ಕತೆ ಹೇಳುವ ಕಲೆ
ಕತೆ ಹೇಳುವ ಹೆತ್ತವರೊಂದಿಗೆ ಮಕ್ಕಳು ಗಟ್ಟಿಯಾದ ಬಾಂಧವ್ಯ ಬೆಳೆಸಿಕೊಂಡಿರುತ್ತಾರಂತೆ. ಇದರಿಂದ ಮಕ್ಕಳ ಕಲ್ಪನಾಶಕ್ತಿ, ಬುದ್ಧಿಶಕ್ತಿ, ಸಂವಹನ ವೃದ್ಧಿಸುತ್ತದಂತೆ. ಇದೆಲ್ಲ ಸ್ವತಃಸಿದ್ಧ ಮಾತ್ರವಲ್ಲ, ಸಂಶೋಧನೆಯಿಂದಲೂ ತಿಳಿದುಬಂದದ್ದು.
ಕತೆ ಹೇಳುವುದೊಂದು ಕಲೆ. ಅದರಲ್ಲೂ ಮಕ್ಕಳಿಗೆ ಕತೆ ಹೇಳುವುದು ಇನ್ನಷ್ಟು ಕಷ್ಟಕರ ಕೌಶಲ. ನೀವು ಹೇಳುವ ಕತೆ ಇಷ್ಟವಾಗದಿದ್ದರೆ ಮಕ್ಕಳು ನಿರ್ದಾಕ್ಷಿಣ್ಯವಾಗಿ ಎದ್ದು ಹೋಗುತ್ತವೆ. ಅವುಗಳಿಗೆ 'ರಂಜನೆ, ಬೋಧನೆ, ಪ್ರಚೋದನೆ' ಎಲ್ಲವೂ ಬೇಕು. ಕತೆ ಕಿರಿಕಿರಿ ಹುಟ್ಟಿಸಿದರೆ ಮಕ್ಕಳು ನಿಮ್ಮನ್ನೇ ಕತೆಯಾಗಿಸಿಬಿಡುವ ಅಪಾಯವೂ ಇದೆ.
ಮಕ್ಕಳಿಗೆ ಹೇಳುವ ಕತೆ ಹೇಗಿರಬೇಕು, ಹೇಗಿರಬಾರದು ಎಂದು ಸಾಕಷ್ಟು ಕತೆಗಾರರು ಹೇಳಿದ್ದಾರೆ. ಅವರ ಮಾತುಗಳ ಕೆಲ ಸಾಮಾನ್ಯ ಅಂಶಗಳಿಲ್ಲಿವೆ.
ಕತೆ ಸಕತ್ ಮನರಂಜನೆ ನೀಡುವಂತಿರಲಿ. ಬೋರ್ ಹೊಡೆಸುವ, ಉಪದೇಶಕ್ಕಾಗಿಯೇ ಇರುವ ಕತೆ ಬೇಡ.
ಮುಖಾಭಿನಯ, ಕೈಕರಣಗಳನ್ನು ಸಾಕಷ್ಟು ಉಪಯೋಗಿಸಿ.
ಮಕ್ಕಳನ್ನು ಕತೆಯಲ್ಲಿ ಇನ್ವಾಲ್ವ್ ಮಾಡಿಕೊಳ್ಳಿ. ಅವರಿಂದಲೇ ಕತೆ ಬೆಳೆಸಲಿಕ್ಕಾಗುತ್ತಾ ನೋಡಿ.
'ಶ್ರೇಷ್ಠ' ಕತೆಗಳಿಗಾಗಿ ಕಾಯಬೇಕಾಗಿಲ್ಲ. ಆಶುಕತೆಗಳು, ದಿಡೀರ್ ಕತೆಗಳು ಕೂಡ ಸೊಗಸೇ.
ಅದು ನೀವು ಹೇಳಿದ್ದೆಲ್ಲ ನೆಲೆನಿಲ್ಲುವ ವಯಸ್ಸು. ತಪ್ಪು ಮೌಲ್ಯಗಳನ್ನು ವೈಭವೀಕರಿಸಬೇಡಿ.
ಕತೆ ವಾಸ್ತವದಿಂದ ಮೂಡಲಿ. ಪ್ರಾಣಿ, ಪಕ್ಷಿ, ವಸ್ತುಗಳು ಮಕ್ಕಳಿಗೆ ಪರಿಚಿತವಿರಲಿ.
ಫ್ಯಾಂಟಸಿ ಕತೆಗಳನ್ನು ಹೇಳಿ. ಆದರೆ ಅವು ಫ್ಯಾಂಟಸಿ ಅಷ್ಟೇ ಎಂಬುದನ್ನೂ ಅವುಗಳಿಗೆ ಗೊತ್ತುಮಾಡಿ. ಮಕ್ಕಳು ಫ್ಯಾಂಟಸಿಯಲ್ಲೇ ಉಳಿಯುವುದು ಅಪಾಯ.
ಭೂತಪ್ರೇತಗಳ ಕತೆಗಳನ್ನು ಹೇಳಬೇಡಿ.
ಮಕ್ಕಳು ಪ್ರಶ್ನಿಸಲು ಬಿಡಿ. ನೀವು ಹೇಳಿದ್ದೇ ಅಂತಿಮ ಎಂದುಕೊಳ್ಳದಿರಿ.
ಬರಹ ಈ ತರಹ
ಇಂಗ್ಲಿಷ್ನಲ್ಲಿ ಬರೆದೇ ಅತ್ಯಧಿಕ ಗಳಿಕೆ ಮಾಡುವ ಸಾಹಿತಿಗಳ್ಯಾರು? ಹ್ಯಾರಿ ಪಾಟರ್ ಕರ್ತೃ ಜೆ.ಕೆ.ರೌಲಿಂಗ್ ಎಂದು ನೀವು ಊಹಿಸಿದ್ದರೆ, ತಪ್ಪು. ಆಕೆಗಿಂತ ಅಧಿಕ ಕಮಾಯಿ ಮಾಡುವವರಿದ್ದಾರೆ. ಈ ಕೆಳಗಿನ ಲಿಸ್ಟ್ನತ್ತ ಗಮನ ಹರಿಸಿ.
ಮೊದಲ ಸ್ಥಾನ ಥ್ರಿಲ್ಲರ್ ಕಾದಂಬರಿಗಳ ಜನಕ ಜೇಮ್ಸ್ ಪ್ಯಾಟರ್ಸನ್ನದು. ಆತನ ಗಳಿಕೆ 94 ದಶಲಕ್ಷ ಡಾಲರ್, ಅರ್ಥಾತ್ 47 ಕೋಟಿ ರುಪಾಯಿ. ಎರಡನೇ ಸ್ಥಾನ ಹಾರರ್ ರಾಜ- ಸ್ಟೀಫನ್ ಕಿಂಗ್ನದು. ಆತನ ಆದಾಯ 19.5 ಕೋಟಿ. ಮೂರರ ನಂತರದ ಸ್ಥಾನಗಳಲ್ಲಿ ಜಾನೆಟ್ ಇವನೋವಿಚ್, ಜಾನ್ ಗ್ರಿಶಾಂ, ಜೆಫ್ ಕಿನ್ನೇ, ಬಿಲ್ ಒರೇಲಿ, ನೋರಾ ರಾಬರ್ಟ್ಸ್, ಡೇನಿಯಲ್ ಸ್ಟೀಲ್, ಸುಸಾನ್ನೆ ಕೊಲಿನ್ಸ್, ಡೀನ್ ಕೂಂಟ್ಸ್ ಮತ್ತು ಜೆ.ಕೆ.ರೌಲಿಂಗ್ ಇದ್ದಾರೆ. ಇದು ಕಳೆದ ವರ್ಷದ ಆದಾಯ ಪಟ್ಟಿ.
ಕನ್ನಡದ ಲೇಖಕರಿಗೆ ಇಂಥ ದಿನಗಳು ಎಂದು ಬಂದಾವು? 500 ಪ್ರತಿ ಅಚ್ಚುಹಾಕಿ, ಹತ್ತು ಕಾಪಿ ಮಾರಲು ಪರದಾಡುವ ನಮ್ಮ ಕನ್ನಡದ 'ಬಡ'ಪಾಯಿ ಲೇಖಕರು ಇದನ್ನು ಓದಿ ಬಾಯಿ ಬಡಿದುಕೊಳ್ಳಬೇಕಷ್ಟೆ.
ಹಾಯಿಕು
ತೆರೆದ ಪುಟ
ತಂಗಾಳಿ ಕದ್ದು
ಓದುತ್ತಿದೆ
ಚಿಕ್ಕೆಗಳು ರಾತ್ರಿ
ನನ್ನೊಡನೆ ಆಡಿದವು
ಎಂದಿತು ಮಗು
- ಕೇರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.