ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಮೋದಿ ಮುಸ್ಲಿಂ ವಿರೋಧಿಯೇ?

ಇದು ಅತ್ಯಂತ ಹೆಚ್ಚಾಗಿ ಕೇಳಿಬರುವ ಒಂದು ಆಪಾದನೆ. ಗಲಭೆಗಳ ಆರೋಪಿಗಳ ಬಗ್ಗೆ ನ್ಯಾಯಯುತವಾದ ವಿಚಾರಣೆ ನಡೆಯದಂತೆ ಮೋದಿ ಸರ್ಕಾರ ತಡೆಯೊಡ್ಡುತ್ತಿದೆ ಎಂಬ ...

Rashmi Kasaragodu
Updated On : 16 Nov 2013, 5:29 am

'ಮೋದಿ- ಯಾರೂ ತುಳಿಯದ ಹಾದಿ' ಕೃತಿ ಮೂಲಕ ನರೇಂದ್ರ ಮೋದಿಯವರನ್ನು ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿಸಿದ ಖ್ಯಾತ ಅಂಕಣಕಾರ ಪ್ರತಾಪ್ ಸಿಂಹ ಈಗ ಗುಜರಾತಿನ ಸಿಎಂ ಬಗ್ಗೆ ಮತ್ತೊಂದು ಕೃತಿ ಹೊರತಂದಿದ್ದಾರೆ. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಹೊರತಂದ 'ಮೋದಿ ಮುಸ್ಲಿಂ ವಿರೋಧಿಯೇ?' ಈಗತಾನೆ ಮಾರುಕಟ್ಟೆಗೆ ಬಂದಿದೆ. ಕೃತಿಯ ಆಯ್ದ ತುಣುಕುಗಳು ಇಲ್ಲಿ. ಓದಿ... ಮತ್ತಷ್ಟು ಮೋದಿ...

ಇದು ಅತ್ಯಂತ ಹೆಚ್ಚಾಗಿ ಕೇಳಿಬರುವ ಒಂದು ಆಪಾದನೆ. ಗಲಭೆಗಳ ಆರೋಪಿಗಳ ಬಗ್ಗೆ ನ್ಯಾಯಯುತವಾದ ವಿಚಾರಣೆ ನಡೆಯದಂತೆ ಮೋದಿ ಸರ್ಕಾರ ತಡೆಯೊಡ್ಡುತ್ತಿದೆ ಎಂಬ ಆಪಾದನೆ. ತೀಸ್ತಾ ಸೆತಲ್ವಾಡ್ ಈ ವಿಷಯವನ್ನು ಸುಪ್ರೀಂ ಕೋರ್ಟಿನವರೆಗೂ ಕೊಂಡೊಯ್ದರು. ಅದರಿಂದಲೇ ಸರ್ವೋಚ್ಛ ನ್ಯಾಯಾಲಯ ಇದನ್ನೆಲ್ಲ ತನಿಖೆ ಮಾಡುವುದಕ್ಕಾಗಿ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಮ್ (ಎಸ್‌ಐಟಿ) ಅನ್ನು ರಚಿಸಿತು. ಈಗಲೂ ಗುಜರಾತ್ ಸರ್ಕಾರ ಗಲಭೆಯ ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂಬ ಅಭಿಪ್ರಾಯವೇ ಜನರಲ್ಲಿ ಉಳಿದುಬಿಟ್ಟಿದೆ.
ಈ ಬಗ್ಗೆ ಝಫರ್ ಸರೇಶ್‌ವಾಲಾ ಏನು ಹೇಳುತ್ತಾರೆ ನೋಡಿ...
'ನಾನು ಈ ಎಲ್ಲಾ ಪ್ರಕರಣಗಳನ್ನೂ ಹತ್ತಿರದಿಂದ ಗಮನಿಸುತ್ತಿದ್ದೇನೆ. ನಾವು ನಾರ್ವೆಯೋ, ಸ್ಕಾಟ್ಲೆಂಡ್‌ನವರೋ ಅಲ್ಲ. ನಾವು ಒಳಗಿನವರಾಗಿ ಇಲ್ಲಿನ ಮುಸ್ಲಿಮರ ಪರಿಸ್ಥಿತಿ ಏನು ಎಂಬುದರ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ ಮತ್ತು ತೀಸ್ತಾ ಸೆತಲ್ವಾಡ್ ಹೊರಗಿನವರು. ಇಲ್ಲಿ ವಿನಾಕಾರಣ ತರಲೆ ಮಾಡುವುದಕ್ಕಾಗಿಯೇ ಬರುತ್ತಾರೆ. ಅವರಿಗೆಲ್ಲಾ ಇದರ ಬಗ್ಗೆ ಏನೂ ಗೊತ್ತಿರುವುದಿಲ್ಲ. ಆದರೆ ನಾವು ಇದರಲ್ಲೆಲ್ಲಾ ನೇರವಾಗಿಯೇ ತೊಡಗಿಸಿಕೊಂಡವರು. ಮೋದಿಯವರು ನ್ಯಾಯ ಪ್ರಕ್ರಿಯೆಗಳಿಗೆ ತಡೆಯೊಡ್ಡಲು ಪ್ರಯತ್ನಿಸಿದರು ಅಥವಾ ತಪ್ಪಿತಸ್ಥರನ್ನು ರಕ್ಷಿಸಿದರು ಎಂಬುದಕ್ಕೆ ಒಂದೇ ಒಂದು ಪುರಾವೆಯೂ ಇಲ್ಲ. ಸುಮ್ಮನೆ ಒಮ್ಮೆ ಎಷ್ಟು ಜನರನ್ನು ಜೈಲಿಗೆ ಕಳಿಸಲಾಗಿದೆ ಎಂಬುದನ್ನು ನೋಡಿ. ಭಾರತದಲ್ಲಿ ಹಿಂದೆ ನಡೆದ ಯಾವುದೇ ಗಲಭೆಗಳ ಪ್ರಕರಣದಲ್ಲಾದರೂ ಈ ರೀತಿಯದ್ದು ನಡೆದಿದೆಯೇ? ನಿಜ ಹೇಳಬೇಕೆಂದರೆ, ವಿಶ್ವ ಹಿಂದು ಪರಿಷತ್, ಭಜರಂಗದಳ ಮತ್ತು ಅವರದೇ ಪಕ್ಷದ ಒಂದು ವರ್ಗ ಮೋದಿಯವರನ್ನು ವಿರೋಧಿಸುವ ಕಾರಣವೇ ಇದು. ಮೋದಿಯವರು ಅವರೆಲ್ಲರಿಗೆ ನ್ಯಾಯಾಲಯದ ವಿಚಾರಣೆಗಳಿಂದ ಪಾರಾಗಲು, ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಯಾವ ರೀತಿಯ ಸಹಾಯವನ್ನೂ ಮಾಡಲಿಲ್ಲವೆಂಬುದಕ್ಕೇ ಇವರೆಲ್ಲಾ ಮೋದಿಯವರ ವಿರುದ್ಧವಿದ್ದಾರೆ. ಇತ್ತೀಚಿನ ಚುನಾವಣೆಗಳಲ್ಲಿ ಇವರೆಲ್ಲಾ ಕಾಂಗ್ರೆಸ್ ಜತೆ ಸೇರಿ ಮೋದಿಯವರನ್ನು ಸೋಲಿಸುವುದನ್ನೇ ಸಮಾನ ಗುರಿಯಾಗಿಸಿಕೊಂಡದ್ದು ಯಾಕೆಂದುಕೊಂಡಿದ್ದೀರಿ? ಬಜರಂಗದಳದ ಲೀಡರುಗಳು ತೆಹಲ್ಕಾದವರ ಜತೆ ಕೈಜೋಡಿಸಿ ಆ ಸ್ಟಿಂಗ್ ಆಪರೇಶನ್‌ನಲ್ಲಿ ತಾವು ನಿರ್ದಯವಾಗಿ ಕೊಲೆಗಳನ್ನು ನಡೆಸಿದೆವೆಂದು ಜಂಭ ಕೊಚ್ಚಿಕೊಳ್ಳುತ್ತಾ ಇದನ್ನೆಲ್ಲಾ ತಾವು ಮೋದಿಯವರ ಸೂಚನೆ ಮೇರೆಗೇ ಮಾಡಿದ್ದೆಂಬ ಅರ್ಥ ಬರುವ ರೀತಿ ಹೇಳಿದ್ದು ಯಾಕೆಂದು ತಿಳಿದಿದ್ದೀರಿ? ಅದು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡುವುದಕ್ಕೋಸ್ಕರ ಮಾಡಿದ ತಂತ್ರವಾಗಿತ್ತು. ಮೋದಿಯ ವಿರುದ್ಧ ಯಾರೇ ಇದ್ದರೂ ಅವರು ಕಾಂಗ್ರೆಸಿಗರಿಗೆ ಆಪ್ತರಾಗುತ್ತಾರೆ ಮತ್ತು ಸಹವರ್ತಿಗಳಾಗುತ್ತಾರೆ.
ಪ್ರಕರಣವು 'ಸ್ಪೆಷಲ್ ಇನ್ವೆಸ್ಟಿಗೇಟಿವ್ ಟೀಮ್‌' (ಎಸ್‌ಐಟಿ) ಮುಂದಿರಲಿ ಅಥವಾ ಸರ್ವೋಚ್ಛ ನ್ಯಾಯಾಲಯದ ಮುಂದಿರಲಿ, ತನಿಖಾಧಿಕಾರಿ ಸಲ್ಲಿಸಿದ ಆರೋಪ ಪಟ್ಟಿಯ ಆಧಾರದ ಮೇಲೆಯೇ ಪ್ರಕರಣಗಳನ್ನು ದಾಖಲಿಸಲಾಯಿತು. ಎರಡನೆಯದಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡ ಗುಜರಾತ್ ರಾಜ್ಯ ಸರ್ಕಾರದವರೇ ಆಗಿದ್ದರು. ಮೂರನೆಯದಾಗಿ ಸುಮಾರು 200ಕ್ಕೂ ಹೆಚ್ಚು ಜನರಿಗೆ ಶಿಕ್ಷೆಯಾಗಿದೆ ಮತ್ತು ಸುಮಾರು 150ಕ್ಕೂ ಹೆಚ್ಚು ಜನರಿಗೆ ಜೀವಾವಧಿ ಶಿಕ್ಷೆಯಾಗಿದೆ. ಇನ್ನೂ ಹಲವರು ಅದೇ ಹಾದಿಯಲ್ಲಿದ್ದಾರೆ. ಈ ಎಲ್ಲಾ ಶಿಕ್ಷೆಗಳ ಹಿಂದಿರುವ ಒಂದು ಮಹತ್ವದ ಸಂಗತಿಯೇನೆಂದರೆ, ಈ ಎಲ್ಲಾ ತೀರ್ಪುಗಳಿಗೂ ಆಧಾರವಾಗಿದ್ದಿದ್ದು ಘಟನೆಯನ್ನು ಕಣ್ಣಾರೆ ನೋಡಿದ ಸಾಕ್ಷಿಗಳ (ಊಣಜ ಢ್ಝಿಡಿಟಿಜಡಡ) ಹೇಳಿಕೆ. ಈಗ ಹೇಳಿ, ಭಾರತದ ನ್ಯಾಯಾಂಗ ಮತ್ತು ರಾಜಕೀಯ ವ್ಯವಸ್ಥೆಯ ನಡುವೆ ಸಾಮಾನ್ಯವಾಗಿ ಈ ಐವಿಟ್ನೆಸ್‌ಗಳು ವಿಚಾರಣೆಯ ವೇಳೆ ಸಾಕ್ಷಿ ಹೇಳಲು ಬದುಕಿರುತ್ತಾರೆಯೇ?!
ಈ ತೀರ್ಪುಗಳನ್ನೆಲ್ಲಾ ಒಮ್ಮೆ ಓದಿ... ಆಗ ನಿಮಗೇ ಅರ್ಥವಾಗುತ್ತದೆ. ಈ ಎಲ್ಲಾ ಶಿಕ್ಷೆಗಳೂ ಐವಿಟ್ನೆಸ್‌ಗಳು/ ಪ್ರತ್ಯಕ್ಷ ಸಾಕ್ಷಿಗಳು ನೀಡಿದ ಸಾಕ್ಷಿ ಹೇಳಿಕೆಯ ಆಧಾರದ ಮೇಲೆಯೇ ನೀಡಲ್ಪಟ್ಟಿವೆ. ಇನ್ನಿತರ ದೃಢವಾದ ಪುರಾವೆಗಳಿದ್ದರೂ ಪ್ರಧಾನ ಸಾಕ್ಷಿಯೆಂದರೆ ಅದು ಕಣ್ಣಾರೆ ನೋಡಿದ ಜನರ ಹೇಳಿಕೆಗಳೇ. ಅಂದರೆ ಅದರರ್ಥ ಏನು ಸರ್ಕಾರ ಈ ಎಲ್ಲಾ ಐವಿಟ್ನೆಸ್‌ಗಳನ್ನು ರಕ್ಷಿಸಿದೆ ಎಂದು ತಾನೇ? ಅವರೆಲ್ಲಾ ನ್ಯಾಯಾಲಯದಲ್ಲಿ ಬಾಬು ಬಜರಂಗಿಯ ವಿರುದ್ಧ ಸಾಕ್ಷಿ ಹೇಳಿದರು. ನರೋಡಾ ಪಟಿಯಾದಂಥ ಜಾಗದಲ್ಲಿ ವಾಸಿಸುತ್ತಾ ಬಾಬು ಬಜರಂಗಿಯಂಥವರ ವಿರುದ್ಧ ಸಾಕ್ಷಿ ಹೇಳುವುದು ಅಷ್ಟು ಸುಲಭವೇನೂ ಅಲ್ಲ. ಅಟ್‌ಲಿಸ್ಟ್ ಇದಕ್ಕಾದರೂ ನೀವು ಗುಜರಾತ್ ಸರ್ಕಾರವನ್ನು ಪ್ರಶಂಸಿಸುವುದಿಲ್ಲವೇ?'

ನಜ್ಮಾ ಹೆಫ್ತುಲ್ಲಾ ಹೇಳಿದ್ದನ್ನು ಕೇಳಿ...
ಮಧು ಕಿಶ್ವರ್‌ಗೆ 2003ರಲ್ಲಿ ನಜ್ಮಾ ಹೆಫ್ತುಲ್ಲಾ ಹೇಳಿದ ಘಟನೆಯೊಂದು ನೆನಪಿಗೆ ಬಂತು. ಆ ಸಮಯದಲ್ಲಿ ನಜ್ಮಾ ಹೆಫ್ತುಲ್ಲಾ ರಾಜ್ಯಸಭೆಯ ಉಪಸಭಾಧ್ಯಕ್ಷ ರಾಗಿದ್ದರು. ಭಾರತದ ವಿಭಜನೆಯನ್ನು ವಿರೋಧಿಸಿ, ಸಂಯುಕ್ತ ಭಾರತದ ರಚನೆಯನ್ನು ಬಲವಾಗಿ ಪ್ರತಿಪಾದಿಸಿದ್ದ, ಖ್ಯಾತ ಸ್ವಾತಂತ್ರ್ಯ ಹೋರಾಟಗಾರರೂ, ಮಹಾತ್ಮ ಗಾಂಜಿಯವರ ಪರಮಾಪ್ತರೂ ಆಗಿದ್ದ ಮೌಲಾನಾ ಅಬುಲ್ ಕಲಾಂ ಅಜಾದರ ಮರಿ ಸೊಸೆಯಾಗಿದ್ದರು ನಜ್ಮಾ ಹೆಫ್ತುಲ್ಲಾ. ಈಕೆ 2004ರಲ್ಲಿ ಬಿಜೆಪಿ ಸೇರಿದರು. 2003ರಲ್ಲಿ ಗುಜರಾತ್ ಗಲಭೆಗಳು ನಡೆದಾಗ ನಜ್ಮಾ ಹೆಫ್ತುಲ್ಲಾ ಫೋನ್ ಮೂಲಕ ಮೋದಿಯವರ ಸಹಾಯ ಯಾಚಿಸಿದ್ದರು. ಇದನ್ನು ನೆನಪಿಸಿಕೊಂಡ ಮಧು ಕಿಶ್ವರ್ 2013ರ ಫೆಬ್ರವರಿಯಲ್ಲಿ ಕರೆ ಮಾಡಿ ಆ ಅನುಭವಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಂಡರು....
'ಗುಜರಾತ್ ಗಲಭೆಗಳು ತುತ್ತತುದಿಯಲ್ಲಿದ್ದಾಗ ನನಗೆ ಆಗಾ ಖಾನ್‌ರ ಕಚೇರಿಯಿಂದ ಫೋನ್ ಕರೆಯೊಂದು ಬಂತು. ಹಿಂದುಗಳೇ ಹೆಚ್ಚಾಗಿ ವಾಸವಿದ್ದ ಪ್ರದೇಶದ ಮಧ್ಯದಲ್ಲಿದ್ದ ಖೋಜಾ ಮುಸ್ಲಿಮರ ಕಾಲೋನಿಗೆ ದಾಳಿಯ ಬೆದರಿಕೆ ಇದೆಯೆಂದು ಅವರು ನನಗೆ ತಿಳಿಸಿದರು. ವಾಜಪೇಯಿಯವರ ಎನ್‌ಡಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಲ್.ಕೆ. ಆಡ್ವಾಣಿಯವರಿಗೆ ನಾನು ಫೋನ್ ಮಾಡಿದೆ. ಆಡ್ವಾಣಿ ಮೋದಿಯವರ ಜತೆ ಮಾತಾಡಿದರು. ಕೆಲವೇ ಕ್ಷಣಗಳಲ್ಲಿ ನರೇಂದ್ರ ಮೋದಿಯವರೇ ನನಗೆ ಕರೆಮಾಡಿ ಮಾತಾಡಿದರು. ರನಜ್ಮಾ ಬೆಹೆನ್ ದಯವಿಟ್ಟು ನೀವು ಚಿಂತೆ ಮಾಡಬೇಡಿ, ನಾನು ವೈಯಕ್ತಿಕವಾಗಿ ಈ ಬಗ್ಗೆ ಗಮನ ಹರಿಸಿ ಅವರು ಸುರಕ್ಷಿತರಾಗಿರುವಂತೆ ನೋಡಿಕೊಳ್ಳುತ್ತೇನೆ. ಮೋದಿಯವರು ತಮ್ಮ ಮಾತಿನಂತೆಯೇ ನಡೆದುಕೊಂಡರು. ಕೂಡಲೇ ಆ ಪ್ರದೇಶಕ್ಕೆ ಸೈನ್ಯವನ್ನು ಕಳಿಸಿ, ಆ ಕಾಲೋನಿಗೆ ಯಾವ ಅಪಾಯವೂ ಆಗದಂತೆ ನೋಡಿಕೊಂಡರು. ಅಲ್ಲಿನ ಸ್ಥಳೀಯ ಮುಸ್ಲಿಮರು ನನಗೆ ಹೇಳಿದ ಪ್ರಕಾರ ಈ ಮುಸ್ಲಿಂ ಕಾಲೋನಿಯು ಎಲ್ಲಾ ಕಡೆಗಳಿಂದಲೂ ಹಿಂದು ಪ್ರದೇಶಗಳಿಂದ ಸುತ್ತುವರಿದಿದ್ದು ಒಂದು ವೇಳೆ ಗಲಭೆಕೋರರು ಈ 'ಕಂಕಾಡಿಯಾಳ' ಎಂಬ ಪ್ರದೇಶಕ್ಕೆ ದಾಳಿ ಮಾಡಿದ್ದೇ ಆಗಿದ್ದರೆ, ಆಗ ಅಲ್ಲಿನ ಜನರಿಗೆ ತಪ್ಪಿಸಿಕೊಳ್ಳುವ ಅವಕಾಶವೇ ಇಲ್ಲದಾಗುತ್ತಿತ್ತು. ಅದು ಇನ್ನೊಂದು ನರೋಡಾ ಪಾಟಿಯಾ ಆಗಿಬಿಡುವ ಸಾಧ್ಯತೆ ಇತ್ತು. ನನ್ನ ಅನುಭವದ ಪ್ರಕಾರ ಮೋದಿಯವರು, ಅವರ ಗಮನಕ್ಕೆ ಬಂದ ಎಲ್ಲಾ ದೂರುಗಳಿಗೂ, ಕರೆಗಳಿಗೂ ಸ್ಪಂದಿಸಿ ವೈಯಕ್ತಿಕವಾಗಿಯೇ ಅವುಗಳನ್ನು ಪರಿಹರಿಸಲು ಆಸ್ಥೆ ವಹಿಸಿದ್ದರು. ಮೋದಿಯವರು ಬೋಹ್ರಾ ಮುಸ್ಲಿಮ್ ಸಮುದಾಯಕ್ಕೆ ಮತ್ತು ಖೋಜಾ ಮುಸ್ಲಿಂ ಸಮುದಾಯಕ್ಕೆ ತುಂಬಾ ಗಣನೀಯವಾದ ಸಹಾಯ ಮಾಡಿದ್ದಾರೆ. ಸೈಯೆದ್ನಾ ಅವರ ನೂರನೇ ಹುಟ್ಟಿದ ಹಬ್ಬಕ್ಕೂ ಮೋದಿ ವೈಯಕ್ತಿಕವಾಗಿ ಹಾಜರಾದರು. ಆಗಾ ಖಾನ್ ನನ್ನನ್ನು ವೈಯಕ್ತಿಕವಾಗಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಬಹುಶಃ ಅವರು ಮೋದಿಯವರನ್ನೂ ಭೇಟಿಯಾಗಿರಬೇಕು. ಈ ಸಂದರ್ಭದಲ್ಲಿ ನನ್ನ ಅರಿವಿಗೆ ಬಂದಿದ್ದೇನೆಂದರೆ, ಬಿಜೆಪಿಯಲ್ಲಿ ಮಾತ್ರ ಮುಸ್ಲಿಮರಿಗೆ ಗೌರವಾರ್ಹ ಸ್ಥಾನ ಸಿಗುತ್ತದೆ...'
'2007ರ ಚುನಾವಣೆಯ ಸಂದರ್ಭದಲ್ಲಿ ನಾನು ಗುಜರಾತ್‌ಗೆ ಬಂದು ಅವರ ಪರ ಪ್ರಚಾರ ಮಾಡಬೇಕೆಂದು ಬಯಸುತ್ತೀರಾ?' ಎಂದು ಮೋದಿಯವರಲ್ಲಿ ಕೇಳಿದ್ದೆ. ಅದಕ್ಕೆ ಆತ, 'ನೀವು ಗುಜರಾತ್‌ಗೆ ಬಂದು ಪ್ರಚಾರ ಮಾಡುವ ಅವಶ್ಯಕತೆಯಿಲ್ಲ, ನಿಮಗೆ ನನ್ನ ಧೋರಣೆಗಳ ಬಗ್ಗೆ ಗೊತ್ತಿರುವುದರಿಂದ, ದೆಹಲಿಯಲ್ಲೇ ಕುಳಿತು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿ ಅಂತ ಹೇಳಿದರು' ಎಂದರು ನಜ್ಮಾ ಹೆಫ್ತುಲ್ಲಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement