧಿಕಾರಿಗಳು ಶಿಂಗ್ಳಾ ಅವರನ್ನು ಬಂಧಿಸಿದ್ದಾರೆ. ಅವರ ಜತೆ ಇನ್ನೊಬ್ಬ ಹಿರಿಯ ರೈಲ್ವೆ ಅಧಿಕಾರಿಯನ್ನೂ ಬಂಧಿಸಲಾಗಿದೆ. ಬೆಂಗಳೂರು ಮೂಲದ ಕಂಟ್ರ್ಯಾಕ್ಟರ್ ಕೂಡಾ ಬಂಧನಕ್ಕೆ ಒಳಗಾಗಿದ್ದರು.
ಇದೆಲ್ಲವೂ ವರದಿಯಾದಾಗ ಪವನಕುಮಾರ ಬನ್ಸಾಲ್ ತಮಗೂ, ತಮ್ಮ ಸೋದರಳಿಯ ಸಿಂಗ್ಳಾ ಅವರಿಗೂ ಯಾವುದೇ ರೀತಿಯ ವ್ಯಾಪಾರಿ- ವ್ಯವಹಾರ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು. ಆದು ಅವರ ಸಹಜ ಪ್ರತಿಕ್ರಿಯೆ.
ಈಗಿನ ವಾತಾವರಣದಲ್ಲಿ ಅದನ್ನು ನಂಬುವುದು ಕಷ್ಟ. ಎಲ್ಲ ರಾಜಕಾರಣಿಗಳೂ ಅಪರಾಧ ಪ್ರಕರಣಗಳಲ್ಲಿ ಅವರ ಹೆಸರು ಕಾಣಿಸಿಕೊಂಡಾಗ, ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳುವುದು ಮಾಮೂಲು. ಆದರೆ ಸಿಬಿಐ ಹಾಗೂ ಇತರರು ಆ ಹೇಳಿಕೆಯನ್ನು ಹಾಗೇ ಒಪ್ಪದೇ ತಮ್ಮ ತನಿಖೆಯನ್ನು ಮುಂದುವರಿಸಿರುವುದು. ಕೆಲವು ಪತ್ರಿಕೆಗಳೂ ತಮ್ಮದೇ ಆದ ರೀತಿಯಲ್ಲಿ ತನಿಖೆಯನ್ನು ನಡೆಸುವುದೂ ಉಂಟು.
ಪವನ ಕುಮಾರ್ ಬನ್ಸಾಲ್ ಅವರ ಕುಟುಂಬದ  ಹಲವು ಸದಸ್ಯರು ಥಿಯಾನ್ ಫಾರ್ಮಾ ಎನ್ನುವ ಒಂದು ಸಾಮಾನ್ಯ ಔಷಧಿಗಳ ತಯಾರಿಕೆ ಹಾಗೂ ತಯಾರಿಕೆಯ ಗುತ್ತಿಗೆ ಪಡೆಯುವ ಕಂಪನಿಯ ಮಾಲಿಕರು. ಅದು ನೋಂದಾಯಿತ ಸಂಸ್ಥೆಯಾದ್ದರಿಂದ ಅದನ್ನು ಅಲ್ಲಗಳೆಯುವಂತಿಲ್ಲ.
2005ರಲ್ಲಿ ಸ್ಥಾಪನೆಯಾದ ಥಿಯಾನ್ ಫಾರ್ಮ ಒಂದು ಸಾಮಾನ್ಯ ಕಂಪನಿ. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಪ್ರಗತಿಯ ವೇಗ ಅಸಾಮಾನ್ಯವಾದದ್ದು. 2012ರಲ್ಲಿ ಸಂಸ್ಥೆಯ ವ್ಯವಹಾರದ ಮೌಲ್ಯ ಸುಮಾರು 152 ಕೋಟಿ ರುಪಾಯಿ (ಇದು ಕಂಪನಿಗಳ ರಿಜಿಸ್ಟ್ರಾರ್ ವರದಿಯಲ್ಲಿದೆ). ಈ ಕಂಪನಿಗೆ ಗುತ್ತಿಗೆ ಕೊಡುವ ಕಂಪನಿಗಳಲ್ಲಿ ಈಗ ಭಾರತದ ಭಾರಿಭಾರಿ ಕಂಪೆನಿಗಳ ಹೆಸರೂ ಇದೆ.
ನಿಜ. ಇಷ್ಟನ್ನೇ ಆಧರಿಸಿ, ಬನ್ಸಾಲ್ ಅವರ ಮೇಲೆ ಭ್ರಷ್ಟಾಚಾರದ ಆರೋಪವನ್ನು ಹೊರಿಸುವುದು ಸರಿಯಲ್ಲ. ಆದರೆ ಒಬ್ಬ ಪ್ರತಿಷ್ಠಿತ ರಾಜಕಾರಣಿ, ಅಧಿಕಾರಸ್ಥ ರಾಜಕೀಯ ವಲಯವನ್ನು ಪ್ರವೇಶಿಸುವಾಗ, ತಮ್ಮ ರಾಜಕೀಯ ಹಾಗೂ ವ್ಯಾಪಾರ- ವ್ಯವಹಾರಗಳನ್ನು ಜನರು ಒಪ್ಪುವ ರೀತಿಯಲ್ಲಿ ಪ್ರತ್ಯೇಕಿಸಬೇಕು.
ಅದು ಹೇಗೆ ಸಾಧ್ಯ?
ಆ ಪ್ರಶ್ನೆಗೆ ಈಗಿನ ಬನ್ಸಾಲ್ ಪ್ರಕರಣದಲ್ಲಿ ಸಿಬಿಐ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದರೆ ಉತ್ತರ ನೀಡುವುದು ಸಾಧ್ಯವಾಗಬಹುದು. ಆ ದೃಷ್ಟಿಯಿಂದ, ಈಗ ಬನ್ಸಾಲ್ ಸುದ್ದಿಯ ಸುಳಿಯಲ್ಲಿ ಸಿಕ್ಕಿರುವ ಅಧಿಕಾರಸ್ಥ ರಾಜಕಾರಣಿ. ಅವರ ರಾಜಕೀಯ ಹಾಗೂ ವ್ಯಾಪಾರದಲ್ಲಿ ಜನ ಹೆಚ್ಚಿನ ಆಸಕ್ತಿಯನ್ನು ತೋರಿಸುವುದೂ ಸಹಜವೇ. ಅದರಲ್ಲೂ ಒಂದು ಹುದ್ದೆಗೆ ಬರಲು ಹತ್ತು ಕೋಟಿ ರುಪಾಯಿಗಳ ಲಂಚ ಕೊಡಲೂ ಸಿದ್ಧ ಎನ್ನುವುದೇನೂ ಸಾಮಾನ್ಯ ವಿಷಯವಲ್ಲ.


-ಸತ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments