ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಇಕಾ ಇಸಾನ್!

ಧೂಮಕೇತು ಬಂತೆಂದರೆ ಬೆಚ್ಚಿ ಬೀಳುವ ಕಾಲ ಒಂದಿತ್ತು. ಈಗ ಅದನ್ನು ನೋಡಿ ಖುಷಿಪಡುವ, ಅಧ್ಯಯನ ಮಾಡುವ ಕಾಲ....

Mainashree
Updated On : 23 Nov 2013, 6:05 am

ಧೂಮಕೇತು ಬಂತೆಂದರೆ ಬೆಚ್ಚಿ ಬೀಳುವ ಕಾಲ ಒಂದಿತ್ತು. ಈಗ ಅದನ್ನು ನೋಡಿ ಖುಷಿಪಡುವ, ಅಧ್ಯಯನ ಮಾಡುವ ಕಾಲ. ಈ ತಿಂಗಳು ಧೂಮಕೇತು ಪ್ರಿಯರಿಗಾಗಿ ಬಂದಿದೆ ಇಸಾನ್.

ಮುಖ್ಯಾಂಶ

- 2012 ಸೆ.21 ಇಸಾನ್ ಪತ್ತೆ
- 2012 ಸೆ.24, ಅಧಿಕೃತ ಘೋಷಣೆ, ಸಿ/2012 ಎಸ್1
- ರಷ್ಯಾದ ವಿಟಾಲಿನೆವಾಸ್ಕಿ, ಆರ್ವಿಯಾ ನೋವಿಕ್‌ನಾಕ್ ಜೋಡಿ ಇಸಾನ್‌ನ ಜನ್ಮದಾತರು.
- ಧೂಮಕೇತುವಿನ ನ್ಯೂಕ್ಲಿಯಸ್ ಗಾತ್ರ 5 ಕಿ.ಮಿ
- 2013 ಅ.1, ಮಂಗಳ ಗ್ರಹದಿಂದ ಇಸಾನ್‌ನ ದೂರ  10,843,000 ಕಿಮೀ
- ನ.28, ಸೂರ್ಯ ಮತ್ತು ಇಸಾನ್ ನಡುವಿನ ದೂರ 1,860,000 ಕಿ.ಮೀ
- ಡಿ.26 ಭೂಮಿ ಮತ್ತು ಇಸಾನ್ ನಡುವಿನ ದೂರ 64,210,000 ಕಿ.ಮೀ
- 2014 ಜ.14-15, ಭೂಮಿ ಇಸಾನ್ ಪಥದಲ್ಲಿ ಹಾದು ಹೋಗಲಿದೆ.
- ಇಸಾನ್ ಗರಿಷ್ಠ ಕಾಂತಿಮಾನ-3 ರಿಂದ -5

ಜಗತ್ತು ಇನ್ನೂ ಧೂಮಕೇತುಗಳು ಭೂಮಿಯ ವಾತಾವರಣದೊಳಗಿನ ವಸ್ತುಗಳು ಎಂಬ ಅರಿಸ್ಟಾಟಲ್ ತತ್ವವನ್ನೇ ನಂಬಿದ್ದ ಕಾಲದಲ್ಲಿ ಕ್ರಿ.ಶ. 1656ರಲ್ಲಿ ಜನಿಸಿದ ಹ್ಯಾಲಿ, ಧೂಮಕೇತುಗಳ ವಿಷಯದಲ್ಲಿದ್ದ ತಪ್ಪು ಕಲ್ಪನೆಗಳನ್ನು ಜನರೆದುರು ಹಿಡಿದ. ಎಲ್ಲಾ ಧೂಮಕೇತುಗಳು ಪ್ರಕಾಶಮಾನವಾದರೂ, ಅನಿರೀಕ್ಷಿತವಾಗಿ ಗೋಚರವಾಗುವಂತವು. ಅವುಗಳ ಆಗಮನ ಅನಿರೀಕ್ಷಿತವಾದರೂ ಹೀಗೆ ಧೂಮಕೇತುಗಳ ಪುನರಾಗಮನವನ್ನು ಜಗತ್ತಿಗೆ ಮೊಟ್ಟಮೊದಲು ತಿಳಿಸಿಕೊಟ್ಟವರು ಆಂಗ್ಲ ಖಗೋಳ ವಿಜ್ಞಾನಿ ಎಡ್ಮಂಡ್ ಹ್ಯಾಲಿ.
ಧೂಮಕೇತುಗಳು ಬರಿಗಣ್ಣಿಗೆ ಮಸುಕಾದ ಸಣ್ಣ ಮೋಡದ ಹಾಗೆ ಕಾಣುತ್ತವೆ. ಇದರಿಂದಾಗಿ 'ಧೂಮ' ಪದ ಸೇರ್ಪಡೆಯಾಗಿರಬಹುದು. ಆಂಗ್ಲ ಭಾಷೆಯ ಕಾಮೆಟ್ ಎಂಬ ಪದದ ಮೂಲ ಕೂದಲಿನಂತಹ ರಚನೆಗಳನ್ನು ಸೂಚಿಸುತ್ತದೆ. ಪ್ರತಿವರ್ಷ ಸರಾಸರಿ 12-15 ಧೂಮಕೇತುಗಳು ಬಂದು ಹೋಗುತ್ತವೆ. ಎಲ್ಲವೂ ಬರಿಗಣ್ಣಿಗೆ ಕಾಣುವುದಿಲ್ಲ. ಹೆಚ್ಚಿನ ಧೂಮಕೇತುಗಳು ಹಾಗೊಮ್ಮೆ ಹೀಗೊಮ್ಮೆ ದೂರದರ್ಶಕಗಳಿಗೆ ಮಾತ್ರ ಕಾಣಿಸಿಕೊಳ್ಳುತ್ತವೆ. ಆದರೆ ಕೆಲವು ಧೂಮಕೇತು ಮಾತ್ರ ಬಾಲದೊಂದಿಗೆ ಆಕಾಶದುದ್ದಕ್ಕೂ ಹರಡಿಕೊಂಡು ನಿಂತು ಜನರನ್ನು ಆಕರ್ಷಿಸಿವೆ.
ನಮ್ಮ ಸೌರವ್ಯೂಹದಲ್ಲಿ ಹಿಂದೊಮ್ಮೆ ಆಳಿ, ಅಳಿದುಹೋದ ಧೂಮಕೇತುಗಳು ಬಹಳಷ್ಟು ಇವೆ. 1965ರಲ್ಲಿ ಕಂಡುಬಂದ ಇಕೆಯಸಾರೆ ಬೆನೆಟ್ (1970), ಕೊಹೆಟೆಕ್ (1973), ವೆಸ್ಟ್ (1976), ಹ್ಯಾಲಿ (1986), ಷೂಮೇಕರ್ ಲೆವಿ (1993), ಹೇಲ್‌ಪಾಪ್ (1997), ಇಕೆಯಾಜ್ಹಾಂಗ್ (2002). ಇದೀಗ ಮತ್ತೊಂದು ಇಸಾನ್ (2013).

ಲೂರ್ಥ್ ಮೇಘ
ಧೂಮಕೇತುಗಳು ಸೌರವ್ಯೂಹದ ಹೊರವಲಯದಲ್ಲಿರುವ ಲೂರ್ಥ್ ಮೇಘದಿಂದ (ಜೆ.ಎಚ್. ಲೂರ್ಥ್, ಡಚ್ ಖಗೋಳ ವಿಜ್ಞಾನಿ) ಬರುತ್ತವೆ. ಸೂರ್ಯನನ್ನು ಪ್ರದಕ್ಷಣೆ ಹಾಕುವ ಪಥದಲ್ಲಿ ಅವು ಕೆಲ ಆಕಾಯಕಾಶಗಳ ಗುರುತ್ವಾಕರ್ಷಣೆಗೆ ಈಡಾಗುವ ಸಂದರ್ಭಗಳೂ ಉಂಟು. 1994ರಲ್ಲಿ ಗುರುಗ್ರಹಕ್ಕೆ ಅಪ್ಪಳಿಸಿದ ಷೂಮೇಕರ್ ಲೆವಿ-9ರ ಅವಸಾನ ನಮ್ಮ ಮನದಲ್ಲಿ ಉಳಿದಿಲ್ಲವೆ? ಧೂಮಕೇತುಗಳು ಗುರು ಮತ್ತು ಶನಿ ಗ್ರಹಗಳ ನಡುವೆ ಬಂದಾಗ ದೂರದರ್ಶನಕ್ಕೆ ಕಾಣಬರುತ್ತವೆ. ಸೂರ್ಯನ ಹತ್ತಿರ ಬಂದಾಗ ಅಧಿಕ ತಾಪಮಾನದಿಂದ ಅವುಗಳ ಬಾಲ ಬಿಚ್ಚಿಕೊಂಡು ಪೃಥ್ವಿಗೆ ಗೋಚರವಾಗಿ ಜನರಿಗೆ ಆಶ್ಚರ್ಯದೊಂದಿಗೆ ರೋಮಾಂಚನವನ್ನು ಉಂಟು ಮಾಡುತ್ತವೆ. ಇವುಗಳ ಸ್ವರೂಪ ನಯನಾಕರ್ಷಕ.

ಬಾಲ ಉಂಟಾಗುವುದು ಹೇಗೆ?

ನವೆಂಬರ್ 28ರಂದು ಸೂರ್ಯನಿಗೆ ಅತಿ ಹತ್ತಿರದಲ್ಲಿ ಅಂದಾಜು 1.2 ಮಿಲಿಯ ಕಿ.ಮೀ. ಅಂತರದಲ್ಲಿ ಇಸಾನ್ ಬರಲಿದೆ. ಈ ಹಂತದಲ್ಲಿ ಇಸಾನ್ ತಾಪಮಾನ ಸುಮಾರು 2000 ಡಿಗ್ರಿ ಸೆಂಟಿಗ್ರೇಡ್. ಇಸಾನ್‌ನ ಹೊರ ಹೊದಿಕೆಗಳು ಸೂರ್ಯನ ರಶ್ಮಿಯ ತಾಪಕ್ಕೆ ಕರಗಿ, ಆವಿಯಾಗಿ, ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಲಕ್ಷಾಂತರ ಕಿಮೀ ದೂರದವರೆಗೆ ಬಾಲವೂ ಬೆಳೆಯುತ್ತದೆ. ಭೂಮಿಗೆ ನಯನ ಮನೋಹರವಾಗಿ ಕಾಣಲಿದೆ. ಗಂಟೆಗೆ 126 ಕಿ.ಮೀ. ವೇಗದಲ್ಲಿ ಧಾವಿಸಿ ಬರುತ್ತಿರುವ ಇಸಾನ್ ನವೆಂಬರ್ 28ರ ನಂತರ ಡಿಸೆಂಬರ್ ಅಂತ್ಯದವರೆಗೆ ಬರಿಗಣ್ಣಿಗೆ ಗೋಚರವಾಗಲಿದೆ. ಬೆಳಗಿನ ಜಾವ ಸಿಂಹ ರಾಶಿಯಲ್ಲೂ ಅನಂತರ ಕನ್ಯಾ ರಾಶಿಯಲ್ಲೂ ಮಂಗಳ ಗ್ರಹದ ಬಳಿ ಗೋಚರಿಸಲಿದೆ. ಡಿಸೆಂಬರ್ ಎರಡನೆ ವಾರದಲ್ಲಿ ಸಂಜೆಯ ನಸುಗತ್ತಲಿನಲ್ಲಿ ಉದ್ದನೆಯ ಬಾಲದ ಇಸಾನ್ ಧೂಮಕೇತು ಗೋಚರಿಸುತ್ತದೆ.
ಹವ್ಯಾಸಿಗರು, ವಿಜ್ಞಾನಿಗಳು, ಖಗೋಳತಜ್ಞರು ಕುತೂಹಲದಿಂದ ಇಸಾನ್ ಧೂಮಕೇತುವನ್ನು ಸ್ವಾಗತಿಸಿ ದೂರದರ್ಶನಗಳ ನೆರವಿನಿಂದ ಅಧ್ಯಯನ ನಡೆಸುತ್ತಿದ್ದಾರೆ. 1986ರಲ್ಲಿ ಹ್ಯಾಲಿ ತೋರಿಸಿದ್ದಕ್ಕಿಂತ ಹೆಚ್ಚಿನ ಕಾಂತಿ ತೋರಿಸಲಿದೆ ಇಸಾನ್. ಮುಂದಿನ ವರ್ಷ ಜನವರಿ 14-15ರಂದು ಭೂಮಿ ಇಸಾನ್‌ನ ಪಥದಲ್ಲಿ ಹಾದು ಹೋಗಲಿದೆ. ಸೂರ್ಯನ ಕಿರಣಗಳ ಪ್ರಭಾವದಿಂದ ಪಥದಲ್ಲಿ ಅಳಿದುಳಿದ ಧೂಳಿನ ಕಣಗಳು ಭೂಮಿಗೆ ಉಲ್ಕೆಗಳಾಗಿ ಬೆಂಕಿಯ ಮಳೆಯಂತೆ ಬೀಳುವ ಸಾಧ್ಯತೆಯುಂಟು. ಇದು ಅಷ್ಟೇನು ಅಪಾಯಕಾರಿಯಲ್ಲ.

- ಸಿ.ಪಿ.ಸೂರ್ಯಪ್ರಕಾಶ್

===============
ಬಾನಂಗಳದ ದೀಪಾವಳಿ
ಇಸಾನ್- ಈ ಪದ ಇತ್ತೀಚೆಗೆ ಹೆಚ್ಚೆಚ್ಚು ಹರಿದಾಡುತ್ತಿದೆ. ಎಲ್ಲೆಡೆಯೂ ಇದೇ ಸುದ್ದಿ. ಸೂರ್ಯನ ಸುತ್ತ ಪರಿಭ್ರಮಿಸುವ ತನ್ನ ಪಥದಿಂದ ಕಳಚಿ, ಮೊದಲ ಬಾರಿಗೆ ಸೌರಮಂಡಲದ ಒಳಭಾಗಕ್ಕೆ ಬರುತ್ತಿರುವ ಧೂಮಕೇತುವಿನ ಹೆಸರೇ ಇಸಾನ್. ಶುಕ್ರ ಗ್ರಹದ ಪಥವನ್ನು ದಾಟಿ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿರುವ ಈ ಇಸಾನ್ ಅನ್ನು ಸೆಪ್ಟಂಬರ್ 2012ರಲ್ಲಿ ಪ್ರಥಮವಾಗಿ ಪತ್ತೆಹಚ್ಚಿದವರು International Scientific Optical Network (ISON) ಎಂಬ ಸಂಸ್ಥೆಯಲ್ಲಿ ಕಾರ್ಯನಿರತರಾಗಿದ್ದ ಯುರೋಪ್ ಹಾಗೂ ರಷ್ಯಾದ ಖಗೋಳ ವಿಜ್ಞಾನಿಗಳು. ಹೀಗಾಗಿ ಆ ಹೆಸರನ್ನೇ ಆ ಧೂಮಕೇತುವಿಗೆ ಇಡಲಾಯಿತು.

ಇಸಾನನ್ನು ಪತ್ತೆ ಹಚ್ಚಿದಾಗಿನಿಂದ, ಇದನ್ನು 'ಶತಮಾನದ ಧೂಮಕೇತು' ಎಂದೇ ಬಣ್ಣಿಸಲಾಗಿತ್ತು. ಆದರೆ ಈ ಭವಿಷ್ಯನುಡಿ ಸುಳ್ಳಾಗುವ ಸೂಚನೆಗಳು ಎದುರಾಗುತ್ತಿವೆ. ಪ್ರಕಾಶಮಾನವಾಗಿ ಬೆಳಗದೆ, ಮಂದವಾಗಿ ಹೊಳೆಯುವ ಇತರ ಧೂಮಕೇತುಗಳ ಪಂಗಡಕ್ಕೆ ಸೇರಿಬಿಡುವ ಅಪಾಯ ಎದುರಾಗಿದೆ. ಅದಕ್ಕೆ ಕಾರಣ, ಕಾಮೆಟ್‌ಗಳು ಮಂಜು-ಧೂಳಿನ ಉಂಡೆಗಳಾದ್ದರಿಂದ, ಸೂರ್ಯನ ಹತ್ತಿರಕ್ಕೆ ಬಂದಷ್ಟೂ ಹೆಚ್ಚು ಕರಗುತ್ತವೆ. ಇಸಾನ್ ತನ್ನ ಸೂರ್ಯ ಪ್ರದಕ್ಷಿಣೆಯಲ್ಲೇ ಅತಿ ಸನಿಹವಾದ, ಹತ್ತೂಕಾಲು ಲಕ್ಷ ಕಿ.ಮಿ. ದೂರಕ್ಕೆ ಧಾವಿಸುತ್ತಿದೆ. ನಮಗೆ ಈ ದೂರ ಬಹಳಷ್ಟೆನಿಸಿದರೂ, ಇದು ಭೂಮಿಗಿಂತ 100 ಪಟ್ಟು ಹತ್ತಿರ. ಇಲ್ಲಿ ಸೂರ್ಯನ ತಾಪಮಾನದ ಪ್ರಭಾವ ಹೆಚ್ಚಿದೆ. ಇಸಾನ್ ಸೂರ್ಯನ ತಾಪಮಾನವನ್ನು ತಡೆದು, ತನ್ನ ಪಥದಲ್ಲಿ ಮುಂದುವರೆಯುವುದೋ, ಅಥವಾ ಇಡಿಯಾಗಿ ಆವಿಯಾಗುವುದೋ ಎಂಬಲ್ಲಿ ಅದರ ಭವಿಷ್ಯ ನಿರ್ಧಾರವಾಗಲಿದೆ. ಹಿಂದೊಮ್ಮೆ 1965ರಲ್ಲಿ ಹೀಗೆಯೇ ಭಾರಿ ನಿರೀಕ್ಷೆ ಮೂಡಿಸಿದ್ದ ಐಕಿಯಾ-ಸೇಕಿ ಧೂಮಕೇತು ಆವಿಯಾಗಿ ನಿರಾಶೆ ಮೂಡಿಸಿತ್ತು.
ಧೂಮಕೇತುಗಳ ಸ್ವಭಾವ ಹೀಗೆಯೇ ಎಂದು ಷರಾ ಬರೆಯುವುದು ಅಸಾಧ್ಯ. ಆದರೆ ಇಸಾನ್ ಸೂರ್ಯನನ್ನು ತಪ್ಪಿಸಿಕೊಂಡರಂತೂ ಭೂವಾಸಿಗಳಿಗೆ ಮತ್ತೊಂದು ದೀಪಾವಳಿ. ಆಗ ಇಸಾನ್ ತನ್ನ ಸುಂದರವಾದ ಬಾಲವನ್ನು ಹರಡಲಿದ್ದು, ಇದನ್ನು ನೋಡುವುದೇ ಒಂದು ಸಂಭ್ರಮ.
ಅದೇಕೋ ತಿಳಿದಿಲ್ಲ, ವಿಶ್ವದೆಲ್ಲೆಡೆ ಹಲವು ಧರ್ಮಗಳ ನಂಬಿಕೆಯ ಪ್ರಕಾರ ಧೂಮಕೇತುಗಳು ಅಪಶಕುನಗಳು. ಭಾರತೀಯ ಪುರಾಣಗಳಲ್ಲಿಯೂ ಧೂಮಕೇತುವಿನ ದರ್ಶನವಾದರೆ ಯುದ್ಧಗಳಾಗುತ್ತವೆ ಎಂಬಂತೆ ಬಿಂಬಿಸಲಾಗಿದೆ. ಆದರೆ ಇವ್ಯಾವುದಕ್ಕೂ ವೈಜ್ಞಾನಿಕವಾಗಿ ಪುಷ್ಟಿ ದೊರೆತಿಲ್ಲ. ಧೂಮಕೇತುವಿನಿಂದ ಭೂಮಿಗೆ ಹಾನಿಯೂ ಇಲ್ಲ. ಏಕೆಂದರೆ ಇಸಾನ್ ಹಾಗೂ ಭೂಮಿಯ ನಡುವೆ ಸಾಕಷ್ಟು ಅಂತರವಿದೆ.
ಇಸಾನ್‌ನಂಥ ಪ್ರಕಾಶಮಾನ ಧೂಮಕೇತುಗಳು ಒಬ್ಬನ ಜೀವಾವಧಿಯಲ್ಲಿ ಕಾಣಬಹುದಾದ ಅತ್ಯಂತ ರಮಣೀಯ ದೃಶ್ಯಗಳಲ್ಲೊಂದು. ಇದನ್ನು ತಪ್ಪಿಸಿಕೊಂಡರೆ ಮತ್ತೊಮ್ಮೆ ಅವಕಾಶ ಸಿಗಲಾರದು. ಬರಿಗಣ್ಣಿನಿಂದ ನೋಡುವುದರಲ್ಲಿ ಹಾನಿಯೇನಿಲ್ಲ.

- ಕಾರ್ತಿಕ್ .ಕೆ.ಎ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments