ಸಂದರ್ಶನ
ಬಹಳ ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿ ಕಾವೇರಿ ನದಿಯ ದಡದಲ್ಲಿ ಒಂದು ಉದ್ಯಮ ಕುಟೀರವಿತ್ತು. ಸುದರ್ಶನ ಎಂಬ ಕ್ರಿಯಾಶೀಲ ಉದ್ಯಮಿ ಮರಗೆಲಸ, ಶಿಲ್ಪಕಲೆ, ಕಟ್ಟಡ ಕಟ್ಟುವುದು, ಬಾವಿ ತೋಡುವುದು, ಕಾಗದ, ಮೋಂಬತ್ತಿ ಮುಂತಾದವುಗಳನ್ನು ತಯಾರಿಸುವುದು... ಮೊದಲಾದವುಗಳ ತರಬೇತಿ ಏರ್ಪಡಿಸುತ್ತಿದ್ದ. ತರಬೇತಿ ಯಶಸ್ವಿಯಾಗಿ ಪೂರೈಸಿದವರಿಗೆ ಅವನ ಕುಟೀರದಲ್ಲೇ ಉದ್ಯೋಗಗಳನ್ನು ನೀಡುತ್ತಿದ್ದ. ಸುದರ್ಶನನ ಯೋಜನೆ ಆಸುಪಾಸು ಪ್ರಾಂತ್ಯಗಳಲ್ಲೂ ಹೆಸರುವಾಸಿಯಾಗಿತ್ತು. ಎಲ್ಲೆಡೆಯಿಂದ ಉತ್ಸಾಹಿ ಯುವಕರು ಅವನ ಕುಟೀರಕ್ಕೆ ವೃತ್ತಿ ಕಲಿಕೆಗೆ, ನೌಕರಿಗೆ ಬರುತ್ತಿದ್ದರು. ಅಂದು ರವಿವಾರ, ದೂರದ ಊರುಗಳಿಂದ ಸಂದರ್ಶನಕ್ಕೆಂದು ಇಪ್ಪತ್ತು ಯುವಕರು ಕುಟೀರಕ್ಕೆ ಬೆಳಗ್ಗೆ ಎಂಟು ಗಂಟೆ ಹೊತ್ತಿಗೆಲ್ಲ ಬಂದಿದ್ದರು. ಒಂಬತ್ತು ಗಂಟೆಗೆ ಸಂದರ್ಶನ ಏರ್ಪಾಟಾಗಿತ್ತು. ಸುದರ್ಶನ, ಅಂಗಳದಲ್ಲಿ ಜಮಾಯಿಸಿದ್ದ ಯುವಕರತ್ತ ಮುಗುಳ್ನಗೆ ಬೀರಿದ. ತನ್ನ ಮನಸ್ಸಿನಲ್ಲೇ ಏನನ್ನೋ ಲೆಕ್ಕಹಾಕುತ್ತಿದ್ದ.
'ಸರಿ... ನೀವೆಲ್ಲ ಬಹುದೂರದಿಂದ ಇಲ್ಲಿಗೆ ಬಂದಿದ್ದೀರಿ, ಸಂತೋಷ. ಎಲ್ಲರಿಗೂ ತಿಂಡಿ, ಕಾಫಿ ಸಿದ್ಧವಾಗಿದೆ. ಪಕ್ಕದ ಕೋಣೆಗೆ ಹೋಗಿ ಸ್ವೀಕರಿಸಿ. ಸ್ವಸೇವಾ ಪದ್ಧತಿ. ಸಂಕೋಚ ಬೇಡ' ಎಂದ ಸುದರ್ಶನ. ಯುವಕರು ಆತ ಹೇಳಿದಂತೆಯೇ ಉಪಾಹಾರ ಸ್ವೀಕರಿಸಿದರು. ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದ. ಇದೇನಿದು? ಒಂಬತ್ತು ಗಂಟೆಗೆ ಸಂದರ್ಶನ ನಿಗದಿಯಾಗಿದೆ. ಇನ್ನೂ ಆರಂಭವಾಗಿಲ್ಲವಲ್ಲ ಅಂತ ಒಳಗೊಳಗೇ ಚಡಪಡಿಸತೊಡಗಿದರು. ಮಧ್ಯಾಹ್ನ ಹನ್ನೆರಡಾದರೂ ಸಂದರ್ಶನ ಆರಂಭವಾಗಲಿಲ್ಲ. ಸುದರ್ಶನ ಮತ್ತೆ ಮತ್ತೆ ಆ ಯುವಕರನ್ನು ದಿಟ್ಟಿಸಿ ನೋಡುತ್ತಿದ್ದ ಅಷ್ಟೆ. ಮಧ್ಯಾಹ್ನ ಒಂದೂವರೆಯಾಯಿತು. ಸುದರ್ಶನ 'ನಿಮಗೆ ಬಹಳ ಹಸಿದಿರಬೇಕು. ಎಲ್ಲರೂ ನಡೆಯಿರಿ ಭೋಜನಾಲಯಕ್ಕೆ. ನಿಮಗೆ ಎಷ್ಟು ಬೇಕೋ ಅಷ್ಟು ಅನ್ನ, ಸಾರು, ಪಲ್ಯ, ಮೊಸರು ಬಡಿಸಿಕೊಂಡು ಊಟ ಮಾಡಿ' ಎಂದು ಸೂಚಿಸಿದ. ಯುವಕರು ಭೋಜನ ಮುಗಿಸಿದ್ದಾಯಿತು. 'ಅರೆ! ಸಮಯಪಾಲನೆ ಬೇಡವೆ? ನಾವು ಈ ಕುಟೀರದ ಬಗ್ಗೆ ಎಷ್ಟೊಂದು ಒಳ್ಳೆಯ ಅಭಿಪ್ರಾಯವಿಟ್ಟುಕೊಂಡಿದ್ದೆವಲ್ಲ' ಎನ್ನುವುದೇ ಎಲ್ಲ ಯುವಕರ ಅಂಬೋಣ. ಬಂದವರಲ್ಲಿ ಒಬ್ಬ ಧೈರ್ಯ ಮಾಡಿ ಪ್ರಶ್ನಿಸಿಯೇಬಿಟ್ಟ.
'ಗುರುಗಳೇ, ತಿಂಡಿ, ಕಾಫಿ, ಊಟವೇನೋ ಭರ್ಜರಿಯಾಗಿತ್ತು. ಯಾವಾಗ ನಮಗೆ ಸಂದರ್ಶನ ಆರಂಭಿಸುತ್ತೀರೋ ಗೊತ್ತಾಗುತ್ತಿಲ್ಲ. ಕೃಪೆಮಾಡಿ ಬೇಗನೇ ಶುರುಮಾಡಿದರೆ ನಮಗೆ ಊರಿಗೆ ವಾಪಸ್ಸಾಗಲು ಅನುಕೂಲವಾಗುತ್ತದೆ ಸ್ವಾಮಿ...'
'ಸಂದರ್ಶನ ಮುಗಿದಿದೆ! ನೀವು ಈಗಲೇ ವಾಪಸ್ಸಾಗಬಹುದು' ಎಂದು ಸುದರ್ಶನ ಘೋಷಿಸಿದಾಗ ಬಂದ ಯುವಕರು ಕಂಗಾಲಾದರು. ಇದೇನು ಈ ಭಾಗ್ಯಕ್ಕೆ ಇಷ್ಟು ದೂರ ಪ್ರಯಾಣಿಸಿ ಬಂದೆವಲ್ಲ ಅಂತ ಅವರು ಪರಿತಪಿಸಿದರು. ಆಗ ಸುದರ್ಶನ ಸಾವಧಾನವಾಗಿ ವಿಷಯಕ್ಕೆ ಬಂದ.
'ಶಿಕ್ಷಣ ಎಂದರೆ ಕೇವಲ ಕಲಿಕೆ ಮಾತ್ರ ಅಲ್ಲ. ಸಮಾಜದಲ್ಲಿ ಹೇಗೆ ಒಬ್ಬರಿಗೊಬ್ಬರು ವರ್ತಿಸಬೇಕು, ನಡೆದುಕೊಳ್ಳಬೇಕು, ಅರಿಯಬೇಕು ಎನ್ನುವುದರ ಪ್ರಜ್ಞೆ. ಬೆಳಗ್ಗೆಯಿಂದಲೂ ನಾನು ನಿಮ್ಮನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೇನೆ. ತರಬೇತಿ, ನೌಕರಿ ಇಷ್ಟೇ ನಿಮ್ಮ ತಲೆಯಲ್ಲಿರುವುದು. ಎಲ್ಲರೂ ಬೊಂಬೆಗಳ ಹಾಗೆ ಕುಳಿತಿರೇ ಹೊರತು ಪರಸ್ಪರ ಏನು, ಎತ್ತ ವಿಚಾರಿಸಲಿಲ್ಲ. ಒಟನಾಟವೆಂದರೆ ಏನು ನಿಮಗೆ ಗೊತ್ತೇ ಇಲ್ಲ. ಆದ್ದರಿಂದಲೇ ನಿಮ್ಮ ಪೈಕಿ ಯಾರೂ ಆಯ್ಕೆಯಾಗಿಲ್ಲ. ಬೇಸರ ಬೇಡ. ನಿಮಗೆ ಒಳ್ಳೆಯದಾಗಲಿ. ಹೋಗಿ ಬನ್ನಿ...'
'ನಾವು ಸಂದರ್ಶನಕ್ಕೆಂದು ಬಂದೆವು. ನಮ್ಮ ಉದ್ದೇಶ ನೌಕರಿಯಾಗಿತ್ತು ನಿಜ, ಅದಕ್ಕೆ ಬೇಕಾದ ಮೌಲ್ಯಯುತವಾದ ಮಾರ್ಗದರ್ಶನ ಸಿಕ್ಕಿದೆ ಇಲ್ಲಿ. ಮುಂದೆ ನಮ್ಮ ಪಾಲಿಗೆ ಉತ್ತಮ ದಿನಗಳು ಕಾದಿವೆ. ಗುರುಗಳೆ, ನಮ್ಮನ್ನು ಹಾರೈಸಿ. ಹೋಗಿಬರುತ್ತೇವೆ' ಎಂದರು ಯುವಕರು ಒಕ್ಕೊರಲಿನಿಂದ. ಸುದರ್ಶನನ ಕಣ್ಣುಗಳು ಅವರನ್ನು ಬೀಳ್ಕೊಡುವಾಗ ತೇವಗೊಂಡಿದ್ದವು.
= ಬಿಂಡಿಗನವಿಲೆ ಭಗವಾನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.