ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಮಾಂಗಲ್ಯ ತಂತು

'ಅಮೆರಿಕ, ರಷ್ಯಾದವರು ಮಂಗಳ ಗ್ರಹಕ್ಕೆ ಹೋಗಿದ್ದಾರೆ. ನಾವೂ ಯಾಕೆ ಒಂದು ಕೈ ನೋಡಿ ಬಿಡಬಾರದು? ಜಗತ್ತಿಗೂ ನಮ್ಮ ದೇಶದ ವಿಜ್ಞಾನ ಕ್ಷೇತ್ರ ಎಷ್ಟು...

Vishwanath S
Updated On : 11 Nov 2013, 1:10 am

ಭಾಗ-1
ಒಂದು ಕನಸು

'ಅಮೆರಿಕ, ರಷ್ಯಾದವರು ಮಂಗಳ ಗ್ರಹಕ್ಕೆ ಹೋಗಿದ್ದಾರೆ. ನಾವೂ ಯಾಕೆ ಒಂದು ಕೈ ನೋಡಿ ಬಿಡಬಾರದು? ಜಗತ್ತಿಗೂ ನಮ್ಮ ದೇಶದ ವಿಜ್ಞಾನ ಕ್ಷೇತ್ರ ಎಷ್ಟು ಮುಂದುವರಿದಿದೆ ಎಂಬ ಸಂದೇಶ ಕೊಟ್ಟಂತಾಗುತ್ತದೆ'
- ಇಂಥ ಒಂದು ಮಹತ್ವಾಂಕ್ಷೆ ಇಸ್ರೋದ ವಿಜ್ಞಾನಿಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯಲು ಆರಂಭಿಸಿದ್ದು 'ಚಂದ್ರಯಾನ-1'ರ ಸಮಯದಲ್ಲಿ.
ಆದರೆ, ಅಂಗಾರಕನತ್ತ ದೃಷ್ಟಿ ಹಾಯಿಸುವುದು ಅಷ್ಟು ಸುಲಭವಾಗಿರಲಿಲ್ಲ. ಹೀಗಾಗಿ, ಅದು ಯೋಜನಾ ಪೂರ್ವವಾಗಿಯೇ ಚರ್ಚೆಯಾಗುತ್ತಾ ಬಂದಿತ್ತು. ಚಂದ್ರಯಾನ-1 ಯಶಸ್ಸು ಕಂಡದ್ದು 2008ರಲ್ಲಿ. ಅದರ ಜತೆಗೆ 2007ರಲ್ಲಿಯೇ ಈ ಬಗ್ಗೆ ಪೂರ್ವಭಾವಿಯಾಗಿ ವಿಜ್ಞಾನಿಗಳ ನಡುವೆಯೇ 'ಇಂಥ ಒಂದು ಕೆಲಸವನ್ನು ಯಾವ ರೀತಿ ಕೈಗೊಳ್ಳಬಹುದು' ಎಂಬುದು ಚರ್ಚೆಯಾಗುತ್ತಲೇ ಇತ್ತು. ಆದರೆ ತಪಸ್ಸಿನ ರೂಪಕ್ಕೆ ಬಂದದ್ದೇ ಕೇವಲ ಒಂದೂಕಾಲು ವರ್ಷಗಳ ಹಿಂದೆ!

ಚೀನಾ ಪ್ರೇರಣೆ
ಸ್ನೇಹದ ಸವಿ ಗುಳಿಗೆಯ ನೆಪದಲ್ಲಿ ಸದಾ ನಮ್ಮ ದೇಶಕ್ಕೆ ಕಹಿ ಗುಳಿಗೆ ಕೊಡುವ ಚೀನಾ 2011ರಲ್ಲಿ ಕೆಂಪು ಗ್ರಹ ಅಧ್ಯಯನಕ್ಕೆ ಮುಂದಾಗಿತ್ತು. ಅದಕ್ಕೆ ಪೂರಕವಾಗಿ ದೊಡ್ಡ ಮಟ್ಟದಲ್ಲಿ ಯೋಜನೆ ಸಿದ್ಧಪಡಿಸಿ, ಅದನ್ನು ಜಾರಿಗೊಳಿಸಿತು. ಕಮ್ಯುನಿಸ್ಟ್ ರಾಷ್ಟ್ರದ ದುರದೃಷ್ಟವೋ, ಅವರ ಯೋಜನೆ ದಯನೀಯವಾಗಿ ವೈಫಲ್ಯ ಕಂಡಿತು! ನಮ್ಮ ವಿಜ್ಞಾನಿಗಳಿಗೆ ಹಿಂದಿನಿಂದಲೇ ಕೊರೆಯುತ್ತಿದ್ದ ಸ್ಫೂರ್ತಿಯೋ 'ನಾವು ಒಂದು ಕೈ ನೋಡಿಯೇ ಬಿಡೋಣ' ಎಂಬ ಅಂಬೋಣವೋ? ಅಂತೂ ಮಂಗಳನತ್ತ ಯಾತ್ರೆ ಮಾಡುವ ಬಗ್ಗೆ ಪೂರ್ವ ನಿರ್ಧಾರಕ್ಕೆ ಬಂದಿದ್ದರು.

ಪೂರ್ವ ಪ್ರಾಥಮಿಕ ವಿಚಾರ
ಯೋಜನೆ ಎಂದರೆ ಸುಮ್ಮನೆಯೇ? ಅದಕ್ಕೆ ಎಲ್ಲ ರೀತಿಯ ಲೆಕ್ಕಾಚಾರ ಹಾಕಬೇಕಾಗುತ್ತದೆ. ಗರಿಷ್ಠ ಮಟ್ಟದ ರಹಸ್ಯ ಕಾಪಾಡಿಕೊಳ್ಳಬೇಕು. ಎಷ್ಟು ಸಮಯದ ಮಿತಿಯಲ್ಲಿ ಗುರಿ ಸಾಧಿಸಬೇಕು ಇತ್ಯಾದಿ ವಿಚಾರಗಳ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ. ಅದಕ್ಕಾಗಿ ಇಸ್ರೋದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ವಿ. ಆದಿಮೂರ್ತಿಯವರ ಅಭಿಪ್ರಾಯ ಕೇಳಲಾಗಿತ್ತು. ಕೇವಲ ಮೂರೇ ತಿಂಗಳಲ್ಲಿ ಉದ್ದೇಶಿತ ಮಂಗಳ ಗ್ರಹದತ್ತ ಪಯಣಕ್ಕೆ ಅಗತ್ಯವಿರುವ ಕಾರ್ಯಸಾಧ್ಯತೆ ವರದಿ ಕೊಟ್ಟರು.

ದುಡ್ಡು ಕೊಡುವ!
'ಹೌದ! ಮಂಗಳ ಯಾನಕ್ಕೆ ನಮ್ದು ಸಪೋರ್ಟ್ ಉಂಟು. ಖರ್ಚಿಗೆ ಮಂಡೆಬಿಸಿ ಬೇಡ' ಹೀಗೆಂದು ಬೆಂಬಲದ ಬಲ ಕೊಟ್ಟದ್ದು ಕೇಂದ್ರ ಸರ್ಕಾರ. ಕಳೆದ ವರ್ಷದ ಜುಲೈನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಪ್ರಸ್ತಾಪಕ್ಕೆ ಒಪ್ಪಿಗೆ ಸಿಕ್ಕಿತ್ತು. ಅಂದ ಹಾಗೆ ಯೋಜನೆಗೆ ಅಧಿಕೃತ ಅಂಗೀಕಾರದ ಮುದ್ರೆ ಬಿದ್ದ ದಿನ 2012ರ ಆ.3. ಅಧಿಕೃತ ಘೋಷಣೆಯಾದದ್ದು 2012ರ ಆ.15ರಂದು ಪ್ರಧಾನಿ ಮನಮೋಹನ್ ಸಿಂಗ್‌ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ. ಇದು ಇಷ್ಟು ಆರಂಭಿಕ ಯಶಸ್ಸು ಕಂಡ 'ಮಂಗಳಯಾನ'ದ ಹಿಂದಿನ ಕಥೆ.

ಭಾಗ - 2
ಮುಂದೇನಾಗುತ್ತದೆ?

ಮಂಗಳಯಾನದ ಹಿಂದಿನ ಕಥೆಯೇನೋ ಕೇಳಿದಿರಿ. ಆದರೆ ಮುಂದಿನ ಕಥೆಯೂ ರೋಮಾಂಚನಕಾರಿ.
ಮಂಗಳಯಾನದ ಹಿಂದೆ ಎಷ್ಟು ಪರಿಶ್ರಮವಿತ್ತೋ, ಮುಂದೆಯೂ ಅಷ್ಟೇ ಪರಿಶ್ರಮವಿರಬೇಕು. ಏಕೆಂದರೆ, ಇದು ಸುದೀರ್ಘ 10 ತಿಂಗಳ ಯಾನ.
ಸದ್ಯ ಮಾರ್ಸ್ ಆರ್ಬಿಟರ್ ಮಿಷನ್ ಭೂಕಕ್ಷೆಯ ನಾಲ್ಕನೇ ಹಂತದಲ್ಲಿದೆ. ನವೆಂಬರ್ 5ಕ್ಕೆ ಹೊರಟಿರುವ ಅದು, ಸ್ವಲ್ಪ ಸ್ವಲ್ಪವೇ ಕಕ್ಷೆಯಲ್ಲಿ ಮೇಲ್ಪಂಕ್ತಿಗೆ ಹೋಗುತ್ತಿದೆ. ಇದು ನವೆಂಬರ್ 6ರಿಂದ ಆರಂಭವಾಗಿದ್ದು, ನ.16ರವರೆಗೂ ಮೇಲ್ಮುಖವಾಗಿ ಚಲಿಸುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಪ್ರತಿ ಸೆಕೆಂಡ್‌ಗೆ 1.5 ಕಿ.ಮೀ. ವೇಗವಿರುತ್ತದೆ.
ಈ ಹಂತಕ್ಕೆ ವೈಜ್ಞಾನಿಕವಾಗಿ ಕಕ್ಷೆಯ ಮೇಲ್ಮುಖ ವ್ಯೂಹರಚನೆ
(ಒಆರ್‌ಎಂ) ಎಂದು ಕರೆಯಲಾಗುತ್ತದೆ.
ಈ ಪ್ರಕಾರ,
ನ.30/ಡಿ.1
ಮಂಗಳಯಾನದಲ್ಲಿ ಅತ್ಯಂತ ವಿಶೇಷವಾದ ದಿನಗಳಿವು. ಮಂಗಳಯಾನದ ಮಿಷನ್ ಭೂಕಕ್ಷೆ ಬಿಟ್ಟು ಹೊರಡುವ ದಿನಗಳಿವು. ಕ್ಷಿಪಣಿ ಪಥ ಬಿಟ್ಟು ಹೊರಡುವ ಮಿಷನ್, ಪ್ರತಿ ಸೆಕೆಂಡ್‌ಗೆ 1.3 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಸಂಕೇತ ಸ್ಥಳಕ್ಕಾಗಿ 700 ಮಿಲಿಯನ್ ಕಿ.ಮೀ. ಪ್ರಯಾಣ ಆರಂಭಿಸುತ್ತದೆ.

ಡಿ.1 ರಿಂದ ಸೆ.23,2014
ನೌಕೆಯು ಕ್ಷಿಪಣಿ ಪಥದಲ್ಲೇ ಸಾಗುತ್ತದೆ. ಬೆಂಗಳೂರಿನಲ್ಲಿರುವ ಸಂಕೇತ ಸ್ವೀಕಾರ ಕೇಂದ್ರ, ಸಂದೇಶಗಳನ್ನು ಸ್ವೀಕರಿಸುತ್ತಲೇ ಇರುತ್ತದೆ. ಈ ಹಂತದಲ್ಲೇ ನೌಕೆಯ ಸ್ಥಿತಿಯೂ ಗೊತ್ತಾಗುತ್ತದೆ. ಕೆಲವೊಂದು ಭಾಗಗಳಿಗೆ ತೊಂದರೆಯಾದರೆ ಸರಿಪಡಿಸುವ ವ್ಯವಸ್ಥೆಯೂ ಇಲ್ಲೇ ಆಗಬೇಕು. ಅಲ್ಲದೆ ಇದನ್ನು ಸರಿಪಡಿಸಲು ಹೆಚ್ಚುವರಿ ಇಂಧನವನ್ನೂ ಉಪಯೋಗಿಸಬೇಕಾಗಿರುವುದರಿಂದ ಹುಶಾರಾಗಿಯೇ ಇರಬೇಕು. ಸೆ.24ರ ಹೊತ್ತಿಗೆ ನೌಕೆ ಮಂಗಳನ ಕಕ್ಷೆ ಪ್ರವೇಶಿಸುವ ಸಾಧ್ಯತೆ ಇದೆ. ಇಲ್ಲಿಗೆ ಪ್ರತಿ ಸೆಕೆಂಡ್‌ಗೆ 1.11 ವೇಗದಲ್ಲಿ ಸೇರುತ್ತದೆ. ಮಂಗಳನಲ್ಲಿ ಇದು ಎಷ್ಟು ದಿನ ಇರುತ್ತೆ ಎಂದು ಇಸ್ರೋ ಹೇಳಿಲ್ಲ. 6 ತಿಂಗಳು ಇರಬಹುದು ಎಂದೇ ಹೇಳಲಾಗಿದೆ.

ಜರ್ಮನಿಯ ರಾಕೆಟ್ ಎಂಜಿನಿಯರ್ ಡಾ.ವೆರ್ನ್ಹರ್ ವಾನ್ ಬ್ರೌನ್ ಅವರನ್ನು ಸ್ಮರಿಸಿಕೊಳ್ಳದಿದ್ದರೆ ಮಂಗಳಗ್ರಹದತ್ತ ಮಾನವನ ಪಯಣದ ಕಥೆ ಅಪೂರ್ಣವಾದೀತು. ಅಲ್ಲಿಗೆ ಹೇಗೆ ಪ್ರಯಾಣಿಸಬಹುದು ಎನ್ನುವ ಕುರಿತು ರೂಪುರೇಷೆ ಹಾಕಿಕೊಟ್ಟವರೇ ಈತ.
ಮಹಾಯುದ್ಧದ ಬಳಿಕ ಅವರು ಅಮೆರಿಕಕ್ಕೆ ವಲಸೆ ಹೋಗಿದ್ದರು. 1952ರಲ್ಲೇ ಮಂಗಳಗ್ರಹಕ್ಕೆ ಮಾನವನನ್ನು ಕಳುಹಿಸುವ ಕನಸನ್ನು ಅವರು ಕಂಡಿದ್ದರು. ಇದಕ್ಕಾಗಿ ಅವರು ಅಂತರ್‌ಗ್ರಹಗಳ ನಡುವೆ ಸಂಚರಿಸುವ ವ್ಯೋಮನೌಕೆಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಹೊಂದಿದ್ದರು. ಈ ನೌಕೆಗಳ ಒಟ್ಟು ತೂಕ ಸಾವಿರಾರು ಟನ್‌ಗಳಷ್ಟಿತ್ತು. ಆ ಕಾಲಕ್ಕೆ ಇಷ್ಟೊಂದು ದೊಡ್ಡ ನೌಕೆಯನ್ನು ಮಂಗಳದತ್ತ ಕಳುಹಿಸುವುದು ಬಿಡಿ, ಭೂಕಕ್ಷೆಗೂ ಕಳುಹಿಸುವ ಯೋಚನೆ ಅಮೆರಿಕಕ್ಕಿರಲಿಲ್ಲ. ಸರ್ಕಾರ ಕೂಡ ಯೋಜನೆ ಕುರಿತು ಆಸಕ್ತಿ ತೋರಲಿಲ್ಲ. ಹಾಗಾಗಿ 1952ರ ಅವಧಿಯಲ್ಲಿ ಮಂಗಳಯಾನ ಕನಸಾಗಿಯೇ ಉಳಿಯಿತು. ಅ.4, 1957ರಂದು ಅಂದಿನ ಸೋವಿಯತ್ ರಷ್ಯಾ ಮೊದಲ ಉಪಗ್ರಹ ಸ್ಪುಟ್ನಿಕ್ ಅನ್ನು ಭೂಕಕ್ಷೆಯಲ್ಲಿ ಕೂರಿಸಿತು. ಇದು ಬಾಹ್ಯಾಕಾಶ ಕ್ಷೇತ್ರದ ದಿಕ್ಕನ್ನೇ ಬದಲಾಯಿಸಿತು. ಅಲ್ಲಿಂದ ಶುರುವಾದ ಅಮೆರಿಕ ಮತ್ತು ರಷ್ಯಾದ ಬಾಹ್ಯಾಕಾಶ ಸ್ಪರ್ಧೆ ಮಂಗಳನಲ್ಲಿಗೆ ಮನುಷ್ಯರನ್ನು ಕಳುಹಿಸುವ ಮಟ್ಟಿಗೆ ಬೆಳೆಯಿತು. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಕೆಲ ವರ್ಷಗಳಲ್ಲಿ ನಾಸಾ ಮಂಗಳನಂಗಳದಲ್ಲಿ ಗಗನಯಾತ್ರಿಗಳನ್ನು ಇಳಿಸಲಿದೆ.

ಮಂಗಳವೇ ಏಕೆ ಕಾಡುತ್ತೆ?

ಮಂಗಳನ ಪರಿಚಯ

Advertisement

Advertisement

ಸಂಖ್ಯಾಶಾಸ್ತ್ರ
ಜ್ಯೋತಿಷ್ಯಶಾಸ್ತ್ರ
ಚಂದ್ರಯಾನ ಮುಂದಕ್ಕೆ
ಬೆಂಗಳೂರಿನ ಪ್ರಮುಖ ಪಾತ್ರ
ಮಂಗಳವೊಂದು, ನೌಕೆ ಎರಡು!
ಮಂಗಳನ ಬಗ್ಗೆ ಬುಕ್ಕು, ಸಿನಿಮಾ, ಟಾಕು...
ಪುಸ್ತಕಗಳು
ಸಿನಿಮಾ
ಯಶಸ್ಸಿನ ನೇತಾರರು
- ಸದಾಶಿವ ಕೆ./ಅಜಿತ್/ಸೋಮಶೇಖರ ಸಿ.ಜೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments