ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಪಾಟೀಲರ ಪೇಂಟಿಂಗ್

Vishwanath S
Updated On : 11 May 2013, 12:53 pm

ನೇರನೋಟದಲ್ಲಿ ಒಂದು ಕಲಾಕೃತಿ ಏನೇನೋ ಅರ್ಥಗಳನ್ನು ಹುಟ್ಟುಹಾಕುತ್ತದೆ. ಅದು ಥಟ್ಟನೆ ನೋಡುಗನ ಗಮನಕ್ಕೆ ಬಂದರೆ ಅವನೊಳಗೊಂದು ಸಂಭ್ರಮದ ಬುಗ್ಗೆ. ಆದರೆ ಕಲಾವಿದ ಬಳಸಿದ ಬಣ್ಣ, ರೇಖೆ, ಚೌಕಟ್ಟುಗಳು, ರೇಖೆಯ ಉದ್ದಗಲಗಳು ಬೇರೆ ಏನನ್ನೋ ಹೇಳುತ್ತಿರುತ್ತವೆ.
ಬಹಳಷ್ಟು ಕಲಾವಿದರು ಮನಸ್ಸಿನೊಳಗಿನ ಆಶಯವನ್ನು ಬಚ್ಚಿಟ್ಟು, 'ಇದೇನೆಂದು ನೀವೇ ಹೇಳಿ?' ಎಂದು ಬಿಡುತ್ತಾರೆ.
ಅದೂ ಸರಿಯೇ. ಒಂದು ಪೇಂಟಿಂಗ್ ಸಾಧ್ಯತೆ ಅಂದ್ರೆ ನೋಡುಗನ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಅನ್ನುವುದಾಗಿರುತ್ತದೆ. ಯಾವ ಒತ್ತಡ, ತವಕ- ತಲ್ಲಣ, ತುಮುಲಗಳಿಲ್ಲದೆ ಸುಮ್ಮಸುಮ್ಮನೆ ಯಾವುದೂ ಸೃಷ್ಟಿಯಾಗಲಾರದು. ಹಾಗೆಂದು ಸೃಜನಶೀಲತೆಗೆ ತೀವ್ರತೆ ಎಲ್ಲಿಂದ ಬಂತೆಂದು ಕೇಳುವುದಕ್ಕಿಂತ, ಅದು ಯಾಕೆ ಹಾಗೆ ಒಡಮೂಡಿದೆ? ಆ ಬಣ್ಣ ಸೃಜಿಸುವ ಲೋಕದ ಕಥೆ ಏನು? ಆ ರೇಖೆಗಳು ಹೇಳುವ ಅರ್ಥವೇನು? ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನೋಡುಗ ಗ್ರಹಿಸುತ್ತ ಹೋಗುತ್ತಾನೆ.
ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಶಿಕ್ಷಕಿ ಸವಿತಾ. ಪಿ. ಪಾಟೀಲರ ಕಲಾಕೃತಿಗಳ ನೇಚರ್ ಸ್ಕೇಪ್ ಸರಣಿಯನ್ನು ಇತ್ತೀಚೆಗೆ ಪ್ರದರ್ಶಿಸಲಾಯಿತು. ಸವಿತಾ ಮೂಲತಃ ಬಿಜಾಪುರ ಜಿಲ್ಲೆಯ ಆಲಮೇಲದವರು. ಕುಟುಂಬದವರ ಪ್ರೋತ್ಸಾಹದಿಂದ ಕಲಾಧ್ಯಾನದಲ್ಲಿ ನಿರತರಾಗಿ ದೇಶದ ಹಲವು ಕಡೆ ಕಲಾಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ.
ಸವಿತಾ ಅವರ ಕಲಾಕೃತಿಗಳು ಲುಂಬಿನಿಯ ಬುದ್ಧವಿಹಾರ, ಆಂಧ್ರದ ಜಾಂವಗಾಂವ, ಗೋವಾ, ಬೆಂಗಳೂರು ಲಲಿತಕಲಾ ಅಕಾಡೆಮಿ, ಮೈಸೂರು, ಬೀದರ, ಗದಗ ಧಾರವಾಡಗಳಲ್ಲಿ ಸಂಗ್ರಹವಾಗಿವೆ.
ಪ್ರಶಾಂತ ಕಣ್ಣುಗಳಲ್ಲಿ, ಸ್ತ್ರೀತನದ ಪರಿಸರದಲ್ಲಿ ಸವಿತಾ ಅವರ ಕಲಾಕೃತಿಗಳೂ ಅಭಿವ್ಯಕ್ತಗೊಂಡಿವೆ. ಈ ಚಿತ್ರಗಳಲ್ಲಿ ಸರಳ ಶೈಲಿಯೊಂದು ಕಾಣುತ್ತದೆ. ಸವಿತಾ ಪಾಟೀಲ ಎಂಬ ಯುವ ಪ್ರತಿಭೆಯ ಪೇಂಟಿಂಗ್‌ಗಳಲ್ಲಿ ತಣ್ಣಗಿನ ಆವರಣದೊಳಗಿನ ಹೆಣ್ಣುತನದ ತುಮುಲಗಳನ್ನು ಅಭಿವ್ಯಕ್ತಗೊಳಿಸಲಾಗಿದೆ.
ಯಾವ ಶೈಲಿಯ ಮುಲಾಜಿಗೂ ಸಿಕ್ಕದೆ ಮುಗ್ಧವಾಗಿ ಸೃಜಿಸಿರುವ ಅವರ ಕಲಾಕೃತಿಗಳಲ್ಲಿ ಹೆಣ್ಣಿನ ಆಪ್ತ ಪರಿಸರವಿದೆ. ಹೆಣ್ಣು- ಪ್ರಕೃತಿ ನಡುವೆ ನೇರ ಸಂಬಂಧದ ದೃಶ್ಯಗಳಿವೆ. ಅಲ್ಲಿ ಕೀಳರಿಮೆ ಇದೆ. ದೇವಿ ಇದ್ದಾಳೆ. ಹೂವಿದೆ. ಮುಟ್ಟಿದೆ. ಕನ್ನಡಿಯಿದೆ. ಬದುಕಿದೆ. ಮಳೆ. ಮೋಡ, ಗಿರಿ- ಪರ್ವತಗಳ ಲ್ಯಾಂಡ್‌ಸ್ಕೇಪ್‌ಗಳ ಜೊತೆಗೆ ಹೆಣ್ತನದ ಎಳೆಯೊಂದು ಬಳ್ಳಿಯಾಗಿದೆ.
ಗೆಳತಿಯರೊಂದಿಗಿನ ತಾನು, ತನ್ನ ಕನ್ನಡಿ, ಮೊಬೈಲ್, ಇಂಟರ್ನೆಟ್ ಜಗತ್ತು ಒಂದೊಂದು ಕ್ಯಾನ್ವಾಸಿನಲ್ಲೂ ಹೆಣ್ಣಿನ ಒಂದೊಂದು ಪರಿಸರ ಇರುವ ಈ ಕಲಾಕೃತಿಗಳು ಆಪ್ತವೆನಿಸುತ್ತವೆ.

-ಮಹಾದೇವ ಗಾಯತ್ರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments