ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಮೂರು ಪ್ರತಿಭೆಗಳ ಹದವಾದ ರಸಪಾಕ

Mainashree
Updated On : 23 Nov 2013, 6:13 am

ಅದು ದೇವಗಿರಿಯ ರಾಜಸಭೆ. ದೆಹಲಿಯ ರಾಜ ಅಲ್ಲಾವುದ್ದೀನ್ ಖಿಲ್ಜಿ ತನ್ನ ರಾಜ್ಯ ವಿಸ್ತರಣೆ ಮಾಡುತ್ತ ದೇವಗಿರಿಯವರೆಗೂ ಬಂದು ಅದನ್ನು ಆಕ್ರಮಿಸಿ ತನ್ನ ವಶಮಾಡಿಕೊಂಡಿದ್ದ. ದೆಹಲಿಗೆ ಮರಳುವ ಮೊದಲು ಕೆಲಕಾಲ ದೇವಗಿರಿಯಲ್ಲಿ ಇದ್ದು ರಾಜ್ಯಭಾರ ನಡೆಸುತ್ತಿದ್ದ ಸಮಯ ಅದು.
ದೇವಗಿರಿಯ ರಾಜನ ಆಸ್ಥಾನದಲ್ಲಿ ಆಗ ಪ್ರಸಿದ್ಧನಾಗಿದ್ದ ಆಸ್ಥಾನ ಗಾಯಕನೆಂದರೆ ಗೋಪಾಲ ನಾಯಕ. ಈಗಿನ ಕರ್ನಾಟಕೀ ಪದ್ಧತಿಯ ಮಹಾನ್ ಸಂಗೀತಗಾರನಾಗಿದ್ದ ಗೋಪಾಲ ನಾಯಕ ಕೇವಲ ದೇವಗಿರಿಯಷ್ಟೇ ಅಲ್ಲದೇ ದಕ್ಷಿಣ ಭಾರತದಲ್ಲೆಲ್ಲ ಅದ್ಭುತ ಗಾಯಕ ಎಂಬ ಕೀರ್ತಿ ಪಡೆದಿದ್ದ. ಅಲ್ಲಾವುದ್ದೀನ್ ಖಿಲ್ಜಿ ಸದಾ ರಣಾಂಗಣ, ಯುದ್ಧ, ವಿಜಯದಲ್ಲೇ ತೊಡಗಿದ್ದರೂ ಜೊತೆಜೊತೆಗೆ ಗಾಯಕರ ಬಗ್ಗೆ, ಸಂಗೀತದ ಬಗ್ಗೆ ಅವನಿಗೆ ಸದಾ ಆಸಕ್ತಿ. ಭಾರತದ ಹೊಸ್ತಿಲಾದ 'ದೆಹಲಿ'ಯನ್ನು ಗೆದ್ದು ಹಾಗೆಯೇ ಯುದ್ಧ, ಹೋರಾಟ, ರಾಜ್ಯ ವಿಸ್ತರಣೆ ಇದೆಲ್ಲದರ ನಡುವೆಯೂ ಆಶ್ಚರ್ಯವೆಂಬಂತೆ ತನ್ನ ಆಸ್ಥಾನದಲ್ಲಿ ಸಂಗೀತಗಾರರು, ಕಲಾವಿದರಿಗೆ ಸ್ಥಾನವಿತ್ತಿದ್ದ. ಇಂಥ ಖಿಲ್ಜಿಯ ಆಸ್ಥಾನದಲ್ಲಿದ್ದ ಪ್ರಸಿದ್ಧ ಗಾಯಕನೇ ಅಮೀರ್ ಖುಸ್ರೋ. ಟರ್ಕಿ ಮೂಲದ ಅಮೀರ್ ಖುಸ್ರೋ ವ್ರಜ ದೇಶದಲ್ಲಿ ಹುಟ್ಟಿ, ಧರ್ಮಗುರುಗಳಾದ ದೆಹಲಿಯ ನಿಜಾಮುದ್ದೀನ ಔಲಿಯಾರ ಪರಮ ಶಿಷ್ಯನಾಗಿ ತನ್ನ ವಿಶಿಷ್ಟ ಶೈಲಿಯಿಂದ ಕವ್ವಾಲಿ ಗಾಯನದ ಹರಿಕಾರನಾಗಿ ಹಾಗೂ ಶಾಸ್ತ್ರೀಯ ಗಾಯನದಿಂದಲೂ ಪ್ರಸಿದ್ಧನಾದವನು. ಅದರ ಜೊತೆಗೆ ಮಹಾನ್ ಚಾಣಾಕ್ಷ, ತಂತ್ರಿ, ಬುದ್ಧಿವಂತನಾಗಿ ಒಂದು ರೀತಿಯ ಮುತ್ಸದ್ದಿಯಾಗಿದ್ದ ಕೂಡ.
