ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಲಾಡೆನ್‌ನ ಬೇಟೆ ಹುಡುಗಿಯ ರಿವೇಂಜಾ?

Vishwanath S
Updated On : 11 May 2013, 12:50 pm

ಭಯೋತ್ಪಾದಕರ ಬಂದೂಕಿನ ನಳಿಕೆಯ ಸದ್ದು ನೂರಾರು ಚಿತ್ರಗಳಿಗೆ ಜೀವ ನೀಡಿದೆ. ಟೆರರ್ ಕಥೆಗಳನ್ನು ಒಳಗೊಂಡ ಅತಿ ಹೆಚ್ಚು ಚಿತ್ರಗಳನ್ನು ಜಗತ್ತಿಗೆ ಕೊಟ್ಟ ಖ್ಯಾತಿ ಅಮೆರಿಕಗೆ ಸಲ್ಲುತ್ತದೆ. ಅಮೆರಿಕ ಹೊರತು ಪಡಿಸಿದರೆ ಭಯೋತ್ಪಾದನೆಗೆ ಕ್ಯಾಮೆರಾ ಇಟ್ಟಿದ್ದು ಭಾರತೀಯ ಚಿತ್ರರಂಗ. ಇತ್ತೀಚೆಗೆ ನಟ ಕಮಲ್‌ಹಾಸನ್‌ರ 'ವಿಶ್ವರೂಪಂ' ಚಿತ್ರ ತೆರೆ ಕಂಡಿತು. ಭಯೋತ್ಪಾದನೆ ಕಥೆಯ ಈ ಚಿತ್ರಕ್ಕೆ ವಿರೋಧ ವ್ಯಕ್ತವಾಯಿತು. ಹೀಗೆ ಭಾರತದಲ್ಲಿ ವಿರೋಧ ನಡೆಯುತ್ತಿರುವಾಗಲೇ ಅಮೆರಿಕದಲ್ಲೂ ಅಂಥದೇ ಕಥೆ ಒಳಗೊಂಡ ಚಿತ್ರವೊಂದು ಬಂದಿದೆ. ಯಾರೂ ಅದರ ವಿರುದ್ಧ ಚಕಾರವೆತ್ತಿಲ್ಲ!
ವಿವಾದಾಸ್ಪದ ವಿಷಯವಾದರೂ ಯಾವುದೇ ವಿರೋಧಕ್ಕೆ ಗುರಿಯಾಗದೆ, ಆಸ್ಕರ್‌ವರೆಗೂ ತನ್ನ ಕಾಲು ಚಾಚಿದ ಆ ಚಿತ್ರ 'ಝೀರೋ ಡಾರ್ಕ್ ಥರ್ಟಿ'. ನಿಮಗೆಲ್ಲ ಸೆಪ್ಟಂಬರ್ 11ರಂದು ಅಮೆರಿಕದ ಗಗನಚುಂಬಿ ಕಟ್ಟಡಗಳ ಮೇಲೆ ನಡೆದ ಭಯೋತ್ಪಾದಕರ ದಾಳಿ ನೆನಪಿರಬಹುದು. ತನ್ನ ದೇಶದ ಬುಡಕ್ಕೆ ಕೈ ಹಾಕಿದ ಭಯೋತ್ಪಾದಕರನ್ನು ಮಟ್ಟ ಹಾಕಲು ಹೊರಟ ಅಮೆರಿಕ, ಒಸಮಾ ಬಿನ್ ಲಾಡೆನ್‌ನನ್ನು ಸಾಯಿಸಿ ಹೇಗೆ ಮುಯ್ಯಿ ತೀರಿಸಿಕೊಂಡಿತು ಎಂಬುದು ಈ ಚಿತ್ರದ ಕಥೆ.
ಅಮೆರಿಕದ ಈ ಗೆಲುವಿಗೆ ಸಿಐಎ ಏಜೆಂಟರು ಏನೆಲ್ಲ ಸಾಹಸ ಮಾಡಿದರು ಎಂಬುದನ್ನು ತೆರೆದಿಡುವ ಈ ಚಿತ್ರ, ಲಾಡೆನ್‌ನನ್ನು ಪಾಕಿಸ್ತಾನದ ಬಳಿಯ ಮನೆಯೊಂದರಲ್ಲಿ ಹಿಡಿದು ಕೊಂದು ಸಮುದ್ರಕ್ಕೆ ಬಿಸಾಕಿದರು ಎಂದುಕೊಳ್ಳುವವರಿಗೆ ಶಾಕ್ ಕೊಡುತ್ತದೆ. ನಿಜಕ್ಕೂ ಅಮೆರಿಕ ಎನ್ನುವ ರಾಕ್ಷಸ, ಬಿನ್‌ಲಾಡೆನ್ ಎಂಬ ಕೆಟ್ಟ ಹುಳವನ್ನು ಹೇಗೆ ಹೊಸಕಿ ಹಾಕಿತು ಎನ್ನುವ ಇಂಚಿಂಚು ಕಥೆ ಬಹುತೇಕರಿಗೆ ಗೊತ್ತಿಲ್ಲ. ಹಾಗೆ ಗೊತ್ತಿಲ್ಲದ ಒಂದು ರೋಚಕತೆಯನ್ನು ಈ ಚಿತ್ರ ಒಳಗೊಂಡಿದೆ.  ಭಯೋತ್ಪಾದಕನೊಬ್ಬನನ್ನು ಬಂಧಿಸಿ ಚಿತ್ರಹಿಂಸೆ ಮಾಡುವ ದೃಶ್ಯದೊಂದಿಗೆ ಸಿನಿಮಾ ಆರಂಭಗೊಳ್ಳುತ್ತದೆ. ಆದರೆ ಚಿತ್ರಕ್ಕೆ ನಿಜವಾದ ತಿರುವು ಸಿಗುವುದು ಆಫ್ಘಾನಿಸ್ತಾನದ ಸಿಐಎ ಕ್ಯಾಂಪ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ. 'ಸಿಐಎ ಇತಿಹಾಸದಲ್ಲಿ ಅತಿ ದೊಡ್ಡ ದಾಳಿ ಇದು' ಎಂದು ಅಮೆರಿಕದ ಮಾಧ್ಯಮಗಳು ಬಿಂಬಿಸುತ್ತಿದ್ದರೆ, ಆ ಘಟನೆಯಲ್ಲಾದ ಗೆಳತಿಯ ಸಾವು ಸಿಐಎ ಏಜೆಂಟ್‌ಳನ್ನು ಇನ್ನಿಲ್ಲದಂತೆ ಕಾಡುತ್ತದೆ. ಏನಾದರೂ ಮಾಡಿ ಲಾಡೆನ್‌ನನ್ನು ಮುಗಿಸಲೇ ಬೇಕು ಎನ್ನುವ ಆಕೆಯ ಹಠವೇ ಚಿತ್ರಕ್ಕೆ ಕುತೂಹಲಕಾರಿ ತಿರುವು ನೀಡುತ್ತದೆ. ಒಂದು ಹಂತದಲ್ಲಿ ಸಾಕ್ಷ್ಯಚಿತ್ರದಂತೆ ಸಾಗುತ್ತದೆ. ಅಪರಿಚಿತನೊಬ್ಬನ ನೈಜ ಅನುಭವಗಳ ಹಿಂದೆ ಕ್ಯಾಮೆರಾ ಹಿಡಿದು ಹೊರಟಂತೆ ಅನಿಸುತ್ತದೆ. ಆದರೆ ಉದ್ದಕ್ಕೂ ರೋಚಕತೆಯಿದೆ.
ಅಫ್ಘಾನಿಸ್ತಾನವನ್ನು ಹತೋಟಿಗೆ ತೆಗೆದುಕೊಂಡದ್ದು, ಉಗ್ರರ ವಿಚಾರಣೆ, 'ವಾಟರ್ ಬೋರ್ಡಿಂಗ್‌' ಶಿಕ್ಷೆ ಮುಂತಾದವುಗಳ ಮೂಲಕ ಅಮೆರಿಕ ಸೈನಿಕರ ಹಿಂಸೆಯ ರೂಪಗಳು ತಾಂಡವಾಡುತ್ತವೆ. ಲಾಡೆನ್ ಅಡಗುದಾಣ ಖಚಿತಪಡಿಸಿಕೊಳ್ಳಲು ಹೆಪಟೈಟಿಸ್ ಚುಚ್ಚುಮದ್ದು ಕೊಡುವ ನೆಪದಲ್ಲಿ ಲಾಡೆನ್ ಕುಟುಂಬದವರ ರಕ್ತದ ಸ್ಯಾಂಪಲ್ ಸಂಗ್ರಹಿಸಿ ಅದನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದು ಕೂಡ ವಿರೋಧಕ್ಕೆ ಕಾರಣವಾಯಿತು. ಯಾಕೆಂದರೆ ಪಾಕಿಸ್ತಾನ, ಅಫ್ಘಾನಿಸ್ತಾನಗಳು ಸಂಪೂರ್ಣ ಪೋಲಿಯೊ ಮತ್ತು ಹೆಪಟೈಟಿಸ್ ಮುಕ್ತವಲ್ಲ. ಹೀಗಾಗಿ ಲಾಡೆನ್ ನರಹಂತಕ ಎನ್ನುವ ಸಂದರ್ಭದಲ್ಲೇ ಅಮೆರಿಕ ರಾಕ್ಷಸ ಪಟ್ಟ ಧರಿಸಿತು.
ಸಿನಿಮಾ ತೀರಾ ಅಮೋಘ ಎಂದು ಹೇಳಲಾಗದು. ನೈಜ ಘಟನೆಗಳನ್ನು ದೃಶ್ಯ ಮಾಧ್ಯಮಕ್ಕೆ ಒಗ್ಗಿಸುವಾಗ ಹತ್ತಾರು ಸವಾಲು ಎದುರಾಗುತ್ತವೆ. ಎಲ್ಲದಕ್ಕೂ ನ್ಯಾಯ ಒದಗಿಸಲಾಗದು. ಜಗತ್ತನ್ನೇ ತಲ್ಲಣಗೊಳಿಸಿದ ಲಾಡೆನ್‌ನನ್ನು ಅಂತ್ಯಗೊಳಿಸುವ ಸಿಐಎ ಏಜೆಂಟರ ಕಾರ್ಯ, ಒಂದು ದೇಶದ ಪ್ರತೀಕಾರವು ಗೆಳತಿಯೊಬ್ಬಳ ಸಾವಿಗೆ ರಿವೆಂಜ್ ಎನ್ನುವ ಧಾಟಿಯಲ್ಲಿ ಚಿತ್ರಿತವಾಗಿದೆ. ಆ ಮೂಲಕ ನೈಜ ಘಟನೆಯೊಂದನ್ನು ನಿರ್ದೇಶಕಿ ಇಲ್ಲಿ ಸಿನಿಮೀಯಗೊಳಿಸಿದ್ದಾರೆ. ಅಲ್ಲಲ್ಲಿ ಅಮೆರಿಕದ ರಾಜಕೀಯ ಗೊಂದಲಗಳು, ಮೇಲಧಿಕಾರಿಗಳ ಅಹಂ ಅನ್ನು ನಿರ್ದೇಶಕಿ ನಿರೂಪಿಸುತ್ತಾರೆ. ಲಾಡೆನ್‌ನ ಅಡಗುದಾಣ ಪತ್ತೆ ಹಚ್ಚಲು ಸತತ 10 ವರ್ಷ, ಅಡಗುದಾಣ ಗೊತ್ತಾದ ಮೇಲೂ ಆತನ ಮೇಲೆ ದಾಳಿ ಮಾಡಲು ಎಸ್‌ಇಎಎಲ್ ಎನ್ನುವ ವಿಶೇಷ ಪಡೆಗೆ 11 ತಿಂಗಳು ಬೇಕಾಯಿತು ಎನ್ನುವ ಸತ್ಯವನ್ನು ಹೊರಗಿಡುವ 'ಝೀರೋ ಡಾರ್ಕ್ ಥರ್ಟಿ' ಚಿತ್ರವನ್ನು ನೋಡಿದಾಗ ರೋಚಕ ಅನುಭವವಂತೂ ಆಗುತ್ತದೆ.

-ಆರ್. ಕೇಶವಮೂರ್ತಿ
keshavarkm1@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement