ಸಿಎಂಡಿ
ಮೊರಾರ್ಜಿ ದೇಸಾಯಿ ಪ್ರಧಾನಿ ಸ್ಥಾನ ಕಳೆದುಕೊಂಡಾಗ ಚರಣ್ ಸಿಂಗ್ ಮತ್ತು ಜಾರ್ಜ್ ಫರ್ನಾಂಡಿಸ್ ನೇತೃತ್ವದಲ್ಲಿ ಹುಟ್ಟಿಕೊಂಡಿದ್ದು ಲೋಕದಳ. ಈ ಪಕ್ಷದಿಂದ 1980ರಲ್ಲಿ ಮೈಸೂರು ಲೋಕಸಭೆ ಚುನಾವಣೆಗೆ ಸಿದ್ದರಾಮಯ್ಯನವರು ಸ್ಪರ್ಧಿಸುವ ಮೂಲಕ ರಾಷ್ಟ್ರಮಟ್ಟದ ಚುನಾವಣೆಗೆ ಎಂಟ್ರಿಯಾದರು. ಆಗ ಸಿದ್ದರಾಮಯ್ಯನವರಿಗೆ ಅವರ ಸ್ನೇಹಿತರ ಬಳಗವೇ ಆರ್ಥಿಕ, ನೈತಿಕ ಬೆಂಬಲವಾಗಿ ನಿಂತಿತ್ತು. ಆ ಬಳಗದಲ್ಲಿ ಪ್ರಮುಖವಾಗಿದ್ದವರು ರೈತಸಂಘದ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ.
ನಂಜುಂಡಸ್ವಾಮಿ ತಂದೆ ವಕೀಲ ಮಹಂತದೇವರು ಆ ಕಾಲಕ್ಕೆ ಶ್ರೀಮಂತರೇ. ಈ ಹಿನ್ನೆಲೆಯಲ್ಲಿ ನಂಜುಂಡಸ್ವಾಮಿ ಅವರಿಗೆ ಹಣಕಾಸಿನ ಕೊರತೆ ಇರಲಿಲ್ಲ. ಜೊತೆಗೆ ಅವರ ಬಳಿ ನೇರಳೆ ಬಣ್ಣದ ಉದ್ದನೆ ಶೆವರ್ಲೆ ಕಾರು ಇತ್ತು. ಸಿದ್ದರಾಮಯ್ಯ ಮತ್ತಿತರರು ಪ್ರೊಫೆಸರ್ ಮೇಲೆ ಒತ್ತಡ ಹೇರಿ ಚುನಾವಣೆ ಪ್ರಚಾರಕ್ಕೆ ಕಾರನ್ನು ಪಡೆದುಕೊಂಡರು. ಹೀಗೆ ಕಾರು ಪಡೆಯಲು ಅವರು ಒಪ್ಪಿಕೊಂಡಿದ್ದು ಮೈಸೂರಿನ ಕನ್ನೇಗೌಡನ ಕೊಪ್ಪಲಿನಲ್ಲಿ ಇದ್ದ ದಿವಂಗತ ನೆಲಮನೆ ದೇವೇಗೌಡರ ಪ್ರಕಾಶನ ಸಂಸ್ಥೆಯ ಮನೆಯಲ್ಲಿ.
ಈ ಸಮಯದಲ್ಲಿ ನಂಜುಂಡಸ್ವಾಮಿ ಎರಡು ಕಂಡಿಷನ್‌ಗಳನ್ನು ಹಾಕಿದರು. ಅದರಲ್ಲಿ ಒಂದು, ಕಾರಿನಲ್ಲಿ 5 ಮಂದಿಗಿಂತ ಹೆಚ್ಚು ಜನರನ್ನು ಕೂರಿಸಿಕೊಳ್ಳಬಾರದು. ಎರಡು, ಡೀಸೆಲ್ ಸಂಪೂರ್ಣ ಖಾಲಿಯಾಗದಂತೆ ಜಾಗೃತೆಯಿಂದ ನೋಡಿಕೊಳ್ಳಬೇಕು. ಆಗ ಸಿದ್ದು ಸ್ನೇಹಿತರಾಗಿದ್ದ, ಸಮಾಜವಾದಿಗಳಾದ ಟಿ.ಎನ್. ನಾಗರಾಜ್, ಪ. ಮಲ್ಲೇಶ್, ನೆಲಮನೆ ದೇವೇಗೌಡ ಮತ್ತಿತರರು, 'ಒಪ್ಪಿಕೋ ಮಹಾರಾಯ. ಮೊದ್ಲು ಕೈಗೆ ಕಾರು ಬರ್ಲಿ. ಆಮ್ಯಾಲೆ ಕಂಡಿಷನ್‌ಗಳನ್ನ ನೋಡಿಕೊಳ್ಳೋಣ' ಎಂದು ಹೇಳಿದರು. ಬೇರೆ ದಾರಿಯೇ ಇಲ್ಲ. ನನ್ನತ್ರ ಇರ್ಲಿ, ನನ್ನ ಮಿತ್ರರ ಹತ್ರನೂ ಕಾರುಪಾರು ಇಲ್ಲ. ಏನು ಮಾಡೋದು. ಆಯ್ತು ಎಂದು ಧೈರ್ಯ ಮಾಡಿ ಸಿದ್ದರಾಮಯ್ಯನವರು ನಂಜುಂಡಸ್ವಾಮಿ ಅವರಿಂದ ಕಾರಿನ ಕೀ ಪಡೆದುಕೊಂಡರು.
ಪ್ರಚಾರ ನಡೆಯಿತು. ಒಂದು ದಿನ ಸರಸ್ವತಿಪುರಂನ ಪಂಪಾಪತಿ ರಸ್ತೆಯಲ್ಲಿರುವ ತಮ್ಮ ಮನೆಯಿಂದ ಕೂಗಳತೆ ದೂರದಲ್ಲಿದ್ದ ಕನ್ನೇಗೌಡನಕೊಪ್ಪಲಿನ ನೆಲಮನೆ ಪ್ರಕಾಶನ ಮನೆಗೆ ನಡೆದುಕೊಂಡು ಬಂದು ಸಿಗರೇಟು ಸೇದುತ್ತಾ ನಂಜುಂಡಸ್ವಾಮಿ ಕುಳಿತಿದ್ದರು. ಸ್ವಲ್ಪ ಹೊತ್ತಿನ ನಂತರ ಸ್ಕೂಟರ್ ತರಲು ಹೇಳಿದ್ದ ಸ್ನೇಹಿತ ಪತ್ತೆ ಇರಲಿಲ್ಲ. 'ಆ ...ಮಗನಿಗೆ ಟೈಂ ಸೆನ್ಸ್ ಇಲ್ಲ' ಎಂದು ಬೈದುಕೊಂಡೇ ರಸ್ತೆ ಬದಿ ಬಂದು ನಿಂತರು. ಗ್ರಹಚಾರ ಎಂಬಂತೆ ಆ ಸಮಯಕ್ಕೆ ಸಿದ್ದರಾಮಯ್ಯ ಶೆವರ್ಲೆ ಕಾರಿನಲ್ಲಿ 12ಕ್ಕೂ ಹೆಚ್ಚು ಮಂದಿಯನ್ನು ತುಂಬಿಕೊಂಡು ಬರಬೇಕೆ!
ನಂಜುಂಡಸ್ವಾಮಿ ಮಧ್ಯಾಹ್ನವೇ ಇಲ್ಲಿಗೆ ಬರುತ್ತಾರೆ ಎಂದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಅವರು ಬರುತ್ತಿದ್ದದ್ದು ಬೆಳಗ್ಗೆ 10ಕ್ಕೆ ಇಲ್ಲಾ ಸಂಜೆ 5ಕ್ಕೆ. ಮಧ್ಯಾಹ್ನ ಏಕೆ ಬಂದಾನು ಎಂದು ಭಾವಿಸಿ ಕಾರನ್ನು ತುಂಬಿಕೊಂಡು ತಂದಿದ್ದರು. ಸ್ನೇಹಿತ ಸ್ಕೂಟರ್ ತರಲಿಲ್ಲ ಎಂದು ಮೊದಲೇ ಬೇಸರದಲ್ಲಿದ್ದ ನಂಜುಂಡಸ್ವಾಮಿ ಕಾರಿನಲ್ಲಿ ಇದ್ದ ಹತ್ತಾರು ಮಂದಿಯನ್ನು ಕಂಡು ತೀವ್ರವಾಗಿ ಸಿಟ್ಟಿಗೆದ್ದರು.
ಕಾರಿನ ಪಕ್ಕಕ್ಕೆ ಬಂದು, 'ನಾನು ಹೇಳಿದಂತೆ ಐದೇ ಮಂದಿ ಇದ್ದಾರೆ ಕಾರಿನಲ್ಲಿ' ಎಂದು ವ್ಯಂಗ್ಯವಾಗಿ ಹೇಳುತ್ತಾ, 'ನಿಮಗೆ ಹೇಳಿದ್ದು ಏನು? ಮಾಡಿರೋದು ಏನು? ಇದನ್ನು ಕಾರು ಅಂತಾ ತಿಳ್ಕಂಡಿದ್ದಿರೋ ಲಾರಿ ಅಂತಾ ತಿಳ್ಕಂಡಿದ್ದಿರೋ?' ಎಂದು ಏರಿದ ಧ್ವನಿಯಲ್ಲಿ ಕೂಗಿದರು. ಈಗ ಬೈಗುಳ ಗ್ಯಾರಂಟಿ ಎಂದು ತಿಳಿದು ಕಾರಿನಲ್ಲಿದ್ದವರೆಲ್ಲ ಇಳಿದು ಪರಾರಿಯಾದರು. ಸಿದ್ದರಾಮಯ್ಯನವರು, 'ಸಾರ್... ಮಧ್ಯದಾರಿಯಲ್ಲಿ ಸಿಕ್ಕಿಬಿಟ್ರು. ಬೇರೆ ದಾರಿಯೇ ಇಲ್ಲದೆ ಕೂರಿಸಿಕೊಂಡ್ ಬಂದೆ' ಎಂದು ಉತ್ತರಿಸಿ ಜಾಗ ಖಾಲಿ ಮಾಡಿದರು.
ನಂತರ ನಂಜುಂಡಸ್ವಾಮಿಯವರೇ, ನೆಲಮನೆ ಪ್ರಕಾಶನದಲ್ಲಿ ಇದ್ದ ಹುಡುಗನ ಕೈಯಲ್ಲಿ ಕಾರಿನ ಕೀಯನ್ನು ನೀಡಿ, 'ಅವ್ರು ಬಂದರೆ ಕೊಟ್ಬಿಡು. ಪ್ರಚಾರ ಚೆನ್ನಾಗಿ ಮಾಡಲಿಕ್ಕೆ ಹೇಳು. ಈ ದುಡ್ಡನ್ನೂ (500 ರು.) ಸಿದ್ದರಾಮಯ್ಯನಿಗೆ ಕೊಡು. ನಾನು ಹೋಗೋವರೆಗೆ ಅವರು ಇಲ್ಲಿಗೆ ಬರಲ್ಲ. ಸರಸ್ವತಿಪುರಂನಲ್ಲಿರೋ ಕೋಟಿ ಪ್ರೆಸ್‌ನಲ್ಲೋ ಅಥವಾ ಅಲ್ಲಿರುವ ಇಂದಿರಾ ಭವನ್ ಭಟ್ಟರ ಹೊಟೇಲ್‌ನಲ್ಲೋ ಟೀ ಕುಡಿದು ಬರುತ್ತಾರೆ...' ಎಂದು ಸ್ನೇಹಿತನ ಸ್ಕೂಟರ್‌ನಲ್ಲಿ ಹೊರಟುಹೋದರು. ಮತ್ತೆ ಬಂದ ಸಿದ್ದರಾಮಯ್ಯ ಸ್ನೇಹಿತರು ಕಾರಿನ ಕೀ ಮತ್ತು 500 ರು. ತೆಗೆದುಕೊಂಡು ಪ್ರಚಾರಕ್ಕೆ ತೆರಳಿದರು. ಈಗಲೂ ಈ ಸವಿನೆನಪು ಮಾಡಿಕೊಳ್ಳುತ್ತಾರೆ ಪ್ರೊ. ಎಚ್.ಗೋವಿಂದಯ್ಯ.
ಸಾಹಿತಿ ದೇವನೂರ ಮಹಾದೇವರಿಗಲ್ಲದೆ ಶ್ರೀಕೃಷ್ಣ ಆಲನಹಳ್ಳಿ, ರಾಜಶೇಖರ ಕೋಟಿ, ದೇವಯ್ಯ ಹರವೆ, ದೇವನೂರು ಶಿವಮಲ್ಲು, ದೇವನೂರು ಬಸವರಾಜು, ಎಂ.ಆರ್. ಶಿವಣ್ಣ ಮತ್ತಿತರಿಗೆ ನೆಲಮನೆ ಪ್ರಕಾಶನ ಆಶ್ರಯ ತಾಣ. ಸಿದ್ದರಾಮಯ್ಯ ಪ್ರಚಾರ ವೇಳೆ ವಿಳಂಬವಾಗಿ ಬಂದರೆ ಅಲ್ಲೇ ಹಾಲ್ಟ್. ನೆಲಮನೆ ಸಂಸ್ಥೆಯೇ ಪಕ್ಷದ ಕಚೇರಿ. ಓಡಾಡಲು ಎಂಡಿಎನ್ ಅವರ ಶೆವರ್ಲೆ. ಕೋಟಿ ಪ್ರೆಸ್‌ನಲ್ಲಿ ಕರಪತ್ರ ಮುದ್ರಣ. ವಕೀಲ ಮಹೇಶ್ ತಮ್ಮೂರು ಕುಪ್ಪೇಗಾಲದಿಂದ ತರುತ್ತಿದ್ದ ಅಕ್ಕಿಯಿಂದ ಅನ್ನ ತಯಾರು ಮಾಡಿಕೊಂಡು, ಇಂದಿರಾ ಭವನ್ ಹೋಟೇಲ್‌ನಿಂದ ಸಾಂಬಾರ್ ತರುವುದು. ಕಾಸಿಲ್ಲದಿದ್ದರೆ ಮನೆಯವರಿಂದಲೇ ಸಾರು ಸ್ವೀಕಾರ. ಯಾರ ಬಳಿ ದುಡ್ಡು ಇರುತ್ತದೋ ಅವರು ಸಿಗರೇಟ್, ಟೀ ಕೊಡಿಸುತ್ತಿದ್ದರು.
ಹೀಗೆ ಸಿದ್ದರಾಮಯ್ಯನವರು ಖರ್ಚು ವೆಚ್ಚವಿಲ್ಲದೆ ಚುನಾವಣೆ ಎದುರಿಸಿದ ಕಾಲವೂ ಇತ್ತು. ಕಾಲ ಉರುಳಿದಂತೆ ವ್ಯವಸ್ಥೆಯೂ ಬದಲಾಯ್ತು. ಬದಲಾದ ವ್ಯವಸ್ಥೆಗೆ ಹೊಂದಿಕೊಳ್ಳಲಾಗದೆ ಆನೇಕರು ತೆರೆಮರೆಗೆ ಸರಿದರು. ಕೆಲವರಷ್ಟೆ ಧೃತಿಗೆಡದೆ ಇನ್ನೂ ಸಾಮಾಜಿಕ ಚಟುವಟಿಕೆಯಲ್ಲಿ ಇದ್ದಾರೆ. ಈಗ ಅವರಿಗೆಲ್ಲ ಆಶಾಕಿರಣವಾಗಿ ಕಾಣುತ್ತಿರುವವರು ಸಿದ್ದು ಮಾತ್ರ. ಅವರೂ ಕೂಡ, ಇವತ್ತಿನ ಚುನಾವಣೆಗಳಲ್ಲಿ ನಡೆಯುವ ವ್ಯಾಪಕ ಭ್ರಷ್ಟಾಚಾರ, ಜಾತೀಯತೆಯಿಂದ ನೊಂದು, ಇನ್ಮುಂದೆ ಯಾವುದೇ ಕಾರಣಕ್ಕೂ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದುಂಟು. ಅವರ ಅಧಿಕಾರಾವಧಿ ಅವರ ಮುಂದಿನ ರಾಜಕೀಯ ಬದುಕನ್ನು ನಿರ್ದೇಶಿಸಬಹುದು ಎಂದಷ್ಟೇ ಇಲ್ಲಿ ಹೇಳಬಹುದು.
= ದಯಾಶಂಕರ ಮೈಲಿ
kumvee07@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.