ಅನಂತ ಮಾಯಾಜಾಲ
ಬೋರ್ಹೆಸ್ ವಾಸಿಸುವ ಬೆಲ್‌ಗ್ರಾನೋ ಅವೆನ್ಯೂಗೆ ಒಂದು ದಿನ ಒಬ್ಬ ಅಪರಿಚಿತ ಬರುತ್ತಾನೆ. ಆತನ ಬಳಿ ಒಂದು ವಿಚಿತ್ರ ಗ್ರಂಥವಿದೆ. ಅದು ಭಾರತದ ಅನಕ್ಷರಸ್ಥ ಬುಡಕಟ್ಟು ನಿವಾಸಿಯೊಬ್ಬನಿಂದ ಆತ ಮೂರು ಕಾಸಿಗೆ ಪಡೆದದ್ದು.
ಬೋರ್ಹೆಸ್ ಕುತೂಹಲದಿಂದ ಪುಸ್ತಕ ಕೈಗೆತ್ತಿಕೊಳ್ಳುತ್ತಿದ್ದಂತೆ ಅಪರಿಚಿತ ವಿವರಿಸುತ್ತಾನೆ: ಬಿಡಿಸಿದ ಪುಟ ಎಚ್ಚರಿಕೆಯಿಂದ ನೋಡಿ. ಯಾಕೆಂದರೆ ಆ ಪುಟ ಮತ್ತೆ ಕಾಣಿಸುವುದಿಲ್ಲ. ಇದೊಂದು ಅನಂತ ಸಂಖ್ಯೆಯ ಪುಟಗಳ ಪುಸ್ತಕ. ಇದಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಇಲ್ಲಿ ಒಮ್ಮೆ ಕಂಡದ್ದನ್ನು ಪುನಃ ಕಾಣಲಾರಿರಿ.
ಈ ಪುಸ್ತಕ ಖುಷಿ ನೀಡಬಲ್ಲುದೆಂದು ಬೋರ್ಹೆಸ್ ಅದನ್ನು ಖರೀದಿಸುತ್ತಾನೆ. ಆತನಿಗೆ ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ- ಇಲ್ಲಿ ಒಮ್ಮೆ ಕಂಡದ್ದು ಮತ್ತೆ ಕಾಣದು. ಪುಟ ಮುಚ್ಚಿ ತೆರೆದರೆ ಆ ಪುಟವೇ ಇಲ್ಲ. ಹುಡುಕಿದ್ದು ಸಿಕ್ಕದು. ಒಂದು ಬೇಕೆಂದರೆ ಮತ್ತೊಂದೇನೋ ಸಿಗುತ್ತದೆ. ನೋಡಿದಷ್ಟೂ ಮುಗಿಯುವುದೇ ಇಲ್ಲ. ಇದೊಂದು ಭಯಾನಕ, ಪೈಶಾಚಿಕ ಕೃತಿ. ಇದರಲ್ಲಿ ದಿಗಿಲು ಮೂಡಿಸುವಂಥ ಅನಂತ ಮಾಯಾಜಾಲವೇ ಇದೆ. ಇದು ಮನುಷ್ಯನ ನೆಮ್ಮದಿ ಕೆಡಿಸುತ್ತದೆ. ಪುಸ್ತಕದ ಆದಿ ಅಂತ್ಯಗಳಿಲ್ಲದ ಮಾಯಾಲೋಕ ಮನುಷ್ಯನನ್ನು ವಾಸ್ತವದಿಂದ ದೂರ ಒಯ್ಯುತ್ತದೆ. ಈ ಪುಸ್ತಕದೊಂದಿಗೆ ಯಾರೂ ಬದುಕಲಾರರು.
ಬೋರ್ಹೆಸ್ ಹಗಲುರಾತ್ರಿ ಗ್ರಂಥದಿಂದ ಪಾರಾಗುವುದು ಹೇಗೆ ಎಂದು ಯೋಚಿಸುತ್ತಾನೆ. ಕೊನೆಗೆ ಅದನ್ನು ನಾಶಮಾಡಲು ನಿಶ್ಚಯಿಸುತ್ತಾನೆ. ಬೆಂಕಿಗೆ ಹಾಕೋಣವೆಂದರೆ, ಅದರಿಂದ ಎದ್ದ ಅಪಾರ ಹೊಗೆ ಮನುಕುಲವನ್ನೆಲ್ಲ ಎಲ್ಲಿ ಕವಿದುಬಿಡುತ್ತದೋ ಎಂದು ಭಯವಾಗುತ್ತದೆ. ಕೊನೆಗೆ ಅದನ್ನು ಅರ್ಜೆಂಟೀನಾ ನ್ಯಾಶನಲ್ ಲೈಬ್ರರಿಗೆ ಸಾಗಿಸುತ್ತಾನೆ. ನೆಲಮಾಳಿಗೆಯಲ್ಲಿ ಅಗಾಧವಾಗಿ ಹಬ್ಬಿದ್ದ ಗ್ರಂಥರಾಶಿಯ ನಡುವೆ ಅದನ್ನು ಎಸೆದು, ಎಲ್ಲಿ ಬಿತ್ತು ಎಂಬುದನ್ನೂ ನೋಡದೆ ನಡೆದುಬಿಡುತ್ತಾನೆ.
ಅರ್ಜೆಂಟೀನಾದ ಖ್ಯಾತ ಕತೆಗಾರ ಜಾರ್ಜ್ ಲೂಯಿಸ್ ಬೋರ್ಹೆಸ್‌ನ 'ದಿ ಬುಕ್ ಆಫ್ ಸ್ಯಾಂಡ್' ಕತೆ ಇದು. ಇಂಥ ಗ್ರಂಥವನ್ನು ಎಲ್ಲೋ ನೋಡಿದಂತಿದೆಯಲ್ಲ ಅನ್ನುತ್ತೀರ? ಅದು ನಾವು ನೀವೆಲ್ಲ ನಿತ್ಯ ಉಪಯೋಗಿಸುವ ಇಂಟರ್‌ನೆಟ್ ಇರಬಾರದೇಕೆ? ಆದರೆ ಬೋರ್ಹೆಸ್ ಈ ಕತೆ ಬರೆದದ್ದು 1975ಕ್ಕೂ ಹಿಂದೆ. ಆಗ ಅಂತರ್ಜಾಲ ಇರಲಿಲ್ಲ. ಶ್ರೇಷ್ಠ ಕೃತಿಕಾರರು ತಮ್ಮ ಕಾಲಕ್ಕಿಂತ ತುಂಬ ಮುಂದಿರುತ್ತಾರೆ ಅನ್ನುವುದು ನಿಜವೇ ಇರಬೇಕು. ಆತ ಹೇಳಿರುವ ಗ್ರಂಥಕ್ಕೂ ಅಂತರ್ಜಾಲಕ್ಕೂ ಅಗಾಧವಾದ ಸಾಮ್ಯವಿದೆಯಲ್ಲವೆ?
ಮಾಸ್ಟರ್‌ಪೀಸ್
ಇಟಲಿಯ ಟಿವಿ ಚಾನೆಲ್‌ನಲ್ಲಿ ಹೊಸದೊಂದು ರಿಯಾಲಿಟಿ ಶೋ ಶುರುವಾಗಿದೆ. ಅಲ್ಲಿ ಪ್ರತಿಭಾವಂತ ಹೊಸ ಬರಹಗಾರರನ್ನು ಆಯ್ದು ಕರೆತಂದು ಸ್ಟುಡಿಯೋದಲ್ಲಿ ಕೂರಿಸಿ ಅವರಿಂದ ಸ್ವರಚಿತ ಕೃತಿಗಳ ಭಾಗಗಳನ್ನು ಓದಿಸಲಾಗುತ್ತದೆ. ಯಾರ ಗದ್ಯ ಹೆಚ್ಚು ಗಮನ ಸೆಳೆದು ಆಯ್ಕೆಯಾಯಿತೋ ಅವರ ಹೊಸ ಕೃತಿಯೊಂದನ್ನು ಪ್ರಕಟಿಸಲು ದೊಡ್ಡ ಮೊತ್ತದ ಸಂಭಾವನೆ ನೀಡಲಾಗುತ್ತದೆ. ಶೋದ ಹೆಸರು 'ಮಾಸ್ಟರ್‌ಪೀಸ್'. ಅಲ್ಲಿ ತೆರೆಯ ಮೇಲೆ ಎಲ್ಲರೂ ಕಾಣುವಂತೆ ಬರೆಯುವುದು ಮೊದಲಾದ ಸ್ಕೂಲ್ ಮಕ್ಕಳ ಮಟ್ಟದ ಸ್ಪರ್ಧೆಗಳೂ ಇವೆ. ಈ ಪರಿಕಲ್ಪನೆಯನ್ನಿಟ್ಟುಕೊಂಡು ನಮ್ಮಲ್ಲೂ ಯಾರಾದರೂ ರಿಯಾಲಿಟಿ ಶೋ ಶುರುಮಾಡಿದರೆ ಬಡ ಕನ್ನಡಿಗ ಲೇಖಕನಿಗೆ ಸಹಾಯವಾಗಬಹುದು.
- ಕೇರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.