ಪ್ರೇಮ್ ವರ್ಕ್
ಕೋಟ್ಯಧೀಶನ ಮಡದಿ, ಸ್ವತಃ ಆರ್ಕಿಟೆಕ್ಟ್ ಯಾಸ್ಮಿನ್‌ರ ಮನದ ಬೀದಿಯೊಳಗೆ ಸಾಹಿತ್ಯ ಮೆರವಣಿಗೆಯಾಗಿದ್ದರೂ ಹೇಗೆ? ಅದು ಕೂಡ ನಮ್ಮ ನಿಮ್ಮಂತೆಯೇ.
ಕೋಟ್ಯಧೀಶನ ಮಡದಿ, ಸ್ವತಃ ಆರ್ಕಿಟೆಕ್ಟ್ ಯಾಸ್ಮಿನ್‌ರ ಮನದ ಬೀದಿಯೊಳಗೆ ಸಾಹಿತ್ಯ ಮೆರವಣಿಗೆಯಾಗಿದ್ದರೂ ಹೇಗೆ? ಅದು ಕೂಡ ನಮ್ಮ ನಿಮ್ಮಂತೆಯೇ. ಅಮ್ಮ, ಅತ್ತೆ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ಬೆಳೆದ ಯಾಸ್ಮಿನ್, ಚಿಕ್ಕಂದಿನಿಂದಲೇ ಬರೆಯುವ ಆಸೆಯನ್ನು ತಮ್ಮೊಳಗೇ ಬೆಳೆಸಿಕೊಂಡರು. ಹದಿನೇಳನೇ ವಯಸ್ಸಿನಲ್ಲೇ ಅವರ 'ಕಾರ್ಟ್ ಸ್ಟೋರೀಸ್' ಪ್ರಕಟಗೊಂಡಿತ್ತು. 20 ವರ್ಷಗಳ ರೀಸರ್ಚ್ ನಡೆಸಿ ಬರೆದ, ದಾರಿದ್ರ್ಯದಿಂದ ಸಂಪತ್ತಿನಡೆಗೆ ನಡೆದ ನಿರ್ಗತಿಕನೊಬ್ಬನ ಕಥೆಯೇ 'ಡೇಸ್ ಆಫ್ ಗೋಲ್ಡ್ ಆ್ಯಂಡ್ ಸೇಪಿಯಾ'. ಅಂದರೆ ಮೊನ್ನೆ ಮೊನ್ನೆ ಪ್ರಕಟಗೊಂಡ ಕೃತಿ.
ವಿಪ್ರೋ ಸಂಸ್ಥೆಯ ಗೇಟ್‌ನೊಳ ಹೊಕ್ಕು, ಬಲಭಾಗದಲ್ಲಿ ಸ್ವಲ್ಪ ಮುನ್ನಡೆದರೆ ಕಣ್ಣು ಹಾಯಿಸಿದಲ್ಲೆಲ್ಲಾ, ಎತ್ತರವಾಗಿ, ಸಾಲು ಸಾಲಾಗು ಬೆಳೆದು ನಿಂತ ನೀಲಗಿರಿ ಮರಗಳು. ಪ್ರಶಾಂತ ವಾತಾವರಣ, ತಂಗಾಳಿಯ ನಡುವೆ ಎದ್ದು ನಿಂತಿರುವ ಅಜೀಂ ಪ್ರೇಂ ಜೀ ಫೌಂಡೇಶನ್. ಇದನ್ನು ಡಿಸೈನ್ ಮಾಡಿದವರು, ಆರ್ಕಿಟೆಕ್ಟ್ ಯಾಸ್ಮಿನ್ ಅಜೀಂ ಪ್ರೇಮ್ ಜೀ. ಆ ಆರ್ಕಿಟೆಕ್ಟ್ ಒಳಗೆ ಒಬ್ಬ ಸ್ಪೋರ್ಟ್ಸ್ ಪರ್ಸನ್, ಉತ್ತಮ ಮಗಳು, ಉತ್ತಮ ಸೊಸೆ, ಆರ್ಟಿಸ್ಟ್, ಸರಳ ಸೌಹಾರ್ದತೆಯ ಪ್ರತಿರೂಪವಾಗಿರುವ ವ್ಯಕ್ತಿ, ಉತ್ತಮ ಬರಹಗಾರ್ತಿ... ಹೀಗೆ ಬಹುತೇಕ ಮುಖಗಳು ಅಡಗಿವೆ.
ಆ ಮುಖಗಳನ್ನು ನಿಮ್ಮನ್ನೇನು ಹೆದರಿಸುವುದಿಲ್ಲ. ದುಡ್ಡುಂಟು, ಘನತೆಯುಂಟು ಅಂತ ಅವು ಗರ್ಜಿಸುವುದೂ ಇಲ್ಲ. ಸರಳತೆಯನ್ನು ಸರಳತೆಯಿಂದ ಭಾಗಿಸಿದರೆ ಎಂಥ ತೀರಾ ಸರಳತೆ ಲಭ್ಯವಾಗುತ್ತದೋ ಆ ಮೊತ್ತವಾಗಿ ಕಂಗೊಳಿಸುತ್ತಾರೆ ಭಾರತದ ಮೂರನೇ ಅತಿದೊಡ್ಡ ಧನಿಕನ ಪತ್ನಿ ಯಾಸ್ಮಿನ್. ಮಾತಿಗೆ ಕುಳಿತರೆ, ನಾವು ನೀವು ಹರಟಿದರೆ ಹೇಗೋ ಅಷ್ಟು ಮುಗ್ಧತೆ ಅವರ ಮೊಗದಲ್ಲಿ ಅರಳಿ ನಿಂತಿರುತ್ತದೆ.
ಅವರು ಡಿಸೈನು ಮಾಡಿದ ಫೌಂಡೇಶನ್ ಆಫೀಸೇ ಅದ್ಭುತದ ಮತ್ತೊಂದು ರೂಪ. ಗವಾಕ್ಷಿ ಗ್ಲಾಸಿನ ಹೆಂಚುಗಳ ಚಾವಣಿ. ಅಲ್ಲಿ ಹರಿಯುವುದು ನ್ಯಾಚುರಲ್ ಬೆಳಕು. ಸುಳಿದಾಡುವುದು ನ್ಯಾಚುರಲ್ ಗಾಳಿ.
ಕೇಳಿದ್ದನ್ನೇ ಹೆಣೆದರು...
ಒಂದು 'ಡೇಸ್ ಆಫ್ ಗೋಲ್ಡ್ ಆ್ಯಂಡ್ ಸೇಪಿಯಾ' ಕೃತಿಯಾಗಿ
ಅರಳಲು ಪುರಾತನ ಕಾಲದ ಕಥೆಗಳು, ಅಮ್ಮ- ಅಪ್ಪ, ಅಜ್ಜಿ ಹೇಳಿದ ಕಥೆಗಳು, ಕಚ್‌ನಿಂದ ಮರಳಿದ ತಾತ ಹೇಳಿದ ಕಥೆಗಳೇ ಸ್ಫೂರ್ತಿಯಾದವು. ಇವೆಲ್ಲವೂ ಮನದೊಳಗೆ ಭಂಡಾರ ಸ್ಥಾಪಿಸಿದಾಗ ಇಂಥ ಕೃತಿ ಬರೆಯಬೇಕೆಂಬ ಉದ್ದೇಶ ಖಚಿತವಾಯಿತು.
'ದಾರಿದ್ರ್ಯದಿಂದ ಸಂಪತ್ತಿನಡೆಗೆ' ಬರವಣಿಗೆಯ ವಿಷಯವಾಯಿತು.
ಬರವಣಿಗೆಯ ಗುಪ್ತತೆ
ಮಜಾ ಗೊತ್ತಾ? ಯಾಸ್ಮಿನ್ ಇಂಥ ಕೃತಿ ಬರೆಯುತ್ತಿರುವ ವಿಚಾರ ಮನೆಯವರಿಗೇ ಗೊತ್ತಿರಲಿಲ್ಲ. ಸ್ವತಃ ಅಜೀಂ ಪ್ರೇಮ್‌ಜೀ ಅವರಿಗೂ ತಿಳಿಸಿರಲಿಲ್ಲ. ಆದರೆ, ಕೆಲವು ಸ್ನೇಹಿತರಿಗೆ ಗೊತ್ತಿತ್ತು. ಪಬ್ಲಿಷಿಂಗ್ ಕಂಪನಿಯೊಂದಿಗೆ ಸಹಿ ಹಾಕಿದ ಬಳಿಕವಷ್ಟೇ ಯಾಸ್ಮಿನ್, ಪತಿ ಹಾಗೂ ಮಕ್ಕಳಿಗೆ ತಿಳಿಸಿದರು. ಅವರೆಗೆಲ್ಲ ಅಚ್ಚರಿ. ಅದರಲ್ಲೂ ಪ್ರೇಮ್ ಜೀ 'ನಾನು ಸ್ಕ್ರಿಪ್ಟ್ ಓದಬಹುದಾ?' ಅಂತ ಕೇಳಿದರು. ಆಗ ಇವರಿಗೆ ಅಚ್ಚರಿ. ಊಟ, ನಿದ್ದೆ ಮಾಡಲೂ ಟೈಮಿಲ್ಲದ ವ್ಯಕ್ತಿ ಇದನ್ನು ಓದುತ್ತೇನೆ ಎನ್ನುತ್ತಿದ್ದಾರಲ್ಲ! ಒಂದೆರಡು ಸಿಟ್ಟಿಂಗಿನಲ್ಲಿ ಓದಿಯೂಬಿಟ್ಟರು. ಚೆನ್ನಾಗಿದೆ ಅಂದರು. ಬರೆದಿದ್ದು ಸಾರ್ಥಕವಾಯ್ತು ಎಂದು ಖುಷಿಪಟ್ಟರು ಯಾಸ್ಮಿನ್.
ಅಮ್ಮನಿಂದ ಸಾಹಿತ್ಯಧಾರೆ
'ಎಷ್ಟೋ ವಿಚಾರಗಳಿಗೆ ಅಮ್ಮನೇ ಗುರು' ಎಂಬ ಮಾತು ಯಾಸ್ಮಿನ್ ಪಾಲಿಗೂ ನಿಜವಾಯಿತು. ಯಾಸ್ಮಿನ್ ಅವರ ತಾಯಿ ಸಿಕ್ಕಾಪಟ್ಟೆ ಓದುತ್ತಿದ್ದರು. ಇವರಿಗೂ ಆ ಹವ್ಯಾಸವನ್ನು ಧಾರೆಯೆರೆದರು. ಅಪ್ಪ- ಅಮ್ಮ ಸಂಪೂರ್ಣ ಬೆಂಬಲ ಕೊಟ್ಟಿದ್ದಕ್ಕೇ ಇಂದು ಯಾಸ್ಮಿನ್ 'ಸಾಹಿತಿ'ಯಾಗಿ ಮೂರಕ್ಷರದ ಡೆಸಿಗ್ನೇಶನ್ ಗಿಟ್ಟಿಸಿಕೊಂಡಿದ್ದಾರೆ.
ಬೆಂಗಳೂರೇ ಇಷ್ಟ
ಮುಂಬೈನಲ್ಲಿ 50 ವರ್ಷಗಳನ್ನು ಕಳೆದ ಯಾಸ್ಮಿನ್ ಅವರಿಗೆ ಬೆಂಗಳೂರೆಂದರೆ ಬಲು ಇಷ್ಟ. ಬೆಂಗಳೂರೆಂದರೆ 'ಸೌಹಾರ್ದತೆ, ವಾತ್ಸಲ್ಯ, ಧಾರಾಳತನ, ಶಾಂತಿಯುತ, ಸ್ನೇಹಭಾವಗಳ ತವರು' ಎಂಬ ವ್ಯಾಖ್ಯಾನ ಅವರ ಬಾಯಿಯಿಂದ ಹೊರಡುತ್ತದೆ. ಮುಂಬೈನ ಅವರ ಸ್ನೇಹಿತರು 'ಹೌ ಈಸ್ ಬ್ಯಾಂಗಳೂರ್?' ಅಂತ ಕೇಳಿದಾಗಲೆಲ್ಲ, 'ಮುಂಬೈಗೂ ಬೆಂಗಳೂರಿಗೂ ವ್ಯತ್ಯಾಸವೇ ಇಲ್ಲ' ಎನ್ನುತ್ತಾರಂತೆ.
ಬಹುಮುಖಿ
ಯಾಸ್ಮಿನ್‌ಗೆ ಚಿಕ್ಕಂದಿನಿಂದಲೂ ಡಿಸೈನಿಂಗ್, ಪೇಂಟಿಂಗ್‌ನಲ್ಲಿ ತುಂಬಾ ಆಸಕ್ತಿ. ಆಗಿನ ಸ್ಕೂಲ್ ದಿನಗಳಲ್ಲಿ ಬೋರ್ಡ್ ಎಕ್ಸಾಂ ಇರಲಿಲ್ಲ. ಜಾಸ್ತಿ ಒತ್ತಡವೂ ಇರಲಿಲ್ಲ. ಹೀಗಾಗಿ, ಇದಕ್ಕೆಲ್ಲ ಟೈಮಿತ್ತು. ಸಿಕ್ಕ ಬಿಡುವಿನಲ್ಲಿ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಮಾಡಿಕೊಂಡರು. ಮದುವೆಯಾಗಿ ಬೆಂಗಳೂರಿಗೆ ಬಂದಾಗ ಅತ್ಯಂತ ಬ್ಯುಸಿಯಾಗಿರುತ್ತಿದ್ದ ಪ್ರೇಮ್ ಜೀ, 'ನಮ್ಮ ಹೊಸ ಆಫೀಸ್‌ನ ಇಂಟೀರಿಯರ್ ಡಿಸೈನಿಂಗ್ ಮಾಡಬಾರದೇಕೆ?' ಎಂದು ಕೇಳಿದರಂತೆ. ಅಲ್ಲೂ ಒಂದು ಕೈ ನೋಡಿ ಯಶಸ್ಸು ಗಿಟ್ಟಿಸಿಕೊಂಡರು ಯಾಸ್ಮಿನ್.
ಫ್ಯಾಮಿಲಿ ಡಿಸೈನಿಂಗ್!
ಯಾಸ್ಮಿನ್ ಕಟ್ಟಡಗಳ ಡಿಸೈನರ್ ಅಷ್ಟೇ ಅಲ್ಲ, ಅತ್ಯುತ್ತಮ ಫ್ಯಾಮಿಲಿ ಡಿಸೈನರ್ ಆಗಿಯೂ ಸೈ ಎನ್ನಿಸಿಕೊಂಡರು. ಗಂಡನ ಮನೆಗೆ ಬಂದಾಗ ಇವರ ಎಲ್ಲ ಅಭಿರುಚಿಗಳಿಗೂ ನೆರವಾಗಿ ನಿಂತವರು ಅತ್ತೆ ಡಾ. ಗುಲ್ಬಾಮಾ ಪ್ರೇಮ್ ಜೀ. ಅವರದ್ದು ತುಂಬಾ ದೃಢ ವ್ಯಕ್ತಿತ್ವ. ಅತ್ಯಂತ ಧಾರಾಳ ಗುಣ. ಕಷ್ಟವಿದ್ದಲ್ಲಿ ನೆರವಿಗೆ ಮುಂದಾಗುತ್ತಾರೆ. ವೃತ್ತಿಯಲ್ಲಿ ವೈದ್ಯೆ. ಅಂಗವಿಕಲ ಮಕ್ಕಳಿಗೆ ಆಸ್ಪತ್ರೆ ಕಟ್ಟಿ, ಹಗಲೂ ರಾತ್ರಿ ಸೇವೆಗಿಳಿದವರು.
'7-1-0' ಗೊತ್ತಾ?
ಈ ವಯಸ್ಸಿನಲ್ಲೂ ಯಾಸ್ಮಿನ್ ನಿತ್ಯ ಯೋಗ ಮಾಡುತ್ತಾರೆ. ಇದನ್ನು ಕೂಡ ಅಮ್ಮನೇ ಕಲಿಸಿದ್ದು. ತಾಯಿ ಇವರಿಗೆ ಕಲಿಸಿದ ಫಿಟ್ನೆಸ್ ಮಂತ್ರ '7-1-0'. ಅಂದರೆ, ವಾರದಲ್ಲಿ ಒಂದು ದಿನ ಯೋಗ ಅಥವಾ ಎಕ್ಸ್‌ಸೈಸ್ ಮಿಸ್ ಮಾಡಿದ್ರೂ ಮತ್ತೆ 'ಜೀರೋ'ದಿಂದ ಪ್ರಾರಂಭಿಸಬೇಕೆನ್ನುವ ರೂಲ್ಸಂತೆ.
ಕನ್ನಡಕ್ಕಾಗಿ ಕಸರತ್ತು
ಯಾಸ್ಮಿನ್ ಮದುವೆಯಾಗಿ ಬೆಂಗಳೂರಿಗೆ ಬಂದಾಗ, ಮೊದಲು ಮನಸ್ಸು ಮಾಡಿದ್ದು ಕನ್ನಡವನ್ನು ಕಲಿಯಲು. ಇದಕ್ಕಾಗಿ ರೋಡು ಬದಿಯ '30 ದಿನಗಳಲ್ಲಿ ಕನ್ನಡ ಕಲಿಯಿರಿ' ಮುಂತಾದ ಪುಸ್ತಕಗಳನ್ನೆಲ್ಲ ಕೊಂಡರು. ನಿತ್ಯ ಓದಿ ಕನ್ನಡ ಕಲಿಯಲೂ ಪ್ರಯತ್ನಪಟ್ಟರು. ಇದಕ್ಕಾಗಿಯೇ ಒಬ್ಬರು ಟೀಚರ್‌ರನ್ನೂ ಗೊತ್ತುಮಾಡಿಕೊಂಡರು. ಅವರಿಗೆ ಅಷ್ಟೂ ಇಷ್ಟು ಕನ್ನಡ ಗೊತ್ತು. ಕನ್ನಡ ಮಾತಾಡುವವರೊಂದಿಗೆ ಒಡನಾಟ ಇರದ ಕಾರಣದಿಂದ ಆ ಕನ್ನಡ 'ಅಷ್ಟಕ್ಕೆ' ಮಾತ್ರ ಸೀಮಿತವಾಗಿದೆ.
ಹ್ಞಾಂ, ಇನ್ನೊಂದು ವಿಚಾರ. ಅಷ್ಟು ದೊಡ್ಡ ವಿಪ್ರೋದಲ್ಲಿ ಯಾಸ್ಮಿನ್ ಯಾವ ಪಾತ್ರವನ್ನೂ ವಹಿಸಿಕೊಂಡಿಲ್ಲ. ಮದುವೆಯಾಗಿ ಬಂದಾಗಲೇ ಪ್ರೇಮ್ ಜೀ ಸ್ಪಷ್ಟಪಡಿಸಿದ್ದರು; ಫ್ಯಾಮಿಲಿ ಬೇರೆ, ಉದ್ಯಮ ಬೇರೆ.
ಏನೇ ಇರಲಿ, ಎಷ್ಟೇ ಸಿರಿವಂತರಾದರೂ ನಮ್ಮೊಳಗಿನ ಸರಳತೆಯನ್ನು ಮಾರಿಕೊಳ್ಳಬಾರದು ಎನ್ನುವುದಕ್ಕೆ ಯಾಸ್ಮಿನ್ ಅತ್ಯುತ್ತಮ ಉದಾಹರಣೆ.
ನನ್ಗೆ ಇಷ್ಟಾನೋ...
ಬಿಡುವಿದ್ದಾಗಲೆಲ್ಲ ತುಂಬಾ ಓದ್ತೀನಿ. ಯೋಗ ಮಾಡ್ತೀನಿ. ಪೇಂಟಿಂಗ್ ಮಾಡ್ತೀನಿ. ಡ್ರಾಮ, ಡ್ಯಾನ್ಸ್, ಮ್ಯೂಸಿಕ್ ಪ್ರೋಗ್ರಾಂಗಳಿಗೆ ಭೇಟಿ ನೀಡಿ ಎಂಜಾಯ್ ಮಾಡ್ತೀನಿ. ಎಲ್ಲ ಥರದ ತಿಂಡಿ ನನಗಿಷ್ಟ. ಮುಖ್ಯವಾಗಿ ಇಡ್ಲಿ ವಿಪರೀತ ಇಷ್ಟ. ನಟನಾಗಿ ಗಿರೀಶ್ ಕಾರ್ನಾಡ್, ನಟಿಯಾಗಿ ಶಬಾನಾ ಅಜ್ಮಿ ಇಷ್ಟ. ಸೆಲ್ವಾರ್ ಕಮೀಜ್ ಮತ್ತು ಸೀರೆ ಉಡೋದಂದ್ರೆ ಆಸೆ. ನನ್ನ ಇಷ್ಟದ ವ್ಯಕ್ತಿ ಚಂದ್ರಿಕಾ ಬೇನ್. 'ಶೋಲೆ' ಚಿತ್ರವನ್ನು ಮತ್ತೆ ಮತ್ತೆ ನೋಡ್ತೀನಿ. ಅಮ್ಮ, ಅತ್ತೆಯೇ ರೋಲ್‌ಮಾಡೆಲ್.
- ಗೀತಾ ಶ್ರೀನಿವಾಸನ್
geetha1155@yahoo.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.