ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಹೊಳೆಯಿಂದೆದ್ದು ಹಿಮದತ್ತ

Mainashree
Updated On : 18 May 2013, 3:18 am

ಹಳ್ಳದಲ್ಲಿ ಸಿಕ್ಕಿಹಾಕಿಕೊಂಡು ನಿಧಾನವಾಗಿ ಕೆಳಕೆಳಗೆ ಜರುಗುತ್ತಿರುವ ಜೀಪು, ಏರುತ್ತಿರುವ ಬಿಸಿಲು, ಅದಕ್ಕೆ ತಕ್ಕಂತೆ ಕರಗುತ್ತಿರುವ ಹಿಮ, ಹೆಚ್ಚುತ್ತಿರುವ ಹಳ್ಳದ ನೀರು, ಕೆಳಗೆ ನಮ್ಮನ್ನು ಕರೆಯುತ್ತಿರುವಂತೆ ಭಾಸವಾಗುತ್ತಿರುವ ಚಂದ್ರಾ ನದಿಯ ಬೂದುಗಪ್ಪು ನೀರು, ಸಹಾಯಕ್ಕೆ ಬರುವವರ್ಯಾರೂ ಕಾಣಿಸದೆ ಕೈಚೆಲ್ಲಿ ಕುಳಿತ ನಾವು. ಅದೊಂದು ಅಸಂಗತ ಚಿತ್ರದಂತೆ ಭಾಸವಾಗುತ್ತಿರುವ ಕ್ಷಣಗಳಲ್ಲೇ ಒಂದು ಮಾರುತಿ ಕಾರು ಕಾಣಿಸಿತು. ಅದರಿಂದ ಒಬ್ಬ ಟೊಣಪ ಇಳಿದ.
ಇಳಿದವನೇ, ಒಮ್ಮೆ ಜೀಪನ್ನು ಕರುಣಾಜನಕವಾಗಿ ನೋಡಿದ. 'ತ್ಚು ತ್ಚು' ಎಂಬ ಉದ್ಗಾರ ಹೊರಡಿಸಿದ. ಮತ್ತೆ ನಿಧಾನವಾಗಿ, ದಾರಿ ಬದಿಯ ಕಲ್ಲುಗಳನ್ನು ಆಯ್ದು ತಂದು ಹಳ್ಳದಲ್ಲಿ ಅಲ್ಲಲ್ಲಿ ತುಂಬತೊಡಗಿದ. ಓಹೋ, ಜೀಪನ್ನು ಎತ್ತಲು ಇವನೇನೋ ಉಪಾಯ ಮಾಡುತ್ತಿದ್ದಾನೆ ಎಂದು ಖುಷಿಯಾಯ್ತು. ವಿಚಾರಿಸಿದಾಗ ಗೊತ್ತಾಯಿತು- ತನ್ನ ಮಾರುತಿ ಕಾರಿನ ಚಕ್ರಗಳು ಹುಗಿಯದೆ ಹಾದುಹೋಗಲು ಕಲ್ಲು ತಂದು ಹಾಕುತ್ತಿದ್ದಾನೆ ಅಂತ!
ಅಷ್ಟರಲ್ಲೇ ಕಾಝಾದಿಂದ ಮನಾಲಿಗೆ ಹೊರಟಿದ್ದ ಬಸ್ಸು ಆ ದಾರಿಯಲ್ಲಿ ಬಂತು. ದಾಟಲು ಜಾಗವಿರಲಿಲ್ಲವಲ್ಲ, ಅಲ್ಲೇ ನಿಂತಿತು. ಅಚ್ಚರಿ ಎಂದರೆ, ಅದರಿಂದ ಇಳಿದ ಒಂದಷ್ಟು ಮಂದಿ ದಾರಿಯ ಅಕ್ಕಪಕ್ಕದಲ್ಲಿ ಕುಳಿತು ಸಿನಿಮಾ ನೋಡುತ್ತಿರುವಂತೆ ನಮ್ಮ ಕಷ್ಟವನ್ನು ಸವಿಯತೊಡಗಿದರು. ಇನ್ನು ಕೆಲವೇ ಮಂದಿ ನಾವು ಕರೆಯದೆಯೇ ನಮ್ಮ ಬಳಿ ಬಂದು ಜೀಪು ತಳ್ಳಲು ಕೈಜೋಡಿಸಿದರು.  
ಮತ್ತೆ ವಿಚಾರಿಸಿದಾಗ ಗೊತ್ತಾದದ್ದು- ನಮ್ಮ ಪಾಡು ನೋಡುತ್ತ ಕುಳಿತಿದ್ದವರು ಹಿಮಾಚಲ ಪ್ರದೇಶದ ಪ್ರಜೆಗಳು. ಜೀಪು ಎತ್ತಲು ನಮ್ಮ ಜತೆ ಸೇರಿದವರು ಬಿಹಾರದಿಂದ ಹೊಟ್ಟೆಪಾಡಿಗಾಗಿ ಬಂದ ಕೂಲಿಕಾರ್ಮಿಕರು. ಅಲ್ಲಿಯವರೆಗೆ ಹಿಮಾಚಲ ಪ್ರದೇಶದ ಜನರನ್ನು ಮುಗ್ಧರೆಂದೂ, ಸಹಾಯ ಮಾಡುವ ವ್ಯಕ್ತಿತ್ವದವರೆಂದೂ ತಿಳಿದಿದ್ದ ನಮಗೆ ಭ್ರಮನಿರಸನವಾಗಿತ್ತು.
ಇಷ್ಟಾದರೂ ಜಪ್ಪೆನ್ನಲಿಲ್ಲ ನಮ್ಮ ರಥ. ಎಲ್ಲರೂ ಕೈಹಾಕಿ ಸಿಕ್ಕಸಿಕ್ಕಂತೆ ದೂಡಿದ್ದರಿಂದ ಪರಿಸ್ಥಿತಿ ಇನ್ನಷ್ಟು ಅಧ್ವಾನವಾಯ್ತು. ಎಲ್ಲರೂ ತಲೆಗೊಂದು ಸಲಹೆ ಕೊಡತೊಡಗಿ, ಚಾಲಕನ ತಲೆ ಹುಳಿಮೊಸರು ಗಡಿಗೆಯಾಯ್ತು. ಅತ್ತ ಮಾರುತಿ ಕಾರಿನ ದಡಿಯ, ಇದೆಲ್ಲದರ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ ಹಳ್ಳಕ್ಕೆ ಕಲ್ಲು ತುಂಬುತ್ತಲೇ ಇದ್ದ.  ಅಷ್ಟರಲ್ಲೇ ಅಲ್ಲಿಗೆ ರಾಜ್ಯ ಅರೆಸೈನಿಕ ದಳದ ಲಾರಿಯೊಂದು ಬಂತು. ಅದರಿಂದ ಇಳಿದ ಅವರ ದಂಡನಾಯಕ, ನಮ್ಮ ಅವಸ್ಥೆ ನೋಡಿದವನೇ, ತಡಮಾಡದೆ ಕಾರ್ಯಪ್ರವೃತ್ತನಾದ. ಲಾರಿಯನ್ನು ನಮ್ಮ ಜೀಪಿಗೆ ಎದುರಾಗಿ ನಿಲ್ಲಿಸಿ, ಅದರಲ್ಲಿದ್ದ ರಬ್ಬರ್ ರೋಪ್ ಅನ್ನು ಎರಡೂ ವಾಹನಗಳ ಫ್ರಂಟ್ ಗಾರ್ಡ್‌ಗೆ ಕಟ್ಟಿಸಿದ. ಲಾರಿ ರಿವರ್ಸ್ ತೆಗೆಯಿತು. ಜೀಪು ಎಷ್ಟು ಬಲವಾಗಿ ಹೂತಿತ್ತೆಂದರೆ, ರೋಪ್ ಫಟ್ಟನೆ ತುಂಡಾಯಿತು.
ಉಳಿದದ್ದು ಕಬ್ಬಿಣದ ಸಂಕೋಲೆ ಒಂದೇ. ಅದನ್ನೂ ಕಟ್ಟಲಾಯಿತು. ಈ ಬಾರಿ ಲಾರಿ ಡ್ರೈವರ್ ರೋಷದಿಂದಲೇ ಹಿಂದೆ ತೆಗೆದ. ಜೀಪು ತಗಾದೆ ಮಾಡದೆ ಹೇಗೆ ಚಿಮ್ಮಿ ಬಂತೆಂದರೆ, ಅದು ಕುಲುಕಾಡಿದ ಪರಿಗೆ ಅದರಲ್ಲಿ ಕುಳಿತಿದ್ದ ಡ್ರೈವರನ ಮೆದುಳು ಅಲ್ಲಾಡಿ ಹೋದಂತಾಗಿ ಕ್ಷಣಕಾಲ ಮಂಕು ಕವಿಯಿತು. ಅದು ಚಳಿಗಾಲದ ದಿನಗಳಾಗಿದ್ದಿದ್ದರೆ, ಅಥವಾ ಯಾರೂ ಸಂಚರಿಸದ ರಾತ್ರಿಯ ಹೊತ್ತಾಗಿದ್ದಿದ್ದರೆ, ಜೀಪು ಇನ್ನಷ್ಟು ಕೆಳಗೆ ಸರಿದಿದ್ದರೆ... ಎಂಬಿತ್ಯಾದಿ ಯೋಚನೆಗಳ ನಡುವೆಯೇ ನಾವು ತುಸುಹೊತ್ತು ಅಲ್ಲೇ ಕುಳಿತೆವು. ಆಗ ಮಹೇಶ ಹೇಳಿದ- 'ಇದು ಹಿಮಾಲಯ ನಮಗೆ ತೋರಿಸಿದ ರೌದ್ರದ ಒಂದು ಸಣ್ಣ ತುಣುಕು ಅಷ್ಟೇ...'
ಛೋಟಾಧಾರಾ ಪ್ರದೇಶದ ಎತ್ತರ 10,500 ಅಡಿ. ಮುಂದಿನ ದಾರಿ ಮತ್ತೆ ಏರು. ಗ್ರಂಫು ಎಂಬ ಸಣ್ಣ ಊರಿನಲ್ಲಿ ವಿರಾಮ. ಅಲ್ಲಿಂದ ದಾರಿ ಕವಲಾಗುತ್ತದೆ. ಒಂದು ದಾರಿ ಲದಾಖ್‌ನತ್ತ ತೆರಳುತ್ತದೆ. ಇನ್ನೊಂದು ರೋಹ್ತಾಂಗ್ ಪಾಸ್ ಮೂಲಕ ಮನಾಲಿಗೆ. ಚಂದ್ರತಾಲ್‌ನಲ್ಲಿ ಸೇರಿಕೊಂಡ ಜೋಡಿ ಇಲ್ಲಿ ನಮ್ಮಿಂದ ಬೇರ್ಪಟ್ಟಿತು. ಧಾಬಾದಲ್ಲಿ ಊಟ.  ಮತ್ತೆ ಸ್ವಲ್ಪವೇ ಹೊತ್ತಿನಲ್ಲಿ ಮನಾಲಿಯಿಂದ ಲದಾಖ್, ಸ್ಪಿಟಿ ಎಂಬ ಶೀತ ಮರುಭೂಮಿಗಳಿಗೆ ಸಂಪರ್ಕ ಕಲ್ಪಿಸುವ ರೋಹ್ತಾಂಗ್ ಪಾಸ್ ಎಂಬ 'ನಂದನದ ತುಣುಕ'ನ್ನು ಸೇರಿಕೊಂಡೆವು. ಅದು 13,130 ಅಡಿ ಎತ್ತರದ ಪ್ರದೇಶ. ಸ್ಪಿಟಿಗೆ ಹೋಗುವಾಗಲೂ ಇಲ್ಲೇ ಹಾದುಹೋಗಿದ್ದೆವು. ಆದರೆ ಆಗ ಒಂದೇ ಸಮನೆ ಮಳೆ ಸುರಿಯುತ್ತಿತ್ತಾಗಿ ಸುತ್ತ ಏನೂ ಕಾಣಿಸುತ್ತಿರಲಿಲ್ಲ. ಈಗ ಮುಗಿಲು ಬಿಡುವು ಕೊಟ್ಟಿತ್ತು. ಅಲ್ಲಲ್ಲಿ, ಹಿಮದ ತುಣುಕುಗಳು ಕಾಣಿಸುತ್ತಿದ್ದವು. ಹಿಮ ಸಿಕ್ಕಿದ್ದೇ ಸಾಕೆಂದು ಜೀಪು ನಿಲ್ಲಿಸಿ ಅತ್ತ ಓಡಿದೆವು.
(ಮುಂದಿನ ವಾರ- ಕನಸು ಕರಗಿದ ಹಾಗೆ)

= ಹರೀಶ್ ಕೇರ

harishkera@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments