ಛೋಟಾಧಾರಾ ಮೃತ್ಯುಚುಂಬನ
ಬೆಳಗಾಗಿ ಬಹು ಹೊತ್ತಾದರೂ ನಮಗೆ ಚಂದ್ರತಾಲ್ ಎಂಬ ಸಗ್ಗದ ತುಣುಕಿನಿಂದ ಕಳಚಿಕೊಳ್ಳಲು ಮನಸ್ಸೇ ಬರಲಿಲ್ಲ. ಮನಾಲಿ ತಲುಪುವುದು ಲೇಟಾಗುತ್ತದೆಂದು ಜೀಪಿನ ಚಾಲಕ ಎಚ್ಚರಿಸಿದ. ಜುಮೈಕಾನ ಕ್ಯಾಂಪಿನಲ್ಲಿದ್ದ ಹರಿಯಾಣದ ಜೋಡಿಯೊಂದು ನಾವೂ ನಿಮ್ಮೊಡನೆ ಬರುತ್ತೇವೆಂದು ಅಂಟಿಕೊಂಡಿತು. ಹಿಮಾಚಲದಲ್ಲಿ ಸಾರಿಗೆ ಸಂಪರ್ಕ ತುಂಬಾ ವಿರಳವಾದುದರಿಂದ, ಹೀಗೆ ಹಿಚ್ಹೈಕ್ ಮಾಡುವ ಪ್ರಯಾಣಿಕರು ಸಾಕಷ್ಟು ಮಂದಿ ಸಿಗುತ್ತಾರೆ. ಇವರು ಬೆಳಗ್ಗೆ ಬೇಗನೆ ಬತಾಲ್ಗೆ ಬರುವ ಬಸ್ಸನ್ನು ಹಿಡಿದು ಗ್ರಂಫುವಿಗೆ ಹೋಗಿ, ಅಲ್ಲಿಂದ ಲದಾಖ್ಗೆ ತೆರಳುವವರಿದ್ದರು. ಕಾಝಾದಿಂದ ನಮ್ಮೊಂದಿಗೆ ಹೀಗೇ ಬಂದಿದ್ದ ಲಾಡ್ಜ್ ಮಾಲಿಕ ತ್ಸೇರಿಂಗ್ ಹಿಂದಿನ ದಿನವೇ ಬತಾಲ್ನಲ್ಲಿ ಕಳಚಿಕೊಂಡಿದ್ದ.
ಜೀಪಿನ ಹಿಂದುಗಡೆ ಇಡುಕಿರಿದಿದ್ದ ನಮ್ಮ ಲಗ್ಗೇಜುಗಳ ನಡುವೆಯೇ ಜಾಗ ಮಾಡಿಕೊಂಡು ಹರಿಯಾಣದ ಜೋಡಿ ಕುಳಿತಿತು. ಚಂದ್ರತಾಲ್ನ ಹಸಿಹಸಿ ಅನುಭೂತಿಯನ್ನು ಮನದ ತುಂಬಾ ತುಂಬಿಕೊಂಡು ನಾವಲ್ಲಿಂದ ಗಾಡಿ ಬಿಟ್ಟೆವು. ನಿನ್ನೆ ಬಂದ ದಾರಿಯಲ್ಲೇ ಲಡಕ ಲಡಕ ಎನ್ನುತ್ತ ಜೀಪು ಬೆಟ್ಟ ಇಳಿಯತೊಡಗಿತು. ಚಂದ್ರತಾಲ್ಗೆ ಸ್ವಲ್ಪ ದೂರದಲ್ಲೇ ಅಸ್ಟ್ರೇಲಿಯದ ಯುವಕನೊಬ್ಬ ಬೀಡುಬಿಟ್ಟಿದ್ದ. ಆತನದೊಂದು ಕ್ಯಾರವಾನ್. ತಿಂಗಳಾನುಗಟ್ಟಲೆ ಅದರಲ್ಲಿ ಪ್ರಯಾಣಿಸಿದರೂ ಬೇಜಾರಾಗದು, ಅಂಥ ಸರ್ವಸನ್ನದ್ಧ ವಾಹನ. ಒಳಗೇ ಮಂಚ, ಲಿಕ್ಕರ್ಕೇಸ್, ಲೈಬ್ರರಿ, ಕಿಚನ್ ಇತ್ಯಾದಿ. ಪಕ್ಕದಲ್ಲೇ ಭರ್ಜರಿಯಾಗಿ ಕುಳಿತು ನಾಲಗೆ ಚಾಚಿ ತೇಕುತ್ತಿದ್ದ ಲ್ಯಾಬ್ರಡಾರ್ ನಾಯಿ. ಬೆಳಗ್ಗಿನ ಚಳಿಗೆ ಬಿಯರು ಕುಡಿಯುತ್ತ ಹಿತಾನುಭವದಲ್ಲಿ ಕುಳಿತಿದ್ದ. ನಮ್ಮನ್ನು ನೋಡಿ ಕೈ ಬೀಸಿದ.
ಬತಾಲ್ ತಲುಪಿದಾಗ ಹನ್ನೊಂದು ಗಂಟೆ. ಚಂದ್ರ ಧಾಬಾದಲ್ಲಿ ಟೀ ಸೇವನೆ. ದೋಲ್ಮಾ- ದೋರ್ಜಿ ದಂಪತಿಗಳದು ಎಂದಿನಂತೆ ಪ್ರೀತಿಯ ಸತ್ಕಾರ. ಅಂದು ಬಸ್ ಬೇಗನೆ ಹೋಗಿತ್ತು. ಹೀಗಾಗಿ ಹರಿಯಾಣದ ಜೋಡಿ ಗ್ರಂಫುವರೆಗೂ ನಮ್ಮ ಜತೆ ಬರುತ್ತೇವೆಂದರು. ಅರ್ಧ ಗಂಟೆ ವಿರಮಿಸಿ ಮುಂದುವರಿದೆವು.
ಈಗ ನಿಧಾನವಾಗಿ ದಾರಿಯ ಲಕ್ಷಣಗಳು ಬದಲಾಗತೊಡಗಿದ್ದವು. ಬತಾಲ್ವರೆಗೂ ಬರೀ ಒಣಭೂಮಿಯ ಮೇಲೆ ಸಾಗಿತ್ತು ರಸ್ತೆ. ಚಂದ್ರಾ ನದಿಯಂತೂ ನಮ್ಮ ಪಕ್ಕದಲ್ಲೇ ಉದ್ದಕ್ಕೆ ಹರಿದಿತ್ತು. ಈಗ ಅಲ್ಲಲ್ಲಿ ಸಣ್ಣ ಸಣ್ಣ ತೊರೆಗಳೂ ಕಾಣಿಸಿಕೊಳ್ಳತೊಡಗಿದವು. ಬೆಟ್ಟಗಳ ಮೇಲಿನಿಂದ ಹರಿದುಬರುತ್ತಿದ್ದ ಅವು ನಮ್ಮ ಕಣ್ಣೆದುರಲ್ಲೇ ಚಂದ್ರಾ ನದಿ ಜತೆ ಸಂಗಮಿಸುತ್ತಿದ್ದವು. ಅದರಲ್ಲಿ ಕೆಲವು ತೊರೆಗೆ ಸೇತುವೆ ಇತ್ತು, ಕೆಲವಕ್ಕೆ ಇರಲಿಲ್ಲ. ನಮ್ಮ ಚಾಲಕ ತೊರೆಗಳನ್ನು ಲೀಲಾಜಾಲವಾಗಿ ದಾಟಿಸುತ್ತಿದ್ದ. ಆದರೆ ನಮ್ಮ ಹೃದಯದ ಬಡಿತ ಮಾತ್ರ ನಮಗೇ ಕೇಳುತ್ತಿತ್ತು.
ಛೋಟಾಧಾರಾ ಎಂಬಲ್ಲಿ ಮಾತ್ರ, ನಾವು ಹೆದರುತ್ತಿದ್ದುದು ನಿಜವೇ ಆಗಿಹೋಯ್ತು. ಹರಿಯುವ ಹಳ್ಳದ ಸಾಮರ್ಥ್ಯವನ್ನು ನಮ್ಮ ಸಾರಥಿ ಕಡಿಮೆ ಅಂದಾಜಿಸಿದನೋ ಏನೋ, ನೀರು ಮೇಲಿನಿಂದ ಕೆಳಕ್ಕೆ ನದಿಗೆ ಧುಮುಕುವ ತೀರಾ ಅಂಚಿನಲ್ಲೇ ಜೀಪು ನಡೆಸಿದ. ಅರ್ಧ ಹಳ್ಳ ದಾಟಿದ ಅದು ಗುಂಡಿಯೊಂದರಲ್ಲಿ ಸಿಕ್ಕಿಬಿತ್ತು. ಜಪ್ಪೆಂದರೂ ಮಿಸುಕಲಿಲ್ಲ. ಜೀಪಿನ ಎಲ್ಲಾ ಗೇರುಗಳನ್ನು ಹಾಕಿ ಮೇಲೆತ್ತಲು ಪ್ರಯತ್ನಿಸಿದರೂ ವ್ಯರ್ಥವಾಯಿತು. 'ಸ್ವಲ್ಪ ಇಳಿದು ದೂಡಿ ಸಾರ್' ಎಂದ. ಹುಡುಗಿಯರನ್ನು ಭಾರಕ್ಕಾಗಿ ಜೀಪಿನೊಳಗೇ ಬಿಟ್ಟು, ಇಳಿದೆವು.
ಯಪ್ಪಾ! ಕಾಲನ್ನು ಮಂಜುಗಡ್ಡೆಯೊಳಗೆ ಇಳಿಸಿದಂತಾಯ್ತು. ಕಾರಣ ಗೊತ್ತಾಯಿತು- ಬೆಟ್ಟದ ಮೇಲಿನಿಂದ ಹಿಮ ಕರಗಿ ಹರಿದುಬರುತ್ತಿದ್ದ ನೀರದು. ಕಾಲಿಡಲು ಸಾಧ್ಯವಾಗದಂಥ ಥಂಡಿ. ಹೇಗೋ ಕಲ್ಲುಗಳ ಮೇಲೆ ಕಾಲಿಡುತ್ತ, ಸಾವರಿಸಿಕೊಂಡು ತಳ್ಳತೊಡಗಿದೆವು. ಜೀಪು ಹಿಮಾಲಯದಂತೇ ಅಚಲವಾಗಿತ್ತು. ನಾವು ಮಾತ್ರ ನೀರಿನಲ್ಲಿ ಡ್ಯಾನ್ಸ್ ಮಾಡುತ್ತಿದ್ದೆವು.
ನೀರಿನ ಆಳ ಹೆಚ್ಚಾಗುತ್ತಿದೆಯೋ? ಅಥವಾ ಭ್ರಮೆಯೋ? ನನ್ನ ಆತಂಕವನ್ನು ತಶಿಗೆ ರವಾನಿಸಿದೆ. ಬಿಸಿಲು ಪ್ರಖರವಾದಷ್ಟೂ ಹಿಮ ಕರಗುವ ಪ್ರಮಾಣ ಹೆಚ್ಚಾಗುತ್ತದೆ, ನೀರೂ ಅಧಿಕವಾಗುತ್ತದೆ ಎಂದ ತಶಿ. ಹೆದರಿದವರ ಮೇಲೆ ಹಾವು ಎಸೆದಂತಾಯ್ತು ನಮ್ಮ ಸ್ಥಿತಿ. 'ಐಸಾ' ಎಂದು ಮತ್ತೆ ತಳ್ಳಿದೆವು. ಜೀಪು ಸ್ವಲ್ಪ ಜರುಗಿತು. ಏನಾಯಿತೆಂದು ನೋಡಿದೆವು. ಹಿಂದಿನ ಚಕ್ರವನ್ನು ಆಧರಿಸಿ ಹಿಡಿದಿದ್ದ ಕಲ್ಲು ಕೆಳಗೆ ಜರಿದಿತ್ತು. ಈಗ ಜೀಪು ಇನ್ನಷ್ಟು ನದಿಯ ಕಡೆಗೆ ವಾಲಿತು. ಸಾರಥಿ ತಲೆಯ ಮೇಲೆ ಕೈ ಹೊತ್ತ. ಈಗ ಎತ್ತಲಿಂದಾದರೂ ನೆರವು ಬಾರದಿದ್ದರೆ ನಾವು ನದಿಯ ಪಾಲೇ ಸರಿ ಎಂಬುದು ಖಚಿತವಾಯ್ತು.
ಜೀಪು ಕೆಳಗೆ ಸರಿದದ್ದು ಕಂಡು, ಜೀಪಿನೊಳಗೇ ಇದ್ದ ಹುಡುಗಿಯರು ಬಾಯಿ ಬಾಯಿ ಬಡಿದುಕೊಳ್ಳತೊಡಗಿದರು. 'ನಮ್ಮನ್ನು ಹಿಮಾಲಯಕ್ಕೆ ಕರೆತಂದು ಕೊಲ್ಲಲು ಪ್ಲಾನ್ ಮಾಡಿದ್ದೀರಾ?' ಎಂದೆಲ್ಲ ಕೂಗಾಡತೊಡಗಿದರು. ಕಡೆಗೆ ಅವರನ್ನೂ ಇಳಿಸಿದ್ದಾಯ್ತು. ಅಷ್ಟೂ ಮಂದಿ ದಾರಿ ಬದಿಯಲ್ಲಿದ್ದ ಕಲ್ಲುಗಳ ಮೇಲೆ ಚಿಂತಾಕ್ರಾಂತರಾಗಿ ಕುಳಿತೆವು. ಯಾವುದಾದರೂ ವಾಹನ ಬರುತ್ತಿದೆಯೊ ಎಂದು ದಾರಿಯ ಎರಡೂ ಕಡೆ ದೂರದೂರಕ್ಕೆ ದಿಟ್ಟಿಸತೊಡಗಿದೆವು.
ನೀರಿನ ರಭಸಕ್ಕೆ ಕಲ್ಲುಗಳು ಜರುಗುತ್ತಿದ್ದವು. ಜೀಪು ಕೊಂಚಕೊಂಚವೇ ಪ್ರಪಾತದತ್ತ ಸರಿಯುತ್ತಿತ್ತು. (ಮುಂದಿನ ವಾರ- ರೋಹ್ತಾಂಗ್ ರಂಪ)
-ಹರೀಶ್ ಕೇರ
harishkera@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.