ಹುಚ್ಚರ ಸಂತೆಯಲ್ಲಿ ನಗು ಉಚಿತ!
ಮಾತು ನಾಟಕದ ಜೀವಾಳ. ವಸ್ತು ನಿರೂಪಣೆ, ಪಾತ್ರ ರಚನೆಯ ವಿನ್ಯಾಸ, ರಂಗಸಜ್ಜಿಕೆ, ಸಂಗೀತ, ಬೆಳಕು, ಎಲ್ಲದನ್ನೂ ಸಾಕ್ಷಾತ್ಕರಿಸಲು ಒಬ್ಬ ನಟ. ಇಷ್ಟಿದ್ದರೆ ನಾಟಕವೊಂದು ರಂಗಪ್ರಯೋಗವಾಗುತ್ತದೆ. ನಾಟಕಗಳಲ್ಲಿ ಹೆಚ್ಚು ತಾಂತ್ರಿಕತೆ ಬರುತ್ತಿದ್ದಂತೆ ಮಾತು ಮೌನವಾಗಿ ಗೆಶ್ಚರ್, ಪೋಶ್ಚರ್, ದೈಹಿಕ ಕಸರತ್ತುಗಳು ರಂಗಭೂಮಿಯಲ್ಲಿ ರಾರಾಜಿಸತೊಡಗಿದವು. ಮಹಾರಾಷ್ಟ್ರದಲ್ಲಿ ವರ್ಬಲ್ ಕಾಮಿಡಿ ಮಾಡುವ ತಂಡಗಳು ಯಕ್ಷಗಾನದ ಮೇಳಗಳಂತೆ ಊರೂರು ಅಲೆದು ನಾಟಕ ಪ್ರದರ್ಶನ ಕೊಡುತ್ತವೆ. ಅಂಥದ್ದೇ ಪ್ರಯತ್ನದಲ್ಲಿ ಧಾರವಾಡದ ಉಮೇಶ ತೇಲಿಯವರ ಟೂರಿಂಗ್ ಥಿಯೇಟರ್ ತಂಡವು ಹೊಸ ಪ್ರಯೋಗವೊಂದನ್ನು ಮಾಡುತ್ತಿದೆ. ಬೆಂಗಳೂರಿನ ಸಂಕೇತ ಕಾಶಿಯವರ ಸಹಕಾರದಿಂದ ಆರಂಭಿಸಿದ ಈ ತಂಡದ ಮೊದಲ ನಾಟಕ 'ಹುಚ್ಚರ ಸಂತೆ'.
ಪ್ರೇಕ್ಷಕರನ್ನು ಎರಡು ಗಂಟೆ ಕಾಲ ನಗೆಗಡಲಲ್ಲಿ ತೇಲಿಸುವ ಈ ನಾಟಕದ ವಸ್ತು ತೀರ ಸರಳವಾದದ್ದು.ನಗಿಸುವುದಕ್ಕಾಗಿಯೇ ನಗೆ ನಾಟಕ ಮಾಡುವುದು ಎಷ್ಟೋ ಸಲ ಅಪಹಾಸ್ಯಕ್ಕೀಡು ಮಾಡಿಬಿಡುತ್ತದೆ. ನಗಿಸುವಲ್ಲಿ ಯಶಸ್ವಿಯಾಗಿರುವ ಈ ನಾಟಕ ಕ್ಷಣಕಾಲ ಮನುಷ್ಯನ ವೈಯಕ್ತಿಕ ಜಂಜಡ - ಕಷ್ಟಕಾರ್ಪಣ್ಯಗಳಿಂದ ದೂರವಿಟ್ಟು ಹೊಸ ಉತ್ಸಾಹ ನೀಡುತ್ತದೆ. ಕೋಟ್ಯಾನುಕೋಟಿ ದೇವರುಗಳ ಭಕ್ತನೊಬ್ಬ, ಮನೆಯಿಂದ ಬರುವ ದುಡ್ಡನ್ನೆಲ್ಲ ತನ್ನ ಮುಖಾರವಿಂದವನ್ನು ಸುಂದರವಾಗಿಸಿಕೊಳ್ಳಲು ಹೆಣಗಾಡುವ ಷೋಕಿಲಾಲ ಇನ್ನೊಬ್ಬ. ಮತ್ತೊಬ್ಬ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಬದುಕುತ್ತಿರುವ ಕಳ್ಳ. ಹೀಗೆ ಮೂವರು ಬ್ಯಾಚುಲರ್ಗಳು ವಾಸಿಸುವ ಮನೆಯಲ್ಲಿ ಇಡೀ ಕತೆ ನಡೆಯುತ್ತದೆ.
ಕಳ್ಳನಿಗೆ ಯಾರಾದರೂ ತಲೆಗೆ ಒಂದೇಟು ಹೊಡೆದರೆ ಸಾಕು ತನ್ನನ್ನು ತಾ ಮರೆಯುವ ಮತ್ತು ತಾನಲ್ಲದ ಪಾತ್ರವಾಗಿ ಅಭಿನಯಿಸುವ ಕೆಟ್ಟ ರೋಗವೊಂದಿರುತ್ತದೆ. ಕಳ್ಳನು ಜಗತ್ತಿನ ನಾನಾ ನಮೂನೆಯ ವ್ಯಕ್ತಿತ್ವಗಳನ್ನು ಅಣಕಮಾಡುವ ದೃಶ್ಯಗಳು ಅದ್ಭುತವಾಗಿವೆ. ಸುಂದರ ಯುವಕನು ಬಲು ಸುಳ್ಳುಗಾರನಾಗಿದ್ದು ತಾನು ಪ್ರೀತಿಸುವ ಹುಡುಗಿಯನ್ನು ಓಡಿಸಿಕೊಂಡು ಬಂದು ಆ ಕೋಣೆಯಲ್ಲಿ ಸೇರಿಕೊಳ್ಳುತ್ತಾನೆ. ಅಲ್ಲಿಂದ ಆರಂಭವಾಗುವ ಸಣ್ಣಸಣ್ಣ ಚಲನೆಗಳು ನಗೆ ಉಕ್ಕಿಸುತ್ತವೆ.
ಕಳ್ಳ ಮತ್ತು ದೇವರ ಭಕ್ತನ ಐಬುಗಳನ್ನು ಚೆನ್ನಾಗಿ ಅರಿತಿದ್ದ ಪ್ರೇಮಿ ಯುವಕ ಇವರಿಬ್ಬರನ್ನೂ ಮನೆಯ ಕೆಲಸದಾಳುಗಳನ್ನಾಗಿ ಮಾಡಿಕೊಳ್ಳುತ್ತಾನೆ. ಅವನ ಕಿತಾಪತಿಯನ್ನು ತಡೆಯಲು ಮಾಯವಾಗುವ ಮಂತ್ರ ಬಳಸುವ ದೃಶ್ಯ, ಅದೃಶ್ಯವಾಗುವ ಗುಟ್ಟು ತಿಳಿದ ಪ್ರೇಮಿಗಳು ಇವರಿಬ್ಬರನ್ನು ಆಟವಾಡಿಸುವ ದೃಶ್ಯಗಳಂತೂ ನಾಟಕೀಯವಾಗಿವೆ. ಹುಡುಗಿಯ ಅಪ್ಪನಿಗೆ ಇವರೆಲ್ಲರೂ ಕೂಡಿ ಹೂಡಿರುವ ಆಟದ ಮರ್ಮ ತಿಳಿಯುತ್ತದೆ. ಈ ಹುಚ್ಚರ ಸಂತೆಯಲ್ಲಿ ಅವನೂ ಹುಚ್ಚನಾಗುವ ಮೊದಲು ಎಚ್ಚತ್ತುಕೊಂಡು ಮನೆಗೆ ಹಿರಿಯನಾಗಿ ಮಗಳಿಗೂ ಆ ಬಡ ಪ್ರೇಮಿಗೂ ಮದುವೆ ಮಾಡಿಸುತ್ತಾನೆ.
ಪ್ರೀತಿಗೆ ಸಾವಿಲ್ಲ ಎಂಬ ಏಕಮುಖಿ ಧ್ಯೇಯವನ್ನಿಟ್ಟುಕೊಂಡು ನಗಿಸುವುದಕ್ಕಾಗಿ ನಗೆ ನಾಟಕ ಮಾಡಿರುವ ತಂಡದ ಪ್ರಯತ್ನ ಮೆಚ್ಚವಂಥದ್ದು. ಈ ನಾಟಕವನ್ನು ರಚಿಸಿ, ನಿರ್ದೇಶಿಸಿರುವ ಉಮೇಶ ತೇಲಿಯವರ ಕಳ್ಳನ ಪಾತ್ರದ ಅಭಿನಯ ನಾಟಕಕ್ಕೆ ವಿಶೇಷ ಮೆರಗು ಕೊಟ್ಟಿದೆ. ಉಳಿದಂತೆ ಯಶವಂತ, ವಿಜಯ, ಯೋಗೀಶ ಅವರ ಪಾತ್ರಗಳು ಕೂಡ ನಾಟಕದ ಕಾವನ್ನು ಎಲ್ಲೂ ಬಿಟ್ಟುಕೊಡುವುದಿಲ್ಲ. ಸರಳ ರಂಗಸಜ್ಜಿಕೆ ಹೊರತಾಗಿ ನಾಟಕದಲ್ಲಿ ಸಂಗೀತ ಮತ್ತು ಬೆಳಕಿನ ಸಂಯೋಜನೆ ಇಲ್ಲದಿರುವುದು ಕೊರಗಾಗಿ ಕಾಣಿಸುತ್ತದೆ.
ತಂಡದ ಪ್ರದರ್ಶನಗಳು ಈಗಾಗಲೇ ರಾಜ್ಯದ ಹಲವಾರು ಕಡೆಗಳಲ್ಲಿ ನಡೆದಿದ್ದು ಧಾರವಾಡ ಮತ್ತು ಬೆಳಗಾವಿಗಳಲ್ಲಿ ಈ ನಾಟಕ ಹೌಸಫುಲ್, ಎರಡು-ಮೂರು ಪ್ರದರ್ಶನಗಳನ್ನು ಕಂಡಿದೆ. ಕನ್ನಡ ರಂಗಭೂಮಿಯಲ್ಲಿ ಕಾಣೆಯಾಗಿದ್ದ ವರ್ಬಲ್ ಕಾಮಿಡಿ ಪ್ರಕಾರವನ್ನು ಮತ್ತೆ ಗಮನಾರ್ಹವಾಗಿ ಪ್ರೇಕ್ಷಕರೆದುರು ತಂದು ನಿಲ್ಲಿಸಿರುವ ಉಮೇಶ ತೇಲಿ ಮತ್ತು ಸಂಕೇತ ಕಾಶಿಯವರಿಗೆ ಈ ನಾಟಕ ಇನ್ನೂ ಹೆಚ್ಚಿನ ಪ್ರದರ್ಶನಗಳ ಮೂಲಕ ಬಹಳಷ್ಟು ಪ್ರೇಕ್ಷಕರನ್ನು ಮುಟ್ಟಬೇಕೆಂಬ ಹಂಬಲವೂ ಇದೆ. (ಆಸಕ್ತರು ಸಂಪರ್ಕಿಸಬೇಕಾದ ಸಂಖ್ಯೆ: 9916237634).
- ಮಹಾದೇವ ಗಾಯತ್ರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.