ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ನೀವು ಕಾನೂನು

Mainashree
Updated On : 23 Nov 2013, 6:23 am

ಪೊಲೀಸ್ ಠಾಣೆಯಲ್ಲಿ ಅರ್ಜಿ ಕೊಡಿ
ಉಮೇಶ್, ಬೆಳಗಾವಿ
ಓಣಿಯೊಂದರಲ್ಲಿ ಜಗಳ ಬಿಡಿಸಲು ಹೋದಾಗ ಗಂಡ ಹೆಂಡಿರು ಸೇರಿಕೊಂಡು ನನ್ನ ವಿರುದ್ಧ ಸಿಪಿಸಿ ಕಲಂ 354ರನ್ವಯ (ಮಾನಭಂಗ ಮಾಡುವ ಉದ್ದೇಶದಿಂದ ಹೊಡೆಯುವುದು ಅಥವಾ ಬಲಪ್ರಯೋಗ ಮಾಡುವುದು) ಪೊಲೀಸರಿಗೆ ದೂರು ನೀಡಿದ್ದಾರೆ ಹಾಗೂ ಸುಳ್ಳು ಸಾಕ್ಷಿಗಳ ಹೆಸರುಗಳನ್ನು ಸೇರಿಸಿದ್ದಾರೆ. ಈ ರೀತಿ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಹೇಗೆ ತಡೆಯುವುದು? ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಬಹುದೇ? ಕೇಸಿನ ಫಲಿತಾಂಶ ಏನಾಗಬಹುದು?
- ಪೊಲೀಸ್ ಠಾಣೆಯಲ್ಲಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಜತೆಗೆ ಜಿಲ್ಲಾ ಎಸ್‌ಪಿಯವರನ್ನು ಕಂಡು ಅರ್ಜಿಯನ್ನು ಕೊಡಿ. ಆದರೂ ಪ್ರಯೋಜನವಿಲ್ಲದಿದ್ದರೆ ಒಬ್ಬ ಒಳ್ಳೆಯ ವಕೀಲರನ್ನು ನೇಮಿಸಿಕೊಂಡು ಸರಿಯಾಗಿ ಪಾಟೀಸವಾಲನ್ನು ಮಾಡಿಸಿ. ಒಂದು ವೇಳೆ ಸಹಾಯವಾಗಬಹುದು. ಪ್ರಕರಣ ಸಾಬೀತಾದರೆ ಎರಡು ವರ್ಷ ಶಿಕ್ಷೆ ಅಥವಾ ದಂಡ ಅಥವಾ ಎರಡೂ ಆಗಬಹುದು. ಹಾಗಾದಾಗ ನೀವು ಮೇಲ್ಮನವಿಯನ್ನೂ ಸಲ್ಲಿಸಬಹುದು. ಯಾರಿಗೆ ಮನವಿ ಸಲ್ಲಿಸಿದರೂ ಪ್ರಕರಣ ಅಷ್ಟು ಬೇಗ ಮುಕ್ತಾಯವಾಗುವುದಿಲ್ಲ.

ಹಿತೈಷಿಗಳ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಿ
ಹೆಸರು, ಊರು ಬೇಡ
ಮೊದಲನೇ ಹೆಂಡತಿಯ ನಿಧನದ ನಂತರ ಎರಡನೇ ಬಾರಿ ಮದುವೆಯಾಗಿದ್ದೇನೆ. ಅದು ನೋಂದಣಿಯಾಗಿದೆ. ಹೆಂಡತಿಗೆ ನನ್ನ ಬಗ್ಗೆ ಕಾಳಜಿಯಿಲ್ಲ. ನನಗೂ ಸಾಕಾಗಿದೆ. ಬಿಡುಗಡೆ ಸಾಧ್ಯವೇ?
- ಕಾನೂನಿನಂತೆ ಸಾಧ್ಯ. ಆದರೆ ಈ ಇಳಿವಯಸ್ಸಿನಲ್ಲಿ ಕೋರ್ಟಿಗೆ ಹೋಗಿ ತೀರ್ಮಾನವಾಗುವುದಕ್ಕೆ ಎಷ್ಟೋ ವರ್ಷಗಳು ಹಿಡಿಯುತ್ತವೆ. ಬದಲಾಗಿ ನೀವಿಬ್ಬರೂ ನಿಮಗೆ ಬೇಕಾದ ಹಿತೈಷಿಗಳ ಬಳಿ ಮಾತಾಡಿ ರಾಜಿಯಾಗುವುದಾಗಲೀ ಅಥವಾ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನವನ್ನಾಗಲೀ ಮಾಡಿಕೊಳ್ಳುವುದು ಲೇಸು.

ಕರಾರುಪತ್ರ ರದ್ದುಗೊಳಿಸಿ
ವೀರೇಶ್, ಹುಬ್ಬಳ್ಳಿ
1995ರಲ್ಲಿ ಜಮೀನು ಮಾರಾಟಕ್ಕೆ ಛಾಪಾ ಕಾಗದದ ಮೇಲೆ ಕರಾರು ಪತ್ರ ಮಾಡಿಕೊಂಡಿದ್ದೇವೆ. ಆದರೆ ಖರೀರದಿದಾರರು ಪತ್ರ ನೋಂದಣಿ ಮಾಡಿಸಲು ಬರುತ್ತಿಲ್ಲ. ಅಲ್ಲದೇ ಹಣವನ್ನೂ ಕೊಡುತ್ತಿಲ್ಲ. ಜಮೀನು ಅವರ ಸ್ವಾಧೀನದಲ್ಲಿದೆ. ಪರಿಹಾರವೇನು?
- ಅವರಿಗೆ ಲಾಯರ್ ಮೂಲಕ ನೋಟೀಸ್ ಕೊಟ್ಟು ಕರಾರು ರದ್ದಾಗಿದೆಯೆಂದೂ, ಜಮೀನು ವಾಪಸ್ ಕೊಡುವಂತೆಯೂ ತಿಳಿಸಿ. ನಂತರ ಅಗತ್ಯವಾದರೆ ನ್ಯಾಯಾಲಯದಲ್ಲಿ ದಾವಾ ಹಾಕಬಹುದು.

ದಾವಾ ಹಾಕಿ ಮೇಘರಾಜ್
ತಂದೆಯ ಅಣ್ಣಂದಿರು ಪಿತ್ರಾರ್ಜಿತ ಆಸ್ತಿ ಹಿಸ್ಸೆ ಮಾಡಿಕೊಂಡರು. ಅವರು ತೀರಿಹೋದ ಮೇಲೆ ಅವರ ಹೆಂಡತಿ, ಮಕ್ಕಳು ಆ ಆಸ್ತಿಗಳನ್ನು ಮಾರಿಕೊಂಡಿದ್ದಾರೆ. ನಮಗೆ ಏನೂ ಕೊಟ್ಟಿಲ್ಲ. ಮನೆಯು ನಮ್ಮ ತಂದೆಯ ಸ್ವಯಾರ್ಜಿತ. ಆದರೆ ಅದು ದೊಡ್ಡಪ್ಪನ ಹೆಸರಿನಲ್ಲಿದೆ. ಈಗ ಏನು ಮಾಡಬೇಕು?
- 1987ರಿಂದ ಇಲ್ಲಿಯವರೆಗೆ ನೀವು ಏಕೆ ಸುಮ್ಮನೆ ಕೂತಿದ್ದೀರಿ? ಈಗಲೂ ಕಾಲ ಮಿಂಚಿಲ್ಲ. ನ್ಯಾಯಾಲಯದಲ್ಲಿ ತಂದೆಯ ಸ್ವತ್ತಿಗೆ ದಾವಾ ಹಾಕಿ. ಸಹಾಯವಾಗಬಹುದು.

- ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments