ಆಫ್ರಿಕಾದ ಕ್ಸಿ ನಮ್ಮ ರಾಜೇಶನಂಥಾಗಲಿಲ್ಲ!
ಅದು ಆಫ್ರಿಕಾ ಖಂಡದ ಕಲಹರಿ ಮರುಭೂಮಿಯ ಸಾನ್ಸ್ ಬುಡಕಟ್ಟು. ಈ ಜನರಿಗೆ ಬುಷ್ಮೆನ್ ಅಂತಲೂ ಕರೆಯುತ್ತಾರೆ. ಸಣ್ಣ ಬುಡಕಟ್ಟಿನ ಒಂದೆರಡು ಕುಟುಂಬಗಳು ಸಿಕ್ಕಿದ್ದನ್ನು ತಿಂದು ಮರುಭೂಮಿ, ಹುಲ್ಲುಗಾವಲು, ಕುರುಚಲು ಸಸ್ಯಗಳ ನಡುವೆ ಇವರ ಬದುಕು. ಆಧುನಿಕತೆಯ ಒಂದೇ ಒಂದು ಕುರುಹೂ ಅವರ ಬಳಿ ಇರಲ್ಲ. ಇಂಥವರ ಬದುಕಿನಲ್ಲಿ ಕಲಹ ಉಂಟು ಮಾಡುವ ವಸ್ತುವೊಂದು ಧರೆಗಿಳಿಯುತ್ತದೆ! ಆ ಪ್ರದೇಶದ ಮೇಲೆ ಹಾರುವ ನಾಗರಿಕ ಲೋಕದ ವಿಮಾನ ಶಬ್ದಕ್ಕೆ ಬುಷ್ಮೆನ್ಗಳು ಕಕ್ಕಾಬಿಕ್ಕಿಯಾಗುತ್ತಾರೆ. ಅದರೊಳಗಿಂದ ಪ್ರಯಾಣಿಕನೊಬ್ಬ ಎಸೆಯುವ ಖಾಲಿ ಕೊಕಾಕೊಲಾ ಶೀಶೆ ಸೀದಾ ಈ ಬುಡಕಟ್ಟಿನವರ ಜಾಗದಲ್ಲಿ ಬೀಳುವುದೇ! ಅಲ್ಲಿಗೆ ಶುರುವಾಯ್ತು ಪಜೀತಿ.
ಈ ಶೀಶೆ ಮಕ್ಕಳ ಕೈಗೆ ಸಿಕ್ಕಿ ಅವರು ದೊಡ್ಡವರಿಗೆ ಒಪ್ಪಿಸುತ್ತಾರೆ. 'ಅದು ದೇವರು ತಮಗೆ ನೀಡಿದ ಒಂದು ಉಡುಗೊರೆಯೇ ಇರಬೇಕು' ಎಂದುಕೊಳ್ಳುತ್ತಾರೆ. ಮೊದಲು ಅದನ್ನು ಏನು ಮಾಡುವುದೆಂದು ತಿಳಿಯದೆ ಪೇಚಾಡುತ್ತಾರೆ. ಅದರಿಂದ ಗಡಸು ಚರ್ಮ ಹದ ಮಾಡಲು ಯತ್ನಿಸಿದರೆ, ಹೆಂಗಸರು ಕಾರ ಅರೆಯಲು ಬಳಸುತ್ತಾರೆ. ಮಕ್ಕಳು ಆಟವಾಡಲು ಬಳಸುತ್ತಾರೆ. ಈ ನಡುವೆ ಅವರಲ್ಲಿ ಇದುವರೆಗೂ ಇಲ್ಲದ ದುಷ್ಟ ಯೋಚನೆಗಳು ಹುಟ್ಟುತ್ತವೆ. ಇರುವ ಒಂದೇ ವಸ್ತುವಿಗಾಗಿ ಎಲ್ಲರ ನಡುವೆ ಕಿತ್ತಾಡುವಾಗ ಒಬ್ಬ ಹುಡುಗ ಮತ್ತೊಬ್ಬನ ಹಣೆಗೆ ಅದರಿಂದ ಹೊಡೆದು ರಕ್ತ ಬರುತ್ತದೆ. ಬುಡಕಟ್ಟಿನವರಲ್ಲಿ ಅದರ ಬಗ್ಗೆ ಇದ್ದ ಒಳ್ಳೆಯ ಭಾವನೆಗಳು ಹೊರಟು ಹೋಗಿ 'ಅದು ಬಹಳ ಕೆಟ್ಟ ವಸ್ತು' ಅನಿಸುತ್ತದೆ. ಇದು ಯಾಕೆ ಇಲ್ಲಿಗೆ ಬಂತು? ಎಂದು ಅವರೆಲ್ಲ ತಲೆಕೆಡಿಸಿಕೊಂಡು ಎಲ್ಲರೂ ಸೇರಿ ಒಂದು ತೀರ್ಮಾನಕ್ಕೆ ಬರುತ್ತಾರೆ. 'ಅದು ದೇವರು ಬೀಳಿಸಿದ ಒಂದು ವಸ್ತುವಾಗಿದ್ದು, ಅದನ್ನು ನಾವು ಉಪಯೋಗಿಸುವುದು ಸರಿಯಲ್ಲ. ಕೂಡಲೇ ಅದನ್ನು ಈ ಪ್ರಪಂಚದ ಅಂಚಿಗೆ ಎಸೆಯಬೇಕು' ಎನ್ನುವ ತೀರ್ಮಾನ.
'ಕ್ಸಿ' ಎಂಬಾತ ಬಾಟಲಿ ಕೈಯಲ್ಲಿ ಹಿಡಿದುಕೊಂಡು ಅಲ್ಲಿಂದ ಹೊರಡುತ್ತಾನೆ. ಅವನು ಹೋಗುವ ದಾರಿಯಲ್ಲಿ ಜೀವಶಾಸ್ತ್ರಜ್ಞ ಆಂಡ್ರೂ ಸ್ಟೇನ್ಸ್, ಕೇಟ್ ಫಾಮ್ಸನ್ ಹಾಗೂ ಗೆರಿಲ್ಲಾ ಬಂಡುಕೋರರನ್ನು ಎಡತಾಕುತ್ತಾರೆ. ಅಲ್ಲಿಗೆ 'ಕ್ಸಿ'ಗೆ ನಾಗರಿಕ ಜಗತ್ತಿನ ಎಲ್ಲ ವಿಕಾರಗಳೂ ಕಾಣಿಸುತ್ತವೆ. 'ಕ್ಸಿ' ಅದರಲ್ಲಿ ತನಗಿಷ್ಟವಿಲ್ಲದೆ ಸಿಕ್ಕಿಹಾಕಿಕೊಳ್ಳುತ್ತಾನೆ. 1980ರಲ್ಲಿ ಬೊತ್ಸವಾನ ಸೇರಿದಂತೆ ಹತ್ತಾರು ಭಾಷೆಗಳಲ್ಲಿ ತೆರೆಕಂಡ 'ದ ಗಾಡ್ಸ್ ಮಸ್ಟ್ ಬಿ ಕ್ರೇಝಿ' ಚಿತ್ರದ ಹೂರಣ ಇದು. ಇದನ್ನು ನೋಡಿದರೆ ನಮಗೆ ಈ ಕ್ಷಣಕ್ಕೆ ಕಲಿಯಲು ಸಾಕಷ್ಟು ಪಾಠಗಳಿವೆ. ನಮ್ಮ ಸಿನಿಮಾ ಸಂಸ್ಕೃತಿ ಮತ್ತು ರಿಯಾಲಿಟಿ ಶೋಗಳು ಬೆಳೆಸಿದ ಭ್ರಮೆಯಲ್ಲಿ ಮುಳುಗಿ ಹೊರಕ್ಕೆ ಬರಲಾಗದೆ ಜೇನುಕುರುಬ ರಾಜೇಶ್ ಸತ್ತು ಬಹಳ ದಿನಗಳಾಗಿಲ್ಲ. ಒಂದು ಬುಡಕಟ್ಟನ್ನು, ಅದರ ಮುಗ್ಧ ಹುಡುಗನನ್ನು ಎಲ್ಲ ವಿಕಾರಗಳೂ ಮೈವೆತ್ತಿರುವಂಥ ಒಂದು ಮುಖ್ಯವಾಹಿನಿಗೆ ತರುವಾಗ ಇರಬೇಕಾದ ಸೂಕ್ಷ್ಮತೆಗಳು ಏನಾಗಿರಬೇಕು? ಎಂಬುದನ್ನು ತಿಳಿಯಲು ಈ ಸಿನಿಮಾ ದೃಶ್ಯ ಪಾಠ.
ಸಿನಿಮಾ ಓಡುವ ಪರಿ ನಿಜಕ್ಕೂ ಕಚಗುಳಿ ಇಡುತ್ತದೆ. ಕೆಲವೊಮ್ಮೆ ಬಿದ್ದುಬಿದ್ದು ನಗುವಷ್ಟು ತಮಾಷೆಯೊಂದಿಗೆ ಆಳಕ್ಕೆ ಉಳಿದುಬಿಡುವ ಚಿತ್ರವಿದು. ಕೊನೆಯಲ್ಲಿ ಒಂದು ಪರ್ವತ ಕಣಿವೆಯ ಅಂಚಿನಲ್ಲಿ ಮೋಡಗಳು ಕೆಳಗೆ ಸಾಗುತ್ತಿರುವ ದಿಕ್ಕನ್ನೇ ಪ್ರಪಂಚದ ಕೊನೆ ಎಂದುಕೊಂಡ ಕ್ಸಿ ದುಷ್ಟತನದ ಸಂಕೇತವಾದ ಕೊಕೊಕೊಲಾ ಬಾಟಲಿಯನ್ನು ಎಸೆದು ತನ್ನೂರು ಸೇರಿಕೊಳ್ಳುತ್ತಾನೆ. ನಿರ್ದೇಶಕ ಜೇಮೀ ಉಯ್ಸ್ ಈ ಚಿತ್ರ ತೆಗಯುವ ಮೊದಲು 'ಅನಿಮಲ್ಸ್ ಆರ್ ಬ್ಯೂಟಿಫುಲ್ ಪೀಪಲ್' ಸಾಕ್ಷ್ಯಚಿತ್ರ ತೆಗೆದಿದ್ದಲ್ಲದೆ ಮರುಭೂಮಿಯ ಪ್ರಾಣಿ ಜೀವನ ಮತ್ತು ಜನಜೀವನದ ಬಗ್ಗೆ ಸಾಕಷ್ಟು ತಿಳಿದುಕೊಂಡವನು. ಈ ಚಿತ್ರ ಅಮೆರಿಕ ಒಂದರಲ್ಲೇ 50 ದಶಲಕ್ಷ ಡಾಲರ್ ಬಾಚಿಕೊಂಡಿತ್ತು. ಇಂದಿಗೂ ಜಗತ್ತಿನಾದ್ಯಂತ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಮೊದಲ ಸ್ಥಾನ.
ಚಿತ್ರದಲ್ಲಿ ನಾಗರಿಕ ಜಗತ್ತು, ಬುಡಕಟ್ಟು ಜನರ ಮುಂದೆ ತೀರಾ ಕುಬ್ಜವಾಗಿಬಿಡುತ್ತದೆ. ಆರಂಭದಲ್ಲಿಯೇ ಮರುಭೂಮಿ, ಬುಡಕಟ್ಟು ಜನರ ಪ್ರದೇಶವನ್ನು ತೋರಿಸುವ ಜೊತೆಗೆ ಆಧುನಿಕ ನಾಗರಿಕ ಜಗತ್ತಿನ ಒದ್ದಾಟಗಳನ್ನೂ ನಿರ್ದೇಶಕ ಚಿತ್ರಿಸಿದ್ದಾನೆ. ಬುಷ್ಮೆನ್ಗಳ ಮುಗ್ಧತೆ, ಹಂಚಿ ತಿನ್ನುವ ಗುಣ, ನಿಸ್ವಾರ್ಥತೆ, ತೀಕ್ಷಣತೆ ಇವೆಲ್ಲಾ ನಾಗರಿಕರನ್ನು ಅಣಕಿಸುತ್ತವೆ. ಕ್ಸಿಯನ್ನು ಜೈಲಿಗೆ ಹಾಕುವಾಗ ಅವನು ಕೋರ್ಟ್ನಲ್ಲಿ ಮಪುಡಿಯ ಸಹಾಯದಿಂದ ನ್ಯಾಯಾಧೀಶರಿಗೆ ಅರುಹುವ ವಿಷಯ ಅವನ ಪಾಲಿಗೆ ನಿಜವಾಗಿದ್ದರೂ, ನಾಗರಿಕ ಜಗತ್ತಿನ ಕಾನೂನುಗಳು ಅವನನ್ನು ಅಪರಾಧಿಯಾಗಿಸುತ್ತವೆ. ಚಿತ್ರದ ನಾಯಕನ ಪಾತ್ರಧಾರಿ ಅದೇ ಬುಷ್ಮೆನ್ ಬುಡಕಟ್ಟಿನ ನಕ್ಷಾವು. ಈ ಚಿತ್ರದಲ್ಲಿ ನಟಿಸುವಾಗ ಆತನಿಗೆ ಹೊರಜಗತ್ತಿನ ಹಣದ ಪರಿಚಯ, ಅದರ ಮಹತ್ವ ತಿಳಿದಿರಲಿಲ್ಲ. ಇದರ ಮುಂದುವರೆದ ಭಾಗಗಳನ್ನು ಜೇಮೀ ಉಯ್ಸ್ನೇ ನಿರ್ದೇಶಿಸಿದ್ದಾನೆ. ಅವು ಮೊದಲಿನಷ್ಟು ಪರಿಣಾಮಕಾರಿಯಾಗಿರಲಿಲ್ಲ. ಎರಡನೇ ಸಲ ನಟಿಸುವ ಹೊತ್ತಿಗೆ ನಕ್ಷಾವುಗೆ ಹೊರಜಗತ್ತಿನ ಪರಿಚಯ ಆಗಿತ್ತಲ್ಲದೆ, ತನ್ನ ನಟನೆಗೆ ಹೆಚ್ಚಿನ ಸಂಭಾವನೆಯನ್ನೂ ಪಡೆದ. ಆದರೆ ತಾನು ಪಡೆದ ಹಣವನ್ನು ಆತ ಖರ್ಚು ಮಾಡಿದ್ದು ಮಾತ್ರ ತನ್ನವರ ಅಭಿವೃದ್ಧಿಗೆ.
ಚಿತ್ರ ನಕ್ಷಾವುನಲ್ಲಿ ತನ್ನ ಬದುಕಿನ ಹಾಗೂ ತನ್ನ ಬುಡಕಟ್ಟಿನ ಬಗ್ಗೆ ಹೆಮ್ಮೆ ಹುಟ್ಟಿಸಿದ್ದು ಮಾತ್ರವಲ್ಲದೆ, ನಾಗರಿಕ ಜಗತ್ತು ತನ್ನ ಬುಡಕಟ್ಟಿನಷ್ಟು ನಾಗರಿಕವಲ್ಲ ಎಂಬುದನ್ನೂ ತಿಳಿಸಿತ್ತು. ಚಿತ್ರದ ಈ ಸಾಧ್ಯತೆ ಜೇನುಕುರುಬರ ರಾಜೇಶನಿಗೂ ಇತ್ತು. ಆದರೆ ಆತನಿಗೆ ನಮ್ಮ ಆಧುನಿಕತೆ, ರಿಯಾಲಿಟಿ ಶೋಗಳು, 'ಜಂಗಲ್ ಜಾಕಿ' ಚಿತ್ರ ಇವೆಲ್ಲವೂ ಅವನಲ್ಲಿ ಕೀಳರಿಮೆ ಮೂಡಿಸಿದವು. ಈ ಕಾರಣದಿಂದಲೇ ಅವನು ಮತ್ತೆ ತನ್ನ ಗೂಡಿಗೆ ಹೋಗುವ ಬದಲು ನಗರದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ವಿಫಲ ಯತ್ನ ನಡೆಸಿದ. ಈ ಹಿನ್ನೆಲೆಯಲ್ಲಿ ಅರೋಪಿ ಸ್ಥಾನದಲ್ಲಿ ನಿಲ್ಲುತ್ತಿರುವ ನಾಗರಿಕ ಜಗತ್ತಿನ ಜೀವನ ವಿಲಾಸಿತನದಲ್ಲಿರುವ ನಾವು, 'ದ ಗಾಡ್ಸ್ ಮಸ್ಟ್ ಬಿ ಕ್ರೇಝಿ' ಚಿತ್ರವನ್ನು ನೋಡಬೇಕಿದೆ.
ಚಿತ್ರ: ದ ಗಾಡ್ಸ್ ಮಸ್ಟ್ ಬಿ ಕ್ರೇಝಿ (1980)
ಭಾಷೆ: ಬೊತ್ಸವಾನ (ದಕ್ಷಿಣ ಆಫ್ರಿಕಾ)
ನಿರ್ದೇಶನ: ಜೇಮೀ ಉಯ್ಸ್
ಅವಧಿ: 19 ನಿಮಿಷ
ತಾರಾಗಣ: ನಕ್ಷಾವೊ, ಮ್ಯಾರ್ಯೂಸ್ ವೆಯರ್ಸ್, ಸಂದರ್ ಪ್ರಿನಸ್ಸೋ.
- ಆರ್. ಕೇಶವಮೂರ್ತಿ
keshavarkm1@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.