ಸುಮಶರನ ಸನ್ನಿಧಿಯಲ್ಲಿ ಪರಾಶರನಿಗೆ...
ಜಿಜ್ಞಾಸೆ ಹುಟ್ಟಿರುವುದು ಕೊಡು- ಕೊಳ್ಳುವಿಕೆಯ ನಡುವೆ. ವಾರದಿಂದ ನನ್ನನ್ನು ಕಂಗೆಡಿಸಿಬಿಟ್ಟಿದೆಯದು. ಕೊಡುವುದು ಔದಾರ್ಯ ಎಂಬುದರಲ್ಲಿ ಎರಡು ಮಾತೇ ಇಲ್ಲ. ಇದ್ದೋ, ಇಲ್ಲದೆಯೋ ಅಂತೂ ಕೊಡುವುದು ಸ್ವಲ್ಪಮಟ್ಟಿಗೆ ದೊಡ್ಡ ಮನಸ್ಸು ಮಾಡಿದರೆ ಕಷ್ಟವೇನಾಗಲಿಕ್ಕಿಲ್ಲ. ಆದರೆ ಕೊಟ್ಟದ್ದನ್ನು ಕೊಳ್ಳುವುದು, ಅದೂ ಯಾವುದೇ ಹಿಂಜರಿಕೆಯಿಲ್ಲದೆಯೇ ಒಪ್ಪಿ'ಕೊಳ್ಳು'ವುದು ಕಷ್ಟವೇ ಸರಿ. ಅದೊಂದು ರೀತಿಯಲ್ಲಿ ಪರೀಕ್ಷೆಯಲ್ಲಿ ಮರೆತು ಹೋಗುವ ಗಣಿತದ ಲೆಕ್ಕವಿದ್ದಂತೆ. ಮುಂಚಿನ ದಿನ ಪುಸ್ತಕದ ಮೇಲೆ ಕಣ್ಣಾಡಿಸುವಾಗ ಎಲ್ಲವು ಬರುತ್ತದೆ ಎಂತಲೇ ಅನ್ನಿಸುತ್ತದೆ. ಪರೀಕ್ಷಾ ಕೊಠಡಿಗೆ ಹೊಕ್ಕು ಪ್ರಶ್ನೆಪತ್ರಿಕೆ ಮುಂದೆ ಬರುತ್ತಿದ್ದಂತೆಯೇ ಸೂತ್ರವೇ ಮರೆತು ನಾಲಗೆ ಒಣಗಲಾರಂಬಿಸುತ್ತದೆ. ಅಂತಃಕರಣಕ್ಕೆ ಅದು ಯಾವತ್ತಿಗೂ ಸಿಗುವುದೇ ಇಲ್ಲ. ಎಷ್ಟೇ ಮನನ ಮಾಡಿಕೊಂಡು, ಧೈರ್ಯವಾಗಿದ್ದರೂ ಕೊನೇ ಕ್ಷಣದಲ್ಲಿ ಕೈಕೊಟ್ಟಿರುತ್ತದೆ ವಿಶ್ವಾಸ.
ಹೇ ಪರಾಶರ, ನಿನ್ನ ನಂಬಿಸಲಾಗಲೀ ನನ್ನನ್ನು ಸಮರ್ಥಿಸಿಕೊಳ್ಳಲಾಗಲೀ ಈ ಮಾತನ್ನು ಹೇಳುತ್ತಿಲ್ಲ. ಸಾಮಾನ್ಯ ಕೊಡುಕೊಳ್ಳುವಿಕೆಯ ಬಗ್ಗೆಯೇ ಹೀಗಿದ್ದಾಗ ನೀನು ಕೊಡಲು ಹೊರಟಿರುವುದು ನಿನ್ನಂತರಂಗವನ್ನು. ಜತೆಗೆ ನಿನ್ನ ಬಹಿರಂಗದ ಬಲಾಢ್ಯ ತೋಳುಗಳ ನಡುವಿನ ಹರವೆದೆಯ ಮೇಲಣ ಸುಖವನ್ನು. ನಾನು ಈ ಮಾತನ್ನು ಹೇಳಿ ಮುಗಿಸುವ ಹೊತ್ತಿಗೆ ನೀನು ಸಂಪೂರ್ಣ ಬೆತ್ತಲಾಗಿರುತ್ತೀಯಾ(ಅಂತರಂಗದಲ್ಲಿ) ಎಂಬುದು ನನಗೆ ಗೊತ್ತು. ಏಕೆಂದರೆ ನನ್ನ ನೋಡಿದಾಕ್ಷಣ ನಿನ್ನ ಹುಟ್ಟಿರುವ ವಾಂಛೆ ಅಷ್ಟೊಂದು ಉತ್ಕಟವಾದುದು. ನೀನಿದನ್ನು ನಿರೀಕ್ಷಿಸಿರಲಿಲ್ಲ ಅಲ್ಲವೇ? ಅದರಲ್ಲು ನಿನ್ನಂಥ ನಿನ್ನನ್ನು ತಿರಸ್ಕರಿಸುವ ಧೈರ್ಯ ಯಾವ ಹೆಣ್ಣಿಗಾದರೂ ಬಂದೀತೆ? ಅಂಥದ್ದೇ ಮೌಢ್ಯದಲ್ಲಿ ಅಥವಾ ಅದನ್ನು ನಂಬಿಕೆ ಎನ್ನೋಣ... ಆ ನಂಬಿಕೆಯಲ್ಲೇ ನನ್ನ ಕೂಡುವ ನಿನ್ನ ಇಂಗಿತವನ್ನು ಅಭಿವ್ಯಕ್ತಿಸಿದವ ನೀನು. ಬದುಕು ಹೀಗೆ ಎಡವುವುದೇ ಕುರುಡು ಕಾಮದ ಕತ್ತಲಲ್ಲಿ. ಪ್ರೀತಿಯ ಬೆಳಕನ್ನು ಹೊತ್ತಿಸಲು ಮತ್ತದೇ ಅಂತರಂಗದ ಸ್ವಿಚ್ ಅನ್ನು ಒತ್ತಬೇಕಿದೆ. ನೀನು ಅದಕ್ಕಾಗಿಯೇ ತಡವರಿಸುತ್ತಿರುವುದು. ನೀನೊಬ್ಬ ಮಹಾ ತಪಸ್ವಿ, ಜ್ಞಾನವಂತ, ಹಠಮಾರಿ, ಸಿದ್ಧ ಪುರುಷ ಎಲ್ಲವೂ ಸತ್ಯ. ಆದರೆ ಹೆಣ್ಣಿನ ಅಂತರಂಗವನ್ನು ಗೆಲ್ಲಲು ಇದಷ್ಟರಿಂದಲೇ ಸಾಧ್ಯವಿಲ್ಲ ಎಂಬುದನ್ನು ಅರಿತುಕೊ ಮುನಿಯೇ. ಹೀಗಂದ ಮಾತ್ರಕ್ಕೇ ನೀನು ಮುನಿಯಬಹುದೆಂಬ ಆತಂಕ ನನ್ನಲ್ಲಿ ಇಲ್ಲದಿಲ್ಲ. ಆದರೂ ಧೈರ್ಯವಾಗಿ ನಾನು ಇಷ್ಟೆಲ್ಲ ಹೇಳುತ್ತಿದ್ದೇನೆಂದರೆ ಎಲ್ಲವನ್ನೂ ಮೀರಬಲ್ಲೆನೆಂಬ ಅಹಂ ಸಾಮಾನ್ಯಳಾದ ನನ್ನಲ್ಲಿಗಿಂತ ಸರ್ವಸಂಗ ಪರಿತ್ಯಾಗಿ ಎನಿಸಿದ ನಿನ್ನಲ್ಲಿಯೇ ಹೆಚ್ಚಿದೆ. ಅದೇ ನಿನ್ನನ್ನು ಇಂಥ ಅಂಧತ್ವಕ್ಕೆ ತಳ್ಳಿರುವುದು.
ನಿನ್ನನ್ನು ಯಾರೂ ಒಪ್ಪಿಕೊಳ್ಳುತ್ತಿಲ್ಲ, ಸ್ವೀಕರಿಸುತ್ತಿಲ್ಲ ಎಂಬ ಕೊರಗು ನಿನ್ನಲ್ಲಿರುವುದನ್ನು ನಾನು ಬಲ್ಲೆ. ಹೀಗೆ ಮೈತುಂಬಾ ಗಂಟುಗಂಟು ಕೂದಲುಗಳನ್ನು ಬೆಳೆಸಿಕೊಂಡು, ಬೂದಿ ಮೆತ್ತಿದ, ವಾಸನೆ ಬೀರುವ ಮೈಯೊಂದಿಗೆ, ಪಾಚಿಗಟ್ಟಿದ ಹಲ್ಲು ಕಿರಿಯುತ್ತಾ ಹೋದರೆ ಯಾವ ಹೆಣ್ಣು ತಾನೆ ನಿನ್ನನ್ನು ಒಪ್ಪಿ ಅಪ್ಪಿಕೊಂಡಾಳು? ನಿನ್ನೊಳಗಿನ ವಾಸನಾ ಪ್ರವೃತ್ತಿ ನನ್ನಲ್ಲಿ ಮಿಗಿಲಾಗಿರುವುದನ್ನು ಗ್ರಹಿಸಿದ್ದಿ ನೀನು. ಹೌದು ಕಾಮದ ವಿಚಾರದಲ್ಲಿ ನಿನಗಿಂತ ನಾನೇ ಹೆಚ್ಚು. ಅದೇ 'ವಾಸನೆ' ನನ್ನನ್ನು ಆವರಿಸಿರುವುದು. ನಿನ್ನಲ್ಲಿ ಇರಬಹುದಾದ ಅನುಮಾನಗಳೇ ನನ್ನಲ್ಲೂ ಇರುವುದು. ಇಬ್ಬರದ್ದೂ ಆಯ್ಕೆಯದ್ದೇ ಸಮಸ್ಯೆ. ಒಂದೇ ವ್ಯತ್ಯಾಸವೆಂದರೆ, ನಿನ್ನನ್ನು ಆಯ್ದುಕೊಳ್ಳುವವರಿಲ್ಲ, ನನ್ನ ಹಿಂದೆ ಬಂದವರಲ್ಲಿ ಯಾರನ್ನು ಆಯ್ದುಕೊಳ್ಳಲಿ ಎಂಬುದು ತಿಳಿಯುತ್ತಿಲ್ಲ. ನಿನ್ನಂತೆ ಪ್ರೇಮ ಭಿಕ್ಷೆ ಬೇಡಿ ನನ್ನ ದೋಣಿಯನ್ನೇರಿದವರು ಅದೆಷ್ಟೋ. ಆದರೆ ಬಾಳ ನಾವೆಗೆ ಹುಟ್ಟುಹಾಕುತ್ತಾ ಕೂರಲು ಯಾರೂ ಸಿದ್ಧರಿಲ್ಲ. ಎಲ್ಲರದ್ದೂ ಕ್ಷಣಿಕ ಪಯಣದ ಹಂಬಲ. ದಡ ತಲುಪುವವರೆಗೆ ಯಾರಿಗೂ ವ್ಯವಧಾನವಿಲ್ಲ. ನೀನೂ ಅಷ್ಟೆ ಅನುಕಂಪದ ಸೋಗು ಹಾಕುತ್ತಿದ್ದೀಯ. ವಿನಯ ತೋರ್ಪಡಿಸುತ್ತಿದ್ದೀಯ. ನನ್ನನ್ನು ಆವರಿಸಿಕೊಂಡಾಕ್ಷಣವೇ ಜಾಣತನ ಮೆರೆಯುವವನೇ. ನೀನು ಹಂಬಲಿಸಿದ್ದನ್ನೆಲ್ಲಾ ನಾನು ಕೊಡಲಾರೆ. ನೀನು ಕೊಡಲು ಹೊರಟದ್ದನ್ನು ಅಷ್ಟು ಸುಲಭದಲ್ಲಿ ಸ್ವೀಕರಿಸಲೂ ಆರೆ. ಅಂಗಾಂಗದ ಸುಳಿಯಲ್ಲಿ ಮುಳುಗೇಳುವುದು ಪ್ರೀತಿಯಲ್ಲ. ನನ್ನಲ್ಲಿರುವುದೇನಿದ್ದರೂ ಪುಟ್ಟ ನೀರಿನ ಹೊಂಡವೇ ಹೊರತೂ ಸಾಗರವಲ್ಲ. ಬೃಹತ್ ಸಾಗರವ ಈಜಿ ದಡ ಸೇರುವ ಸಾಮರ್ಥ್ಯದ ನೀನು ಅದೆಷ್ಟು ಕೊಡಬಲ್ಲೆ ಎಂಬುದೂ ಅರಿವಿದೆ. ಆದರೆ ನೀನು ಪೂರ್ವ ತಯಾರಿಯಿಲ್ಲದೇ ಕೊಡುವುದನ್ನು ಸ್ವಾಭಿಮಾನ, ಸ್ವಂತಿಕೆ, ಅಹಂಕಾರ ಕೊನೆಗೆ ನಾಚಿಕೆಯನ್ನೂ ಬಿಟ್ಟು ಸ್ವೀಕರಿಸುವುದು ಸುಲಭವಿಲ್ಲ. ಆದರೂ ಸ್ವೀಕರಿಸಬೇಕೆಂದಿದ್ದರೆ ನನ್ನೊಳಗೊಂದು ಧನ್ಯತಾ ಭಾವ ಮೂಡಬೇಕಲ್ಲಾ. ಅದನ್ನು ನೀನು ಮೂಡಿಸಿ ಮನದ ಮೂಲೆಯಿಂದ ಸುವಾಸನೆ ಹೊಮ್ಮುವಂತೆ ಮಾಡಬಲ್ಲೆಯಾ?
ಗಾಳ ಹಾಕಿ ಕೂತವನ ತನ್ಮಯತೆ ನಿನ್ನಲ್ಲಿದೆ. ಎಂಥಾ ಮಾತುಗಳೂ ನಿನ್ನನ್ನೀಗ ವಿಚಲಿತಗೊಳಿಸುವುದಿಲ್ಲ. ಬಂದದ್ದು ಬರಲಿ. ಗಾಳಕ್ಕೆ ದೊಡ್ಡ ಮೀನೇ ಬಿದ್ದರೆ ಅದೃಷ್ಟ, ಇಲ್ಲದಿದ್ದರೆ ಸಣ್ಣದಾದರೂ ಸಿಕ್ಕೀತು. ಏನೂ ಸಿಗಲಿಲ್ಲ, ಗಾಳಕ್ಕೇನು ನಷ್ಟ? ನೀವು ಗಂಡಸರ ಯೋಚನೆಗಳೇ ಹಾಗೆ. ಮೊದಲೇ ನಾನು ಹೆಸರಿನಿಂದಲೇ ಮತ್ಸ್ಯಗಂಧಿ. ಹೀಗಾಗಿ ನನಗೇ ಗಾಳ ಹಾಕಿದ್ದೀಯ. ಆದರೆ, ಗಾಳಕ್ಕೆ ಸಿಲುಕಿಕೊಳ್ಳುವ ಮೀನಿನ ತೊಳಲಾಟ ಎಂಥದ್ದೆಂಬುದನ್ನು ನೀವು ಒಮ್ಮೆಯಾದರೂ ಯೋಚಿಸಿದ್ದಿದೆಯಾ? ಮಿಲನದ ಗಳಿಗೆ ಎಂದರೆ ಗಾಳಕ್ಕೆ ಮೀನು ಸಿಲುಕಿದಂತಷ್ಟೇ ಅಲ್ಲ ಮುನಿಯೇ. ಸಂಸಾರ, ದಾಂಪತ್ಯ, ಬದುಕು ಇತ್ಯಾದಿಗಳ ಬಗ್ಗೆ ನಿಮಗೆ ಏನು ಗೊತ್ತಿರಲು ಸಾಧ್ಯ?
ನಿನ್ನಾಸೆಗೂ ಒಪ್ಪುತ್ತೇನೆ. ಇರಲಿ. ಅದಕ್ಕೆ ಕಾಯಬೇಡ, ಹಂಬಲಿಸಬೇಡ, ಹಲುಬಬೇಡ, ಕಾತರಿಸಬೇಡ. ನನ್ನೊಳಗಿನ ನಂಬಿಕೆ 'ಪೊರೆ'ಗೆ ಧಕ್ಕೆ ಬಾರದಂತೆ ಹೊರಗೊಂದು ಭ್ರಮೆಯ ಪೊರೆಯನ್ನು ಸೃಷ್ಟಿಸಿ ಬಂದು ನನ್ನ ಕೂಡು. ಕನಸಿನಾಚೆಗೆ ಕೆಲವೊಮ್ಮೆ ಹಗಲಿರುತ್ತದಲ್ಲಾ, ಅಂಥ ಸೃಷ್ಟಿ ನಿನ್ನಿಂದ ಸಾಧ್ಯ. ನಮ್ಮೊಳಗಿನ ವಾಸನೆ ಅಲ್ಲಿಗೇ ಸೀಮಿತವಾಗಲಿ. ಅದು ಹೊರಜಗತ್ತಿಗೆ ಅಡರುವುದು ಬೇಡ. ಅರುಣರಾಗವ ಹೊಮ್ಮಿಸು. ಹಗಲಿಗಾಗಿ ರಾತ್ರಿ ಕಾಯುವುದಿಲ್ಲ. ಯುದ್ಧಕ್ಕೆ ಹೊರಡುವ ಯೋಧನಂತೆ, ಪ್ರೀತಿಗೆ ಹೊರಟವನಿಗೆ ಗೆಲ್ಲುವ ಹಠವಿರಬಾರದು. ಪ್ರೀತಿಯಲ್ಲಿ ಸೋಲಲೇಬೇಕು. ಅದೇ ಪ್ರಿತಿಯ ಸಿದ್ಧಾಂತದ 'ವ್ಯಾಸ'ದಲ್ಲಿ ನಮ್ಮಿಬ್ಬರ ಸಂಗಮವಾಗಲಿ. ಹೊಂದಲಾರದ ಜೀವಗಳು ಒಂದಾದರೂ ಸೃಷ್ಟಿ ನಿಲ್ಲುವುದಿಲ್ಲ. ಕರಿನೀರ ಮೇಲಣ ಮಿಲನಕ್ಕೆ ಸಾಕ್ಷಿ ಅದೇ ವ್ಯಾಸವಾಗಿರಲಿ.
ನೆನಪಿಟ್ಟುಕೋ ಪರಾಶರ, ಕಾಮ ಕಾಯುವುದಿಲ್ಲ. ಸಂಜೆ ಜಾರುತ್ತಿದ್ದಂತೆ ದಿಢೀರನೆ ಮುಗಿಬೀಳುವ ರಾತ್ರಿಯಿದ್ದಂತೆ. ಆದರೆ ಪ್ರೀತಿಯೆಂಬುದು ಹಾಗಲ್ಲ. ಕತ್ತಲಿಳಿಯುತ್ತಿದ್ದಂತೆ ತಾನೇ ತಾನಾಗಿ ಮೂಡಿಬರುವ ಅರುಣೋದಯದ ಕಿರಣಗಳಿದ್ದಂತೆ. ಅಂಥ ಕಿರಣ ಮೂಡಲಿ ನನ್ನೊಡಲೆಂಬ ಈ ದ್ವೀಪ ಮಧ್ಯದಲ್ಲಿ.
-ರಾಧಾ ಸೋಚನಿ
abhyagatha@yahoo.co.in
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.