ಬ್ರಹ್ಮಕಪಾಲ
-ದೃಶ್ಯ 1-
ಮುಸ್ಸಂಜೆ ಹೊತ್ತಿಗೆ ಗೂಡು ಸೇರಿಕೊಳ್ಳಲು ಹಾರಿ ಹೋಗುತ್ತಿರುವ ವಿಹಂಗಮಗಳಂತೆ ಬಸ್ಸಿನಿಂದಿಳಿದ ಶೋಡಷಿಯರ ಗುಂಪು ತಂತಮ್ಮ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದುವು. ಬೆಳಗಿನ ಹೊತ್ತು ಸ್ಕೂಲಿಗೆ ಹೊರಟಾಗ ಇಬ್ಬನಿಯಲ್ಲಿ ತೊಯ್ದ ಕೆಂಗುಲಾಬಿಗಳಂತೆ ಲಕಲಕಿಸುತ್ತಿದ್ದ ಮುಖಗಳೀಗ ಬಾಡಿ ಬತ್ತಿವೆ. ಹೆಜ್ಜೆಗಳಲ್ಲಿ ದಣಿವು. ಹೊಟ್ಟೆಯೊಳಗೆ ಹಸಿವು. ಅವರವರ ಮನೆ ಬಂದಾಗ ಮಾತಿಲ್ಲದೆ ಕೈ ಬೀಸಿ ಬೀಳ್ಕೊಡುಗೆ. ಉಣುಗೋಲಿನ ಬಳಿ ರಾಧೆಯ ಅಪ್ಪ ಕಾದು ನಿಂತಿದ್ದರು. ಮಗಳ ಮುಖ ಕಾಣುತ್ತಿದ್ದಂತೆ,
'ಏ ಇವಳೇ, ಮಗು ಬಂತು...' ಎನ್ನುವ ಸಂದೇಶ. ಮಗಳನ್ನು ನೋಡುತ್ತಿದ್ದಂತೆ ಉಕ್ಕುವ ಸಂಭ್ರಮವನ್ನು ಹೀಗೆ ವ್ಯಕ್ತಪಡಿಸುವುದು ಅವರ ಪರಿ. ಬ್ಯಾಗು ಅಪ್ಪನ ಕೈಗೆ ರವಾನೆಯಾಗುತ್ತಿತ್ತು. ಅಪ್ಪನ ಬಗಲಲ್ಲಿ ನಡೆಯುತ್ತಾ ಮನೆ ಸೇರುತ್ತಿದ್ದಳು ರಾಧೆ. ಬಚ್ಚಲ ಹಂಡೆಯಲ್ಲಿ ಕೈಕಾಲು ತೊಳೆಯುವುದಕ್ಕೆಂದೇ ಕಾದಿರಿಸಿದ ಹದಬಿಸಿಯ ನೀರು. ಅಡುಗೆಮನೆಯ ಬಾಳೆಲೆಯ ಮೇಲೆ ತುಪ್ಪ, ಉಪ್ಪು, ಉಪ್ಪಿನಕಾಯಿ. ಹೊಗೆ ಹಾಯುವ ಅನ್ನ. ಕೋಡೊಲೆಯಲ್ಲಿ ಬಿಸಿಯಾಗಿರುತ್ತಿದ್ದ ಮಧ್ಯಾಹ್ನದ ಮೇಲೋಗರ. ಒಲುಮೆಯಿಂದ ಬಡಿಸುವ ಅಮ್ಮ. ತೂಕಡಿಕೆಯ ನಡುವೆ ಒಂದಿಷ್ಟು ಓದು, ಬರವಣಿಗೆ. ಕೈ ಬೀಸಿ ಕರೆಯುತ್ತಿರುವ ಹಾಸಿಗೆ. ಸುಕ್ಕಿಲ್ಲದಂತೆ ಅಂಗೈಯಿಂದ ತೀಡಿ ತೀಡಿ ಹಾಸಿಗೆ ಹಾಸಿಡುವುದು ಅಪ್ಪನ ಕೈಂಕರ್ಯ. ರಾಧೆ ಮಲಗಿದಳು ಅಂದರೆ ಅಪ್ಪ, ಅಮ್ಮ ಬೆಕ್ಕಿನ ಹೆಜ್ಜೆ ಹಾಕಿಕೊಂಡು ಓಡಾಡುತ್ತಿದ್ದರು. ನಿದ್ರಿಸುತ್ತಿದ್ದಳೇ ರಾಧೆ? ಹೊದಿಕೆಯ ಮುಸುಕಿನೊಳಗೆ, ಮುಚ್ಚಿದ ಕಣ್ಣುಗಳೆದುರು ರಂಗಿನ ಕನಸುಗಳು ಗರಿ ಬಿಚ್ಚಿಕೊಳ್ಳುತ್ತಿದ್ದುವು. ಏರುತ್ತಿದ್ದ ಎದೆಬಡಿತ. ಜುಮುಗುಡುವ ಮೈ. ಸನಿಹ ಬಂದು ಮೈ ಸೋಕುವಂತೆ ನಿಲ್ಲುತ್ತಿದ್ದವನ ಬೆವರ ಗಂಧ ಮೂಗಿಗೆ ಅಡರಿದಂತೆನಿಸಿ ಮತ್ತೇರಿದಂತಾಗುವ ಅಮಲಿನ ನೆನವರಿಕೆ. ಬಸ್ಸಿಡೀ ಇಡಿಕಿರಿದು ತುಂಬಿದವರ ಗಮನಕ್ಕೆ ಬರದಂತೆ, ಪರಸ್ಪರರಿಗೆ ಮಾತ್ರಾ ಅರಿವಾಗುವಂತೆ, ನಿಧನಿಧಾನವಾಗಿ ಅರಳುತ್ತಿರುವ ನವಿರುಪ್ರೇಮ. ನಿದ್ದೆ ತೆಕ್ಕೆಗೆಳೆದುಕೊಳ್ಳುವ ಅರೆಮಂಪರಿನ ಸ್ಥಿತಿಯಲ್ಲೂ ಮರುದಿನದ ನಿರೀಕ್ಷೆಯಿಂದ ಮೈಮನಸ್ಸುಗಳಲ್ಲಿ ತುಂಬಿಕೊಂಡಿರುತ್ತಿದ್ದ ಉದ್ವೇಗ, ಪುಳಕ.
- ದೃಶ್ಯ 2-
ಯಾರಿಗೂ ಗೊತ್ತಿಲ್ಲ ಅಂದುಕೊಂಡಿದ್ದು ಯಾವ ಮೂಲದಿಂದಲೋ ಲೀಕಾಗಿಬಿಟ್ಟಿತ್ತು. 'ಹೌದನೇ, ಯಾರ ಜೊತೇನೋ ಹೋಟ್ಲಲ್ಲಿ ತಿಂಡಿ ತಿಂತಿದ್ಯಂತೆ?' ಅರೆನಂಬುಗೆಯಲ್ಲಿ ಅಪ್ಪ ಕೇಳಿದ್ದರು.
'ಹೌದು' ಅಂದಳು ರಾಧೆ.
'ಬಿಡು, ಜೊತೇಲಿ ತಿಂಡಿ ತಿಂದ ಕೂಡ್ಲೆ ಪ್ರಪಂಚ ಮುಳುಗಲ್ಲ. ಆದ್ರೆ ಪುಟ್ಟೀ, ಜನ ಆಡ್ಕೋತಾರೆ ಕಣಮ್ಮಾ...'
ನಿಸೂರಾಗಿ ಹೇಳಿದ್ದಳು ರಾಧೆ, 'ಆಡ್ಕೊಳ್ಲಿ ಬಿಡಪ್ಪಾ. ನಾನು ಅವನನ್ನೇ ಮದುವೆ ಆಗ್ತೀನಿ'
ಹದಿನಾರು ವರ್ಷದ ಪೋರಿ ಮದುವೆಯ ಮಾತಾಡಿದ್ದು ಕೇಳಿ ಹೆತ್ತವರು ಬೆಚ್ಚಿಬಿದ್ದರು.
'ಹುಚ್ಚಿ ಎಲ್ಲೋ. ಗಂಡನ್ನ ಹುಡುಕ್ಕೊಳ್ಳೋವಷ್ಟು ದೋಡ್ಡೋಳಾಗಿದೀಯೇನೇ? ವರ್ಷ ಹದಿನೆಂಟಾಗ್ಬೇಕು, ಗೊತ್ತಾ?' ಅಪ್ಪ ಹೇಳಿದರು.
'ಅವನು ನಿನ್ನ ತಲೆ ತಿರುಗ್ಸಿದಾನೆ ಪುಟ್ಟೀ. ನಾವಿಲ್ವಾ? ನಿನಗೆ ತಕ್ಕಂತೋನನ್ನ ಹುಡುಕಿ ಮದುವೆ ಮಾಡೋದು ನಮ್ಮ ಜವಾಬ್ದಾರಿ'
'ನಂಗೆ ಇಷ್ಟ ಆದೋರನ್ನ ನಾನು ಮದುವೆಯಾದ್ರೆ ಏನಾಗುತ್ತೆ?'
'ಕಪಾಳಕ್ಕೆ ಕೊಡ್ತೀನಿ ನೋಡು. ಮದುವೆ ಅಂದ್ರೆ ಹುಡುಗಾಟ ಅಂದ್ಕೊಂಡಿದೀಯಾ? ಜಾತಿನೀತಿ, ಕುಲಗೋತ್ರ ಏನೂ ಬೇಡ್ವಾ?' ಅಮ್ಮ ಮಗಳ ಕಡೆ ದುರುಗುಟ್ಟಿದಳು.
'ನಿಮಗೆ ಜಾತಿ, ಕುಲ ಮುಖ್ಯಾನಾ, ನಾನು ಸುಖವಾಗಿರೋದಾ?'
'ನಾಕು ಜನರ ಮಧ್ಯೆ ನಾವು ತಲೆ ಎತ್ಕಂಡು ಬದುಕೋದು ಬೇಡ್ವೇನೇ? ಇದಕ್ಕಿಂತಾ ಒಂದಿಷ್ಟು ವಿಷ ಕುಡ್ದು ಎಲ್ರೂ ನೆಗೆದು ಬೀಳೋದು ವಾಸಿ. ಮರ್ಯಾದೇನಾದ್ರೂ ಉಳಿಯುತ್ತೆ...'
ಅಮ್ಮನ ಮಾತಿಗೆ ಕಿಂಚಿತ್ತೂ ವಿಚಲಿತಳಾಗದೆ ರಾಧೆ ಹೇಳಿದಳು 'ಆಯ್ತು, ಹಂಗೇ ಮಾಡೋಣ...'
ಅಪ್ಪ, ಅಮ್ಮ ಮುಖ ಮುಖ ನೋಡಿಕೊಂಡರು.
'ತಡಿ ಪುಟ್ಟೀ, ಇನ್ನೆರಡು ವರ್ಷ ಕಳೀಬೇಕಲ್ಲ ಅಷ್ಟರಲ್ಲಿ ಏನೇನಾಗಿರುತ್ತೋ'
'ಎರಡಲ್ಲ, ಇಪ್ಪತ್ತು ವರ್ಷ ಕಳೆದ್ರೂ ನಾನು ಅವನನ್ನೇ ಮದುವೆ ಆಗೋದು...'
ನಡುರಾತ್ರಿಯವರೆಗೂ ವಾದ ವಿವಾದ. ಸಾಧಕ, ಬಾಧಕಗಳ ಕುರಿತು ಅಪ್ಪ, ಅಮ್ಮ ಗಿಳಿಗೆ ಹೇಳಿದ ಹಾಗೆ ಬುದ್ಧಿ ಹೇಳಿದರು. ರಾಧೆ ಹಟ ಬಿಡಲಿಲ್ಲ.
-ದೃಶ್ಯ 3-
ರಾಧೆ ಮನೆಗೆ ಬರುವಾಗ ದಿನಕ್ಕಿಂತಾ ತಡವಾಗಿತ್ತು. ಬಾಗಿಲು ತೆಗೆದ ಅಪ್ಪ ಕಾರಣ ಕೇಳುವ ಮುನ್ನವೇ ತಾನಾಗಿ ಹೇಳಿದಳು, 'ಟೀಚರ್ಸ್ ಮೀಟಿಂಗು...'
ಕೈಕಾಲು ತೊಳೆದು ಬರುವುದರೊಳಗೆ ಎದುರಿಗೆ ಕಾಫಿಲೋಟ ಹಿಡಿದು ಬಂದರು ಅಪ್ಪ. ಹೀಗೆ ಸೇವೆ ಮಾಡಿಸಿಕೊಳ್ಳುವಾಗ ಕೆಲವೊಮ್ಮೆ ಇನ್ನಿಲ್ಲದಂತೆ ಪಾಪಪ್ರಜ್ಞೆ ರಾಧೆಯನ್ನು ಕಾಡುವುದಿದೆ. ಇವತ್ತೂ ಹಾಗೇ ಆಯ್ತು. ಕಾಫಿ ಗುಟುಕರಿಸುತ್ತಾ, 'ಅಮ್ಮ ಇರ್ಬೇಕಿತ್ತು...' ಅಂದಳು.
'...'
'ನನ್ನಿಂದಾನೇ ಅಮ್ಮ ಸತ್ತಿದ್ದು...'
'ಅವಳ ಆಯುಷ್ಯ ಮುಗಿದಿದ್ದಕ್ಕೆ ನೀನ್ಯಾಕೆ ಹೊಣೆ ಆಗ್ತಿ?' ಯಾವಾಗಿನಂತೆ ಸಂತೈಕೆಯ ಮಾತಾಡಿದರು ಅಪ್ಪ.
ಊರಲ್ಲೇ ಇದ್ದಿದ್ದರೆ ಅಮ್ಮ ಸಾಯುವ ಪ್ರಸಂಗ ಬರುತ್ತಿರಲಿಲ್ಲ ಎಂದು ರಾಧೆಯ ಹಲವರಿಕೆ. ಊರಿನ ದಾಯಾದಿಗಳಿಗೆ, ನೆಂಟರಿಷ್ಟರಿಗೆ, ಉತ್ತರ ಕೊಡಬೇಕಾದ ಕಷ್ಟ ತಪ್ಪಿಸಿಕೊಳ್ಳಲು ಊರೇ ಬಿಡುವ ನಿರ್ಧಾರಕ್ಕೆ ಹೆತ್ತವರು ಬರಲು ಕಾರಣ ತಾನೇ. ಇರುವ ಲಗತ್ತಾದ ಜಮೀನು ಕಂಡವರ ಪಾಲಾಗಬಾರದೆಂಬ ದಾಯಾದಿಗಳ ಒತ್ತಡಕ್ಕೆ ಮಣಿದು ನಷ್ಟಕ್ಕೆ ಸೀದುಕೊಂಡು ಪೇಟೆ ಸೇರಿಕೊಳ್ಳಲು ಕಾರಣ ತಾನೇ. ಮೇಲ್ಮಹಡಿಯಲ್ಲಿದ್ದ ಬಾಡಿಗೆಮನೆ. ಮಳೆ, ಬಿಸಿಲಿಗೆ ತೆರೆದುಕೊಂಡ ಇಕ್ಕಟ್ಟಿನ ಮೆಟ್ಟಿಲುಗಳಲ್ಲಿ ಓಡಾಟ. ಮಳೆಗಾಲದಲ್ಲೊಮ್ಮೆ ಕೆಳಗಿಳಿದು ಬರುತ್ತಿದ್ದ ಅಮ್ಮನಿಗೆ ಹಿಡಿತ ತಪ್ಪಿ, ಕಾಲು ಜಾರಿ, ಆಸ್ಪತ್ರೆಗೆ ಸೇರಿಸುವಷ್ಟೂ ಪುರುಸೊತ್ತು ಸಿಗಲಿಲ್ಲ. ಇಂತಾ ಸಂದರ್ಭದಲ್ಲೂ ಅಪ್ಪನನ್ನು ಒಂಟಿಯಾಗಿಸಿ, ಒಲಿದವನ ಬೆನ್ನು ಬಿದ್ದು, ನೆಪಕ್ಕೆ ದೇವಸ್ಥಾನದಲ್ಲಿ ತಾಳಿ ಕಟ್ಟಿದವನಿಗೆ ಮೊದಲೇ ಒಂದು ಮದುವೆಯಾಗಿತ್ತೆಂದು ಗೊತ್ತಾದಾಗ ಕಾಲ ಮಿಂಚಿಹೋಗಿತ್ತು. ಅವನೂ ಕಳಚಿಕೊಳ್ಳಲು ಪ್ರಯತ್ನಿಸುತ್ತಿದ್ದ. ಅಪ್ಪನ ಆಸರೆ, ಸಾಂತ್ವನ, ಬೆಂಬಲ. ಆವಾಗ ಕಾಡದಿದ್ದ ತಪ್ಪಿತಸ್ಥ ಭಾವನೆ ಈಗ್ಯಾಕೆ? ಬುದ್ಧಿ ಬೆಳೆದಿದೆಯಾ?
ಕಾಫಿ ಕುಡಿದು ಮುಗಿಸುತ್ತಿದ್ದಂತೆ ಹೊರಗೆಲ್ಲೋ ಆಡಿಕೊಳ್ಳುತ್ತಿದ್ದ ಮಗಳು ಓಡೋಡಿ ಬಂದಳು. 'ಅಮ್ಮಾ...' ಎನ್ನುತ್ತಾ ಅಪ್ಪಿದ ಕಂದನನ್ನು ಎದೆಗವಚಿಕೊಂಡವಳ ಮೂಗಿಗೆ ಆಡಿ ದಣಿದು ಬಂದವಳ ಬೆವರ ಗಂಧ ಅಡರಿ, ಮತ್ತದೇ ನೆನಪು. ಬ್ರಹ್ಮಕಪಾಲದಿಂದ ಕಳಚಿಕೊಳ್ಳುವುದು ಸುಲಭವಲ್ಲದಿದ್ದರೂ ಅಸಾಧ್ಯವೂ ಅಲ್ಲ ಎನ್ನುವಷ್ಟು ರಾಧೆ ಮಾಗಿದ್ದಾಳೆ. ಬದುಕು ಮಾಗಿಸಿದೆ.
- ವಸುಮತಿ ಉಡುಪ
vasumathi.udupav@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.