ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ನೀವು ಕಾನೂನು

Rashmi Kasaragodu
Updated On : 16 Nov 2013, 5:46 am

ಯಾರಿಗೆ ಬೇಕಾದರೂ ಬರೆಯಬಹುದು
ಹೆಸರು, ಊರಿಲ್ಲ
ನನ್ನ ತಾಯಿಯ ತಾಯಿ, ಅಂದರೆ ನನ್ನ ಅಜ್ಜಿ ತನ್ನ ಆಸ್ತಿಯೆಲ್ಲವೂ ತನ್ನ ಕಾಲಾನಂತರ ತನ್ನ ಪುತ್ರ, ಪೌತ್ರರಿಗೆ(ಮೊಮ್ಮಕ್ಕಳು) ಸೇರಬೇಕೆಂದು ವ್ಯವಸ್ಥಾ ಪತ್ರ ಮಾಡಿ, ಆ ಪತ್ರವನ್ನು ರಿಜಿಸ್ಟರ್ ಮಾಡಿಸಿದ್ದಾರೆ. ಅದಕ್ಕೆ ಅವರ ಮಕ್ಕಳಾದ ನನ್ನ ತಾಯಿ ಮತ್ತು ಅವರ ಇಬ್ಬರು ಸಹೋದರಿಯರು ಸಹಿ ಹಾಕಿರುತ್ತಾರೆ. ಅಜ್ಜಿ 1991ರಲ್ಲಿ ಹಾಗೂ ತಾಯಿ 1982ರಲ್ಲಿ ತೀರಿಕೊಂಡಿರುತ್ತಾರೆ. 1993ರಲ್ಲಿ ನಾವಿಬ್ಬರು ಸಹೋದರರು ಅಜ್ಜಿಯ ಆಸ್ತಿಯನ್ನು ಹಂಚಿಕೊಂಡಿದ್ದೇವೆ. ಆದರೆ ಈ ಆಸ್ತಿಯಲ್ಲಿ ಸಹೋದರಿಯರಿಗೆ ಯಾವುದೇ ಪಾಲು ಕೊಟ್ಟಿಲ್ಲ. ಈಗ ನಮ್ಮ ಸಹೋದರಿಯರು ತಮಗೂ ಅಜ್ಜಿಯ ಆಸ್ತಿಯಲ್ಲಿ ಪಾಲು ಕೊಡಬೇಕೆಂದು ದಾವಾ ಹಾಕಿದ್ದಾರೆ. ಏನು ಮಾಡಬೇಕು?
- ಹಿಂದೂ ಉತ್ತರಾಧಿಕಾರ ಕಾಯ್ದೆ 1956, ಕಲಂ 14ರ ಪ್ರಕಾರ ಒಬ್ಬ ಮಹಿಳೆಯ ಆಸ್ತಿಯು ಆಕೆಯ ಸ್ವಂತದ್ದಾಗಿದ್ದು ಅದನ್ನು ಅವರು ಯಾರಿಗೆ ಬೇಕಾದರೂ ಬರೆಯುವ ಪರಮಾಧಿಕಾರವಿದೆ. ಆದ್ದರಿಂದ ಅವರು ತಮ್ಮ ವ್ಯವಸ್ಥಾ ಪತ್ರದಲ್ಲಿ ಯಾರ್ಯಾರಿಗೆ ಬರೆದಿದ್ದಾರೋ ಅವರಿಗೆ ಮಾತ್ರ ಹಕ್ಕು ಬರುತ್ತದೆ.

ಸಹೋದರಿಗೂ ಪಾಲಿದೆ
ಹೆಸರು ಬೇಡ, ಊರು ಬೇಡ
ನನ್ನ ತಂದೆಗೆ ಅವರ ತಂದೆಯವರು, ಅಂದರೆ ನನ್ನ ತಾತನವರು 1956ರಲ್ಲಿ ವಿಲ್ ಮೂಲಕ ಒಂದು ಮನೆ ಬರೆದು ಕೊಟ್ಟಿದ್ದಾರೆ. ನನ್ನ ತಂದೆಯವರು ನನಗೆ ಆ ಮನೆಯನ್ನು ವಿಲ್ ಮೂಲಕ ಕೊಟ್ಟಿದ್ದು, ಆ ಮನೆಯ ಬಾಡಿಗೆ ಹಣವು ನನ್ನ ತಾಯಿಯವರಿಗೆ ಸೇರಬೇಕೆಂದು ಬರೆದಿದ್ದಾರೆ. ನನಗೆ ಒಬ್ಬಳು ಸಹೋದರಿ ಇದ್ದು, ಆಕೆಗೆ ಮನೆಯಲ್ಲಿ ಯಾವ ಪಾಲನ್ನೂ ಕೊಟ್ಟಿಲ್ಲ. ಆದರೆ ಈ ವಿಲ್ ನೋಂದಣಿಯಾಗಿಲ್ಲ. 20 ವರ್ಷಗಳ ನಂತರ ಈಗ ನನ್ನ ಸಹೋದರಿ ಪಾಲು ಕೇಳುತ್ತಿದ್ದಾರೆ. ಸರಿಯೇ?
- ತಂದೆಗೆ ಬಂದ ಆಸ್ತಿ ಪಿತ್ರಾರ್ಜಿತ. ಆದ್ದರಿಂದ ನಿಮ್ಮ ಸಹೋದರಿಗೂ ಈ ಆಸ್ತಿಯಲ್ಲಿ ಹಕ್ಕಿದೆ. ವಿಲ್ ನೋಂದಣಿಯಾಗಿಲ್ಲದೇ ಇರುವುದರಿಂದ ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರ ಕಲಂ 6(5)ರ ವಿವರಣೆಯ ಪ್ರಕಾರ ಅದು ಸಿಂಧುವಾಗುವುದಿಲ್ಲ. ಆದ್ದರಿಂದ ನಿಮ್ಮ ಸಹೋದರಿಗೆ ಪಾಲು ಕೊಡಲೇಬೇಕಾಗುತ್ತದೆ.

ನಿಮಗೂ ಸಮಪಾಲಿದೆ
ಚಂದ್ರಶೇಖರ ಹೆಗಡೆ, ಬಲೇಕಣಿ
ತಂದೆಯವರ ಪಿತ್ರಾರ್ಜಿತ ತೋಟದ ಆದಾಯದಲ್ಲಿ ಇಬ್ಬರು ಗಂಡುಮಕ್ಕಳು ಹಾಗೂ ಒಬ್ಬಳು ಮಗಳ ಮದುವೆ ಮಾಡಿ, ಗಂಡುಮಕ್ಕಳಿಗೆ ಎರಡು ಎಕರೆ ತೋಟವನ್ನು ಸ್ವಯಾರ್ಜಿತವೆಂದು ಹೇಳಿ ಭಾಗ ಮಾಡಿಕೊಟ್ಟಿರುತ್ತಾರೆ. ನಾನು ಕೊನೆಯ ಮಗನಾಗಿದ್ದು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದು, ನನಗೆ ಕೇವಲ 32 ಗುಂಟೆ ಜಮೀನು ಕೊಟ್ಟಿರುತ್ತಾರೆ. ಈಗ ನಾನು ಕೋರ್ಟಿನಲ್ಲಿ ದಾವಾ ಹಾಕಿದರೆ ನನಗೆ ಅನುಕೂಲವಾಗಿ ತೀರ್ಪು ಬರುತ್ತದೆಯೇ?
- ನಿಮ್ಮ ತಂದೆ ಖರೀದಿಸಿದ ಜಮೀನು ಪಿತ್ರಾರ್ಜಿತ ಆಸ್ತಿಯ ಆದಾಯದಿಂದ ಎಂದು ಪರಿಗಣಿಸಿದರೂ ಒಟ್ಟು ಆಸ್ತಿಯಲ್ಲಿ ನಿಮ್ಮ ತಂದೆ ತಾಯಿ (ಇದ್ದರೆ), ಅಕ್ಕ ಹಾಗೂ ಸಹೋದರರಿಗೂ ನಿಮ್ಮಷ್ಟೇ ಸಮಪಾಲಿದೆ. ಅಂದರೆ ನಿಮಗೆ ಒಟ್ಟು ಆಸ್ತಿಯ 1/6 ಭಾಗ ಬರುತ್ತದೆ. ನಿಮಗಿರುವ ಒಟ್ಟು ಆಸ್ತಿಯಲ್ಲಿ ನಿಮಗೆಷ್ಟು ಪಾಲು ಬರಬೇಕೆಂಬುದನ್ನು ನೀವೇ ಲೆಕ್ಕ ಹಾಕಿಕೊಳ್ಳಿ.

- ಹೆಚ್. ಆರ್. ಕಸ್ತೂರಿ ರಂಗನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments