ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಘರಾಣೆಗಳೆಂಬ ಸಂಗೀತ ಮನೆತನಗಳು

Mainashree
Updated On : 18 May 2013, 3:19 am

ಜಗತ್ತಿನಲ್ಲೆಲ್ಲ ಜೀವಂತವಾಗಿರುವ ಅತ್ಯಂತ ಪುರಾತನವಾದ ಸಂಸ್ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಮ್ಮ ಭಾರತೀಯ ಸಂಸ್ಕೃತಿಯ ಈ ವೈವಿಧ್ಯತೆಗೆ, ವಿಶಿಷ್ಟತೆಗೆ ಬೆನ್ನೆಲುಬು - ಪರಂಪರೆ ಅಥವಾ ಸಂಪ್ರದಾಯ. ಕಲೆ, ಸಾಹಿತ್ಯ, ಧರ್ಮ, ಆಧ್ಯಾತ್ಮ ಹೀಗೆ ಯಾವುದೇ ಕ್ಷೇತ್ರವಿರಲಿ. ಈ ಪರಂಪರೆ ಅಥವಾ ಸಂಪ್ರದಾಯದ ಮೂಲಕ ಈ ಎಲ್ಲ ಕ್ಷೇತ್ರಗಳೂ ಶ್ರೀಮಂತಗೊಂಡಿವೆ. ಅದು ಕುಟುಂಬ ವ್ಯವಸ್ಥೆಯಲ್ಲಿ ರಕ್ತ ಸಂಬಂಧದ ಮೂಲಕ ಇರಬಹುದು ಅಥವಾ ಗುರು - ಶಿಷ್ಯ ಪರಂಪರೆ ಇರಬಹುದು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವೂ ಕೂಡ ಹೀಗೆ ವಿವಿಧ ಪರಂಪರೆ, ಸಂಪ್ರದಾಯಗಳ ಮೂಲಕ ನೂರಾರು ವರ್ಷಗಳಲ್ಲಿ ವಿಶಾಲವಾಗಿ ಬೆಳೆದು ಬಂದಿದೆ. ಇಂತಹ ಪರಂಪರೆಗಳನ್ನೇ 'ಘರಾಣಾ' ಎನ್ನುತ್ತೇವೆ.
'ಘರಾಣಾ' ಎಂಬುದು ಸಂಗೀತ ಪ್ರಿಯರಿಗೆ ಬಹಳವಾಗಿ ಕೇಳಿಬರುವ ಪದಗಳಲ್ಲೊಂದು. ಯಾವುದೇ ಕಾರ್ಯಕ್ರಮವಿರಲಿ, ಯವುದೇ ಕಲಾವಿದರಿರಲಿ ಅವರ ಘರಾಣೆಯನ್ನು ಹೇಳಿಯೇ ಕಲಾವಿದರ ಪರಿಚಯ ಮಾಡಿಕೊಡುತ್ತಾರೆ. ಗ್ವಾಲಿಯರ್, ಕಿರಾನಾ, ಜೈಪುರ್, ಆಗ್ರಾ, ದಿಲ್ಲಿ, ಪಟಿಯಾಲಾ, ಉದಯಪುರ್, ಪಂಜಾಬ್, ವಿಷ್ಣುಪುರ್ ಹೀಗೆ ಹಲವಾರು ಘರಾಣೆಗಳ ಹೆಸರನ್ನು ಸಂಗೀತ ಕಾರ್ಯಕ್ರಮಗಳಲ್ಲಿ ಕೇಳುತ್ತಲೇ ಇರುತ್ತೇವೆ.
ಈ ಘರಾಣೆಗಳು ಹುಟ್ಟಿದ್ದು, ಬೆಳೆದು ಬಂದದ್ದು, ಅವು ಸಂಗೀತಕ್ಕೆ ನೀಡಿದ ಕೊಡುಗೆ ಎಲ್ಲದಕ್ಕೂ ಒಂದು ಸುಂದರವಾದ ಇತಿಹಾಸವಿದೆ. ಈ  ಘರಾಣೆ ಎಂದರೆ ಒಂದೊಂದು ಮನೆತನ ಇದ್ದಹಾಗೆ. ಪ್ರತಿ ಮನೆತನಕ್ಕೂ ಇತಿಹಾಸ, ಅದರದ್ದೇ ಆದ ರೀತಿ-ನೀತಿ , ಹಬ್ಬ ಮಾಡುವ ಶೈಲಿ, ಪೂಜೆ- ಪುನಸ್ಕಾರಗಳ ರೀತಿ, ಮಾತನಾಡುವ ವಿಧಾನ, ಸಂಸ್ಕಾರ - ಹೀಗೆ ಎಲ್ಲ ವಿಷಯಗಳಲ್ಲೂ ಒಂದು ಸ್ವಂತಿಕೆ ಇರುವಂತೆ ಈ ಘರಾಣೆಗಳಲ್ಲೂ ಇರುತ್ತವೆ. ಕಲಾವಿದ, ಸಂಗೀತ ಎಂಬ ಅನಂತವನ್ನು ತನ್ನ ವಿಶಿಷ್ಟ ಶೈಲಿಯಲ್ಲಿ ಕಂಡುಕೊಂಡು, ಆ ಮಾರ್ಗವನ್ನು ತನ್ನ ಶಿಷ್ಯರಿಗೆ, ಸಂಗೀತ ಪ್ರಿಯರಿಗೆ, ಕೇಳುಗರಿಗೆ ಹಂಚುತ್ತಾ ಹಂಚುತ್ತಾ ಅದು ಒಂದು ಘರಾಣೆಯಾಗಿ ಬೆಳೆಯುತ್ತದೆ.
ಸುಮಾರು ಹದಿನಾರು ಹದಿನೇಳನೆ ಶತಮಾನದಲ್ಲಿ ಭಾರತದಲ್ಲಿ ಮುಸ್ಲಿಂ ಆಧಿಪತ್ಯದೊಂದಿಗೆ ವಿದೇಶೀಯರ ಆಡಳಿತವೂ ನಿಧಾನವಾಗಿ ಹಬ್ಬತೊಡಗಿದಾಗ ವಿಶಾಲವಾದ ರಾಜ್ಯಗಳೆಲ್ಲ ಚಿಕ್ಕಚಿಕ್ಕ ಸಂಸ್ಥಾನಗಳಾಗತೊಡಗಿದವು. ಈ ಸಂಸ್ಥಾನಗಳಲ್ಲೆಲ್ಲ ಸಾಮಾನ್ಯವಾಗಿ ಅಸ್ಥಾನ ಗಾಯಕರಿರುತ್ತಿದ್ದರು. ದೇವಾಸ್ ಸಂಸ್ಥಾನದಲ್ಲಿ ರಜ್ಜಬ್ ಅಲಿ ಖಾನ್, ಮೇಹರ್ ಸಂಸ್ಥಾನದಲ್ಲಿ ಅಲ್ಲಾವುದ್ದೀನ್ ಖಾನ್, ಗ್ವಾಲಿಯರ್‌ನಲ್ಲಿ ಹಫೀಜ್ ಅಲಿ ಖಾನ್...ಈ ಶ್ರೇಷ್ಠ ಗಾಯಕರುಗಳು ತಮ್ಮತಮ್ಮ ವಿಶಿಷ್ಟವಾದ ಗಾಯನ ಶೈಲಿಯನ್ನು ಹೊಂದಿದ್ದರು. ಹೀಗೆ ಆಸ್ಥಾನದಲ್ಲಿದ್ದು ತಮ್ಮ ಗಾಯನದ ಶೈಲಿಯನ್ನು ಪ್ರಸಿದ್ಧಿಗೊಳಿಸಿದ್ದಲ್ಲದೇ ತಮ್ಮ ಮಕ್ಕಳಿಗೆ, ಕುಟುಂಬ ವರ್ಗದವರಿಗೆ, ಶಿಷ್ಯರಿಗೂ ಧಾರೆಯೆರೆದರು. ಆಗಿನ ಕಾಲದಲ್ಲಿ ಈಗಿನಂತೆ ಸಂವಹನ ಮಾಧ್ಯಮ, ಧ್ವನಿಮುದ್ರಣಗಳಂಥ ಯಾವ ವ್ಯವಸ್ಥೆಯೂ ಇರಲಿಲ್ಲ. ಅಲ್ಲದೇ ಈ ಗಾಯಕರು ತಮ್ಮ ಶಿಷ್ಯರಿಗೆ ಕಲಿಸುವಾಗ ಬಹಳ ಮಡಿವಂತಿಕೆ ಹಾಗೂ ಕಟ್ಟು ನಿಟ್ಟಿನ ವ್ಯವಸ್ಥೆಯನ್ನಿಟ್ಟಿದ್ದು ಬೇರೆ ಯಾವ ಸಂಗೀತಗಾರರ ಗಾಯನವನ್ನೂ ಅವರು ಬಹುಕಾಲ, ಶಿಷ್ಯವೃತ್ತಿಯ ಸಮಯದಲ್ಲಿ ಕೇಳುವ ಹಾಗೂ ಇರಲಿಲ್ಲ. ಈ ಎಲ್ಲ ಕಾರಣಗಳಿಂದ ಒಂದು ಪದ್ಧತಿ, ಒಂದು ಶೈಲಿ ಬಹಳ ಪರಿಶುದ್ಧವಾಗಿ ತಲೆಮಾರುಗಳಿಂದ ತಲೆಮಾರುಗಳಿಗೆ ಸಾಗುತ್ತ ಸಾಗುತ್ತ ಬಂದು ಒಂದು 'ಘರಾಣೆ'ಯಾಗಿ ಗುರುತಿಸಲ್ಪಟ್ಟಿತು. ಅಷ್ಟೇ ಅಲ್ಲ, ಆಗಿನ ವಿದ್ವಾಂಸರು ಒಬ್ಬನನ್ನು ಶಿಷ್ಯ ಎಂದು ಸ್ವೀಕರಿಸಿ ಅವನಿಗೆ ಎಲ್ಲ ತಮ್ಮ ಜ್ಞಾನವನ್ನು ಕೊಡುವ ಮೊದಲು ಚೆನ್ನಾಗಿ ಅವನನ್ನು ಪರೀಕ್ಷಿಸಿ, ಎಷ್ಟು ಕಾಲ ಇವನು ಠಿಕಾಯಿಸುತ್ತಾನೆ ಎಂದು ಮತ್ತೆಮತ್ತೆ ಅವನನ್ನು ವಿಧವಿಧವಾಗಿ ಪರೀಕ್ಷಿಸಿ ನಂತರವೇ ತಮ್ಮ ಸಂಗೀತವನ್ನು ಧಾರೆ ಎರೆಯುತ್ತಿದ್ದರು. ಹೀಗಾಗಿ ಪ್ರತಿ ಘರಾಣೆಯೂ ತನ್ನ ವೈಶಿಷ್ಟ್ಯಗಳನ್ನು, ಗುಣ ಲಕ್ಷಣಗಳನ್ನು ನೂರಾರು ವರ್ಷ ಕಾಲ ಸಮರ್ಥವಾಗಿ ಉಳಿಸಿಕೊಂಡು ಬೆಳೆಸಿಕೊಂಡು ಬರಲು ಸಾಧ್ಯವಾಯಿತು.
ಪ್ರತಿ ಘರಾಣೆಯಲ್ಲೂ ಧ್ವನಿಯನ್ನು ಬಳಕೆ ಮಾಡುವ ರೀತಿ, ಸ್ವರಗಳನ್ನು ಹಚ್ಚುವ ರೀತಿ, ತಾಲಗಳ ಬಳಕೆ, ಉಚ್ಚಾರಣೆ, ಲಯದ ಶೈಲಿ, ಆಲಾಪನೆ, ತಾನ್, ಲಯಕಾರಿಗಳು, ಬಂದಿಷ್‌ಗಳು - ಹೀಗೆ ಎಲ್ಲ ವಿಷಯಗಳಲ್ಲೂ ಆಯಾ ಘರಾಣೆಯದೇ ಎಂಬಂಥ ವೈಶಿಷ್ಟ್ಯಗಳೂ, ಘರಾನೆಯ ಗುರುತುಗಳು ಇರುತ್ತವೆ.ಈ ಘರಾಣೆಗಳಲ್ಲೆಲ್ಲ ಅತ್ಯಂತ ಹಿರಿಯ ಹಾಗೂ  ಮಾತೃ ಘರಾಣೆ ಎಂಬ ಹೆಗ್ಗಳಿಕೆಯನ್ನು ಪಡೆದದ್ದು  ಗ್ವಾಲಿಯರ್ ಘರಾಣೆ.                                                                  
 (ಮುಂದುವರಿಯುವುದು)

- ಶ್ರುತಿ ಭಟ್
shrutikbhat@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments