'ಬಂಡ್ವಾಳಿಲ್ಲದ ಬಡಾಯಿ' ಕೈಲಾಸಂ ಅವರ ಪ್ರಸಿದ್ಧ ನಾಟಕಗಳಲ್ಲೊಂದು. ಅತ್ಯಂತ ಯಶಸ್ವಿಯಾದ ನಾಟಕ. ಅವರ ಇತರ ನಾಟಕಗಳಂತೆ ಈ ನಾಟಕದಲ್ಲೂ ಹಾಸ್ಯದ ಹರಿವು ಸಮೃದ್ಧ. ಅಹೋಬ್ಲು ಮತ್ತು ಜೀವು ಮಗನಾಗಿ ವೇದಿಕೆಗೆ ಬರುವ ಕಡುಕಪ್ಪಿನ ದಡಿಯ, ಚೆಡ್ಡಿ, ಕೋಟು, ಒಂದು ಕೈ ಉದ್ದ ಇನ್ನೊಂದು ಗಿಡ್ಡ, ಕೋಟಿನ ಗುಂಡಿ ಏರುಪೇರು, ಜಡೆ ಹೂ, ಟೋಪಿ ಎಲ್ಲ ಸೊಟ್ಟಂಪಟ್ಟ! ಮೂಗಿನಲ್ಲೊಂದು ಬಳಪ ಅಂಟಿಸಿಕೊಂಡು ಗೊಣ್ಣೆ ಸುರಿಯುತ್ತಿದ್ದಂತೆ ಕಾಣಿಸಿಕೊಂಡರೆ ಯಾರಿಗೆ ತಾನೆ ನಗು ಬರುವುದಿಲ್ಲ?
ಬಾಯಿ ಬಿಡದೆ ನಗಿಸಬಲ್ಲ ಮುದ್ಮಣಿ ಇನ್ನು ಬಾಯಿಬಿಟ್ರೆ? ದೇವರೇ ಗತಿ! ತನಗೆ ಬೇಕಾದ ಐಟಂಗಳನ್ನು ಡಿಕ್ಟೇಟ್ ಮಾಡುತ್ತಾ 'ಸ್ಫರ್ಕೆ, ದ್ಬೆಲ್ಲಾ, ನ್ಮಿಠಾಯಿ, ತ್ಖೊಬ್ಬಿ ನ್ಮಿಠಾಯಿ, ತ್ಫಾಕಂಟೊಪ್ಪು, ಫ್ರರ್ ಫ್ರರ್ಬಾಗ' ಅಂತ ಹೇಳಿದಾಗ ಎದುರಿಗಿದ್ದವರ ಮುಖಕ್ಕೆ ಪ್ರಕ್ಷಾಳನ! ಆದ್ದರಿಂದ ಅವನಿಗೆ ಇನ್ನೊಂದು ಹೆಸರು 'ಪನ್ನೀರುಟಾನಿ' ಅಂತ.
ಕೈಲಾಸಂ ಅವರ ಹಾಸ್ಯ ಮಾಧ್ಯಮದ ಬಳಕೆಯ ಬಿರಿಸು ಎಷ್ಟಾಗಿತ್ತೆಂದರೆ ಅನೇಕ ವಿಚಾರಗಳು ಜನರಿಗೆ ತಿಳಿಯದೆ ಹಾರಿ ಹೋಯಿತು. ತಿಳಿದುಕೊಂಡವರಿಗೆ ಅಗಾಧವಾಗಿ ದಕ್ಕಿತು. 'ಮುದ್ಮಣಿ' ಪಾತ್ರ ಮನರಂಜನೆಗೆ ಸೃಷ್ಟಿಸಿದ ಪಾತ್ರವಲ್ಲ. ಒಬ್ಬ ಬುದ್ಧಿಮಾಂದ್ಯ ಮಗನನ್ನು ಇಟ್ಟುಕೊಂಡು ಜೀವನ ಸಾಗಿಸುವ ಮಧ್ಯಮ ವರ್ಗದ ದಂಪತಿಗಳ ಧಾರುಣ ಚಿತ್ರಣ. ಮಾಸ್ತಿಯವರು ಗಮನಿಸಿದ ಹಾಗೆ ನಗುವ ತುಟಿಯೊಂದಿಗೆ ಇಲ್ಲಿ ತೊಯ್ದೆದೆ ಕಾಣಿಸುತ್ತದೆ. ತುಟಿಯ ಮೇಲಣ ನಗೆಗಿಂತ ಇಲ್ಲಿ ಕಣ್ಣಿನ ತೇವವೇ ಹೆಚ್ಚು. ಅನೇಕ ವೇಳೆ ಈ ತೇವ ಹನಿಗೂಡಿ ಹಳ್ಳವಾಗದಿರಲೆಂದೇ ಭಾವ ನಗೆಯಾಗಿ ಹೊರಳಿದೆ. ಒಬ್ಬ ಮನಃಶಾಸ್ತ್ರಜ್ಞರಾದಂಥ ಕೈಲಾಸಂ ಮುದ್ಮಣಿ ಪಾತ್ರವನ್ನು ಮತ್ತು ಅದರ ಸುತ್ತಮುತ್ತಲಿನ ಪಾತ್ರಗಳನ್ನು ಎಳೆಎಳೆಯಾಗಿ ಬಿಡಿಸಿದ್ದಾರೆ. 'ಸಫರಿಂಗ್ ಅಂಬೋದು ಸರ್ವತ್ರ... ಸತ್ಮೇಲೇ ಇವುಗ್ಳಿಂದ ವಿಮೋಚ್ನೆ' ಎನ್ನುವ ಮಾತನ್ನು ಒಪ್ಪಿಕೊಂಡ ಅಹೋಬ್ಲು ತನ್ನ ಬಾಳನ್ನು ಬಂದಹಾಗೆ ಸ್ವೀಕರಿಸುತ್ತಾನೆ. ತನ್ನ ಬುದ್ಧಿಮಾಂದ್ಯ ಮಗನನ್ನೇ ತಾನೇ ರೇಗಿಸುತ್ತಾನೆ.
'ಈ ಕರೀ ನಾಗ್ರ ಹುತ್ತ ಬಿಟ್ಟು ಹೊರಗ್ಹೊಡೋ ಅಷ್ಟೊತ್ಗೆ ಸ್ಕೂಲು ಮುಚ್ಬಿಟ್ಟಿರ್ತಾರೆ' ಅನ್ನೋದು, 'ಮಾಧ್ವರ ಮಗೂ ಹಣೇಲಿ ಗಂಧ ಹೇಗೆ?' ಅನ್ನುತ್ತಾ ತಾನೇ ಸಮಾಧಾನ ಹೇಳ್ತಾ, ನನ್ಮಗನ ಬಣ್ಣಕ್ಕೆ 'ಸಾದು'ನೇ ಗಂಧದ ಥರ ಕಾಣುತ್ತೆ ಅನ್ನೋದನ್ನ ಕೇಳ್ತೀವಿ. ಕಪ್ಪಾಗಿದ್ರು ಕೆಂಪಗೆ ಕಾಣೋ ಹಾಗೆ ಫೋಟೊ ತೆಗೆಯೋಕೆ ಆಗೋದಿಲ್ವೆ? ಎಂದು ತಾಯಿ ಕೇಳಿದಾಗ 'ಣಜಡ ಣಜಡ, ಝಿಜ ಛಟಿಡಢಿಜ್ಠ ್ಝಡ ್ಝಟಿ ಝಿಜ ಟಿಜ್ಜಛಡ್ಝಿಢಜ, ಫೋಟೊ ನೆಗೆಟಿವ್ನಲ್ಲಿ' ಎನ್ನುತ್ತಾನೆ. 'ಹೆತ್ತವರಿಗೆ ಹೆಗ್ಗಣ ಮುದ್ದು ಸರಿ, ಆದರೆ ಹೆಗ್ಗಣಕ್ಕೆ ಹೆತ್ತವರು ಮುದ್ದೇ?' ಎಂಬ ಅರ್ಥಗರ್ಭಿತ ಪ್ರಶ್ನೆ ಎತ್ತುತ್ತಾರೆ. 'ನನ್ನ ಹೀಗೆ ಹೆತ್ಬಿಟ್ರಲ್ಲಾಂತ ಎಷ್ಟು ಬೈಕೊಂಡಿರಬೇಕು ಅಲ್ವಾ?' ಎಂದು ಅಹೋಬ್ಲು ತನ್ನನ್ನು ತಾನೇ ಕೇಳಿಕೊಳ್ಳುತ್ತಾನೆ.
ಮುದ್ಮಣಿ ಹುಟ್ಟಿದ್ದು ಸರಸ್ವತಿ ಪೂಜೆ ದಿನ. ಮುಂದಕ್ಕೆ ಮೇಧಾವಿ ಆಗಿ ಮನೆತನಕ್ಕೆ ಯಶಸ್ಸು, ಸಂಪತ್ತು ಸಂಪಾದ್ಸೋದ್ರಲ್ಲಿ ಸಂಶಯವೇನೂ ಇಲ್ಲಾಂತ ಅವನಿಗೆ ಶಾರದಾ ಪ್ರಸಾದ ಅಂತ ಹೆಸರು ಇಡ್ತಾಳೆ ಅಜ್ಜಿ. ಆದರೆ ಅಪ್ಪ, ಅಮ್ಮ, ಮಾಮ, ತಾತ, ಅನ್ನೋದೆ ಸಮಸ್ಯೆಯಾಗಿರುವಾಗ ಅವನನ್ನು ಒಬ್ಬ ನವಿಲುವಾಹನನ್ನ (ಕೈಲಾಸಂ ಕಾಲದಲ್ಲಿ ಮಯಿಲುವಾಹನಂ ಅಂತ ಮಕ್ಕಳ ತಜ್ಞ ವೈದ್ಯರೊಬ್ಬರಿದ್ದರು) ಕರೆದು ಆಪರೇಷನ್ ಮಾಡ್ಸೋದು ಬಿಟ್ಟು 'ಮೆನ್ಸಪ್ಪೋಸಸ್ ಗಾಡ್ ಡಿಸ್ಪೋಸಸ್' ಅಂತ ತೆಪ್ಪಗಿದ್ಬಿಟ್ಟೆ ಅಂತ ಅಹೋಬ್ಲು ತನ್ನ ತಪ್ಪನ್ನ ಒಪ್ಪಿಕೊಳ್ಳುತ್ತಾನೆ. ಆಗಿನ ಕಾಲಕ್ಕೆ ಬುದ್ಧಿಮಾಂದ್ಯ ಬಾಲಕರಿಗೆ ವಿಶೇಷ ಶಾಲೆಗಳಿರಲಿಲ್ಲ. ಆದ್ದರಿಂದ ಮುದ್ಮಾಣಿ ಮುತ್ತು ಕಿವುಡರ ಶಾಲೆಗೆ ಸೇರಿಸುತ್ತಾನೆ. ಅದಕ್ಕೂ ಕಾರಣ ಕೊಡ್ತಾರೆ ಕೈಲಾಸಂ. ಫ್ಯೂಚರ್ ಲೈಫ್ನಲ್ಲಿ ಇವನಿಗೆ ಸ್ಪೀಚ್ನಲ್ಲಿ ಇರೋ ಇಂಪೆಡಿಮೆಂಟ್ಸ್ ಮತ್ತು ರಿಸಲ್ಟೆಂಟ್ ಗೆಸ್ಚರ್ನಲ್ಲೇ ಓವರ್ಕಮ್ ಮಾಡಬೇಕು. ಕಿವುಡರ ಶಾಲೆಯ ಟೀಂನಲ್ಲಿ ಸೆಂಟರ್ ಫಾರ್ವರ್ಡ್ ಆಗಿ ಭಾರಿ ಗೋಲುಗಳನ್ನು ಮುದ್ಮಣಿ ಹೊಡೆದದ್ದನ್ನು ಹೇಳಿ, ಆ ಪಂದ್ಯ ಆಡಿದ್ದು ಬ್ಲೈಂಡ್ ಸ್ಕೂಲ್ ವಿರುದ್ಧ ಎಂದು ಲೇವಡಿ ಮಾಡ್ತಾರೆ.
ನಾಲಿಗೆ ದಪ್ಪ ಆಗಿ ಮುಂದೆ ಚಾಚಿ, ಜೊಲ್ಲು ಜಲಪಾತದ ನಡುವೆ ಬರುವ ಮಾತುಗಳ ಉಚ್ಛಾರಣೆ ಸರಿಯಾಗಿರಲು ಹೇಗೆ ಸಾಧ್ಯ ಎಂದು ಒಮ್ಮೆ ವಾಕ್ ಮತ್ತು ಶ್ರವಣ ವಿಜ್ಞಾನ ತಜ್ಞ ಡಾ.ನ. ರತ್ನ ಅವರು ಕೈಲಾಸಂ ಸ್ಮರಣೆಯಲ್ಲಿ ಹೇಳಿದ್ದರು. (ಡಾ.ನ. ರತ್ನರವರು ಚಿಕ್ಕಂದಿನಿಂದಲೂ ಮುದ್ಮಣಿ ಪಾತ್ರ ಮಾಡಿದವರು.) 'ಪಾಕಂಪೊಪ್ಪು' ಮುದ್ಮಣಿ ಬಾಯಲ್ಲಿ 'ತ್ಫಾಕಂಟೊಪ್ಪು' ಆಗೋದು ಸಹಜ. ಸುರ್ ಸುರ್ ಬಾಣ ಫುರ್ ಫುರ್ ಬಾಗ ಅನ್ನೋದಕ್ಕೂ ಕನ್ನಡ 'ಸ'ನ ಇಂಗ್ಲಿಷ್ 'ಎಫ್' ಆಗಿ ಬರೀಬೇಕೂಂತಾರೆ. ಚಿರ್ರಾಯ್ರು ಎಂಬ ಮಾತಿನ ಮೂಲಕ ಕೈಲಾಸಂ ತಿಳಿಸುತ್ತಾರೆ.
