ಚಿತ್ರ: ಲೈಫ್ ಈಸ್ ಬ್ಯೂಟಿಫುಲ್ (1997)
ಭಾಷೆ: ಇಟಲಿಯನ್
ನಿರ್ದೇಶನ: ರಾಬರ್ಟೋ ಬೆನಿಗ್ನಿ
ಅವಧಿ: 116 ನಿಮಿಷ
ತಾರಾಗಣ: ರಾಬರ್ಟೋ ಬೆನಿಗ್ನಿ, ನಿಕೊಲೆಟ್ಟಾ ಬ್ರಾಶ್ಚಿ, ಗಿಯಾರ್ಗಿಯೊ ಕ್ಯಾಂಟರಿನಿ,
ಆತ ಇನ್ನೇನು ಕೆಲವೇ ಕ್ಷಣಗಳಲ್ಲಿ ತನ್ನ ಬೆನ್ನ ಹಿಂದೆ ನಿಂತಿರುವ ಬಂದೂಕಿಗೆ ಬಲಿಯಾಗುತ್ತಾನೆ. ಆದರೆ, ಅವನ ಸಾವು ನಮಗೆ ಮಾತ್ರವಲ್ಲ, ಆತನ ಮುಂದೆ ನಿಂತಿರುವ ಪುಟ್ಟ ಕಂದನಿಗೂ ಗೊತ್ತಾಗಲ್ಲ! ಸಾವು ಆತನ ಎದೆ ಮೇಲೆ ಮಲಗಿತು. ಆತನ ಮಗನ ಮುಖದಲ್ಲಿ ನಗು. ಅಪ್ಪನ ಸಾವು ನೋಡಿ ಮಗ ನಗುತ್ತಾನೆಯೇ? ಪ್ರಶ್ನೆ ಸಹಜ. ಆದರೆ, ಪುಟ್ಟ ಕಂದನ ನಗು ಕಲ್ಪನಾ ಜಗತ್ತಿನ ಸೃಷ್ಟಿಯಾದರೆ, ಅಪ್ಪನ ಸಾವು ವಾಸ್ತವ ಜಗತ್ತಿನ ಕಟು ಸತ್ಯ. ಹೀಗೆ ವಾಸ್ತವದ ಬದುಕು ಮತ್ತು ಭ್ರಮಾಲೋಕದ ಕನಸಿನ ಜೀವನ ಈ ಎರಡನ್ನೂ ತುಂಬಾ ಕಾಮಿಕ್ ಆಗಿಯೇ ನಿರೂಪಿಸುವ ಚಿತ್ರ 'ಲೈಫ್ ಈಸ್ ಬ್ಯೂಟಿಫುಲ್'. ಚಿತ್ರದ ಹೆಸರಿಗೆ ತಕ್ಕಂತೆ ಬದುಕು ಇಲ್ಲಿ ಕೊನೆ ತನಕ ಬಲು ಸುಂದರ. ಆದರೆ, ಅದು ವಾಸ್ತವವಲ್ಲ. ಭ್ರಮೆ!
ರಾಬರ್ಟೋ ಬೆನಿಗ್ನಿ ನಿರ್ದೇಶನದ ಇಟಲಿಯನ್ನ 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರನೋಡದವರು ವಿರಳ. ಈ ಚಿತ್ರದ ಕಥೆಗೆ ಎರಡನೇ ಮಹಾಯುದ್ಧದ ಹಿನ್ನೆಲೆ. ಅಪ್ಪ ಮತ್ತು ಮಗ ಚಿತ್ರದ ಎರಡು ಮುಖ್ಯ ಕೇಂದ್ರಗಳು. ಇಲ್ಲಿ ಅಪ್ಪ, ಮಗನ ಕಥೆ ಎಂದಾಕ್ಷಣ ಇದೇ ದೇಶದ ಮತ್ತೊಂದು ಚಿತ್ರ ನೆನಪಾಗುತ್ತದೆ. ಅದೇ ವಿಕ್ಟೋರಿಯಾ ಡಿಸಿಕಾನ 'ಬೈಸಿಕಲ್ ಥೀವ್ಸ್'. ಈ ಎರಡೂ ಚಿತ್ರಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಡಿಸಿಕಾನ 'ಬೈಸಿಕಲ್ ಥೀವ್ಸ್'ನಲ್ಲಿ ಅಪ್ಪ, ಜೀವನದ ಜೊತೆಗೆ ಸರಸವಾಡುತ್ತಾನೆ. ಪ್ರತಿ ಕ್ಷಣ ಅನ್ನಕ್ಕಾಗಿ ಒದ್ದಾಡುವ ಈತ, ತನಗೆ ಬದುಕಿನ ನೆರಳಾಗಿದ್ದ ಸೈಕಲ್ಲೊಂದನ್ನು ಹುಡುಕುವ ಪ್ರಯತ್ನದಲ್ಲಿ ಚೋಟುದ್ದ ತನ್ನ ಮಗನ ಮುಂದೆ ಅವಮಾನಿತನಾಗುತ್ತಾನೆ.
ಅಪ್ಪನ ಸ್ಥಾನದಲ್ಲಿ ನಿಂತಿರುವಾತ, ಬದುಕು ಕಟ್ಟಿಕೊಳ್ಳುವ ಸತತ ಪ್ರಯತ್ನವನ್ನು ಡಿಸಿಕಾ ಕಟ್ಟಿಕೊಟ್ಟರೆ, ರಾಬರ್ಟೋ ಬೆನಿಗ್ನಿ ಅದೇ ಅಪ್ಪನನ್ನು ಸಾವಿನ ಜೊತೆಗೆ ಗುದ್ದಾಡುವಂತೆ ಮಾಡುತ್ತಾನೆ. ಇಲ್ಲಿ ಅಪ್ಪನಾದವನು ತನ್ನ ಮಗನಿಗೆ ಯುದ್ಧದ ಆತಂಕ, ಅದರ ಕರಿ ನೆರಳು ಸೋಕದಂತೆ ಹಾಗೂ ಅದರ ಪರಿಚಯವಾಗದಂತೆ ಮುಗ್ಧವಾಗಿ ಬೆಳೆಸಬೇಕೆಂಬ ಬಯಕೆಯಿಂದ ಬಫೂನ್ ಆಗುತ್ತಾನೆ. ವಾಸ್ತವವಾಗಿ ಬದುಕು ತುಂಬಾ ಕ್ರೂರ, ನಿರ್ದಯಿ ಅನಿಸಿದರೂ 'ಜೀವನ ತುಂಬಾ ಸುಂದರ. ಅದಕ್ಕೆ ಯಾವುದರ ಆತಂಕವೂ ಇಲ್ಲ ಕೊನೆ ತನಕ ಅದು ಸುಂದರ' ಅಂತ ಹೇಳುವ ಪ್ರಯತ್ನದಲ್ಲಿ ಚಿತ್ರ ನೋಡುಗನ ಕಣ್ಣಲ್ಲಿ ಬಹುದೊಡ್ಡ ಜೀವನ ಪ್ರೇಮಿಯಾದರೆ, ಮಗನ ಕಣ್ಣಲ್ಲಿ ಕಾಮಿಡಿಯನ್ ಆಗುತ್ತಾನೆ. ಡಿಸಿಕಾ ಅತ್ಯಂತ ರಿಯಾಲಿಸ್ಟಿಕ್ ಆಗಿ ಕಥೆ ನಿರೂಪಿಸಿದರೆ, ಬೆನಿಗ್ನಿ ತುಂಬಾ ಕಾಮಿಕ್ ಆಗಿ ತನ್ನ ಕಥೆ ಕಟ್ಟಿಕೊಡುತ್ತಾನೆ.
ಇಲ್ಲಿ ಒಂದೇ ದೇಶದ, ಒಂದೇ ಹಿನ್ನೆಲೆಯ ಎರಡು ವಸ್ತುಗಳನ್ನು ಇಬ್ಬರು ನಿರ್ದೇಶಕರು ವಿಭಿನ್ನ ಕೋನಗಳಲ್ಲಿ ನಿರೂಪಿಸಿದ್ದಾರೆ. ಇರಾನಿನ ಮಜೀದಿಯ 'ಫಾದರ್' ಚಿತ್ರದಲ್ಲೂ ಮಲತಂದೆಯನ್ನು ತಂದೆಯಾಗಿ ಒಪ್ಪಿಕೊಳ್ಳದ ಮಗ ಹಾಗೂ ನೀನು ನನ್ನ ಮಗ ಎಂದು ಪ್ರೀತಿ ತೋರಿಸುವ ಮಲತಂದೆ ಮೂಲಕ ಅಪ್ಪ, ಮಗನ ಕಥೆ ಹೇಳಿದ್ದಾರೆ. ಬೇರೆ ಬೇರೆ ಭಾಷೆಯಲ್ಲಿ ಅಪ್ಪ, ಮಕ್ಕಳ ಸಿನಿಮಾಗಳು ಪ್ರೇಕ್ಷಕನನ್ನು ಭಾವುಕತೆಯ ದಡದಲ್ಲಿ ನಿಲ್ಲಿಸುವ ಮಟ್ಟಿಗೆ ಸನಿಹವಾಗಿವೆ. ಮಗನ ನಿರೂಪಣೆಯಲ್ಲಿ 'ಇದು ನನ್ನ ಕಥೆ' ಎನ್ನುವ ಹಿನ್ನೆಲೆಯ ಧ್ವನಿಯೊಂದಿಗೆ ಮುಕ್ತಾಯವಾಗುವ 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರದಲ್ಲಿ ಅಪ್ಪ ಗಿಡೋ. ಯಹೂದಿ. ವೃತ್ತಿಯಲ್ಲಿ ವೇಟರ್. ಅಮ್ಮ ದೋರಾ. ಶ್ರೀಮಂತ ಮನೆತನದ ಸುಂದರಿ. ಈ ಇಬ್ಬರ ಪ್ರೇಮ ಪಯಣಕ್ಕೆ ಸಾಕ್ಷಿ ಮುದ್ದಾದ ಮಗು ಜೋಶ್ವಾ. ಆರಂಭದಲ್ಲಿ ಇವರ ನಡುವಿನ ಕೌಟುಂಬಿಕ ಕಥೆ ಅಂತ ಅನಿಸಿದರೂ ಸುಂದರ ಬದುಕು ಮತ್ತು ಅದರ ಹಿಂದಿನ ಕ್ರೂರತೆಯನ್ನು ತೆರೆದಿಡುತ್ತದೆ. ಚಿತ್ರದ ಬಹು ಮುಖ್ಯ ಶಕ್ತಿ ಇದೇ.
ಪ್ರತಿ ಕ್ಷಣವೂ ಜೀವನೋತ್ಸಾಹದಿಂದ ಇರುವ ಗಿಡೋನ ವರ್ತನೆಗಳು, ಅವನ ಚೇಷ್ಟೆಗಳತ್ತ ಆಕರ್ಷಿತಳಾಗುವ ದೋರಾ, ಆತನ ಪ್ರೇಮಕ್ಕೊಳಗಾಗುತ್ತಾಳೆ. ಮುಂದಿನ ಕಥೆ ಗೊತ್ತಿರುವುದೇ. ಸಾಮಾನ್ಯವಾಗಿ ಯುದ್ಧಾಧರಿತ ಚಿತ್ರಗಳು ಅಂದಾಕ್ಷಣ ಅದರ ಭೀಕರತೆಯನ್ನೇ ಹೆಚ್ಚು ತೋರಿಸಲಾಗುತ್ತದೆ. ಆದರೆ, 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರ ವಾರ್ ಹಿನ್ನೆಲೆಯ ಕಥೆಯನ್ನು ಒಳಗೊಂಡಿದ್ದರೂ ಅದರ ಕ್ರೌರ್ಯ ನಮಗೆ ತಾಕದಂತೆ ನಿರ್ದೇಶಕ ಜಾಣ್ಮೆ ವಹಿಸುತ್ತಾನೆ. ಅಪ್ಪ ಎನಿಸಿಕೊಂಡವನ ಕಲ್ಪನೆಯಲ್ಲಿ ನಿರ್ಮಾಣವಾಗುವ ಪ್ರೀತಿಯ ಜಗತ್ತು ಅಂತ ಆ ಕ್ಷಣಕ್ಕೆ ಅನಿಸಿದರೂ, ಅಂಥ ಜಗತ್ತನ್ನು ತನ್ನ ಮನಗ ಮುಂದೆ ನಿರ್ಮಿಸುವ ದಾರಿ ಹೊರತಾಗಿ ಬೇರೆಯೊಂದು ಮಾರ್ಗವಿಲ್ಲ. ನಾಜಿಗಳ ಕ್ಯಾಂಪ್ನಲ್ಲಿ ಬಂಧಿಸಲ್ಪಟ್ಟಾಗಲೇ 'ಎಲ್ಲರೂ ಗೇಮ್ ಆಡಲು ಇಲ್ಲಿ ಸೇರಿಕೊಂಡಿದ್ದೇವೆ. ಇದರಲ್ಲಿ ಗೆದ್ದರೆ ಮೊದಲ ಬಹುಮಾನ ನಿನ್ನಿಷ್ಟದ ಯುದ್ಧದ ಟ್ಯಾಂಕರ್' ಎಂದು ಅಪ್ಪ ಮಗನಿಗೆ ಹೇಳುವಾಗ, ಅದಕ್ಕೂ ಮೊದಲು 'ಎಲ್ಲರು ಒಂದು ಕಡೆ ವಾಯುವಿಹಾರಕ್ಕೆ ಹೊರಟಿದ್ದೇವೆ' ಎಂದು ನಾಜಿ ಸೈನಿಕರ ನಡುವೆ ಕೂತು ಮಗನಿಗೆ ಸುಳ್ಳು ಹೇಳುವ... ಹೀಗೆ ಪ್ರತಿ ಹೆಜ್ಜೆಗೂ ಪುಟ್ಟ ಬಾಲಕನ ಮುಂದೆ ಸುಂದರ ಬದುಕಿನ ಜಗತ್ತನ್ನು ಗಿಡೋ ಕಟ್ಟಿಕೊಡುವ ನಿಟ್ಟಿನಲ್ಲಿ ವಾಸ್ತವದ ಕ್ರೌರ್ಯವನ್ನು ಮರೆ ಮಾಚುತ್ತಾನೆ. ಒಂದೆಡೆ ಬದುಕನ್ನು ಕೊಲ್ಲುವ ಸೈನಿಕರು ಯಮನ ಪುತ್ರರಂತೆ ಹಿಂಬಾಲಿಸುತ್ತಿದ್ದರೂ ಜೀವನೋತ್ಸಾಹಿಯಂತೆ ಕಾಣುವ ಅಪ್ಪ, ವಾಸ್ತವ ಮತ್ತು ಭ್ರಮೆಯ ನಡುವೆ ನಿಂತ ಪ್ರತಿಮೆ. ಹೀಗಾಗಿ ಬದುಕು ನೀವಂದುಕೊಂಡಷ್ಟು ಸುಲಭವಲ್ಲ ಎನ್ನುತ್ತದೆ ಈ ಚಿತ್ರ. ಆದರೂ ಬದುಕು ಸುಂದರ ಎನ್ನುತ್ತಾನೆ ಅಪ್ಪ.
ಅತ್ಯುತ್ತಮ ನಟ, ಸಂಗೀತ, ವಿದೇಶಿ ಸಿನಿಮಾ- ಹೀಗೆ ಮೂರು ಆಸ್ಕರ್ ಕಿರೀಟಗಳನ್ನು ಹಾಗೂ 54ನೇ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಈ ಚಿತ್ರದ ನಿರ್ದೇಶಕ ರಾಬರ್ಟೋ, ಇಟಲಿಯ ಗಾರೆಯವನ ಮಗ. 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾನೆ. 1990ರ ಬರ್ಲಿನ್ ಚಿತ್ರೋತ್ಸವದ ತೀರ್ಪುಗಾರನಾಗಿದ್ದ. ಈತನನ್ನು ಬಿಟ್ಟರೆ ಇಟಾಲಿಯನ್ ಚಲನಚಿತ್ರ ಇತಿಹಾಸದಲ್ಲಿ ನಟನೆ, ನಿರ್ದೇಶನದೊಂದಿಗೆ ಆಸ್ಕರ್ ಪಡೆದ ಮತ್ತೊಬ್ಬ ನಟ ಲಾರೆನ್ಸ್ ಆಲಿವರ್ ಮಾತ್ರ. ಹಾಸ್ಯಕ್ಕೆ ಹೆಚ್ಚು ಮಹತ್ವ ಕೊಡುವ ಈತ, ತನ್ನ ಚಿತ್ರಗಳಲ್ಲಿ ಎಂಥದ್ದೇ ಗಂಭೀರ ಕಥೆ ಇದ್ದರೂ ಅಲ್ಲೊಂದು ಕಾಮಿಕ್ ಟ್ರ್ಯಾಕ್ ಸೃಷ್ಟಿಸುವುದು ಈತನ ನಿರ್ದೇಶನದ ಸ್ಟೈಲ್. 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರವೂ ಅಂಥ ಸ್ಟೈಲ್ನಲ್ಲೇ ಮೂಡಿಬಂದಿದೆ.
- ಆರ್. ಕೇಶವಮೂರ್ತಿ
keshavarkm1@gmail.com