ಆರು
ವರ್ಷದ ಹಿಂದೆ
ಇಂಥದ್ದೇ ಬೇಸಿಗೆಯ ದಿನದಂದು
ಡುಗುಡುಗು ಶಬ್ದದೊಂದಿಗೆ
ರಸ್ತೆಯ ಮೂಲೆ ನಿಂತ ಬುಲ್ಡೋಜರು
ಮತ್ತು ಜೆಲ್ಲಿ ಟಾರುಗಳ
ಬಿಸಿ ಬಿಸಿ ಹಬೆಯ ಧೂಳಿನಾಚೆ
ನಿಂತ ಹೆಣ್ಣುಮಕ್ಕಳು
ಒಂದೇ ಸಲಕ್ಕೆ ಯಾಕಾಗಿ ಬಂದರೋ
ಎನಿಸಲು ಶುರುವಿಟ್ಟು
ಪಾನಕಕ್ಕೆ ಹೆಚ್ಚಿದ ನಿಂಬೆಹಣ್ಣು
ಮತ್ತು ಸಕ್ಕರೆ ಡಬ್ಬದ
ಸುತ್ತಲಿನ ವಾಸನೆ
ಇರುವೆಗಳಿಗೆ ಬೈದು ಶಾಪವಿಟ್ಟೆ
ಆಗಾಗ ಕಿಟಕಿಯಿಂದ ಹಣಿಕಿ ಹಾಕುತ್ತಾ
ಮುದ್ದಿನಿಂದ ಮೊಳಕಾಲಗುಂಟ
ಪೈಜಾಮವೆತ್ತಿ ನೀರು ಹೊತ್ತು
ಸಾಕಿದ ಗಿಡಗಳು
ಮತ್ತದರ ನಿಷ್ಪಾಪ ನಗುವಿನ ನಕ್ಷತ್ರಗಳನ್ನು
ನೋಡುತ್ತಾ ಹಾಲು ಉಕ್ಕಿದ್ದು
ಮರೆತದ್ದೆ ನೆನಪಾಗಿ ಶತಪಥ ತಿರುಗುತ್ತಾ
ನಿದ್ದೆ ತಪ್ಪಿಸಿ ಆಕಳಿಸಿದೆ
ಕುಟ್ಟಿದಂತೆ ಕಲ್ಲುಗಳ
ಮೈಕೈ ಹಿಡಿದು ನರಳಾಡಿ
ಉಸಿರುಗಟ್ಟಿ ಪರದಾಡಿ
ಮಧ್ಯಾಹ್ನದ ಆ ಹಳಸಲು
ಧಾರಾವಾಹಿಗಿಂತ ಅಸಹ್ಯ
ಯಾವುದಿದೆ ಅನ್ನುತ್ತಲೆ
ನಮ್ಮ ರಸ್ತೆಗೂ ದಾಳಿಯಿಟ್ಟ
ಅವರ ಗುಂಪನ್ನು ಕನಿಕರಿಸಿ
ಹಾಗೆಯೇ ಎಲ್ಲಿ ನನ್ನ ಪುಟ್ಟ
ಗುಲ್ಮೊಹರ್ ಇವರಿಂದ
ತಿಪ್ಪೆ ಸೇರುವುದೋ ಕಳವಳಗೊಂಡು
ಕಂಪೌಂಡಿನಿಂದಾಚೆ ಕಣ್ಣು ಕೀಲಿಸಿ ನಿಂತೆ
ಈಗ ಅದೇ ಗುಲ್ಮೊಹರ್
ದೊಡ್ಡ ಮರವಾಗಿ
ಬಂದು ಹೋದವರಿಗೆ ಹೂ ಮುತ್ತನಿಕ್ಕಿ
ಸಂಭ್ರಮಿಸಿದೆ.
-ಘಾಟಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.