ಹೀಗಾಗಿ ಈ ದೇವಗಿರಿಯ ದಾಳಿಯಲ್ಲಿ ಖಿಲ್ಜಿಯ ಜೊತೆ ಅಮೀರ್ ಖುಸ್ರೋ ಸಹ ಬಂದಿದ್ದ. ರಾಜ್ಯವನ್ನು ಗೆದ್ದ ಹಮ್ಮಿನಲ್ಲಿದ್ದ ಖಿಲ್ಜಿ ಇನ್ನೂ ಹೋರಾಟದ ಬುದ್ಧಿಯಲ್ಲೇ ಇದ್ದನೇನೋ - ಅಂದು ದೇವಗಿರಿಯ ರಾಜ್ಯಸಭೆಯಲ್ಲಿ ಗೋಪಾಲ ನಾಯಕನ ಕರೆದು ಒಂದು ವಿಧವಾದ ಆಹ್ವಾನ ಎಂಬ ರೀತಿಯಲ್ಲಿ, ಆರು ಸಂಜೆಗಳ ಕಾಲ ಸತತವಾಗಿ ಒಂದು ರಾಗವನ್ನು ಕ್ರಿಯಾತ್ಮಕವಾಗಿ ಹಾಡಿ ಆನಂದಗೊಳಿಸುವಂತೆ ಆಜ್ಞೆ ಮಾಡಿದ.
ಗೋಪಾಲ ನಾಯಕ ಅಂತಿಂಥ ಗಾಯಕನಲ್ಲ, ಮಹಾನ್ ಗಾಯಕನೇ. ಆತನಿಗೆ ಇದು ಆನಂದದ ಆಹ್ವಾನವಾಗಿತ್ತು. ರಾಗ 'ಕದಂಬಕ್‌' ಎಂಬ ಅತ್ಯಂತ ಕ್ಲಿಷ್ಟ ರಚನೆಯುಳ್ಳ ರಾಗವನ್ನು ಆಯ್ದುಕೊಂಡು ಅದರಲ್ಲಿ ಜಯದೇವನ 'ಗೀತಗೋವಿಂದ'ದ 28000 ಶ್ಲೋಕಗಳನ್ನು ಆರು ದಿನ ಹಾಡಿದ ಗೋಪಾಲ ನಾಯಕ. ಭಕ್ತಿಯ ರಸ, ಜೊತೆಜೊತೆಗೆ ನಾದದ ಆನಂದದ ಅಧಿಷ್ಟಾನ, ಸ್ವರ ತಾಳಗಳ ಅಪೂರ್ವ ವಿನ್ಯಾಸಗಳಿಂದ ಅದ್ಭುತ ವಾತಾವರಣದಲ್ಲಿ ಇಡೀ ರಾಜಸಭೆ ಯುದ್ಧದ ನೋವನ್ನು  ಮರೆತು ಮುಗ್ಧವಾಗಿ ಕುಳಿತಿತ್ತು.
ಇತ್ತ ಗೋಪಾಲ ನಾಯಕನ ಗಾಯನ ಪ್ರಾರಂಭವಾಗುತ್ತಲೇ ಅದರ ನಿಜವಾದ ಬಿಸಿ ಹತ್ತಿದ್ದು ಅಮೀರ್ ಖುಸ್ರೋವಿಗೆ. ಏಕೆಂದರೆ ಚಾಣಾಕ್ಷನಾದ ಅವನಿಗೆ ತನ್ನ ರಾಜನಾದ ಖಿಲ್ಜಿಯ ಸ್ವಭಾವ ಚೆನ್ನಾಗಿ ಗೊತ್ತಿತ್ತು. ಇನ್ನೂ ಗೆಲುವು ಎಂಬ ಭಾವದಲ್ಲಿರುವ ಖಿಲ್ಜಿ, ಆತನ ಆಸ್ಥಾನದ ರಾಜಗಾಯಕನಾದ ತನಗೆ ಇದನ್ನು ಮೀರಿಸುವಂತೆ ಹಾಡಲು ಆಹ್ವಾನಿಸಿಯೇ ತೀರುತ್ತಾನೆ ಎಂಬ ಸ್ಪಷ್ಟ ಅರಿವಿತ್ತು. ಎಷ್ಟೆಂದರೂ ಚಾಣಾಕ್ಷನಲ್ಲವೇ? ಜೊತೆಗೆ ಉತ್ತಮ ಹಾಡುಗಾರನೂ ಆಗಿದ್ದ ಖುಸ್ರೋ ಏನು ಮಾಡಿದನೆಂದರೆ ಯಾರಿಗೂ ತಿಳಿಯದಂತೆ ಖಿಲ್ಜಿಯ ಸಿಂಹಾಸನದ ಕೆಳಗೆ ನುಸುಳಿ ಕುಳಿತ. ಗೋಪಾಲ ನಾಯಕ ಹಾಗೂ ಇಡೀ ದರ್ಬಾರು ನಾದಾನಂದದಲ್ಲಿ ಮುಳುಗಿದ್ದಾಗ ಅದನ್ನೆಲ್ಲ ಕದ್ದು ಕೇಳಿದ. ಆದರೆ ಅವನ ಶಕ್ತಿಯೂ ಮೆಚ್ಚಬೇಕಾದದ್ದೇ. ಏಕೆಂದರೆ ಮುಂದೆ ಅವನೆಣಿಕೆಯಂತೆ ಖಿಲ್ಜಿ ಆತನನ್ನು ಹಾಡಲು ಆಹ್ವಾನಿಸಿದಾಗ ಆ ಕ್ಲಿಷ್ಟ ಹಾಗೂ ವಿದ್ವತ್ಪೂರ್ಣ ಗಾಯನವನ್ನು ಚಾಚೂ ತಪ್ಪದೇ ಹಾಡಿ ತೋರಿಸಿದ ಧೀಮಂತ ಅಮೀರ್ ಖುಸ್ರೋ. ಆದರೆ ಒಂದೇ ವ್ಯತ್ಯಾಸವೆಂದರೆ ಗೋಪಾಲ ನಾಯಕನ ಹಾಡಿನಲ್ಲಿನ ಸಾಹಿತ್ಯ ಖುಸ್ರೋವಿಗೆ ತಿಳಿಯದ ಭಾಷೆಯಾಗಿದ್ದರಿಂದ ಅದನ್ನು ಅವನು ಗ್ರಹಿಸಲಾಗಲಿಲ್ಲ. ಹೀಗಾಗಿ ಯಾವುದೋ ಅರ್ಥವಿಲ್ಲದ ಅಕ್ಷರಗಳನ್ನು ಜೋಡಿಸಿ ಹಾಗೇ ಎನ್ನಿಸುವಂತೆ ಅದನ್ನು ವ್ಯವಸ್ಥಿತವಾಗಿ ಪ್ರದರ್ಶಿಸಿದ ಆತ.
ಹೀಗೆ ಅರ್ಥವಿಲ್ಲದ ಪದಗಳಿಂದ, ಆದರೆ ಅರ್ಥಪೂರ್ಣ ಸಂಗೀತದಿಂದ ಕೂಡಿ ಹುಟ್ಟಿದ್ದೇ ಇಂದಿನ 'ತರಾನಾ'. ಅಷ್ಟೇ ಅಲ್ಲ, ಗೋಪಾಲ ನಾಯಕನ ವಿದ್ಯೆಗೆ ಮರುಳಾದ ಖುಸ್ರೋ ಹಾಗೂ ಅಲ್ಲಾವುದ್ದೀನ ಖಿಲ್ಜಿ ಗೋಪಾಲ ನಾಯಕನನ್ನು ದೆಹಲಿಗೆ ಕರೆದುಕೊಂಡು ಹೋದ. ಮುಂದೆ ಅಲ್ಲಾವುದ್ದೀನ್ ಖಿಲ್ಜಿಯ ಆಸ್ಥಾನದಲ್ಲಿ ಗೋಪಾಲ ನಾಯಕನ ಭಾರತೀಯ ಸಂಗೀತ, ಅಮೀರ್ ಖುಸ್ರೋವಿನ ಇಸ್ಲಾಂ  ಸಂಗೀತ, ಜೊತೆಗೆ ಅದೇ ಆಸ್ಥಾನದ ಪ್ರಸಿದ್ದ ಸೂಫಿ ಗಾಯಕನಾಗಿದ್ದ ನಿಜಾಮುದ್ದೀನ್ ಚಿಸ್ತಿಯ ಸೂಫಿ ಸಂಗೀತ - ಈ ಮೂರರ ಮಿಶ್ರಣವಾಗಿ ಇಂದಿನ ಸುಂದರವಾದ ಹಿಂದುಸ್ತಾನೀ ಶಾಸ್ತ್ರೀಯ ಸಂಗೀತದ ವಿಕಾಸಕ್ಕೆ ಇದೇ ಬುನಾದಿಯಾಯಿತು ಎನ್ನಬಹುದು.

- ಶ್ರುತಿ ಭಟ್
shrutikbhat@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments