ಮಹಾಭಾರತದ ತ್ರಿವಿಧ ಸಂಗೀತ!
ರಾಮಾಯಣದಿಂದ ಮಹಾಭಾರತದ ಕಾಲಕ್ಕೆ ಬರುವ ಹೊತ್ತಿಗೆ ಸಂಗೀತದಲ್ಲಿ ಸಾಕಷ್ಟು ಮಹತ್ವದ ಬೆಳವಣಿಗೆಗಳಾಗಿದ್ದವು. ಕೆಲವು ಇತಿಹಾಸಕಾರರಂತೂ ಮಹಾಭಾರತ ಕಾಲದಲ್ಲಿ ಸಂಗೀತ ಬಹುಶಃ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂದು ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಅತ್ಯಂತ ಉತ್ತಮ ಉದಾಹರಣೆ ಎಂದರೆ ಅರ್ಜುನ. ಎಂತೆಂತಹ ಸನ್ನಿವೇಶ ಎದುರಿಸಿದ ಆತ! ಮಹರ್ಷಿ ವೇದವ್ಯಾಸರ ಕೌಶಲ್ಯವೂ ಅಷ್ಟೇ ಅದ್ಭುತ. ಮಹಾಭಾರತದ ಯಾವುದೋ ಒಂದು ಅತೀ ಚಿಕ್ಕ ಘಟನೆಯನ್ನು ತೆಗೆದುಕೊಂಡರೂ, ಅದನ್ನು ಒಂದು ಉತ್ತಮ ಸಿನೆಮಾವನ್ನೋ ಧಾರಾವಾಹಿಯನ್ನೋ ಮಾಡುವಷ್ಟು ಅದರಲ್ಲಿ ರಂಜಕತೆ, ಸಂಬಂಧಗಳ ವಿಶ್ಲೇಷಣೆ , ಭಾವನೆಗಳ ತಿಕ್ಕಾಟ, ಅನೀರಿಕ್ಷಿತ ತಿರುವುಗಳಿಂದ ಅವು ತುಂಬಿವೆ. ಅದನ್ನು ಅವರು ಬರೆದಿರುವುದೂ ಹಾಗೆಯೇ. ಮಹಾಭಾರತವನ್ನು ಓದತೊಡಗಿದರೆ ನಮ್ಮ ಮನಸ್ಸಿನ ಪರದೆಯ ಮೇಲೆ ಯಾವ ಹೈಟೆಕ್ ಸಿನಿಮಾಗೂ ಕಮ್ಮಿಯಿಲ್ಲದಂತೆ ಇಡೀ ಸನ್ನಿವೇಶ ಎಳೆ ಎಳೆಯಾಗಿ ಹಾದು ಹೋಗುತ್ತದೆ. ಇದು ಪ್ರತಿಯೊಬ್ಬ ಮಹಾಭಾರತ ಓದುಗನ ಅನಿಸಿಕೆ. ಅದು ವೇದವ್ಯಾಸರ ಬರವಣಿಗೆಯ ಶಕ್ತಿ.
ಅರ್ಜುನ ಸಂಗೀತ ನೃತ್ಯದಲ್ಲಿ ಪರಿಣಿತನಾದ ಕಥೆಯೂ ಒಂದು ಹೃದಯಂಗಮ ಸನ್ನಿವೇಶ. ಹೆಣ್ಣಿನೊಡನೆ ಸಂಯಮ ಮೀರಿ ವರ್ತಿಸಿದರೆ ಎಂತಹ ಅನಾಹುತವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದದ್ದೇ. ಆದರೆ ಕೆಲವೊಮ್ಮೆ ಸಂಯಮದಿಂದ ವರ್ತಿಸಿದರೂ ಅನಾಹುತ ಆಗುತ್ತದೆ ಎಂಬುದಕ್ಕೆ ಅರ್ಜುನನೇ ಉದಾಹರಣೆ. ಅವನನ್ನು ನೋಡಿ ಮರುಳಾಗಿ ಅವನ ಬಳಿ ಬಂದ ಊರ್ವಶಿಗೆ ಈ ಮೂರು ಲೋಕದ ಗಂಡನಾದ ಅರ್ಜುನ ಏನು ಹೇಳಿದ? ಹೋಗಲಿ, 'ಸದ್ಯ ಯಾಕೋ ನನಗೆ ಅಷ್ಟು ಸ್ವಾಸ್ಥ್ಯವಿಲ್ಲ' ಎಂದೋ ಏನೋ ಒಂದು ಹೇಳಿ ತಪ್ಪಿಸಿಕೊಳ್ಳುವುದು ಬಿಟ್ಟು, 'ನೀನು ನನ್ನ ತಾಯಿ ಇದ್ದಂತೆ' ಎಂದುಬಿಡುವುದೇ! ಅದನ್ನು ಕೇಳಿ ಊರ್ವಶಿಗೆ ಮೈಯೆಲ್ಲ ಉರಿದೂ ಹೋಯಿತು. ತಕ್ಷಣ ಶಾಪ ಕೊಟ್ಟಳು - 'ನೀನು ನಪುಂಸಕನಾಗು'. ಹೀಗೆ ಬ್ರಹನ್ನಳೆಯಾದ ಅರ್ಜುನ ಅಲ್ಲಿ ಚಿತ್ರಸೇನ ಎಂಬ ಗಂಧರ್ವನಿಂದ ಸಂಗೀತ, ನಾಟ್ಯ ಹಾಗೂ ವೀಣಾವಾದನ ಕಲಿತು ಕರಗತ ಮಾಡಿಕೊಂಡು ಉತ್ತರೆಗೆ ಗುರುವಾದ ಕಥೆ ಎಲ್ಲರಿಗೂ ತಿಳಿದದ್ದೇ. ಇದರ ಜೊತೆಜೊತೆಗೆ ಮಹಾಭಾರತದಲ್ಲಿ ಸಂಗೀತದ ಬಗ್ಗೆ ಅನೇಕ ಉಲ್ಲೇಖಗಳಿವೆ. ಸಪ್ತ ಸ್ವರಗಳ ಸುಂದರವಾದ ವರ್ಣನೆ ಇದೆ.
ಎಲ್ಲಕ್ಕಿಂತ ಹೆಚ್ಚಾಗಿ ವೇದವ್ಯಾಸರು ಅಂದಿನ ಇಡೀ ಸಮಾಜದ ಚಿತ್ರಣವನ್ನು ಕೊಡುತ್ತ, ಸಂಗೀತವು ಎಲ್ಲೆಲ್ಲಿ ಯಾವ ಯಾವ ವಿಧವಾಗಿ ಬಳಕೆಯಲ್ಲಿತ್ತು ಎಂಬುದನ್ನೂ ಮನೋಹರವಾಗಿ ಚಿತ್ರಿಸಿದ್ದಾರೆ. ಮಹತ್ವದ ವಿಷಯವೆಂದರೆ , ವೇದವ್ಯಾಸರ ಪ್ರಕಾರ ಮಹಾಭಾರತ ಕಾಲದಲ್ಲಿ ಮೂರು ಪ್ರಕಾರದ ಸಂಗೀತ ಬಳಕೆಯಲ್ಲಿತ್ತು. ಒಂದು ದೇವತೆಗಳ ಗಾಯನ. ಇದನ್ನು ದೇವ ಗಾಂಧರ್ವ ಸಂಗೀತ ಎನ್ನುತ್ತಿದ್ದರು. ದೇವತೆಗಳು, ಋಷಿಗಳು, ಗಂಧರ್ವರು ಇದನ್ನು ಹಾಡುತ್ತಿದ್ದರು. ಎರಡನೆಯದು ಕುಲೀನರ ಸಂಗೀತ. ಇದಕ್ಕೆ 'ನಾನಾ ದೇಶ ಸಂಗೀತ' ಎಂದೇ ಹೆಸರು. ಸೂತ-ಮಾಗಧ-ವಂದಿಗಳೂ, ವೈತಾಲಿಕರೂ ಇದನ್ನು ಹಾಡುವವರು. ವ್ಯಾಸರ ಪ್ರಕಾರ ಇದು ಆ ದೇವತೆಗಳ ಗಂಧರ್ವ ಗಾಯನದ ಶಾಖೆ. ಇದನ್ನೂ ಕೂಡ ಯಾರೆಂದರವರು ಹಾಡಲು, ನುಡಿಸಲು ಸಾಧ್ಯವಿರಲಿಲ್ಲ. ಸಾಂಪ್ರದಾಯಿಕವಾಗಿ ಅತ್ಯಂತ ಸಾಧನೆಯಿಂದ, ಅಪಾರ ಶ್ರದ್ಧೆಯಿಂದ ಗಳಿಸಿಕೊಳ್ಳಬೇಕಾದದ್ದು ಇದು ಎಂದು ಹೇಳಲಾಗಿದೆ. ರಾಜ ಮಹಾರಾಜರು ಇಂಥ ಗಾಯಕರನ್ನು , ಕಲಾವಿದರನ್ನು ತಮ್ಮ ಅಸ್ಥಾನದಲ್ಲಿ ಹೆಮ್ಮೆಯಿಂದ ಗೌರವಿಸಿ ಬೆಳೆಸುತ್ತಿದ್ದರು. ಇದೇ ಈಗಿನ ಶಾಸ್ತ್ರೀಯ ಗಾಯನ. ಇದಲ್ಲದೇ ಇನ್ನೂ ಕೆಲವು ಪ್ರಕಾರಗಳಿದ್ದವು - ಅವೆಂದರೆ ಶಾಸ್ತ್ರೀಯವಲ್ಲದ, ಸಮಾನ್ಯ ಜನಗಳ ಅಥವಾ ಜನಪರವಾದ ಹಾಡುಗಳು.
ಪಟ್ಟಣದ ಹೊರವಲಯದಲ್ಲಿ ಸುಂದರವಾಗಿ ಅಲಂಕರಿಸಿಕೊಂಡು ಸ್ತ್ರೀಯರು ಹೇಗೆ ಗಾಯನ- ನರ್ತನ ಮಾಡುತ್ತ ಸಂತೋಷವನ್ನು ಹಂಚಿಕೊಳ್ಳುತ್ತಿದ್ದರು ಎಂದು ವರ್ಣಿಸುವ ಶ್ಲೋಕಗಳಿವೆ. ಕೃಷ್ಣಪಕ್ಷದ ಚತುರ್ದಶಿಯ ಕಾರ್ಗತ್ತಲಲ್ಲಿ 'ದುಂದುಭಿ' ಎಂಬ ವಾದ್ಯ ನುಡಿಸುತ್ತಾ ಹಾಡುವ 'ಶಾಕಲ' ಎಂಬ ಪ್ರದೇಶದ ಸ್ತ್ರೀಯೊಬ್ಬಳ ವರ್ಣನೆಯಿದೆ.
ಇಷ್ಟೇ ಅಲ್ಲ, ಕುರುಕ್ಷೇತ್ರದ ಆ ಮಹಾ ರಣಮೇಧದಲ್ಲಿ ಲಕ್ಷಾಂತರ ಜನರು ಹೆಣವಾಗಿ ಉರುಳಿ ಬಿದ್ದಾಗ , ಆ ಮೃತ ಸೈನಿಕರ ಬಳಗದವರು ಹೇಗೆ ದುಃಖತಪ್ತರಾಗಿ 'ವಿಲಾಪ ಗಾಯನ' ಮಾಡುತ್ತಿದ್ದರು ಎಂಬುದನ್ನು ಹೇಳಿದೆ. ಅಂದರೆ ಈಗಲೂ ನಮ್ಮ ಕೆಲವು ಪ್ರದೇಶಗಳಲ್ಲಿ ಬಳಕೆಯಲ್ಲಿರುವ 'ಶೋಕ ಗಾಯನ' ಆಗಲೇ ಬಳಕೆಯಲ್ಲಿತ್ತು.
ಸಂಗೀತದ ಬಳಕೆ ಇಷ್ಟಕ್ಕೇ ಮುಗಿದಿಲ್ಲ . ಇದರ ಜೊತೆ ಇರುವ ಇನ್ನೊಂದು ಉಲ್ಲೇಖವೆಂದರೆ - ಮಾದ್ರ ಪ್ರದೇಶದ (ಈಗಿನ ಪಾಕಿಸ್ತಾನ ಹಾಗೂ ಪಂಜಾಬದ ಕೆಲ ಭಾಗಗಳು) ಯುವತಿಯರು ಮತ್ತು ಬರುವ ಪಾನೀಯವನ್ನು ಕುಡಿದು ಅರ್ಥವಿಲ್ಲದೆ ಮೈಮೇಲೆ ಪರಿವೆಯಿಲ್ಲದಂತೆ ಹಾಡಿ ಕುಣಿಯುತ್ತಿದ್ದರಂತೆ - ಇದನ್ನು ಓದಿದಾಗ ಮಾತ್ರ ನಮ್ಮ ಈಗಿನ ಪಬ್ಗಳು ಆವಾಗಲೇ ಬಳಕೆಯಲ್ಲಿದ್ದವೆ ಎಂದು ಅನ್ನಿಸಿದ್ದಂತೂ ನಿಜ.
- ಶ್ರುತಿ ಭಟ್
shrutikbhat@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.