ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ನಮ್ಮೊಳಗೊಬ್ಬ ಯಯಾತಿ

Mainashree
Updated On : 18 May 2013, 3:16 am

'ವಯಸ್ಸು ಆಗೋದು ಬರ್ತ್ ಸರ್ಟಿಫಿಕೇಟ್ ಅಥವಾ ಜಾತಕಕ್ಕೆ ಹೊರತೂ ನನಗಲ್ಲ...' ಹಾಗೆಂದು ನಮ್ಮೂರಿನ ರಸಿಕನೆಂದೇ ಖ್ಯಾತನಾದ ಸುಬ್ಬಜ್ಜ ತನ್ನ ಅರವತ್ತರ ಶಾಂತಿ ಮಾಡಿಸಿಕೊಂಡ ಸಂದರ್ಭದಲ್ಲಿ ಹೇಳಿಕೊಂಡು ಮುಕ್ತವಾಗಿ ನಕ್ಕಿದ್ದ. ಆ ಕ್ಷಣದಲ್ಲಿ ನನಗೇನೂ ಅನ್ನಿಸದಿದ್ದರೂ ಇವತ್ತು ಅಚ್ಚರಿಯೆನಿಸುತ್ತದೆ. ನಿಜವಾದ ಜೀವನೋತ್ಸಾಹವೆಂದರೆ ಅದಪ್ಪಾ ಎಂದುಕೊಳ್ಳುತ್ತಿದ್ದೇನೆ.
ಅಲ್ಲಾ, ಏನು ಅವಸರದಲ್ಲಿದ್ದೇವೆ ನಾವು ಅಂತ? ಹುಟ್ಟಿದ ಮಗು ತಕ್ಷಣವೇ ನಮ್ಮ ಸ್ಪರ್ಶವನ್ನು ಗುರುತಿಸಲಿ ಅಂತ ಆಶಿಸುತ್ತೇವೆ. ದಿನ ಕಳೆಯುವುದಕ್ಕೆ ಪುರುಸೊತ್ತಿಲ್ಲ, ಕರೆದರೆ ನಮ್ಮತ್ತ ಹೊರಳೀತೇನೋ ಅಂತ ನಿರೀಕ್ಷಿಸುತ್ತೇವೆ. ವಾರದಲ್ಲಿ ನಗಲಿ ಅನ್ನುತ್ತೇವೆ. ನಮ್ಮನ್ನು ಗುರುತಿಸಿದರೆ ಅದೇನೋ ಮಹತ್ಸಾಧನೆ. ಹಾಗೆಯೇ ಹೊರಳಿದಾಗ, ಮಗುಚಿಕೊಂಡಾಗ, ಅಂಬೆಗಾಲಿಕ್ಕಿದಾಗ, ಬೊಚ್ಚು ಬಾಯಲ್ಲಿ ತೊದಲು ನುಡಿದಾಗ, ಹಿಡಿದುಕೊಂಡು ನಿಲ್ಲಲು ಪ್ರಯತ್ನಿಸಿದಾಗ, ತೊಡರುಗಾಲಿಕ್ಕಿದಾಗ... ಹೀಗೆ ಅದರ ಪ್ರತಿ ಹಂತಕ್ಕೂ ಹೆತ್ತವರ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ನಂತರ ಮಗುವೇ ದೊಡ್ಡವರನ್ನು ನೋಡಿ ಒಂದೊಂದೇ ಅನುಕರಣೆಯನ್ನು ಮಾಡಲು ಆರಂಭಿಸುತ್ತದೆ. ತನ್ನ ಸುತ್ತಮುತ್ತಲಿನವರಂತೆ ತಾನು ಬೆಳೆಯಬೇಕು ಅಂತ ಹಂಬಲಿಸುತ್ತದೆ. ಮಗು ಹೆಣ್ಣಾದರೆ ಅಮ್ಮನಂತೆ ಸೀರೆ ಉಟ್ಟುಕೊಳ್ಳಲು ಪ್ರಯತ್ನಿಸಿ ತಾನು ದೊಡ್ಡದಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತದೆ. ಹೀಗೆಯೇ ಬಾಲ್ಯದಿಂದ ಯವ್ವನ, ಅಲ್ಲಿಂದ ಪ್ರೌಢತ್ವ, ಹಿರಿತನ ಎಲ್ಲವನ್ನೂ ಬಯಸುತ್ತಲೇ ಸಾಗುತ್ತೇವೆ. ಇದಾವುದೂ ನಮಗೆ ಬೇಡ ಅನ್ನಿಸುವುದೇ ಇಲ್ಲ. ಬದಲಾಗಿ ಈ ಎಲ್ಲ ಅವಸ್ಥೆಗಳೂ ಬೇಗ ಬರಲಿ ಅಂತ ಕಾತರಿಸುತ್ತೇವೆ. ಆದರೆ ಯವ್ವನಾವಸ್ಥೆ ತಲುಪಿದ ಮೇಲೆ ಮುಂದೆ ಸಾಗಲು ಯಾರೂ ಬಯಸುವುದೇ ಇಲ್ಲ. ಪ್ರಕೃತಿ ಸಹಜವಾದ ಮುಪ್ಪಿನ ಹೊಸ್ತಿಲು ತುಳಿಯುತ್ತಿದ್ದಂತೆಯೇ ಅದನ್ನು ಆದಷ್ಟು ಮುಚ್ಚಿಡಲು ಇನ್ನಿಲ್ಲದ ಕಸರತ್ತು ಆರಂಭಿಸಿಬಿಡುತ್ತೇವೆ. ಯಾಕೆ ಹೀಗೆ ಮುಪ್ಪನ್ನು ಅಪ್ಪಿ ಒಪ್ಪಲು ಯಾರೂ ಸಿದ್ಧವೇ ಇರುವುದಿಲ್ಲ? ಯಾಕೆ ಬೇಡವೆಂದರೂ ಬರುವ, ಬಿಡದೇ ಪ್ರಭಾವ ತೋರುವ ಮುಪ್ಪನ್ನು ಮರೆಯುವುದೇ ಇದಕ್ಕಿರುವ ಏಕೈಕ ಪರಿಹಾರ?
ನಮ್ಮೆಲ್ಲರ ಇಂಥ ಭಾವನೆಗಳ ಪ್ರತಿನಿಧಿ ಯಯಾತಿ. ಮಗ ಪುರುವಿನ ಯವ್ವನವನ್ನೇ ಧಾರೆ ಎರೆಸಿಕೊಂಡ ಆತನ ಬಯಕೆ ಭೌತಿಕವಾಗಿ ಸ್ವಾರ್ಥದ್ದು ಎನಿಸಿದರೂ ಆಂತರ್ಯದಲ್ಲಿ ಅದು ಆತನ ಕ್ರಿಯಾಶಿಲ ಮನಸ್ಸಿನ ಪ್ರತೀಕ. ಯಯಾತಿ ಬಯಸಿದ್ದು ದೈಹಿಕ ಯವ್ವನಕ್ಕಿಂತ ಮಾನಸಿಕ ಯವ್ವನವನ್ನು. ಒಂದಷ್ಟು ಇಚ್ಛಾಶಕ್ತಿ, ಇನ್ನಷ್ಟು ಆಶಾಭಾವ, ಮತ್ತಷ್ಟು ವಿಶ್ವಾಸ, ಸಮಾಧಾನ, ಸದ್ವಿಚಾರ, ಸದಾಚಾರಗಳನ್ನು ಒಟ್ಟುಗೂಡಿಸಿಕೊಂಡರೆ ಈ ಜಗತ್ತಿನ ಪ್ರತಿ ಜೀವಿಯೂ ಪುರುವಿನ ದಾನವಿಲ್ಲದೇ ಯಯಾತಿಯಾಗಿ ಯವ್ವನವನ್ನು ಮರಳಿ ಪಡೆಯಲು ಸಾಧ್ಯ.
ದೇಹಕ್ಕೆ ವಯಸ್ಸಾಗಿದೆ ಎಂದ ಮಾತ್ರಕ್ಕೆ ಮನಸ್ಸಿಗೂ ಮುಪ್ಪಡರಬೇಕೆಂದೇನೂ ಇಲ್ಲ. ಮನದ ಮಾನ್ಯತೆಯಿಲ್ಲದೇ, ಯೋಚನೆಗಳ ಪರವಾನಗಿಯಿಲ್ಲದೇ ಯಾವುದೇ ದೇಹದೊಳಕ್ಕೆ ಮುಪ್ಪಿನ ಪ್ರವೇಶ ಸಾಧ್ಯವೇ ಇಲ್ಲ. ಆದರೆ ಬೇಡಬೇಡವೆನ್ನುತ್ತಲೇ ಅದನ್ನು ಆಹ್ವಾನಿಸಿಕೊಳ್ಳುತ್ತೇವೆ. ಬೇಡವೆಂದಷ್ಟೇ ಬೇಗನೆ ಬರುವ ಅವಸ್ಥೆಯಿದ್ದರೆ ಅದು ಮುಪ್ಪು ಮಾತ್ರ. ಅದನ್ನು ಆದರಿಸಿ ಒಳ ಕರೆದು ಜತೆಗಿಟ್ಟುಕೊಂಡೇ ದುಡಿಸಿಕೊಂಡ ಹಲವರು ನಮ್ಮ ನಡುವೆಯೇ ಮಾದರಿಯಾಗಿದ್ದಾರೆ.
ಇಷ್ಟೆಲ್ಲ ಹೇಳಲು ಕಾರಣವಿದೆ. ಮುಪ್ಪಿನ ಬಗ್ಗೆ ನನ್ನ ತಲೆಯಲ್ಲಿ ಹೀಗೊಂದು ಪುಟ್ಟ ಪ್ರಬಂಧ ತಯಾರಾದದ್ದು ಸುಮ್ಮನೆ ಅಂತೂ ಅಲ್ಲ. ಮೊನ್ನೆ ಮೊನ್ನೆ ಸ್ಟಡಿ ಹಾಲಿಡೇಸ್ ಇದ್ದಾಗ ಊರಿಗೆ ಹೋಗಿದ್ದೆ. ಅಲ್ಲಿ ಅಜ್ಜಿ ಎಂಥದ್ದೊ ಚಿಂತೆ ಹೊತ್ತುಕೊಂಡು ಕುಳಿತುಬಿಟ್ಟಿದ್ದರು. ಮನೆಯವರೆಲ್ಲ ಗಾಬರಿಯಾಗಿದ್ದಂತೂ ಸತ್ಯ. ತೀರಾ ಅಜ್ಜಿ ಉಳಿಯುವುದೇ ಇಲ್ಲ ಅನ್ನುವ ಸ್ಥಿತಿಯಲ್ಲದಿದ್ದರೂ ಆಕೆಯಲ್ಲಿ ಮೊದಲಿನ ಲವಲವಿಕೆ ಇಲ್ಲದಿರುವುದನ್ನು ಗುರುತಿಸಿದ್ದೆ. ಕಾರಣ ಕೆದಕಿ ಹೊರಟಾಗ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಇಪ್ಪತ್ತೈದು ದಾಟಿ ನಿಂತಿರುವ ನನ್ನ ಮದುವೆಯ ತನ್ನ ಚಿಂತೆಯನ್ನು ಅಮ್ಮ ಅಜ್ಜಿಗೆ ರವಾನಿಸಿಬಿಟ್ಟಿದ್ದಾಳೆ. ಅದಕ್ಕೆ ಇನ್ನೆಷ್ಟು ಉಪ್ಪುಖಾರ ಹಚ್ಚಿರಬಹುದೆಂಬುದನ್ನು ನಾನು ಬಲ್ಲೆ. ಏಕೆಂದರೆ ಅಮ್ಮನನ್ನು ನಾನು ನೋಡುತ್ತಿರುವುದು ಇವತ್ತಲ್ಲ. ಅಜ್ಜಿಯದ್ದೀಗ ಒಂದೇ ಹಠ. ತಾನು ಪ್ರಾಣ ಬಿಡುವುದರೊಳಗೆ ನಾನು ಮದುವೆಯಾಗಬೇಕಂತೆ. ಅವಳ ಕೊನೆಯಾಸೆ ನೆರವೇರಿಸಲು ಇಡೀ ಮನೆಯವರು ಟೊಂಕಕಟ್ಟಿದ್ದಾರೆ. ಹುಡುಗನನ್ನೂ ನಿರ್ಧರಿಸಿ, ಮಾತುಕತೆ ಮುಗಿಸಿದ್ದಾರೆ, ಕನಿಷ್ಠ ನನ್ನನ್ನು ಸೌಜನ್ಯಕ್ಕೂ ಕೇಳದೆ. ಅಲ್ಲಾ ಇಂಥವು ಇನ್ನೂ ನಡೆಯುತ್ತಿವೆಯಲ್ಲಾ! ಪ್ರಾಣಬಿಡುತ್ತಿರುವ ಅಜ್ಜಿಯ ಕೊನೆಯಾಸೆ ತೀರಿಸಲು ನಾನು ಹಿಂದೆ ಮುಂದೆ ಯೋಚಿಸದೇ ತಾಳಿಗೆ ಕೊರಳೊಡ್ಡಬೇಕೆ? ಒಂದಿಡೀ ಬದುಕನ್ನು ಹಾಗೆ ನಿರ್ಧರಿಸಲೂ ಸಾಧ್ಯವೇ?
ಒಂದು ರೀತಿಯಲ್ಲಿ ಎಮೋಷನಲ್ ಬ್ಲಾಕ್‌ಮೇಲಿಂಗ್ ನಡೀತಿದೆ. ಯಾಕಿವರೆಲ್ಲಾ ಬದಲಾಗೋದೇ ಇಲ್ಲ ಅಂತನ್ನಿಸಿದರೂ ದ್ವಂದ್ವ ನನ್ನನ್ನು ಕಾಡುತ್ತಿದೆ. ಅಜ್ಜಿಯ ಮನದಾಸೆಯಲ್ಲೂ ತಪ್ಪಿಲ್ಲ ಅಂತನ್ನಿಸಿತು. ಬಾಲ್ಯ ಯವ್ವನಗಳನ್ನು ನಿರುಕಿಸಿ ನಾವು ಆತುರ ತೋರಿದಂತೆ, ಮರಿಮಗುವನ್ನು ಕಾಣುವ ಆತುರ ಅಜ್ಜಿಯದ್ದು. ಜತೆಗೆ ನನ್ನ ದಾಂಪತ್ಯದ ಮೂಲಕ ತನ್ನ ಯವ್ವನದ ದಿನಗಳಿಗೆ ಪರಕಾಯ ಪ್ರವೇಶ ಮಾಡುವ ಹಂಬಲವೂ ಇದ್ದಿರಬಹುದು. ಎಲ್ಲ ವೃದ್ಧರಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಯಯಾತಿ ಇಣುಕಿಯೇ ಇಣುಕುತ್ತಾನೆಂಬುದು ಸತ್ಯ ಎಂದೆನಿಸುತ್ತದೆ. ನಮ್ಮಜ್ಜಿಯಲ್ಲಿ ಹೀಗೆ ಯಯಾತಿ ಕಾಣಿಸಿದ್ದರೆ ಅದು ಆಕೆಯ ತಪ್ಪಲ್ಲ. ಏನು ಮಾಡಬೇಕೆಂಬುದೇ ಪ್ರಶ್ನೆ ಸುತ್ತೂ ಸುಳಿಯುತ್ತಿದೆ.
ಹರೆಯದ ಸಂಜೆಯಲ್ಲಿರುವ ಎಲ್ಲರಿಗೂ ಕಿವಿಮಾತಿನಂತಿರುವ, ಮನಸ್ಸಿನ ಯವ್ವನದ ಬಗ್ಗೆ ಕವಿಯೊಬ್ಬರ ಸುಂದರ ಸಾಲುಗಳು ನೆನಪಾದವು. ಒಂದು ಹಂತದ ನಂತರ ಮನುಷ್ಯ ಮತ್ತೆ ಮಗುವಾಗುತ್ತಾನಂತೆ. ಅಂಥ ಮಗುವಿನ ಮುಗ್ಧತೆಯೊಂದಿಗೆ ಬದುಕಿನ ಅನುಭವಗಳು ಬೆರೆತಾಗ ಜೀವನ ಸಂಜೆ ಖಂಡಿತಾ ರಂಗೇರಿ ನಿಲ್ಲುತ್ತದೆ. ಮುಪ್ಪು ಭಾರವೆನಿಸದಿರಲು ಆ ಮುಗ್ಧತೆಯೊಂದೇ ಮಾರ್ಗ. ವಯಸ್ಸು ದೇಹಕ್ಕಾಗಲಿ ಬಿಡಿ, ಹೊಸ ಚಿಂತನೆಯತ್ತ ಮನಸ್ಸು ಹರಿಬಿಡಿ. ನಿಮ್ಮ ಅನುಭವದ ಬೆಣ್ಣೆಯಿಲ್ಲದೇ ನಮ್ಮ ಬದುಕಿನ ಕಜ್ಜಾಯ ಸವಿಯಲು ಸಾಧ್ಯವೇ ಇಲ್ಲ. ಹಿರಿಯರೇ, ನಮ್ಮೊಂದಿಗೆ ಹಸಿರಾಗಿ, ಹಗುರಾಗಿ ಇದ್ದುಬಿಡಿ ಪ್ಲೀಸ್. ಮತ್ತೆ ಬೇರೆ ಯಯಾತಿ ನಿಮ್ಮೊಳಗೆ ಯಾಕೆ ಬೇಕು?
ಬಪ್ಪುದು ಬರಲಿ,
ಬಂದಿಪ್ಪುದು ನಿಲಲಿ.
ಬರಲೊಲ್ಲದ ಬರಸೆಳೆದು-
ಭರಿಸುವ ಶಕ್ತಿ ಮನಕಿರಲಿ...

-  ರಾಧಾ ಸೋಚನಿ
abhyagatha@yahoo.co.i


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments