ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಗಾಂಧಿ ವರ್ಸಸ್ ಗಾಂಧಿ

Mainashree
Updated On : 25 May 2013, 3:56 am

(ಪ್ರಾರ್ಥನಾ ಗೃಹ, ಪ್ರಾರ್ಥನೆ ಶುರುವಿದ್ದುದು ಮುಗಿಯುತ್ತದೆ)

ಬಾಪು : ಫಿನಿಕ್ಸ್ ಇಂದು ಸತ್ಯಾಗ್ರಹಿಗಳ ಒಂದು ಪ್ರಯೋಗ ಶಾಲೆ. ಇವತ್ತಿನ ಆಫ್ರಿಕೆಯ ಹೋರಾಟಕ್ಕೆ ಮತ್ತು ನಾಳಿನ ಹಿಂದೂಸ್ತಾನದ ಸ್ವಾತಂತ್ರ್ಯದ ಸಂಘರ್ಷಕ್ಕಾಗಿ ನಾವಿಲ್ಲಿ ಸೈನಿಕರನ್ನು ನಿರ್ಮಿಸುತ್ತಿದ್ದೇವೆ. ಆದರೆ ಇಂದು ಈ ಆಶ್ರಮದಲ್ಲಿ ವೈಯುಕ್ತಿಕ ಸ್ವಾರ್ಥ, ಅಜ್ಞಾನ, ಅಹಂಕಾರಗಳಿಂದ ವಿಷಣ್ಣತೆ ಆವರಿಸಿದೆ. ಸೈನಿಕರಿಗೆ ಇರಬೇಕಾದ ಶಿಸ್ತು, ಏಕಾಗ್ರತೆ, ಧ್ಯೇಯ, ನಿಷ್ಠೆಯ ಕೊರತೆ ಎದ್ದು ಕಾಣ್ತಿದೆ. ಮನಸ್ಸು ವ್ಯಥೆಗೀಡಾಗಿದೆ. ದಕ್ಷಿಣ ಆಫ್ರಿಕೆಯ ಸಮಾನತೆ ಹೋರಾಟದಲ್ಲಿ ಇಂಥ ತುಂಟರ ತಂಡ ಕಟ್ಟಿಕೊಂಡು ಏನು ಸಾಧಿಸಲು ಸಾಧ್ಯವೆಂಬ ವಿಚಾರದಿಂದ ಮನಸ್ಸು ಚಿಂತಿಸುತ್ತಿದೆ. (ತಡೆಯುವರು) ಒಬ್ಬ ಯೋಧ ದಾಳಿಗೆ ಹೊರಟನೆಂದೇ ತಿಳಿಯಿರಿ. ಅದಕ್ಕಾಗಿ, ಬಂದೂಕನ್ನು ಆತ ಹೆಗಲಿಗೆ ಏರಿಸಿಯೇ ಇರ್ತಾನೆ. ಆದರೆ, ಜೊತೆಗೆ ತಿಂಗಳಿಗೆ ಸಾಕಾಗುವಷ್ಟು ಆಹಾರ ಒಯ್ಯೋದನ್ನೂ ನಿಶ್ಚಯಿಸಿದ, ಮೇಲೊಂದು ನೀರಿನ ತೊಗಲು ಡಬ್ಬಿಯನ್ನು ಬೆನ್ನಿಗೆ ಇಟ್ಟುಕೊಂಡು ಸಾಗಿದರೆ ಎಂದಾದರೂ ಆತ ಸೇರುವ ಜಾಗೆಯನ್ನು ಮುಟ್ಟಬಹುದೆ? ರಸ್ತೇಲಿ ಚಿಟ್ಟೆಗಳ ಬಣ್ಣ, ಹರಿಯೋ ನೀರು ಸನ್ನೆ ಮಾಡಿ ಸೆಳೆಯ ಹತ್ತಿದರೆ ಸ್ವಂತ ಹೊಣೆ ಅವನ ಗಮನದಲ್ಲಿರಬಹುದೇ? ಹೆಂಡತಿ ಮಕ್ಕಳ ನೆನಪಿಂದ ತಳಮಳಗೊಂಡರೆ ವೈರಿ ಹೊಡೆತವನ್ನು ಎದುರಿಸುವನೆ? ಇಂಥ ಸರಳ ಆಲೋಚನೆಯನ್ನು ಕೂಡಾ ಜನ ಅರ್ಥ ಮಾಡಿಕೊಳ್ಳುವುದಿಲ್ಲವಲ್ಲ ಅಂತ ಅಚ್ಚರಿಯೆನಿಸ್ತದೆ.
ಇವತ್ತು ಒಬ್ಬ ವ್ಯಕ್ತಿ ಬಗ್ಗೆ, ವ್ಯಕ್ತಿಯ ವಿಶಿಷ್ಟ ನಡಾವಳಿಯ ಬಗ್ಗೆ ಮಾತಾಡುವವನಿದ್ದೇನೆ. ನಾಲಿಗೆ ರುಚಿ ತಣಿಸುವುದರ ಅವರ ಆಗ್ರಹ ಮೂಲಕ ಆಶ್ರಮದ ಶಿಸ್ತು ಬಿಗಡಾಯಿಸ್ತಿದೆ, ಬೇರೆಯವರೆದುರು ತಪ್ಪು ಪಾಠ ಕ್ರಮವನ್ನು ಹಾಕಲಾಗುತ್ತಿದೆ. ಎಲ್ಲ ತತ್ವಗಳ ಮುಖಕ್ಕೆ ಮಸಿ ಬಳಿಯಲು ಯತ್ನಿಸಲಾಗುತ್ತಿದೆ. ಆ ವ್ಯಕ್ತಿಯ ಈ ಕೃತ್ಯಗಳಿಂದ ಆಶ್ರಮದ ವಾತಾವರಣ ಕೆಟ್ಟಿದೆ. ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ ನನಗೆ. ಇದಕ್ಕೆಲ್ಲ ಕಾರಣರಾದ ವ್ಯಕ್ತಿ ಬೇರಾರೂ ಅಲ್ಲ, ಆಕೆ ಮಿಸೆಸ್ ಗಾಂಧಿ- ಮಿಸೆಸ್ ಗಾಂಧಿ ಅವರ ಮಗನಿಗೆ, ದೇವದಾಸನಿಗೆ ನಿತ್ಯ ಸಕ್ಕರೆ ಬೆರೆಸಿದ ಹಾಲು ಕೊಡ್ತಿದ್ದಾರೆ, ಇದು ಅವರ ಮೇಲಿರುವ ಆರೋಪ, (ಕಸ್ತೂರಬಾರಿಗೆ) ನೀವು ಈ ಆರೋಪವನ್ನು ಒಪ್ತೀರಾ?
(ಕಸ್ತೂರಬಾ ದಿಗ್ಭ್ರಮೆ)
ಬಾಪು : ಒಪ್ತಿರೋ ಅಥವಾ ದೇವದಾಸನಿಂದ ಸಾಕ್ಷಿ ಹೇಳಿಸಲೋ ?
ಕಸ್ತೂರಬಾ : ಹೌದು.
ಬಾಪು : ಒಪ್ಪಿಗೆಯಿದೆ ?
ಕಸ್ತೂರಬಾ : ಅವ ಎರಡು ದಿನ ಊಟ ಮಾಡಿರಲಿಲ್ಲ ಅದಕ್ಕೆ-
ಬಾಪು : ಅಂದರೆ ಹಠ ಮಾಡಿದರೆ ಅವನಿಗೆ ನೀವು ಮಾಂಸವನ್ನೂ ಕೊಡಬಹುದು.
ಕಸ್ತೂರಬಾ : ಇಲ್ಲಾ ರೀ.
ಬಾಪು : ಎಷ್ಟು ದಿನಾ ಅಂತ ಉಪವಾಸ ಇರ್ತಿದ್ದ
ಕಸ್ತೂರಬಾ : ಕೊನೆಗೆ ಊಟ ಮಾಡ್ತಿದ್ದ.
ಬಾಪು : ಇದು ಗೊತ್ತಿದ್ದೂ ನೀವು ಪುತ್ರ ವ್ಯಾಮೋಹಕ್ಕೆ ಬಲಿಯಾಗಿದಿರಿ. ಸಕ್ಕರೆ ಸೇವನೆಯಿಂದ ಎಲುಬಿಗೆ ಹಾನಿ ಅನ್ನೋದು ಗೊತ್ತಿದ್ದೂ ನೀವು ನಿತ್ಯ ಅವನಿಗೆ ಸಕ್ಕರೆ ಕೊಡ್ತೀರಿ. ಮಗ ಕೇಳ್ತಾನೆ, ಯಾಕೆಂದರೆ ಅವನಿಗೇನೂ ತಿಳಿಯೂದಿಲ್ಲ.

ಆದರೆ ನಿಮಗಾದರೂ ತಿಳೀತದಲ್ಲ. ಇದೇ ತರ ಪ್ರತಿ ತಾಯಿ ತನ್ನ ಮಗನಿಗೆ ಇಲ್ಲವೇ ಪ್ರತಿಯೊಬ್ಬನ ಹೆಂಡತಿ ತನ್ನ ಗಂಡನಿಗೆ ಉಪಚಾರ ಮಾಡಲು ಶುರು ಮಾಡಿದರೆ ಇಡೀ ವ್ಯವಸ್ಥೇನೇ ಮುರಿದು ಬೀಳಬಹುದು. ಒಂದೆಡೆ ಆಶ್ರಮ ಖರ್ಚು ವೆಚ್ಚ ನಿಭಾಯಿಸಲಿಕ್ಕೆ, ಪತ್ರಿಕೆ ನಡೆಸಲಿಕ್ಕೆ ನಾನು ಹೆಣಗಾಡ್ತಿದ್ದೇನೆ. ಹಣ್ಣು ತರಕಾರಿ ಮಾರಿ ಹಣ ಸಂಗ್ರಹಿಸುತ್ತಿದ್ದೇನೆ. ಇನ್ನೊಂದೆಡೆ ಮಿಸೆಸ್ ಗಾಂಧಿಯಂಥ ವ್ಯಕ್ತಿ ನಮ್ಮ ಯತ್ನಗಳಿಗೆ ಮಸಿ ಬಳೀತಿದ್ದಾರೆ. ಮಿಸೆಸ್ ಗಾಂಧಿ, ನಾನು ಆಶ್ರಮದ ಲೆಕ್ಕ ನೋಡ್ತಿದ್ದೆ. ಒಂದು ವೇಳೆ ಮಕ್ಕಳ ಅಥವಾ ಮತ್ತ್ಯಾರದೋ ಮೋಹದಿಂದ ಖರ್ಚು ಹೆಚ್ಚಿದ್ದರೆ ಅದು ಯಾರಿಂದಲಾದರೂ ಆಗಿರಲಿ, ಅದರ ಬಗ್ಗೆ ಸುಮ್ಮನೇ ಇರಲಾಗೋದಿಲ್ಲ. ಮತ್ತ್ಯಾರಿಗಾದರು ಈ ವಿಷಯದ ಬಗ್ಗೆ ಮಾತಾಡೋದು ಇದೆಯೆ?
ಒಂದನೆಯವ: ಗೆಳೆಯರೆ, ಇವತ್ತು ಈ ಪ್ರಶ್ನೆ ನಮ್ಮೆದುರು ಅಂ - ಹುಟ್ಟಿಕೊಂಡಿದೆ. ಅದು ಆಂ- ಆತ್ಯಂತ ದುಃಖಪೂರ್ಣವಾದುದು. ಮಕ್ಕಳಿಗೆ ಆಂ- ತಿಳಿಯೂದಿಲ್ಲ, ಆದ್ದರಿಂದ ಅವು ಒಮ್ಮೊಮ್ಮೆ ಆಂ- ಹಟ ಮಾಡ್ತವೆ. ಆದರೆ ನಾವು ಮಕ್ಕಳಿಗೆ ತಿಳಿವಳಿಕೆ ಹೇಳ್ತೀವಿ. ಏನೆಂದರೆ- ನೋಡ್ರಪ್ಪ-
(ಕಸ್ತೂರಬಾ ಎದ್ದು ಹೋಗುವರು. ಸಭೆ ಮುಂದುವರಿದಿರುತ್ತದೆ)
(ಹರಿಲಾಲ ಸಹ ಹೋಗುವನು. ಮನೆ ಮೇಲೆ ಬೆಳಕು. ಕಸ್ತೂರಬಾ ಬರುವರು ಹರಿಲಾಲ ಬರುವನು. ಕಸ್ತೂರಬಾ ಹೆಗಲಿನ ಮೇಲೆ ಕೈ ಇಡುವನು. ಅವರು ಬಿಕ್ಕಿ ಬಿಕ್ಕಿ ಅಳಲು ತೊಡಗುತ್ತಾರೆ)
ಕಸ್ತೂರಬಾ: ಇವರಿಗಾಗಿ ಮಲ ತುಂಬಿದ ಬುಟ್ಟಿ ಹೊತ್ತುಕೊಂಡೆನೋ, ಇಪ್ಪತ್ತು - ಮೂವತ್ತು ಜನರ ಅಡುಗೆ ದಿನಾಲೂ ಮಾಡಿದೆ. ಇವರು ಎಲ್ಲಿ ಹೋಗ್ತಾರೋ ಅಲ್ಲಿ ಪಾತ್ರೆ - ಸಾಮಾನು ಎತ್ತಿ ಒಯ್ಯುತ್ತಾ ಸಂಸಾರ ಹೂಡಿದೆ. ಹಣದ ಮೋಹ ಬಿಟ್ಟೆ. ಮನೆ, ಮಠ, ಸಂಬಂಧಿಕರನ್ನ ದೂರ ಮಾಡಿ ಬೇರೆ ದೇಶದಲ್ಲಿ ಬಂದು ನಿಂತೆ. ಮತ್ತೆ ಇವರು ಮಾತ್ರ ನನ್ನ ಅವಮಾನಿಸೋ ಒಂದವಕಾಶವನ್ನು ಬಿಟ್ಟಿಲ್ಲ. ಒಮ್ಮೆ ಸಿಟ್ಟಿನೊಳಗೆ ಅಂದುಬಿಟ್ಟೆ. ಬೇರೆ ಜನರಿಗಾಗಿ ಹೀಗೆ ನಾನಿಲ್ಲಿ ದುಡೀತಾ ಇರೋದಕ್ಕೆ ಇಚ್ಛಿಸೋದಿಲ್ಲ. ಆಗ ಅವರು ಕೈ ಹಿಡಿದು ಗೇಟಿನ ತನಕ ಒಯ್ದರು. ಕೂಗಿ ಹೇಳಿದರು - 'ಹೋಗ್ತಿಯಾ ಹೋಗು, ನಿನಗೆಲ್ಲಿ ಹೋಗಬೇಕೆನಿಸ್ತದೆಯೋ ಅಲ್ಲಿಗೆ ಹೋಗು' ಅವರಿಗೆ ಗೊತ್ತಿತ್ತು - ಈಕೆಗೆ ಏನೇ ಅಂದರೂ, ಎಷ್ಟೇ ಕೂಗಾಡಿದರೂ ಸಹ ಎಲ್ಲೂ ಹೋಗೋದಿಲ್ಲ ಅಂತ. ತಮ್ಮೊಂದಿಗೆನೆ ಬದುಕಿನ ದಾರ ಬಿಗಿಯಲಾಗಿದೆ, ಹೀಗೆಯೆ ಎಳೆದಾಡತಾ ಈಕೆ ಬರಲೇಬೇಕು. ನಮಗೆ ನಿಮ್ಮ ಕಾಳಜಿ ಇದೆಂಯತ ಹಗಲು ರಾತ್ರಿ ತೆಯ್ದುಕೊಳ್ತೀವಿ. ಆದರೆ ನೀವು ? ನಮ್ಮನ್ನು ಹುಳಕ್ಕಿಂತ ಕೀಳಾಗಿ ಕಾಣ್ತೀರಿ. ಮಾತಾಡಿ ಯಾಕೆ ಘಾಸಿಗೊಳಿಸ್ತೀರಿ? (ರೋಧಿಸುವರು)
ಹರಿಲಾಲ : ಅಮ್ಮ-
ಕಸ್ತೂರಬಾ : ನಮಗೆಲ್ಲ ಇಲ್ಲಿ ಸರಳವಾದ ಸ್ವಾಗತ ಸಿಕ್ಕಿಲ್ಲೋ. ನಮ್ಮ ಸ್ವಾಗತ ಕಲ್ಲು, ಲಾಠಿಗಳಿಂದಾಗಿದೆ. ಆದರೂ ಹಿಂದೆ ಸರಿದಿಲ್ಲ. ಹೆಜ್ಜೆ ಮೇಲೆ ಹೆಜ್ಜೆಯಿಟ್ಟೆ. ಆದರೆ ನನಗೆ ಕಲ್ಲೆಸೆವವರ ಕೈ ಹಿಡಿದು ಕೇಳೂದಿಲ್ಲ ಇವರು. ಈ ಜನ, ಆಶ್ರಮದಲ್ಲಿ ಹಿಡಿ ಕೂಳಿಗಾಗಿ ಬಂದವರು, ಇವರು ನಮ್ಮ ಮೇಲೆ ದೋಷ ಇಡ್ತಾರೆ. ನಾವು ನಾಲಿಗೆ ಚಪಲ ತೀರಿಸಿದೆವು ಅಂತ ಹೊಟ್ಟೆಕಿಚ್ಚಿನಿಂದ ನೋಡೋದೆ. ಮತ್ತು ಈ ಜನರ ಮಾತು ಕೇಳಿ ಇವರು ನನಗೆ ಹೇಳಬೇಕೆ. (ಬಿಕ್ಕು) ನಾಳೆ ಎಲ್ಲರೂ ನನ್ನ ಕರುಣೆಯಿಂದ ನೋಡೋರು. ಗಾಂಧಿಯವರ ಕಠೋರ ಕ್ರಮದ ಗುಣಗಾನ ಮಾಡೋರು. ನಾವೇನು ಸಕ್ಕರೆ ಕೊಟ್ಟಿಲ್ಲಪ್ಪ ಅನ್ನೋ ರೀತಿಯಲ್ಲಿ ತಲೆಯೆತ್ತಿ ತಿರುಗೋರು. ನೀನ್ಯಾಕೋ ಬೇಗ ದೊಡ್ಡವನಾಗ್ತಿಲ್ಲ. ನನ್ನ ಸಲುಹಿ ಸಾಕತಿಲ್ಲ.
(ಆತನನ್ನು ಹಿಡಿದು ಅಲುಗಿಸುತ್ತಾರೆ. ಆತ ಸ್ತಬ್ಧ) ಬರಲಿ ಅವರು. ಏನು ತಪ್ಪಿದೆ ಅಂತ ಸಿಟ್ಟಿನಲ್ಲೇ ಕೇಳ್ತೀನಿ, ಇವರಿಗೆಲ್ಲ ಯಾರು ಹೇಳಿದರು. ಅದರ ಸುಳಿವು ಶೋಧಿಸ್ತೀನಿ ಮತ್ತು -
(ಆಯಾಸದಿಂದ ಗೋಡೆಗೆ ತಲೆಯಾನಿಸಿ ಕುಳಿತುಕೊಳ್ಳುತ್ತಾರೆ. ಬಾಪು ಬರುವರು) <

- ಡಿ.ಎಸ್.ಚೌಗಲೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments