ಸಾಪ್ತಾಹಿಕಪ್ರಭ

ಕುಮಾರ ಶಿಖರ

ಎತ್ತ ನೋಡಿದರತ್ತ ಹಸಿರು, ಕಣ್ಣು ಹಾಯಿಸಿದಷ್ಟೂ ದೂರ ಶುಭ್ರ ನೀಲಾಕಾಶ. ಡಿಕ್ಕಿ ಹೊಡೆದುಬಿಡಬಹುದೇನೋ ಎಂಬಂತೆ ತೇಲಿಬರುವ ಮೋಡಗಳ ಸಾಲು-ಸಾಲು. ಎತ್ತಿಕೊಂಡು ಹೋಗುತ್ತೇನೆಂದು ಭಯ ಹುಟ್ಟಿಸುತ್ತಾ ಬರುವ ಗಾಳಿ. ಇಷ್ಟು ಎತ್ತರಕ್ಕೆ ಬಂದಿದ್ದೇವೆಯೇ ಎಂಬ ಕುತೂಹಲ ಆ ಕ್ಷಣ ನಿಮ್ಮಲ್ಲಿ. ಸಮುದ್ರ ಮಟ್ಟದಿಂದ 1300 ಮೀಟರ್ ಎತ್ತರದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಪರ್ವ್ವತವನ್ನು ಮೆಟ್ಟಿ ನಿಂತಾಗ ಆಗುವ ಅನುಭವವಿದು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದವರು ದೇವಸ್ಥಾನದ ಹಿಂಬದಿ ಕಾಣುವ ಅಚ್ಚ ಹಸುರಿನ ಪರ್ವತವನ್ನು ನೋಡದೆ ಇರಲಾರರು. ಸುಬ್ರಹ್ಮಣ್ಯನೇ ಈ ಬೆಟ್ಟದಿಂದ ಇಳಿದು ಬಂದಿರುವನೇನೋ ಎಂಬ ಭಕ್ತಿಭಾವ ಮೂಡುತ್ತದೆ. ಸಹಜವಾಗಿ ಈ ಪರ್ವತವನ್ನು ಒಮ್ಮೆ ಹತ್ತಿ ಬರಬೇಕೆಂದು ಅದಮ್ಯ ಆಶೆ ಆಗದಿರದು.
ಕುಮಾರಪರ್ವತ ಕಾಡು-ಬೆಟ್ಟ-ಗುಡ್ಡಗಳ ಸಂಗಮ. ಕುಮಾರಧಾರ ನದಿ ಸೃಷ್ಟಿಗೆ ಕಾರಣವಾದ ಪರ್ವತವಿದು. ಸುಬ್ರಹ್ಮಣ್ಯದಿಂದ ಈ ಪರ್ವತದ ತುದಿಗೆ ಬರೋಬರಿ 13 ಕಿ.ಮಿ. ತುತ್ತ ತುದಿ ತಲುಪಲು ಅರ್ಧ ದಿನ ಬೇಕೇ ಬೇಕು. ಕಡಿದಾದ ಬೆಟ್ಟಗುಡ್ಡ, ರಕ್ತಕ್ಕಾಗಿ ಸಂಚು ಹೂಡಿರುವ ಜಿಗಣೆಗಳು, ಆಯ ತಪ್ಪಿದರೆ ಭಕ್ಷಿಸಲು ಕಾದಿರುವ ಕಮರಿ-ಕಂದಕಗಳು ನಿಮ್ಮನ್ನು ಸ್ವಾಗತಿಸುತ್ತದೆ. ಸುಬ್ರಹ್ಮಣ್ಯದಿಂದ ಹೊರಟ ನಿಮಗೆ ಕಾಡಿನ ಪ್ರಯಾಣ ಚೇತೋಹಾರಿ ಅನುಭವ ನೀಡುತ್ತದೆ. ಕನಿಷ್ಠ 5-6 ಕಿ.ಮೀ ನೀವು ಹಸಿರು  ಕಾನನದೊಳಗೆ ಪ್ರಯಾಣಿಸುತ್ತೀರಿ. ಹಕ್ಕಿಗಳ ಸವಿಗಾನ, ಧುಮ್ಮಿಕ್ಕುವ ನೀರಿನ ಝಲಝುಲ ಧಾರೆ, ತಂಪಾದ ಗಾಳಿ ನಿಮ್ಮನ್ನು ಮುದಗೊಳಿಸದೆ ಇರದು.
ಈ ಪ್ರಯಾಣ ಮುಗಿದ ನಂತರವೇ ನಿಜವಾದ ಚಾರಣ. ಕಡಿದಾದ ಬೆಟ್ಟ-ಗುಡ್ಡ ನಿಮ್ಮನ್ನು ಹೈರಾಣಾಗಿಸುತ್ತದೆ. ಕಾಲು ಮುಂದಕ್ಕೆ ಕೀಳಲಾರವು, ದೇಹ ಚಲಿಸಲಾರದು, ಸಾಕಪ್ಪ-ಸಾಕು ಈ ಚಾರಣವೂ ಬೇಡ ಇಳಿದುಬಿಡೋಣ ಎನ್ನಿಸಿಬಿಡುತ್ತದೆ. ಹಾದಿ ಹಿಡಿದಂತೆ ದಾರಿ ಚಿಕ್ಕದಾಗುತ್ತದೆ. ತಂತಿಯ ಮೇಲೆ ನಡೆದಂತೆ. ಅತ್ತ ಧರಿ, ಇತ್ತ ಪುಲಿ ಎಂಬ ಸ್ಥಿತಿ. ಈ ಸವಾಲನ್ನು ನೀವು ಗೆದ್ದಿರೆಂದರೆ ಕುಮಾರಪರ್ವತದ ಚಾರಣದ ಕನಸು ನನಸಾದಂತೆಯೇ.
ಬೆಟ್ಟ ತಲುಪುತ್ತಿದ್ದಂತೆ 13 ಕಿ.ಮೀ. ದೂರ ಏರಿ ಬಂದ ಸುಸ್ತೆಲ್ಲ ಮಾಯವಾಗಿಬಿಡುತ್ತದೆ. ನಿಮ್ಮ ಮೈ-ಮನಸ್ಸುಗಳಲ್ಲಿ ಹುಮ್ಮಸ್ಸು, ಹೊಸ ಉತ್ಸಾಹ ಮೂಡುತ್ತದೆ. ಶಿಖರಕ್ಕೆ 1 ದಿನದಲ್ಲಿ ಹೋಗಿ ಬರುವುದು ತುಸು ಕಷ್ಟ. ಆದ್ದರಿಂದ ಆಹಾರ ಪಾನೀಯ, ಹೊದೆಯಲು ವಸ್ತ್ರ ಬೇಕೇ-ಬೇಕು. ಗುಂಪಾಗಿ ಹೋದರೆ ರಾತ್ರಿ ಪರ್ವತದ ತುತ್ತ ತುದಿಯಲ್ಲಿ ಡೇರೆ ಹಾಕಿ, ಅಲ್ಲೇ ಅಡಿಗೆ ಮಾಡಿ ಊಟ ಮಾಡಿಕೊಂಡು, ಬೆಳದಿಂಗಳ ಚಂದ್ರನ ಒಡನಾಟದೊಂದಿಗೆ ರಾತ್ರಿ ಕಳೆದು ಬರಬಹುದು. ಗುಂಪುಗಳಿಲ್ಲದಿದ್ದರೆ ಇಳಿದು ಬಂದು ಗಿರಿಗದ್ದೆಯ ಮಹಾಲಿಂಗೇಶ್ವರ ಭಟ್ಟರ ಮನೆಯಲ್ಲಿ ವಿಶ್ರಾಂತಿ ಪಡೆದು ಕೆಳಗಡೆ ಬರಬಹುದು.
ಕುಮಾರಪರ್ವತವನ್ನು ಸುಬ್ರಹ್ಮಣ್ಯದಿಂದ ಏರಲು ಹೊರಟರೆ ನಿಮಗೆ ಲೆಂಕಿರಿಗುಡ್ಡ, ಗಿರಿಗದ್ದೆ, ಭತ್ತದ ರಾಶಿ, ಅರಣ್ಯ ಇಲಾಖೆಯ ಚೆಕ್‌ಪೋಸ್ಟ್, ಕಲ್ಲುಚಪ್ಪರ, ಶೇಷಪರ್ವತ, ಸಿದ್ಧಪರ್ವತ ಸಿಗುತ್ತದೆ. ಸೂರ್ಯಾಸ್ತ, ಸೂರ್ಯೋದಯ ಕಣ್ತುಂಬಿಸಿಕೊಳ್ಳುವ ಅವಕಾಶ ಬೇರೆಲ್ಲೂ ಸಿಗದು.

- ಬಲ್ಲೇನಹಳ್ಳಿ ಮಂಜುನಾಥ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!