ಗೂಳಿ ದಾಳಿ
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಇತ್ತೀಚಿಗೆ ಗೂಳಿಗಳದೇ ಆರ್ಭಟ. ಅಲ್ಲಿಗೆ ಬರುವವರತ್ತ ವಿವಿಧ ಭಂಗಿಗಳಲ್ಲಿ ಹೂಂಕರಿಸುತ್ತಾ ಅಬ್ಬರ ಮಾಡುತ್ತಾ ನುಗ್ಗುತ್ತಿದ್ದವು. ಇದೇನಿದು ಕಲಾವಿದರು ಓಡಾಡುವ ಜಾಗದಲ್ಲಿ ಹೀಗೆ ಗೂಳಿಗಳು ಬೀಡುಬಿಟ್ಟರೆ ಹೇಗೆ ಎಂದು ಯೋಚಿಸಬೇಡಿ. ಇಲ್ಲಿನ ಎಲ್ಲಾ ನಾಲ್ಕೂ ಗ್ಯಾಲರಿಗಳಲ್ಲಿ ಇದ್ದದ್ದೂ 'ಗೂಳಿ' ಎಂಬ ಸರಣಿಯ ಕಲಾಕೃತಿಗಳು.
ಮೈಸೂರಿನ ಶ್ರೀ ಕಲಾನಿಕೇತನದ ಹಳೆಯ ವಿದ್ಯಾರ್ಥಿ ಸುಜಿತ್ ಕುಮಾರ್ ಜಿ.ಎಸ್. ಈ ಗೂಳಿಗಳ ಜನಕ! ಸತತ ಎರಡು ವರ್ಷ ತದೇಕಚಿತ್ತದಿಂದ ಕುಳಿತು ಸುಮಾರು 141 ಕೃತಿಗಳನ್ನು ಈ ಪ್ರದರ್ಶನಕ್ಕಾಗಿಯೇ ರಚಿಸಿ ರಸಿಕರಿಗೆ ಉಣಬಡಿಸಿದ್ದಾರೆ. ಈ ಕಲಾವಿದನ ಪ್ರಕಾರ 'ಗೂಳಿ' ಶೀರ್ಷಿಕೆಯಲ್ಲಿ ದೇಶವಿದೇಶಗಳ ಕಲಾವಿದರು ತಮ್ಮದೇ ಆದ ಶೈಲಿಯಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ಆದರೆ ಅವುಗಳಿಗಿಂತ ವಿಭಿನ್ನವಾಗಿ ತಾನು ರಚಿಸಬೇಕೆಂದು ಪಣ ತೊಟ್ಟು ಹಲವು ಸ್ತರಗಳ ಗೂಳಿ ವಿಡಿಯೋ ಚಿತ್ರಗಳನ್ನು ನೋಡಿ ಅಭ್ಯಸಿಸಿ ಅದರ ರೂಪುರೇಷೆ, ರಭಸ, ತೀಕ್ಷ್ಣ ನೋಟ, ನುಗ್ಗುವಿಕೆ, ಕೆಲವೊಮ್ಮೆ ಮುಗ್ಧತೆ ಎಲ್ಲದರಲ್ಲೂ ತಮ್ಮದೇ ಛಾಪನ್ನು ಒತ್ತಿ ರೂಪಿಸಿದ್ದಾರೆ.
ಅವರು ಬಳಸಿದ ಮಾಧ್ಯಮದಲ್ಲಿ ಚಾರ್ಕೋಲ್ನ ಹೊಡೆತ ಪ್ರಮುಖವಾಗಿದ್ದು ಕಲಾ ಲಹರಿಯನ್ನೇ ಸೃಷ್ಟಿಸಿದೆ. ತೈಲ ಮಾಧ್ಯಮವನ್ನು ಬಳಸಿ ತಮ್ಮ ಚಿತ್ರಗಳಿಗೆ ಮತ್ತಷ್ಟು ಅಂದ ತರುವಲ್ಲಿ ಸಫಲರಾಗಿದ್ದಾರೆ. ಅವರಲ್ಲಿ ಒಬ್ಬ ಸಂಯೋಜಕ ಕಲಾವಿದನಿದ್ದಾನೆ ಎಂದು ಗೊತ್ತಾಗುತ್ತದೆ. ಬಣ್ಣಗಳ ಸಂಯೋಜನೆಯೂ ತಂಪಾಗಿವೆ, ಪ್ರಖರ ಬಣ್ಣಗಳು ಕಣ್ಣಿಗೆ ರಾಚದೆ ಸಹಕರಿಸಿ ಗೂಳಿಯನ್ನೇ ಗಮನಿಸುವಂತೆ ಮಾಡಿದೆ. ಬಂಗಾಳದ ಸುನಿಲ್ ದಾಸರ ಗೂಳಿಗಳಷ್ಟೆ ಬಲಿಷ್ಟವಾಗಿವೆ ಎಂಬುದು ಈ ಯುವ ಕಲಾವಿದನ ಕಸರತ್ತನ್ನು ತೋರ್ಪಡಿಸುತ್ತದೆ. ಖ್ಯಾತ ಕಲಾವಿದರಾದ ಯೂಸುಫ್ ಅರಕ್ಕಲ್, ಕೆ.ವಿ.ಸುಬ್ರಹ್ಮಣ್ಯಂ, ಸಿ.ಎಸ್.ಕೃಷ್ಣಶೆಟ್ಟಿ, ಪಿ.ಸುಧಾಕರನ್ ತನ್ನ ಕೃತಿಗಳನ್ನು ಪರಾಮರ್ಶಿಸಿ, ಪ್ರೋತ್ಸಾಹಿಸಿ, ಮಾರ್ಗದರ್ಶನ ಕೊಟ್ಟಿದ್ದಾರೆ ಎಂದು ಸುಜಿತ್ ವಿನಮ್ರವಾಗಿ ನುಡಿಯುತ್ತಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.