ನಾರದರ ನಾದ ಸಾಗ ಬೇಕು ದೂರ ದೂರ
ನಾರದ ಮಹಾಮುನಿಗಳಿಗೆ ಮೊದಲು ಸಂಗೀತ ಬರುತ್ತಿರಲಿಲ್ಲವಂತೆ! 'ತುಂಬುರು' ಮೊದಲನೇ ಸಂಗೀತಗಾರ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ಒಮ್ಮೆ ನಾರದರು ತಮ್ಮ ಯಾವುದೋ ಕಾರ್ಯಕ್ಕಾಗಿ ಶ್ರೀಮನ್ನಾರಾಯಣನನ್ನು ಭೇಟಿಯಾಗಲು ವೈಕುಂಠಕ್ಕೆ ಬರುತ್ತಾರೆ. ಅಲ್ಲಿ ನೋಡಿದರೆ ದೊಡ್ದ ಸಂಗೀತ ಕಛೇರಿ ನಡೆಯುತ್ತಿತ್ತು. ಎಲ್ಲ ದೇವ ದೇವತೆಗಳೂ, ಬ್ರಹ್ಮ, ಇಂದ್ರ- ಹೀಗೆ ಗಣ್ಯಾತಿ ಗಣ್ಯರೆಲ್ಲ ಸೇರಿದ್ದ ದೊಡ್ಡ ಸಭೆನಾರಾಯಣ ಶೇಷಶಾಯಿಯಾಗಿ ಲಕ್ಷ್ಮಿ ಸಮೇತ ವಿರಾಜಮಾನನಾಗಿದ್ದ. ಆಗ ಅಲ್ಲಿ ಕೌಶಿಕ ಎಂಬ ಬ್ರಾಹ್ಮಣ ಶ್ರೇಷ್ಠನ ಶಿಷ್ಯರು ಅದ್ಭುತವಾಗಿ ಗಾಯನಮಾಡುತ್ತಿದ್ದರಂತೆ. ಎಲ್ಲರೂ ಆ ನಾದಲೋಕದಲ್ಲಿ ಮೈಮರೆತುಬಿಟ್ಟಿದ್ದಾರೆ. ಆಗ ನಾರದರು ತಾವೂ ಆ ಗಾಯನ ಕೇಳಬೇಕೆಂದು ಒಳ ಹೊರಟರೆ ಅಲ್ಲಿದ್ದ ದ್ವಾರಪಾಲಕಿಯರು ಅವರನ್ನು ತಳ್ಳಿಬಿಡಬೇಕೆ? ಅಷ್ಟೇ ಅಲ್ಲ, ಅವರನ್ನು ತಡೆದು ಅದೇ ಹೊತ್ತಿಗೆ ಅಲ್ಲಿಗೆ ಬಂದ 'ತುಂಬುರ'ರನ್ನು ಒಳಗೆ ಬಿಟ್ಟರಂತೆ!
ಒಂದೆಡೆ ಒಳಗಿಂದ ಕೇಳಿಬರುತ್ತಿದ್ದ ಆ ಗಾಯನದ ಆನಂದ, ಇನ್ನೊಂದೆಡೆ ಈ ಅವಮಾನ. ನಾರದರು ಆ ಕ್ಷಣವೇ ನಿರ್ಧರಿಸಿದರಂತೆ, 'ನಾನೂ ಸಂಗೀತಗಾರನಾಗಲೇ ಬೇಕು' ಎಂದು. ನಿರ್ಧರಿಸಿದರೆ ಆಯಿತೆ? ವಿಷ್ಣುವಿನ ಬಳಿ ಹೋಗಿ ತಮ್ಮ ಆಸೆಯನ್ನು ತಿಳಿಸಿದರು. ಆಗ ಅವನ ಆಜ್ಞೆಯಂತೆ ಮಾನಸ ಸರೋವರದ ಉತ್ತರ ದಿಕ್ಕಿನ ಒಂದು ಪರ್ವತದಲ್ಲಿದ್ದ ಉಲೂಕರಾಜ 'ಗಾನ ಬಂದು' ಎಂಬವನ ಬಳಿ ಬಂದು ಅವನ ಶಿಷ್ಯರಾದರಂತೆ. ಆದರೇನು? ಹಲವಾರು ವರ್ಷ ಅಭ್ಯಾಸ ಮಾಡಿದರೂ ಸಂಗೀತ ಒಲಿಯಲೇ ಇಲ್ಲ..!
ಮತ್ತೆ ಬೇಸರದಿಂದ ನಾರಾಯಣನ ಬಳಿ ಹೋಗಿ ಬೇಡಿಕೊಂಡಾಗ ಅವನ ಆಜ್ಞೆಯಂತೆ ಸಂಗೀತದ ಮಾಂತ್ರಿಕ ಶ್ರೀ ಕೃಷ್ಣನ ಬಳಿ ಬಂದು ಸಂಗೀತ ಕಲಿಸಬೇಕೆಂದು ಬೇಡಿಕೊಂಡರಂತೆ. ಶ್ರೀ ಕೃಷ್ಣನಿಗೆ ಸಮಯವಿರಲಿಲ್ಲವೋ ಅಥವಾ ನಾರದರು ಇನ್ನೂ ಪಕ್ವವಾಗಬೇಕು ಎನಿಸಿತೋ? ಅಂತೂ ಕೃಷ್ಣ ತಾನು ಹೇಳಿಕೊಡದೇ ಅವರನ್ನು ರುಕ್ಮಿಣಿ- ಸತ್ಯಭಾಮೆಯರ ಬಳಿ ಸಂಗೀತ ಕಲಿಯಲು ಕಳಿಸಿದನಂತೆ.
ಅಲ್ಲೂ ಹಲವು ವರ್ಷ ಕಲಿತು, ಸಂಪೂರ್ಣ ಸಮಾಧಾನವಾಗದೇ ಮತ್ತೆ ಶ್ರೀಕೃಷ್ಣನ ಮೊರೆ ಹೊಕ್ಕು ಅವನನ್ನೇ ಗುರುವಾಗಿಸಿಕೊಂಡು, ಅಪಾರ ಸಾಧನೆ ಮಾಡಿ ಸಂಗೀತವನ್ನು ಒಲಿಸಿಕೊಂಡು ಅದ್ಭುತ ಸಂಗೀತಗಾರರಾದರಂತೆ!
ನಾರದ ಪುರಾಣ ಹೇಳುವ ಈ ಕಥೆ ಓದಿದಾಗ ಅನ್ನಿಸುವುದಿಷ್ಟು... ಈ ಸಂಗೀತದಲ್ಲಿ ಗುರುವಿನ ಶೋಧ, ಅಲೆದಾಟ, ಸಾಧನೆ, ಕಷ್ಟ ಪಡುವುದು- ಇದು ಯಾವುದೂ ಇಂದು ನಿನ್ನೆಯದಲ್ಲ! ನಾರದ ಮಹಾಮುನಿಗಳ ಕಾಲದಿಂದಲೂ ಇದೆ!
ಇಂದಿನ ವರೆಗೂ ಇದೆ... ಇದು ಒಳಗಿನ ತುಡಿತದಿಂದ ತಡೆಯದಾಗದಂತಾದಾಗ ದೊರೆಯುವ ವಿಷಯ. ಅದಕ್ಕೇ ಸಂಗೀತಗಾರರಿಗೆ ಸಂಗೀತ ಒಂದೇ ಪರಮಾನಂದ. ಜೀವನದ ಎಲ್ಲ ಸುಖ, ಸ್ವರ್ಗ, ಐಶ್ವರ್ಯ ಎಲ್ಲ ಇದ್ದರೂ ಅವರು ಸದಾ ವಿರಹಿಗಳೇ. ಸಂಗೀತಕ್ಕಾಗಿ ಹಾತೊರೆವ ವಿರಹಿಗಳು. ಅವರೇ ಸಂಗೀತ ಸರಸ್ವತಿಯನ್ನು ಒಲಿಸಿಕೊಳ್ಳಬಲ್ಲವರು...
ನಮ್ಮಲ್ಲೂ ಕಲಿಯಬೇಕೆಂಬ ಇಚ್ಛೆಯೇನೋ ಬಲವಾಗಿರುತ್ತದೆ. ಆದರೆ ಗುರಿ ಮುಟ್ಟುವ ತಾಳ್ಮೆ ಮಾತ್ರ ಈ ತರಾತುರಿಯ ಯುಗದಲ್ಲಿ ಎಲ್ಲೋ ಕಳೆದುಹೋಗಿದೆ. 'ನನ್ನ ಮಗನಿಗೆ ಸಂಗೀತ ಎಂದರೆ ಹುಚ್ಚು. ಅದಕ್ಕೇ ಕರೆದುಕೊಂಡು ಬಂದೆ. ಒಂದು ನಾಲ್ಕೈದು ತಿಂಗಳಲ್ಲಿ ಸಂಗೀತ ಬರುತ್ತಾ? ತಿವಿಯಲ್ಲಿ ಹಾಡಬಹುದಾ?' ಎಂದು ಕೇಳಿ ಗುರುಗಳನ್ನೇ ಗಲಿಬಿಲಿಗೊಳಿಸುವ ಅಥವಾ 'ಅಯ್ಯೋ, ಒಂದು ಐದಾರು ಕ್ಲಾಸಿಗೆ ಹೋದೆ, ಅದೇನು ಬರಲ್ಲ ಬಿಡು' ಎಂದು ಬಿಟ್ಟುಬಿಡುವ ಈ ಕಾಲದಲ್ಲಿ ನಾರದರ ಈ ಕಥೆ ನೀಡುವ ಸಂದೇಶ- ಸಂಗೀತ ಗಳಿಸಿಕೊಳ್ಳಬಹುದಾದ, ಒಲಿಸಿಕೊಳ್ಳಬೇಕಾದ, ಹಂತ ಹಂತವಾಗಿ ಸಾಗಿ ಗುರಿ ತಲುಪಬೇಕಾದ ಬ್ರಹ್ಮ ವಿದ್ಯೆ.
- ಶ್ರುತಿ ಭಟ್
shrutikbhat@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.