ಬೂಕರ್ ಹೇಗೆ?
ಕನ್ನಡಕ್ಕೆ ಅಂತಾರಾಷ್ಟ್ರೀಯ ಬೂಕರ್ ತಪ್ಪಿದೆ. ಇರಲಿ, ಇದರಿಂದ ಯು.ಆರ್. ಅನಂತಮೂರ್ತಿಯವರ ಸಾಹಿತ್ಯದ ಮೌಲ್ಯವೇನೂ ಕಡಿಮೆಯಾಗುವುದಿಲ್ಲ. ಸಿಕ್ಕಿದ್ದರೆ ದೇಶದಾಚೆಗೆ ಓದುಗರು ಹೆಚ್ಚುತ್ತಿದ್ದರು ಅಷ್ಟೇ. ಬೂಕರ್ ತೀರ್ಪುಗಾರರು ಅಂತಾರಾಷ್ಟ್ರೀಯ ರಾಜಕೀಯ, ಸಮಸ್ಯೆಗಳು ಎಲ್ಲ ವನ್ನೂ ಗಮನಿಸಿ ಆಯ್ಕೆ ಮಾಡುತ್ತಾರೆ. ಆವರ ಆಯ್ಕೆಯ ಮಾನದಂಡದಲ್ಲಿ ನಮ್ಮ ತೀರ್ಥಹಳ್ಳಿಯ ಬ್ರಾಹ್ಮಣರ ಅಗ್ರಹಾರ ಇದ್ದಿರಲಾರದು. ಆದರೆ ಬೂಕರ್ ಪುಸ್ತಕಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬ ಕುತೂಹಲವಂತೂ ನಮಗಿದ್ದೇ ಇದೆ. ಮುಂದಿನ ವರ್ಷ ಘೋಷಣೆಯಾಗಲಿರುವ ಬೂಕರ್ಗೆ ಸ್ಪರ್ಧಿಸಿ ಬಂದಿರುವ ಕೃತಿಗಳನ್ನು ಈಗಾಗಲೇ ಜಡ್ಜುಗಳು ಓದುತ್ತಿದ್ದಾರೆ. ಅವರಲ್ಲಿ ನತಾಲೀ ಹೇಯ್ನ್ಸ್ ಎಂಬ ಸಾಹಿತಿಯೂ ಒಬ್ಬಳು. ಆ ಅನುಭವ ಹೇಗಿರುತ್ತದೆ, ತನ್ನ ಆಯ್ಕೆಯ ಮಾನದಂಡ ಹೇಗೆ ಎಂಬುದನ್ನವಳು ಹೇಳಿಕೊಂಡಿದ್ದಾಳೆ:
= ಎದ್ದಲ್ಲಿ ಕೂತಲ್ಲಿ ಪುಸ್ತಕಗಳೇ. ನನಗೂ ಬರೆಯಲು ಆಸೆ. ಆದರೆ ನಿದ್ರೆ?
= ಈ ಸಲ ಚಾರಿತ್ರಿಕ ಥ್ರಿಲ್ಲರ್ಗಳದೇ ರಾಶಿ. ಹಿಲರಿ ಮಾಂಟೆಲ್ ಎಫೆಕ್ಟ್ ಇರಬಹುದು. (ಈಕೆ ಕಳೆದ ಬಾರಿಯ ವಿಜೇತೆ)
= ಅತ್ಯುತ್ತಮ ಕೃತಿಯಲ್ಲಿ ಒಳ್ಳೆಯ ಕತೆಯೂ ಇರಬೇಕು, ಶ್ರೇಷ್ಠ ಗದ್ಯವೂ ಇರಬೇಕು.
= ಪಾತ್ರಗಳು ನನ್ನನ್ನು ಎಳೆದುಕೊಂಡು ಹೋಗಬೇಕು. ಕಳಪೆ ಕೃತಿಯಲ್ಲಿರುವ ಅದ್ಭುತ ವಾಕ್ಯಗಳು ನಿರರ್ಥಕ.
= ಕೌಶಲಪೂರ್ವಕ ಬರೆದದ್ದು ಗೊತ್ತಾಗುತ್ತದೆ. ಆದರೆ ಅದು ಆಯ್ಕೆಯಾಗದು.
ಚಿತ್ರಕತೆ ಅಮರ
ದೊಡ್ಡದಾದ ಮೇಲೆ ಓದುವ ಹವ್ಯಾಸ ರೂಢಿಸಿಕೊಂಡವರು ಚಿಕ್ಕಂದಿನಲ್ಲಿ ತಾವು ಓದಿದೆವೆಂದು ಹೇಳುವುದು ಎರಡನ್ನು- ಚಂದಮಾಮ ಮತ್ತು ಅಮರ ಚಿತ್ರಕತೆ. ಚಂದಮಾಮದ್ದು ಕತೆಗಳನ್ನು ಓದಿ ಅರ್ಥ ಮಾಡಿಕೊಳ್ಳುವ ವಯಸ್ಸಿನ ನೆನಪುಗಳು. ಅಮರ ಚಿತ್ರಕತೆ ಹಾಗಲ್ಲ. ಅದು ಬಣ್ಣದ ಚಿತ್ರಗಳನ್ನು ತಿಳಿದುಕೊಳ್ಳುವ ಹರೆಯಕ್ಕೆ ಕಾಲಿಟ್ಟಾಗಲೇ ನಮ್ಮ ನೆನಪುಗಳಲ್ಲಿ ಊರಿದಂಥದು. ರಾಮಾಯಣ, ಮಹಾಭಾರತ, ಪುರಾಣಗಳೆಲ್ಲ ನಮ್ಮ ಸ್ಮೃತಿಯಲ್ಲಿ ದಾಖಲಾದದ್ದು ಹೀಗೆಯೇ. 1967ರಲ್ಲಿ ಅನಂತ ಪೈ ಎಂಬ ಕನ್ನಡ ಕರಾವಳಿಯ ವ್ಯಕ್ತಿ, ಮುಂಬಯಿಯಿಂದ ಆರಂಭಿಸಿದ ಈ ಸರಣಿ ಬಹುಬೇಗ ಬೇರೆ ಬೇರೆ ಭಾಷೆಗಳಲ್ಲಿ, ಎಲ್ಲ ರಾಜ್ಯಗಳಲ್ಲಿ ಮಕ್ಕಳ ಹೃದಯಸೌಧವನ್ನು ಕಟ್ಟಿತು. ಈ ಮಾಲಿಕೆಯಲ್ಲಿ ಒಟ್ಟು 200 ಪುಸ್ತಕಗಳು ಪ್ರಕಟವಾದವು. ಇದೀಗ ಅಷ್ಟೂ ಕೃತಿಗಳು ಎರಡು ಸೆಟ್ಗಳಾಗಿ ಮರುಮುದ್ರಣವಾಗಿ ಬಂದಿವೆ. ಶಾಲೆಕಾಲೇಜುಗಳು, ಲೈಬ್ರರಿಗಳು ಇದರ ಗುರಿಯಾದರೂ, ಆಸಕ್ತ ಮತ್ತು ಶಕ್ತ ಹೆತ್ತವರು ಇವನ್ನು ಖರೀದಿಸಿ ತಮ್ಮ ಮಕ್ಕಳಿಗೆ ನೀಡಲಡ್ಡಿಯಿಲ್ಲ. ಮಕ್ಕಳಿಗೆ ಕತೆ ಹೇಳುವುದಕ್ಕೊಂದು ಹೊಸ ಆಯಾಮ, ಹಿರಿಯರಿಗೆ ಬಾಲ್ಯದ ಮರುಕಳಿಕೆ ಎಲ್ಲವೂ ಸಿಕ್ಕಿದಂತಾದೀತು.
- ಕೇರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.