ಸಾಪ್ತಾಹಿಕಪ್ರಭ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಚಿತ್ರ: ದಿ ವಿಲ್ಲೋ ಟ್ರೀ (2007)
ಭಾಷೆ: ಪರ್ಷಿಯನ್
ನಿರ್ದೇಶನ: ಮಜಿದ್ ಮಜಿದಿ
ಚಿತ್ರಕಥೆ: ಮಜಿದ್ ಮಜಿದಿ
ಅವಧಿ: 96 ನಿಮಿಷ
ತಾರಾಗಣ: ಪರ್ವಿಝ್ ಪರಸ್ತುಯ್, ರೊಯಾ ಟಾಯ್ಮೊರಿಯನ್, ಅಫರಿನ್ ಒಬೆಸಿ, ಮೊಹ್ಮದ್ ಅಮಿರ್ ನಾಜಿ, ಮೆಲಿಕಾ ಇಸ್ಲಾಫಿ, ಲೈಲಾ ಔಟಾಡಿ.


ಸುಮ್ಮನೆ ಒಮ್ಮೆ ಕಲ್ಪಿಸಿಕೊಳ್ಳಿ. ಇಡೀ ಜಗತ್ತು ನಿಮ್ಮ ಪಾಲಿಗೆ ಅಪರಿಚಿತ. ಸುತ್ತ ಕತ್ತಲು. ವಯಸ್ಸು 40 ದಾಟಿದೆ. ಆದರೂ ನಿಮ್ಮ ಸುತ್ತಲಿನ ಜಗತ್ತನ್ನು ಇದುವರೆಗೂ ನೀವು ಮನಸಾರೆ ನೋಡಿಲ್ಲ. ಅಸಲಿಗೆ ನಿಮ್ಮನ್ನೇ ನೀವೇ ಕಂಡಿಲ್ಲ. ನಿವ್ಯಾರು, ಹೇಗಿದ್ದೀರಿ ಎನ್ನುವ ಕಲ್ಪನೆಯೂ ನಿಮಗಿಲ್ಲ. 'ಅಪ್ಪಾ ಅಪ್ಪಾ' ಅಂತ ಕೂಗುತ್ತ ಆಟವಾಡುವ ನಿಮ್ಮ ಪುಟ್ಟ ಮಗಳು, ತಾಯಿಯಂತೆ ನೋಡಿಕೊಳ್ಳುವ ಪತ್ನಿ, ವಯಸ್ಸಿಗೆ ಮುಪ್ಪು ಜೊತೆಯಾಗಲು ತುಸು ದೂರದಲ್ಲಿದ್ದರೂ 'ನೀನು ನನಗೆ ಇನ್ನೂ ಪುಟ್ಟ ಮಗು' ಎನ್ನುವಂತೆ ನೋಡಿಕೊಳ್ಳುವ ತಾಯಿ ಯಾರ್ಯಾರು ಗೊತ್ತಿಲ್ಲ. ಬದುಕು ತೀರಾ ಕಷ್ಟ ಎನ್ನಿಸುತ್ತದಲ್ಲವೇ? ಇಂಥ ಬದುಕನ್ನು ಕಲ್ಪಿಸಿಕೊಳ್ಳಲಾಗದವರ ನಡುವೆ 'ನೋಡುವ ಭಾಗ್ಯ'ವನ್ನೇ ಕಳೆದುಕೊಂಡ ಕಣ್ಣು ಕಾಣದ ಪ್ರೊಫೆಸರ್ ನಮ್ಮ ನೋಟಕ್ಕೆ ತೀರಾ ಪರಿಚಿತನಾಗುತ್ತಾನೆ.
ದೃಷ್ಟಿ ಕಳೆದುಕೊಂಡು ಕತ್ತಲ ಲೋಕದಲ್ಲಿ ದಾರಿ ಹುಡುಕುವುದು ಹೇಗೆ? ಎನ್ನುತ್ತ ಅದೇ ದೃಷ್ಟಿ ಕಳೆದುಕೊಂಡ ಆ ಪ್ರೊಫೆಸರ್ ಜಾಗದಲ್ಲಿ ನಾವು ನಿಲ್ಲುವುದಿದೆಯಲ್ಲ, ಅದು ಆತನ ಅಭಿನಯ, ಅಂಥ ನಟನೆಯನ್ನು ವ್ಯಕ್ತಪಡಿಸುವಂಥ ಪಾತ್ರಧಾರಿಯನ್ನು ಸೃಷ್ಟಿಸಿದ ನಿರ್ದೇಶಕನ ಪ್ರತಿಭೆಗೆ ಸಿಕ್ಕ ಗೆಲುವು. ಹೀಗೊಂದು ಮನಕಲುಕುವ ಕುರುಡು ಪ್ರೊಫೆಸರ್ ಪಾತ್ರದ ಮೂಲಕ ನಮ್ಮ ಮುಂದೆ ನಿಲ್ಲುವ ಆ ನಿರ್ದೇಶಕ ಮಜಿದ್ ಮಜಿದಿ. ಅದು 'ದಿ ವಿಲ್ಲೊ ಟ್ರೀ' ಚಿತ್ರ. ಚಿಕ್ಕಂದಿನಲ್ಲಿ ನಡೆದ ಅಪಘಾತದಲ್ಲಿ ಎರಡೂ ಕಣ್ಣುಗಳನ್ನು ಕಳೆದುಕೊಂಡು ಹುಟ್ಟು ಕುರುಡನಂತೆ ಬದುಕುತ್ತಿರುವ ಯೂಸುಫ್‌ನ ಬದುಕಿನ ಕಥೆ ಇಲ್ಲಿದೆ. ಚಿತ್ರದ ಆರಂಭದಿಂದ ಕೊನೆವರೆಗೂ ಮಾನವೀಯ ಸ್ಪರ್ಶದಲ್ಲೇ ಸಾಗುವ ಈ ಚಿತ್ರ ಮುಗಿದರೂ ಯೂಸುಫ್ ಪಾತ್ರ ನಮ್ಮಿಂದ ದೂರವಾಗಲ್ಲ. ಚಿತ್ರಜಗತ್ತಿನ ಅಪ್ಪಟ ಕೃಷಿಕನಂತೆ ಕಾಣುವ ಮಜಿದಿ, ನೋಡುಗರನ್ನು ಚಕಿತಗೊಳಿಸುವ ಕತೆಗಳನ್ನು ತೆರೆಗೆ ತರುವಲ್ಲಿ ಅವರದ್ದು ಎತ್ತಿದ ಕೈ. 'ಬರನ್‌', 'ಚಿಲ್ಡ್ರನ್ ಆಫ್ ಹೆವನ್‌', 'ದಿ ಲಾಸ್ಟ್ ವಿಲೇಜ್‌', 'ಗಾಡ್ ವಿಲ್ ಕಮ್‌', 'ಕಲರ್ ಆಫ್ ಪ್ಯಾರಡೈಸ್‌', 'ಸಾಂಗ್ ಆಫ್ ಸ್ಪಾರೋಸ್‌' ಹಾಗೂ 'ಫಾದರ್‌' ಚಿತ್ರಗಳೇ ಇದಕ್ಕೆ ಸಾಕ್ಷಿ. ಶಬ್ಧಬಂಡಾರಕ್ಕೆ ನಿಲುಕದ ಈತನ ಚಿತ್ರ, ಪಾತ್ರಗಳು, ಅವುಗಳ ಹಾವ, ಭಾವಗಳು ಪ್ರೇಕ್ಷಕನ ನೋಟದಲ್ಲಿ ಸೆರೆಯಾಗಿ ಮನಸ್ಸಿನಲ್ಲಿ ಸದಾ ಕಾಲ ಉಳಿಯುತ್ತವೆ. ಹಾಗೆ ಆಪ್ತವಾಗುವ ಮಜಿದಿಯ 'ದಿ ವಿಲ್ಲೋ ಟ್ರೀ' ಸಿನಿಮಾಗಾಗಿ ಹುಟ್ಟಿಕೊಂಡ ಕಥೆಯಲ್ಲ, ನೈಜ ಪಯಣವಿದು.
ಈ ಚಿತ್ರ ಮಾಡುವ ಮುನ್ನ ಮಜಿದಿ ಮಧ್ಯ ವಯಸ್ಸಿನ ಕುರುಡು ವ್ಯಕ್ತಿಯನ್ನು ಭೇಟಿ ಮಾಡಿದ್ದರಂತೆ. ಆ ವ್ಯಕ್ತಿಯ ಅಪೂರ್ವ ಅನುಭವಗಳು ಮಜಿದಿ ಮುಂದೆ ತೆರೆದುಕೊಂಡವಷ್ಟೇ. ಆ ವ್ಯಕ್ತಿಗೆ ನಿರ್ದೇಶಕ ಕಂಡ ಜಗತ್ತನ್ನು ವಿವರಿಸಿದರೆ, ಆತ ತಾನು ಕಾಣದ ಲೋಕವನ್ನು ವರ್ಣಿಸುತ್ತಾನೆ. ಆತನ ಪ್ರತಿ ವರ್ಣನೆಯಲ್ಲೂ ಅಚ್ಚರಿ ಮತ್ತು ರಹಸ್ಯಗಳು ಅಡಗಿದ್ದವು. ಆತ ಹೆಚ್ಚಿನ ಸಂದರ್ಭದಲ್ಲಿ ದೇವರೊಂದಿಗೆ ಚರ್ಚಿಸುತ್ತಿದ್ದನಂತೆ. ಕಾರಣ ಆತನಿಗೆ ದೇವರಿದ್ದಾನೆಂಬ ನಂಬಿಕೆ. ಆತನ ಪ್ರಕಾರ ಕಾಣದ ಜಗತ್ತಿನಲ್ಲಿ ಕನಸುಗಳು ನಿರ್ಮಾಣಗೊಳ್ಳುತ್ತವೆ. ಆದರೆ ಕಾಣುವ ಪ್ರಪಂಚ ಕನಸುಗಳನ್ನೇ ದ್ವಂಸಗೊಳಿಸುತ್ತದೆಂಬ ಆ ವ್ಯಕ್ತಿಯ ಮಾತುಗಳೇ 'ದಿ ವಿಲ್ಲೊ ಟ್ರೀ' ಚಿತ್ರದ ತಳಹದಿ. ಆಕಸ್ಮಿಕವಾಗಿ ಭೇಟಿಯಾದ ಆ ಕುರುಡನ ಬದುಕನ್ನೇ ಒಳಗೊಂಡ ಈ ಚಿತ್ರ, ದೃಷ್ಟಿ ಬಂದಾಗ ಕಾಣುವ ಜಗತ್ತಿನ ವಾಸ್ತವಕ್ಕಿಂತ ಕಾಣದ ಜಗತ್ತಿನೊಳಗಿನ ಸತ್ಯಗಳೇ ಎಷ್ಟೋ ಲೇಸೆಂದು ಯೂಸುಫ್ ಪಾತ್ರ ದರ್ಶಿಸುತ್ತದೆ. ಹೀಗಾಗಿ ಪ್ರೊಫೆಸರ್‌ಗೆ ದೃಷ್ಟಿ ಬಂದ ಮೇಲೆ ಟ್ರೈನಲ್ಲಿ ಪಿಕ್‌ಪಾಕೆಟ್ ಮಾಡುವವನನ್ನು, ಧ್ವನಿಯನ್ನು ಮಾತ್ರ ಕೇಳಿ ಆಕರ್ಷಿತನಾಗಿದ್ದ ಹುಡುಗಿಯನ್ನು ಮತ್ತೊಬ್ಬನ ಜೊತೆ ನೋಡಿದಾಗ ಕಾಣದ ಲೋಕ ನೆನಪಾಗಿ ಕೊರಗುತ್ತಾನೆ.  
ಇನ್ನು ಕಥೆಗೆ ಬಂದರೆ, ಒಂದು ಕುಟುಂಬ. ಯೂಸುಫ್, ಆತನ ಪತ್ನಿ ರಾಯ್ ಮತ್ತು ಪುಟ್ಟ ಮಗಳು ಮರಿಯಾಂ. ಕುರುಡುರಿಗಾಗಿ ರೂಪಿಸಿರುವ ರೈಟಿಂಗ್ ಬೋರ್ಡ್‌ನಲ್ಲಿ ಬರೆಯುವುದೇ ಆತನ ಜೀವನ. ಆದರೆ ಆತ ಕುರುಡ ಎನ್ನುವ ಅಂಶ ಪ್ರೇಕ್ಷಕನ ಗಮನ ಸೆಳೆಯುವುದಿಲ್ಲ. ಆಸ್ಪತ್ರೆಗೆ ಹೋದಾಗ ಶಸ್ತ್ರಚಿಕಿತ್ಸೆಯಿಂದ ದೃಷ್ಟಿ ಬರುವ ಸಾಧ್ಯತೆ ಇದೆ ಎನ್ನುವ ವಿಷಯ ತಿಳಿಯುತ್ತದೆ. ಚಿಕಿತ್ಸೆಗೆ ವಿದೇಶಕ್ಕೆ ಹೋಗುತ್ತಾನೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗಿ ತಾಯ್ನಾಡಿಗೆ ಬರುವ ಯೂಸುಫ್‌ಗೆ ಅದ್ಧೂರಿ ಸ್ವಾಗತ. ಅಲ್ಲಿವರೆಗೂ ಅಪರಿಚಿತವಾಗಿದ್ದ ಬಂಧುಗಳು, ಊರು, ಮನೆ, ಕುಟುಂಬ ಎಲ್ಲವೂ ಪರಿಚಿತ. ಆದರೆ ಆತನ ದೃಷ್ಟಿ ಮಾತ್ರ ಬೇರೊಂದನ್ನು ಹುಡುಕುತ್ತದೆ. ಇದರಿಂದ ಬರುಬರುತ್ತಾ ಒಂಟಿತನ ಕಾಡುತ್ತದೆ, ಈ ಲೋಕಕ್ಕೆ ತಾನು ಅಪರಿಚಿತ ಎನ್ನುವ ಭಾವನೆ ಉಂಟಾಗುತ್ತದೆ, ಕೈ ಹಿಡಿದ ಪತ್ನಿಗೆ ಅನುಮಾನದ ಅಲೆಗಳು ಸೋಕುತ್ತವೆ. ನಿಜಕ್ಕೂ ಯೂಸುಫ್‌ನ ದೃಷ್ಟಿ ಬಯಸುತ್ತಿರುವುದೇನು? ಎನ್ನುವ ಪ್ರಶ್ನೆಯ ಹಿಂದೆ ಚಿತ್ರ ಸಾಗುತ್ತದೆ. ಇಲ್ಲಿಂದ ಹೆಜ್ಜೆ ಹೆಜ್ಜೆಗೂ ವ್ಯಕ್ತವಾಗುವ ಯೂಸುಫ್‌ನ ನಿರ್ಲಿಪ್ತತೆ, ಆತನ ಹುಡುಕಾಟ, ವೇದನೆ, 'ತಾನು ಇಷ್ಟು ವರ್ಷ ಕತ್ತಲ್ಲೇ ಇದ್ದೇ' ಎನ್ನುವ ಚಿಂತೆ ನಮ್ಮನ್ನು ಕಾಡದಿರದು.
ಆಗಷ್ಟೇ ಆಪರೇಷನ್ ಆಗಿ ಬ್ಯಾಂಡೇಜ್ ಕಟ್ಟಿಕೊಂಡಿರುವ ಯೂಸುಫ್‌ಗೆ 'ನಾನು ಈಗ ನೋಡಬಹುದೇ? ನನಗೆ ಕಣ್ಣು ಕಾಣುತ್ತದೆಯೇ? ಒಂದು ವೇಳೆ ಕಾಣದೆ ಹೋದರೆ?' ಎಂದು ತನ್ನನ್ನು ತಾನೇ ಕೇಳಿಕೊಳ್ಳುತ್ತ ಮೆಲ್ಲಗೆ ಬ್ಯಾಂಡೇಜ್ ತೆಗೆದು ಕಣ್ಣನಲ್ಲಿ ರಕ್ತ ಸುರಿಯುತ್ತಿದ್ದರೂ ಆಸ್ಪತ್ರೆಯ ಕಾರಿಡಾರ್‌ನಲ್ಲಿ ಚಿಕ್ಕ ಮಗುವಿನಂತೆ ಅತ್ತಿತ್ತ ಓಡುವುದು, ಮೊದಲ ಬಾರಿಗೆ ತನ್ನ ಮುಖವನ್ನು ಅಚ್ಚರಿಯಿಂದ ನೋಡಿಕೊಳ್ಳುವ ದೃಶ್ಯಗಳು ಮತ್ತೆ ಮತ್ತೆ ಮರುಕಳಿಸುತ್ತವೆ. ಆದರೆ ಮತ್ತೆ ಆತ ದೃಷ್ಟಿ ಕಳೆದುಕೊಳ್ಳುತ್ತಾನೆ. ಆ ಮೂಲಕ ಕಾಣುವ ಪ್ರಪಂಚ ಎಂಥ ಮುಗ್ಧನನ್ನು ಆರಿಸಿಕೊಂಡು ಇಲ್ಲದ ಆಸೆಗಳನ್ನು ಹುಟ್ಟಿಸುತ್ತಲೇ ಒಂಟಿ ಮಾಡುತ್ತದೆ.

= ಆರ್. ಕೇಶವಮೂರ್ತಿ
keshavarkm1@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!