ಮುದ್ಮಣಿ ಅಂಥ ಮಗನ ಮುಂದಿಟ್ಟುಕೊಂಡು ಹೇಗೇ ಜೀವನ ನಡೆಸಬೇಕು ಅಂತ ಅಹೋಬ್ಲು ಒಮ್ಮೆ ಹೆಂಡ್ತಿಗೆ ಹೀಗೆ ಹೇಳ್ತಾನೆ. 'ರೇಗ್ಬೇಡ ಜೀವು, ಗಂಡು ಮಕ್ಕಳ್ನ ಸಾಕೊ ದಾರಿ ಗಂಡಸರಿಗೆ ಗೊತ್ತೆ ಹೊರ್ತು, ಹೆಂಗಸರಿಗೆ ಗೊತ್ತಿಲ್ಲ. ತಟ್ಕೊಂಡು ಮುದ್ದಿಟ್ಟು ಮನೇಲಿ ಸಾಕಿದ ಗಂಡ್ಮಕ್ಳು ಮುಂದಕ್ ಬೆಳೆದು ಮನೆ ಹೊಸ್ಲು ದಾಟಿ... ಮೀಟ್ ಆಗೊ ಪ್ರಪಂಚ ಕಠಿಣ ಪ್ರಪಂಚ... ಬಾಬಾಂತ ತಟ್ಕೊಂಡು ಮುದ್ದಿಡೋ ಪ್ರಪಂಚವಲ್ಲ. ಗಂಡಮಕ್ಳನ್ನ ತಕ್ಕಮಟ್ಗೆ ಜಬರ್ದಸ್ತ್ನಲ್ಲಿ ಬೆಳ್ಸಿದ್ರೇನೇ ಮೈಯಿ, ಮನಸ್ಸು, ಗುಂಡಿಗೆ ಗಟ್ಟಿಯಾಗಿ ಸಮಾಜದಲ್ಲಿ ಒದಗೋ ಅನಿವಾರ್ಯಗಳ್ನ...ನಾನು ಈಗ ಹೇಗೆ ಎದ್ರಸ್ತೇನೊ ಹಾಗ್ಯೇ ಎದ್ರಸೋಕೆ ಚೈತನ್ಯ ಬರುತ್ತೆ... ಈ ಮಾತುಗಳಲ್ಲಿ ನಾನಾ ಕಣ್ಣುಗಳ ಮಧ್ಯ ಹೇಗೆ ನಗ್ತಾ ನಗ್ತಾ, ನಗಸ್ತಾ ನಗಸ್ತಾ ಬಾಳಬೋದು ಅಂತ ನಮಗೆ ಮುದ್ಮಾಣಿ ಮುಖಾಂತರ ತಿಳಿಸಿದ್ದಾರೆ.
ಗ್ರಹಣ ಹಿಡಿದ್ರೂ ಸ್ವಲ್ಪ ಕಾಲವಾದ ಮೇಲೆ ಬಿಡುತ್ತೆ. ಆದರೆ 'ಜೀವು' ಎಂಬ ಎಟರ್ನಲ್ ಮದರ್ ಮೇಲೆ ಮುದ್ಮಾಣಿ ಎಂಬ ಸನ್ ತನ್ನ ಶಾಡೋವನ್ನ ಎಷ್ಟು ಕಾಲ ಬಿಟ್ಟಿರುತ್ತಾನೋ ಅಂತಾ 'ಎಕ್ಲಿಪ್ಸ್ ಆಫ್ ದಿ ಅರ್ಥ್' ಎಂಬ ಹೊಸ ಸಂಶೋಧನೆ ಮೂಲಕ ಕೈಲಾಸಂ ನಮ್ಮುಂದಿಡುತ್ತಾರೆ.
- ಕೃಷ್ಣಸುಬ್ಬರಾವ್