ಬಿಯರು ಚಿಯರುಗಳ ನಡುವೆ ಮೊಸರನ್ನ!
ನವೆಂಬರಿನ ಮಧ್ಯಭಾಗದಲ್ಲ್ಲಿ ಹೀಗೆಲ್ಲ ಆಡಬಾರದಂತ ನನಗೆ ಗೊತ್ತು. ಚೆನ್ನಾಗಿಯೇ ಗೊತ್ತು. ಆದರೆ ಇತ್ತಿತ್ತಲಾಗಿ, ನಾನು ಕಂಡುಕೊಂಡಿರುವ ಕನ್ನಡಸತ್ಯವನ್ನು ಹೇಳಲಿಕ್ಕೆ ಇದಕ್ಕು ಚೆನ್ನಾದ ಸಂದರ್ಭವಿಲ್ಲವಂತನಿಸುತ್ತಿದೆ. ತುಸು ಉಡಾಫೆ ಅನಿಸಿದರೂ ಸರಿ, ಒಪ್ಪಿಸಿಕೊಳ್ಳಿ.
ನಿನ್ನೆಯಲ್ಲ ಮೊನ್ನೆ ಹೊಸತೊಂದು ಪದ್ಯದ ಸನ್ನಾಹದಲ್ಲಿದ್ದೆ. ಏನೋ ಹೊಳೆಯಿತಾಗಿ, ಗೊತ್ತಿರುವ 'ಕನ್ನಡ' ಸಾಲದೆ ಏನೋ ಬರೆದೆ!
ನನ್ನ ಪದ್ಯಗಾರಿಕೆಯ ಬಗ್ಗೆ ಇಲ್ಲೊಂದೆರಡು ಸಂಗತಿ ಹೇಳಲೇಬೇಕು. ಹೇಳಿಕೇಳಿ, ನಾನು ದ್ವಿಭಾಷಿ. ಕನ್ನಡ ಮತ್ತು ಇಂಗ್ಲಿಷುಗಳಲ್ಲಿ ಏಕತ್ರ ಇರುವವನು ಮತ್ತು ಜರುಗುವವನು. ನನ್ನೊಳಮಾತು ನಿಸ್ಸಂದೇಹ ಕನ್ನಡವೇ ಆದರೂ, ಹೊರಗೆ- ನನ್ನ ಎಚ್ಚರದ ಮುಕ್ಕಾಲು ಪಾಲು ಇಂಗ್ಲಿಷಿನಲ್ಲೇ ನಡೆಯುವುದು. ಕನ್ನಡೇತರಿಕೆಯಲ್ಲಿ ಘಟಿಸುವುದು. ಎಂತಲೇ, ತೋಚುಗನ್ನಡದಲ್ಲಿ ಆಡುವ, ಆಲೋಚಿಸುವ ಸನ್ನಿವೇಶವೇ ನನಗೆ ಕಡಿಮೆ. ಕೆಲಸಕಾರ್ಯದ ನಡುವೆ ಏನಾದರೂ ಬರೆಯುವಂಥದ್ದು ಹೊಳೆದುಬಿಟ್ಟರೆ ಮಾ ತ್ರ, ವಿಚಿತ್ರವೆಂಬಂತೆ- ಮನಸ್ಸು ತಂತಾನೇ ಕನ್ನಡವಾಗುವುದು ಅಷ್ಟೆ!
ನಿಜಕ್ಕಾದರೆ ಸಮಸ್ಯೆ ಇರುವುದೇ ಇಲ್ಲಿ!
ನಾನು ಬರೆಯಲಿಕ್ಕಿರುವ ವಸ್ತುವಾದರೋ, ಕಟ್ಟಾ ಕನ್ನಡದ ಪರಿಸ್ಥಿತಿಯೊಂದರಲ್ಲಿ ಹುಟ್ಟಿದ್ದಲ್ಲ. ನನ್ನ ಪದ್ಯವಿರಲಿ, ಗದ್ಯವಿರಲಿ- ಅವುಗಳ ಮೂಲಾನುಭವ ಒಂದಿಷ್ಟೂ ಕನ್ನಡವಿಲ್ಲದ ಇತರೆ ಪ್ರಪಂಚದಲ್ಲಿ ಜನಿಸುತ್ತದೆ ಮತ್ತು ನಾನು ಬರೆಯುತ್ತೇನನ್ನುವ ಒಂದೇ ಮುಲಾಜಿನ ಮೇರೆಗೆ ಕನ್ನಡದಲ್ಲಿ ಮೈಪಡೆಯುತ್ತದೆ. ದಿಟದಲ್ಲಿ, ಇದು ಕನ್ನಡದಾಕ್ಷಿಣ್ಯವೇ ಸರಿ!
ಇನ್ನೂ ವಿಶದವಾಗಿ ಆಡುವುದಾದರೆ, ಪರಂಗೀ ಸಂಗತಿಯೊಂದು ನನ್ನ ಒತ್ತಾಯದ ಮೇರೆಗೆ ಕನ್ನಡದಲ್ಲಿ ಬರೆಯಲ್ಪಡುತ್ತದೆ. ಸರಳವಾಗಿ, ಕನ್ನಡದ ಬಟ್ಟಲಿನಲ್ಲಿ ಎಲ್ಲಿಯದೋ ಪೇಯ ಖಾಯಿಷೆಂದು, ಯಾವುದೋ ಬಾಟಲಿಯಲ್ಲಿ ಹೆಸರು ಗೊತ್ತಿರದ ಸುರೆ ಶೇಖರಿಸಿಕೊಂಡ ಹಾಗೆ!
ನಾನು ಬರೆಯುವುದು ಎಷ್ಟರ ಮಟ್ಟಿಗೆ ಕನ್ನಡ? ಇದು ನನ್ನ ಮುಂದಿರುವ ಸಮಸ್ಯೆಯ ಸದ್ಯ. ಇದು ನನ್ನ ಪದ್ಯಜಿಜ್ಞಾಸೆಯೂ ಹೌದು!
ಈಗ ಈ ಮೊದಲು ಹೇಳಿದ ಪದ್ಯಕ್ಕೆ ವಾಪಸಾಗುತ್ತೇನೆ.
ನಿಜಕ್ಕು ಈ ಪದ್ಯದ ಹೊಳಹುಂಟಾಗಿದ್ದು ಇಂಗ್ಲಿಷಿನಲ್ಲಿ. ಈ ಬಗ್ಗೆ ಏನೆತ್ತವೆಂತೆಂಬ ತನಿಖೆ ಬೇಡ.
ತಿಂಗಳ ಹಿಂದೆ ಬ್ರಿಗೇಡು ರೋಡಿನಲ್ಲೊಂದು ಮೀಟಿಂಗು ಮುಗಿಸಿ ಹೊರಬರುವಾಗ, ರಸ್ತೆಬದಿಯಲ್ಲೊಂದು ಫಲಕವೆದುರಾಯಿತು. ಎಂಥದೋ ಮಾದಕಪೇಯವೊಂದರ ವಿದೇಶೀ ಜಾಹಿರಾತು ಅದು. "Getting spacier than an astronaut' ಎಂದೋದುವ ಸಾಲೊಂದು ಅದರಲ್ಲಿತ್ತು. ಹೆಸರಾಂತ ಇಂಗ್ಲಿಷ್ ಹಾಡೊಂದರಲ್ಲಿ ಬರುವ ನುಡಿ ಅದು. ನುಡಿಗಟ್ಟೆಂದರೆ ಹೆಚ್ಚು ಸರಿ. ಸದರಿ ಹಾಡನ್ನು ನಾನು ಬಲು ಸರ್ತಿ ಕೇಳಿದ್ದೇನಾದರೂ, ಅದರ ಲಿರಿಕಿನ ಕಡೆಗೆಂದೂ ಗಮನ ಹರಿಸಿದ್ದಿಲ್ಲ. ಯಾಕೋ ಏನೋ, ಅವೊತ್ತು ಫಲಕದಲ್ಲಿ ನೋಡಿದ ವೇಳೆ ಈ ಸಾಲು ಮನಸ್ಸಿನಲ್ಲುಳಿದುಬಿಟ್ಟಿತು. ಅವೊತ್ತು ಕಾರುದಾರಿಯುದ್ದಕ್ಕು, ಈ ಸ್ಪೇಸಿಯರ್ ಅಂತಂದರೇನು ಅಂತ ತಲೆಕೆಡಿಸಿಕೊಂಡು- ಫೋನಿನಲ್ಲೇ ಗೂಗಲುಗೈದು ಒಂದಷ್ಟು ಅದರರ್ಥ ಕಂಡುಕೊಂಡಿದ್ದೆ. "Vague and dreamy as if under the influence of drugs' ಎಂಬೊಂದು ಅರ್ಥೈಕೆ ಮನಸ್ಸು ನಾಟಿತು. ಬಳಿಕ ವಿಷಯ ಮರೆತೇಹೋಯಿತು.
ನಿನ್ನೆಯಲ್ಲ ಮೊನ್ನೆ, ಎಲ್ಲಿತ್ತೋ ಏನೋ, ಒಂದು ಮಾದರಿ ರಿಫ್ಲೆಕ್ಸಿನ ಹಾಗೆ ಈ ಸಾಲು ಮೆಲುಕಿಗೊದಗಿ ಕಾಡತೊಡಗಿತು.
ಮಾದಕವಸ್ತುವಿನ ಪರಿಣಾಮದಿಂದ ಉಂಟಾಗುವ ಒಂದು ಮನಃಸ್ಥಿತಿ ಅಂತ ಅರ್ಥೈಸಬಹುದಾದ ಇದಕ್ಕೆ ಕನ್ನಡದಲ್ಲೊಂದು ನೇರ ಪರ್ಯಾಯವಿಲ್ಲ ನೋಡಿ ಹೀಗೆ! ತೋಚಿಬರುತ್ತಲೇ ಬಲು ಪೇಚಾಡಿಕೊಂಡೆ! ಹಾಗಂತ ನನಗೆ ಗೊತ್ತಿರುವ ಅಷ್ಟೂ ಇಂಗ್ಲಿಷಿಗೂ ಸಮಸಮಾನ ತದ್ಭವಗಳು ಕನ್ನಡದಲ್ಲೂ ಇರಬೇಕೆನ್ನುವ ದಾವೆ ನನ್ನದಲ್ಲ. ಡೋಪು ಮಾಡುವಾಗ ದಕ್ಕುವ, ಇಂಥದೊಂದು ಅನುಭವವನ್ನು ಕನ್ನಡದಲ್ಲಿ ಹೇಗೆ ಹೇಳುವುದು- ಅನ್ನುವುದಷ್ಟೇ ನನ್ನೆದುರಿನ ಸವಾಲು.
ಇಂಗ್ಲಿಷಿನ ಈ ನುಡಿಗಟ್ಟಿಗೆ- ಬಾಹ್ಯಾಕಾಶದಲ್ಲಿನ ಮನುಷ್ಯಾನುಭವವನ್ನು ಭಾಷೆಯಲ್ಲಿ ಹಿಡಿದಿಡುವ ಆಶಯವಿದೆ. ಇದನ್ನು ಕನ್ನಡದಲ್ಲಿ ಹೇಳಲಿಕ್ಕೆ ನಾನು ಎಷ್ಟು ಕನ್ನಡವನ್ನು ಖರ್ಚು ಮಾಡಬೇಕಾಯಿತು ಗೊತ್ತೆ?
ಖಗೋಳಯಾತ್ರಿಯ ಹಾಗೆ
ಹಗುರಾಗಿಬಿಟ್ಟಿರುವೆ
ಮತ್ತೇರಿದೆಯೇನೋ ಗೊತ್ತಾಗುತ್ತಿಲ್ಲ
ಹೆಜ್ಜೆಯೆತ್ತುವ ಮೊದಲೇ ತೇಲುವುದು ಮೈಯಿ
ರೆಕ್ಕೆಯಂತಲ್ಲ ತೂಗುವುದು ಕೈಯಿ
ಆಹಾ
ಯಾಕೆಂದು ಅರಿವಾಗುತ್ತಿಲ್ಲ
ಅವಳ ಮೋಡಿಗೆ ಸಿಲುಕಿದಾಗಿನಿಂದ ನಾನು ಸ್ಪೇಸಿಯರ್ ಆಗಿಬಿಟ್ಟಿದ್ದೇನೆ- ಅಂತನ್ನುವ ಸಹಜ ಸರಳ ಅನುಭೂತಿಯನ್ನು ಕನ್ನಡದಲ್ಲಿ ಅರುಹಲಿಕ್ಕೆ ಇಷ್ಟೆಲ್ಲ ಪದ್ಯ ಹೇಳುವುದಾಯಿತು!
ನೆಲದ ಸೆಳವು ತೀರಿಹೋಗಿದೆ
ಆಕಾಶ ಕೂಡ ಜಾರಿಹೋಗಿದೆ
ಇರುವುದೇ ಇರದಂತನಿಸಿಬಿಟ್ಟಿದೆ
ಮೈಪಡೆದ ಜನುಮದ
ಮೈ
ಯಿಲ್ಲವಾಗಿದೆ
ಏನೂ ಅನಿಸಿದರಲ್ಲವೆ
ಇನ್ನು ಮನಸು ತಾನೇ
ಎಲ್ಲಿದೆ
ಇದ್ದೇನನ್ನುವ ಭ್ರಾಂತೇನಿದ್ದರೂ
ಅವಳಿರುವಲ್ಲೇ ಅಂತಾಗಿಬಿಟ್ಟಿದೆ
ವಾಸ್ತವದಲ್ಲಿ, ನನಗೆ ಬೇರೇನೋ ಹೇಳುವುದಿತ್ತು. ಅದನ್ನು ನೇರ, ನಿಖರ ಮತ್ತು ಕಡಿಮೆ ಆಡಲಿಕ್ಕಾಗದೆ, ಇಷ್ಟೆಲ್ಲ ಮಾತು ವ್ಯಯಿಸುವುದಾಯಿತು. ಅಷ್ಟರಲ್ಲಿ ಪದ್ಯದ ಜಾಡೇ ಇನ್ನೊಂದಾಗಿಬಿಟ್ಟಿತ್ತು!
ಪದ್ಯ ಕಡೆಕಡೆಗೆ ಶುರು ಮರೆತಂತಿದೆ
ತನಗೆ ತಂತಾನು ಮಾರುಹೋಗಿದೆ
ಅರ್ಥ ಸಾರ್ಥಕ್ಯ ವ್ಯರ್ಥವೆನಿಸಿದೆ ಎಂದು ಕಡೆಗೊಳ್ಳುತ್ತದೆ ಈ ಪದ್ಯ. ಆ ಮಾತು ಬೇರೆ.
ನಿಜಕ್ಕಾದರೆ, ನಾನು ಇವೊತ್ತಿನ ನವೆಂಬರೊಂದರ ಪಡಿಯಲ್ಲಿ ಹೇಳಲಿಚ್ಛಿಸುವ ವಿಷಯವಾದರೋ, ಇದೇನೇ. ಹದಿಮೂರನೇ ಇಸವಿಯಲ್ಲಿನ ಬೆಂಗಳೂರಿನ ಅನುಭವವನ್ನು- ಕನ್ನಡದಲ್ಲಿ ಬರೆಯಲಿಕ್ಕೆ, ಆಡಲಿಕ್ಕೆ, ನನಗೆ ನಿಜಕ್ಕೂ ಕನ್ನಡವೇ ಸಾಲದೆನಿಸುತ್ತದೆ! ಬಹುಶಃ ಇದು ಬರೇ ಬೆಂಗಳೂರಿನ ಮತ್ತು ಕನ್ನಡದ ಕೊರತೆಯಾಗಿರಲಿಕ್ಕಿಲ್ಲ. ದೇಶದ, ಬಹುಶಃ ಇಡೀ ಏಷಿಯಾದ ಅರೆಕೊರೆಯೇ ಇದಂತನಿಸುತ್ತಿದೆ. ಯಾಕೆಂದರೆ ನಾವು ಆಧುನಿಕವೆನ್ನುವುದನ್ನು ಹೊರಗಿನಿಂದ ತಂದು ಹೇರಿಕೊಂಡಿದ್ದೇವೆ. ಹೊಸತು ಅಂತನ್ನುವುದಾದರೂ ನಮಗೆ ವಿಚಾರವಾಗಿ ಬರುತ್ತಿಲ್ಲ; (ಮೂರ್ತ) ವಸ್ತುವಾಗಿ ಬರುತ್ತಿದೆ. ನಾವು ದಿನೇ ದಿನೇ ತಂದೆರೆದುಕೊಳ್ಳುತ್ತಿರುವ ಟೆಕ್ನಾಲಜಿ ಕೂಡ ಹಾಗೆಯೇ. ಅದನ್ನು ನಮ್ಮ ಆಡುಮಾತಿನ್ನೂ ತನ್ನೊಳಗೆ ಇಳಿಬಿಟ್ಟುಕೊಂಡಿಲ್ಲ. ಒಳಗೇ ಉತ್ತುಕೊಂಡು, ಬಿತ್ತುಕೊಂಡು, ತನ್ನ ತಾನೇ ಊಡಿ- ನೈಜ ಫಸಲು ತೆಗೆದಿಲ್ಲ. ಹಾಗಾಗಿಯೇ ಕನ್ನಡ ಮತ್ತು ಅನುಭವಗಳ ನಡುವೆ ದೊಡ್ಡದೊಂದು ಕಂದಕವೇರ್ಪಟ್ಟಿದೆಯಂತ ಸದಾ ನನಗನಿಸುತ್ತದೆ. ಇದು ನಡೆ ಮತ್ತು ನುಡಿಗಳ ನಡುವಿರುವ ನಿಜವಾದ ಅಂತರ. ನನಗೆ- ನಡೆದಂತೆ ನುಡಿಯಲಾಗುವುದಿಲ್ಲ; ನುಡಿಯಂತೆ ನಡೆಯಲಾಗುವುದಿಲ್ಲ. ಒಟ್ಟಿನಲ್ಲಿ ನಡೆಯೇನೋ, ನುಡಿಯೇನೋ ಅನ್ನುವ ಎಡಬಿಡಂಗಿಯೇ ಇದೆ- ನಾನು ಆಗಿಕೊಂಡಿರುವ ಹೊತ್ತು!
ಉದಾಹರಣೆಗೆ- ಎಸ್ಕಲೇಟರನ್ನು ಕನ್ನಡದಲ್ಲಿ ಹೇಗೆ ಹೇಳುವುದು? ಹಾಗೇ ಟ್ರಾವೆಲೇಟರನ್ನುವುದನ್ನು? ಇನ್ನು ಬೌಲಿಂಗ್-ಆಲಿ ಅಂತನ್ನುವ ಇನ್ನೊಂದನ್ನು? ಮತ್ತೆ ಫ್ಲಯೋವರು, ಅಂಡರ್ಪಾಸು, ಕ್ಲೊವರ್ಲೀಫುಗಳನ್ನು?
ನಮ್ಮ ಸುತ್ತಲಿನ ಇವೊತ್ತಿನ ಮೂರ್ತಗಳನ್ನು- ವಸ್ತುವಾಗಿ ಮತ್ತು ವಿಚಾರವಾಗಿ ಹೊರಗಿನಿಂದ ತಂದುಕೊಳ್ಳುತ್ತಿರುವ ನಮಗೆ, ಅವನ್ನು ನುಡಿಯೊಳಗಿಳಿಸಿಕೊಂಡು ನೋಡಲಾಗಿಯೇ ಇಲ್ಲ. ತನ್ಮೂಲಕ ಯೋಚಿಸಲಾಗಿಯೂ ಇಲ್ಲ. ಇವನ್ನು ಹಾಗೆ ಹಾಗೇ ಕನ್ನಡಕ್ಕಿಳಿಸಿಕೊಳ್ಳುವುದು ಅಂದರೆ ಅವನ್ನು ಇದ್ದ ಹಾಗೇ ಕನ್ನಡದಲ್ಲೂ ಬಳಸುವುದು- ಸುಲಭೋಪಾಯವೆಂದು ಹೇಳಬಹುದಾದರೂ, ಪರಿಹಾರ ಅಷ್ಟು ಸರಳವಲ್ಲ.
ಯೋಚಿಸೋಣ; ಆಧುನಿಕತೆಯನ್ನು ಒಪ್ಪಿಕೊಂಡ ಬಗೆಯಲ್ಲಿ ನಾವೇನೋ ತಪ್ಪು ಮಾಡಿದ್ದೇವೆಂದು ನನಗೆ ಇತ್ತಿತ್ತಲಾಗಿ ಬಲು ಗಾಢವಾಗಿ ಅನಿಸಹತ್ತಿದೆ. ಸ್ವಾತಂತ್ರ್ಯಕ್ಕೆ ಮೊದಲು ಹೊಸತುಗೊಳ್ಳುವುದೆಂದರೆ ವಿಲಾಯಿತೀಕರಣವಂತ ಯಾರೂ ಹೇಳದೆಯೆ ಒಪ್ಪಿಕೊಂಡೆವು. ಈ ದೇಶದಲ್ಲಿ ನಡೆದ ಏನೇನೋ ಸುಧಾರಣೆಗಳು ಕೂಡ ಇಂಗ್ಲಿಷಿನೋದಿನಿಂದಲೇ ತಾನೇ ಜರುಗಿದ್ದು? ಅಂದರೆ ನಮ್ಮ ನವನವೀನ ಯೋಚನೆಗಳ ಕುಮ್ಮಕ್ಕುಂಟಾಗಿದ್ದೇ ಇಂಗ್ಲಿಷಿನೋದಿನಿಂದ. ಸಾಹಿತ್ಯದಲ್ಲಿನ ನವೋದಯ, ನವ್ಯ, ನವ್ಯೋತ್ತರಗಳು ಜರುಗಿದ್ದೂ ಹಾಗೆಯೆ. ಸಾಹಿತ್ಯವಿರಲಿ, ಉಳಿದ ಸೃಜನಶೀಲ ಕ್ಷೇತ್ರಗಳಲ್ಲಾದ ಬದಲಾವಣೆಗಳೂನು ಸಹ ಹಾಗೆಯೆ. ಸಂಗೀತ, ನೃತ್ಯ, ಚಿತ್ರ-ಶಿಲ್ಪಕಲೆ, ಆರ್ಕಿಟೆಕ್ಚರು ಇವೆಲ್ಲದರ ಮಗ್ಗುಲು ಹೊರಳಿದ್ದೂ ವಸಾಹತಿನ ನೆರಳಿನಲ್ಲಿಯೆ. ದೂರದ ಯೂರೋಪಿನ ವಿಲಾಯತೀ ಚೋದನೆಯಿಂದ, ಚೋದಕಗಳಿಂದ. ಇನ್ನು ಪ್ರಜಾಸತ್ತೆಯಂತಹ ಪ್ರಜಾಸತ್ತೆ, ಸೆಕ್ಯುಲರಿಕೆಯೆನ್ನುವ ಸೆಕ್ಯುಲರಿಕೆ, ಸಂವಿಧಾನದಂತಹ ಸಂವಿಧಾನ, ಚುನಾವಣೆಯೆನ್ನುವ ಚುನಾವಣೆ ಇವುಗಳನ್ನು ನಾವು ಕಂಡುಕೊಂಡಿದ್ದು ಕೂಡ ಆಚಿನಿಂದಲೆ. ಇರಲಿ, ಕಳೆದ ಇಪ್ಪತ್ತೂ ಚಿಲ್ಲರೆ ವರ್ಷಗಳಿಂದ ತಂದೆರೆದುಕೊಂಡಿರುವ ಉದಾರೀಕರಣವಾದರೂ ಎಂಥದು? ಊರಲಿಕ್ಕಷ್ಟೇ ಇಲ್ಲಿನ ನೆಲ; ಓಲಾಡುವುದಷ್ಟೂ ಅಲ್ಲಿನ ಆಕಾಶ ಅಂತನ್ನುವ ಅನುಕ್ತ ಧೋರಣೆಯೇ ಅದು ತಾನೆ?
ಈಗ ನನ್ನದೊಂದು ವಿಚಾರವನ್ನು ಹೇಳಬಯಸುತ್ತೇನೆ.
ಆಧುನಿಕತೆಯೆನ್ನುವುದು ನಮ್ಮ ನೆಲದಲ್ಲೇ ನಮ್ಮಿಂದಲೇ ನಮ್ಮೊಳಗಿನ ಅರ್ಜುಸರ್ಜುಗಳ ನೇರ, ಒರತೆಗಳನುಸಾರ- ಘಟಿಸಿದ್ದಲ್ಲಿ ಪರಿಸ್ಥಿತಿ ಇನ್ನೊಂದೇ ಇರುತ್ತಿತ್ತೇನೋ!
ವಿಡಂಬನೆಯೆಂದರೆ ನಮ್ಮ ಹಿರೀಕರು ಅಂಥದೊಂದು ಸನ್ನಿವೇಶವನ್ನು ನಮಗೆ ಕಲ್ಪಿಸಲೇ ಇಲ್ಲ. ನಮಗಿಂತ ಮೊದಲೇ ಅವರು ನಮ್ಮಷ್ಟೇ ಅಥವಾ ನಮಗಿಂತ ಹೆಚ್ಚು ವಿಲಾಯತುಗೊಂಡುಬಿಟ್ಟರು. ಇನ್ನು, ಇವೊತ್ತು ನಾನಿರುವ ಊರಂತೂ, ಇಂಗ್ಲಿಷಿನಲ್ಲಿ ಪರಿಕಲ್ಪಿತಗೊಂಡಿದ್ದು; ಕನ್ನಡದ ಸಂಕೋಚಕ್ಕೆ ತರ್ಜುಮೆಗೊಂಡಿದ್ದು.
ಹೀಗಾಗಿಯೇ ಈ ಊರಿನ ಅನುಭವವನ್ನು ಕನ್ನಡದಲ್ಲಿ ಆಡುವುದು, ಹೇಳುವುದು ಕಷ್ಟ. ಇಲ್ಲಿರುವವರ ಮಾತಿನಲ್ಲಿ ಪ್ರತಿ ಮೂರನೇ ಸಾಲು, ನನ್ನನ್ನೂ ಒಳಗೊಂಡಂತೆ ಇಂಗ್ಲಿಷಿನಲ್ಲಿಯೇ ಜರುಗುತ್ತದೆ. ಇಲ್ಲಿನೊಂದು ಅನುಭವವನ್ನು ಕನ್ನಡದಲ್ಲಿ ಆಡಿದರೆ ಕೃತ್ರಿಮವೆನಿಸತೊಡಗುತ್ತದೆ. ಫೌಂಟನಿಗೆ ಕಾರಂಜಿಯೆನ್ನುವುದು ಸೋಗನಿಸುತ್ತದೆ. ಟೈಮನ್ನು ವೇಳೆಯೆಂದರೆ ಅಜೀಬನಿಸುತ್ತದೆ. ಕನ್ನಡವನ್ನಾಡುವುದೇ ಒಮ್ಮೊಮ್ಮೆ ಪುಸ್ತಕದ ಓದನಿಸಿಬಿಡುತ್ತದೆ. ಯಾಕೆ ಹೀಗೆ?
ಯಾಕೆಂದರೆ ನಾನು ಕಸಿಗೊಂಡಿದ್ದೇನೆ! ಆತ್ಮದವರೆಗೂ ವೈರಸು ಹೊಕ್ಕಿದೆಯಾಗಿ, ನನ್ನನ್ನು ನಾನೇ ಅಸ್ತಿತ್ವದ ಒಳನೆಲೆಯಲ್ಲಿ ಶೋಧಿಸುತ್ತಿದ್ದೇನೆ. ಸೆಣಸುತ್ತಿದ್ದೇನೆ. ಇದರ ಹೊಣೆಯನ್ನೂ, ಸಲುವನ್ನೂ ಯಾರು ಹೊರಬೇಕು? ಖುದ್ದು ನಾನೇ? ನನಗಿಂತ ಮುಂಚೆ ಆಗಿ ಪರಿಸ್ಥಿತಿಯನ್ನು ಹೀಗೆ ಮಾಡಿಟ್ಟುಹೋದವರನ್ನೆ? ಇದು ನನ್ನೊಬ್ಬನೆ ಸಂದಿಗ್ಧವೆ? ಅಥವಾ ಇಡೀ ಕನ್ನಡದ್ದೆ? ನಿಜಕ್ಕು ಗೊತ್ತಾಗುತ್ತಿಲ್ಲ.
ಇಡೀ ಕನ್ನಡದ್ದೆಂದು ಅನಿಸುತ್ತಿದೆಯಾದರೂ, ಅದನ್ನು ಜೆನೆರಲುಗೈದು ಹೇಳಲಾಗುವುದಿಲ್ಲ. ಹೇಳುವುದು ಸಲ್ಲ. ಯಾಕೆಂದರೆ, ನನ್ನನ್ನು ಮತ್ತು ನನ್ನೆದುರಿನ ಕಾಳಜಿಗಳನ್ನು ಕನ್ನಡದಲ್ಲಿನ ದೊಡ್ಡ ದೊಡ್ಡ ಮಂದಿ ಈಗಾಗಲೇ ಅಲ್ಲಗಳೆದಿದ್ದಾರೆ. ನಾನು ಮತ್ತು ನನ್ನಂಥವರು ದಿನಾಲೂ ಅನುಭವಿಸುವ ಅನಿವಾರ್ಯವನ್ನು ಭಾರೀ ಭಾರೀ ಆಸನಗಳಲ್ಲಿನ ಪೀಟಸ್ಥ ಮಂದಿ ಹೀಗಳೆದಿದ್ದಾರೆ. ಕಾರು ಮತ್ತು ಕಾರ್ಪೊರೇಟಂತ ನಾವು ಬರೆಯುವುದನ್ನೇ ಪಂಗಡಿಸಿಟ್ಟಿದ್ದಾರೆ. ನಮ್ಮನ್ನು ಕಾರ್ಪೊರೇಟ್ ಸಾಹಿತ್ಯವಂತ ಲೇಬಲಿಸಿದ್ದಾರೆ. ಅವರ ಬಗ್ಗೆ ಪಿಚ್ಚನಿಸುತ್ತಿದೆ. ಅವರು ಕನ್ನಡದೆದುರಿರುವ ಗಂಡಾಂತರವನ್ನು ಮುಂಗಂಡಿಲ್ಲವಂತ ಬೇಜಾರಾಗುತ್ತಿದೆ. ಇದು ನಿಜವಾದ ವಿಷಯ ಮತ್ತು ಕನ್ನಡಸಂದಿಗ್ಧ!
ಇದನ್ನು ಮರೆತು ಕನ್ನಡವೇ ಕಾಯಕಲ್ಪ, ಅದು ಕಲ್ಪವೃಕ್ಷ ಅಂತೆಲ್ಲ ಹೇಳುವುದು ಸೋಗಿನ ಮಾತಾಗುತ್ತದೆ. ಕನ್ನಡದಲ್ಲಿರಲಿ, ಇಡೀ ದೇಶದಲ್ಲಿ ರಾಷ್ಟ್ರೀಯತೆಯೆನ್ನುವುದನ್ನು ನಾವು ಹೊಸತಾಗಿ ಬರೆಯಬೇಕಿದೆಯೆನಿಸುತ್ತದೆ.
ಇಷ್ಟಕ್ಕು,
ಸಂಜೆಯಾಯಿತೆಂದರೆ
ಬಿಯರು-ಚಿಯರುಗಳ
ನಡುವೆ ಮೊಸ
ರನ್ನದ
ಕನ್ನಡದವನಲ್ಲವೆ
ನಾನು!
- ನಾಗರಾಜ ವಸ್ತಾರೆ
vastarey@vastareysmdc.co.in
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.