ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಭರತ ಧಾರೆ

ನಮ್ಮ ಇತಿಹಾಸ, ಪುರಾಣಗಳಲ್ಲಿ 'ಭರತ' ಎಂಬ ಹೆಸರಿನಿಂದ ಪ್ರಸಿದ್ಧರಾದವರು ಸಾಕಷ್ಟು ವ್ಯಕ್ತಿಗಳಾಗಿ ಹೋಗಿದ್ದಾರೆ. ಬಹಳ ಹಳಬನೆಂದರೆ ರಿಷಭ ಹಾಗೂ ಜಯಂತಿಯ ...

Rashmi Kasaragodu
Updated On : 17 Nov 2013, 2:04 am

ನಮ್ಮ ಇತಿಹಾಸ, ಪುರಾಣಗಳಲ್ಲಿ 'ಭರತ' ಎಂಬ ಹೆಸರಿನಿಂದ ಪ್ರಸಿದ್ಧರಾದವರು ಸಾಕಷ್ಟು ವ್ಯಕ್ತಿಗಳಾಗಿ ಹೋಗಿದ್ದಾರೆ. ಬಹಳ ಹಳಬನೆಂದರೆ ರಿಷಭ ಹಾಗೂ ಜಯಂತಿಯ ಮಗನಾದ ರಾಜ 'ಭರತ'. ಇನ್ನೊಬ್ಬ ಭರತ ರಾಮಾಯಣದ ಮಹತ್ವದ ಪಾತ್ರಧಾರಿ - ರಾಮನ ತಮ್ಮ ಭರತ; ಶಕುಂತಲೆ-ದುಷ್ಯಂತರ ಮಗ, ಮಹಾಭಾರತದ ಮೂಲ ಪುರುಷ. ನಾವು  ಭಾರತ',  'ಭರತವರ್ಷ' ಎಂದು ಗುರುತಿಸಿಕೊಳ್ಳಲು ಕಾರಣನಾದ ಭರತ ಇನ್ನೊಬ್ಬ.
ಇವರೆಲ್ಲರನ್ನು ಬಿಟ್ಟು ಸುಮಾರು 1200 ವರ್ಷಗಳ ಕೆಳಗೆ 'ನಾಟ್ಯಶಾಸ್ತ್ರ' ಎಂಬ ಅತ್ಯಂತ ಮಹತ್ವದ ಗ್ರಂಥ ರಚಿಸಿ, ಕಲಾಪ್ರಕಾರ ವಿಶ್ಲೇಷಿಸಿದ ಮೂಲಪುರುಷ ಎಂದು ಕಲಾವಿದರಿಂದ ಪೂಜಿಸಲ್ಪಡುವ ಮುನಿ 'ಭರತ' ಸಂಗೀತ ನೃತ್ಯಕ್ಕೆ ಅಪೂರ್ವವಾದ ಕೊಡುಗೆ ನೀಡಿದವನು. ಈ ಗ್ರಂಥ ಓದಿ ಅದರ ಆಳ ಅರಿತರೆ, ಭಾರತೀಯರು ಎಂಥ ಮಹಾನ್ ಕಲಾಪ್ರವೀಣರು, ವೈಚಾರಿಕರು ಎಂಬುದನ್ನು ತಿಳಿಸಿಕೊಡುತ್ತದೆ. ಅಷ್ಟು ಪೂರ್ವದಲ್ಲೇ ಭಾರತೀಯ ಕಲಾಪ್ರಕಾರಗಳಲ್ಲಿ ಎಂತಹ ಮಹತ್ವದ ಚಿಂತನೆ ನಡೆದಿತ್ತು ಎಂದು ಅಚ್ಚರಿಯಾಗುತ್ತದೆ. ಭಾರತೀಯ ಸಂಗೀತದ ಇತಿಹಾಸದಲ್ಲೇ ಬಹುಶಃ ಇದು ಪ್ರಥಮ ಹಾಗೂ ಅತ್ಯಂತ ಮಹತ್ವಪೂರ್ಣ. ಸಂಗೀತದ ಬೃಹತ್ ಗ್ರಂಥ.
6000 ಶ್ಲೋಕಗಳಿರುವ ಈ ಗ್ರಂಥ ಮುಖ್ಯವಾಗಿ ನಾಟಕ, ನೃತ್ಯ, ಅಭಿನಯಗಳ ಕುರಿತದ್ದಾದರೂ ಕೊನೇಯ ಆರು ಅಧ್ಯಾಯಗಳಲ್ಲಿ ಭರತಮುನಿ ಸಂಗೀತದ ಬಗ್ಗೆ ಅನೇಕ ವಿಷಯ ಉಲ್ಲೇಖಿಸಿದ್ದಾನೆ. ಗ್ರಾಮ ಪದ್ಧತಿ, ಶ್ರುತಿ, ಸ್ವರ, ವಾದಿ, ಸಂವಾದಿ, ರಾಗ, ರಸ ಹೀಗೆ ಸಂಗೀತಗಾರರಿಗೆ ಅಗತ್ಯದ ಎಷ್ಟೋ ವಿಷಯ ಬಹಳ ಸುಂದರವಾಗಿ ಉಲ್ಲೇಖಿಸಿದ್ದಾನೆ.
ಸಂಗೀತ ಎಂದರೆ ನೃತ್ಯ-ಗೀತ-ವಾದ್ಯ ಈ ಮೂರೂ ವಿಷಯಗಳ ಸಮ್ಮಿಲನ. ಈ ಮೂರಕ್ಕಿರುವ ಅವಿನಾಭಾವ ಸಂಬಂಧ, ಅವುಗಳ ಆಂತರಿಕ ಆಶ್ರಯ ಭರತನ ಗ್ರಂಥದಲ್ಲಿ ಸುಂದರವಾಗಿ ವ್ಯಕ್ತವಾಗಿದೆ.
ಆ ಕಾಲದಲ್ಲಿ ಇದ್ದದ್ದು  'ನಿಬದ್ಧ ಗಾಯನ'. ಅಂದರೆ ಹೆಚ್ಚು ಕಡಿಮೆ ಈಗಿನ ಧ್ರುಪದ ಶೈಲಿ ಹೋಲುವ, ಕರ್ನಾಟಕೀ ಸಂಗೀತಕ್ಕೆ ಹತ್ತಿರವಾದ ಶೈಲಿಯಲ್ಲಿ ಸಂಗೀತ ಪ್ರಸ್ತುತ ಪಡಿಸಲಾಗುತ್ತಿತ್ತು. ತಂಬೂರಿ, ವೀಣೆ, ಪಖಾವಜ್, ಮೃದಂಗ, ಬೀನ್ - ಎಲ್ಲ ವಾದ್ಯಗಳು ಆಗಲೇ ಬೆಳವಣಿಗೆ ಹೊಂದಿದ್ದವು.  ಜಯದೇವನ ಪ್ರಸಿದ್ಧವಾದ ಗೀತಗೋವಿಂದ ಗ್ರಂಥವಂತೂ ಇಡೀ ಆ ಗ್ರಂಥ ಹಾಡಲು ಸಾಧ್ಯವಾಗುವಂತೆ ಸ್ವರಪ್ರಸ್ತಾರ ಸಮೇತವಾಗಿ ಬರೆಯಲಾಗಿದೆ. ಈಗಿನಂತೆ ಸಂಗೀತ ಕಾರ್ಯಕ್ರಮ, ಸಮಾರೋಹ, ಸ್ಪರ್ಧೆಗಳು ಎಲ್ಲವೂ ನಡೆಯುತ್ತಿದ್ದವು. ಹಿಂದುಸ್ತಾನೀ - ಕರ್ನಾಟಕೀ ಎಂಬ ವಿಭಜನೆ ಇರದ 'ಭಾರತೀಯ ಸಂಗೀತ' ಅದಾಗಿತ್ತು.
ಬದಲಾವಣೆ ನಿರಂತರ. ಮೌರ್ಯರು ಆಳಿದರು, ಗುಪ್ತರು ರಾಜರಾದರು, ಕನಿಷ್ಕರು ಬಂದರು, ಜೈನ ಮತ ಬೌದ್ಧ ಮತಗಳು ಬಂದವು, ಯುದ್ಧಗಳಾದವು, ಸಾಮಾಜಿಕ ಬದಲಾವಣೆಗಳಾದವು - ಏನಾದರೂ 'ಭಾರತೀಯ ಸಂಗೀತ' ಮಾತ್ರ ತನ್ನ ಆಳ, ಸೌಂದರ್ಯ ಕಾಪಾಡಿಕೊಂಡು ಬೆಳೆಯುತ್ತಲೇ ಬಂತು. ಬ್ರಾಹ್ಮಣ - ಕ್ಷತ್ರಿಯ - ವೈಶ್ಯ - ಶೂದ್ರ ಎಂಬೀ ವರ್ಣಾಶ್ರಮ ಧರ್ಮ ಬಿಗಿಯಾಗಿದ್ದಾಗಿತ್ತು. ನಿಜವಾದ ಬ್ರಾಹ್ಮಣನ - ಅಂದರೆ ಭಗವಂತನ ಅನುಸಂಧಾನದಲ್ಲಿ ಇರುವವನ ಸ್ವತ್ತಾಗಿ ಕೇವಲ ಆರಾಧನೆಗೆ ಬಳಸಲ್ಪಡುತಿತ್ತು. ಹೀಗಿದ್ದ ಸಂಗೀತ ಕಲೆ, ವರ್ಣಾಶ್ರಮ ಸಡಿಲವಾದಂತೆ ನಿಧಾನವಾಗಿ ಸಮಾಜದ ಎಲ್ಲ ಸ್ತರಗಳ ಜನರನ್ನೂ ತಲುಪತೊಡಗಿತು. ಈ ಗೊಂದಲದಲ್ಲಿ ಸಂಗೀತ ಕೇವಲ ಭಾವನೆ ಉದ್ದೀಪಿಸುವ ವಿಧಾನ, ವೇಶ್ಯೆಯರ - ಗಣಿಕೆಯರ ಸ್ವತ್ತು ಎಂಬ ಸ್ಥಿತಿಯೂ ಬಂದೊಗಿದ್ದು ನಿಜವೇ.
ಕೇವಲ ಮನಂಜನೆ, ವಿನೋದ ಎಂದು ಕೀಳಾಗಿ ಬಳಸಲ್ಪಟ್ಟಿದ್ದೂ ನಿಜವೇ. ಆದರೂ ಸಂಗೀತದ ಮಹತ್ವ ಕಡಿಮೆಯಾಗಲಿಲ್ಲ. ಬೆಳವಣಿಗೆ ನಿಲ್ಲಲಿಲ್ಲ. ಕಾಲಕಾಲಕ್ಕೆ ಸಂಗೀತ ಪ್ರೀಯ ರಾಜರು, ಮಹಾಕವಿಗಳು, ಪಂಡಿತರು ಅದರ ಮಹತ್ವ ಹಿಡಿದೆತ್ತುತ್ತಲೇ ಬಂದಿದ್ದಾರೆ.
ಭರತನ ನಾತ್ಯಶಾಸ್ತ್ರದಿಂದ ಮೊದಲಾಗಿ , ದತ್ತಿಲ ಮುನಿಯ 'ದತ್ತಿಲಂ' ಗ್ರಂಥ, ಮತಂಗ ಮುನಿಯ 'ಬೃಹದ್ದೇಶೀ', ನಾರದ ಎಂಬ ಮುನಿಯ 'ನಾರದೀಯ ಶಿಕ್ಷಾ', ಇನ್ನೋರ್ವ ನಾರದ ಎಂಬ ಮುನಿಯ ಸಂಗೀತ 'ಮಕರಂದ', ಜಯದೇವನ ಪ್ರೇಮರಸ ಭರಿತ 'ಗೀತಗೋವಿಂದ' ಹಾಗೂ ಶ್ರಾಂಗದೇವನ 'ಸಂಗೀತ ರತ್ನಾಕರ'  ಗ್ರಂಥದವರೆಗೆ ಇವೆಲ್ಲವನ್ನು ಅವಲೋಕಿಸಿದರೆ ನಮ್ಮ ಪೂರ್ವಜರು ಸಂಗೀತಕ್ಕೆ ಕೊಟ್ಟ ಮಹತ್ವ, ಅದರ ವಿಶ್ಲೇಷಣೆ, ಅವರು ಮಾಡಿದ ವಿಮರ್ಶೆ ನಮ್ಮ 'ಭಾರತೀಯ ಸಂಗೀತ'ದ ಅಪೂರ್ವ ಆಳ, ವಿಸ್ತಾರ ಹಾಗೂ ಎತ್ತರದ ಪರಿಚಯವಾಗುತ್ತದೆ.

- ಶ್ರುತಿ ಭಟ್
shrutikbhat@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments