ಒಂದು ರೊಮ್ಯಾಂಟಿಕ್ ಉಡುಗೊರೆ
ಅವನಿಗೆ ಅವಳಿಲ್ಲದೆ ಬದುಕಿಲ್ಲ ಅಂತೇನೂ ಇಲ್ಲ. ಅವಳಿಗೂ ಅಷ್ಟೇ ಅವನೇ ಬದುಕೇನಲ್ಲ. ಹಾಗಂತ ಇಬ್ಬರಿಗೂ ಪರಸ್ಪರರನ್ನು ತೊರೆದು ಬದುಕೋ ಮನಸಂತೂ ಇಲ್ಲವೇ ಇಲ್ಲ. ಅವನಿಗೆ ಅವಳನ್ನು ಖುಷಿ ಪಡಿಸೋದು ಬೇಕಿಲ್ಲ. ಅವಳಿಗೆ ಅವನ ಕನವರಿಕೆಯೂ ಇಲ್ಲ. ಅವರಿಬ್ಬರೂ ಅವರಿಬ್ಬರಿಗಾಗಿ ಅವರ ತನವನ್ನು ಉಳಿಸಿಕೊಂಡು ತಮ್ಮ ಪ್ರೀತಿಯನ್ನು ಅಷ್ಟೇ ತಿಳಿ ಮಣ್ಣಿನಂತೆ ಕಾಪಾಡಿಕೊಂಡಿದ್ದಾರೆ. ಅದಕ್ಕೆ ಅಲ್ಲಿ ನಿತ್ಯ ಜೀವಂತಿಕೆಯ ಫಲವತ್ತತೆ.
ಅವಳು: ಕಳೆದುಹೋದ ನನ್ನ ಬದುಕಿನ ಕ್ಷಣಗಳನ್ನು ಮತ್ತೆ ಅನುಭವಿಸಬೇಕು ಅನಿಸುತ್ತಿದೆ. ಅದೇ ದಿನ, ಅದೇ ಕ್ಷಣಗಳು ಮರಳಿ ಬರುವಂತಿದ್ದರೆ ಎಷ್ಟು ಅಪ್ಯಾಯಮಾನವಾಗುತ್ತಿತ್ತಲ್ಲ.
ಬೆಟ್ಟದ ಮೇಲೆ ನಕ್ಷತ್ರಗಳ ನೋಡುತ್ತಾ ಕನವರಿಸುತ್ತಿದ್ದಳವಳು. ಅವನದಕ್ಕೆ ಮುಗುಳು ನಗೆಯಲ್ಲಿ ಉತ್ತರಿಸುತ್ತಿದ್ದ. ಇವಳ ಮುಗುಳು ಅವನ ನಗುವಿನ ಅರ್ಥವನ್ನು ಕಂಡುಕೊಂಡಿತ್ತು.
ಅವನು: ಪ್ರಕೃತಿಯಲ್ಲಿ ಒಂದಾಗೋಣ ಬರ್ತೀಯ?
ಅವಳು: ಐಕ್ಯತೆಯ ದಾರಿಯಲ್ಲಿ ಎಲ್ಲಿಗಾದ್ರೂ ಸರಿ...
ಮಾರನೇ ದಿನ ಅವಳನ್ನು ಟೋಕಿಯೋಗೆ ಕರೆ ತಂದಿದ್ದ. ಅವರಿಬ್ಬರೂ ಗಿರಿ ಶೃಂಗಗಳ ಕೈ ಕೈ ಹಿಡಿದು ಹಕ್ಕಿ ಪಕ್ಕಿಗಳಿಗೆ ಕಿವಿಯಾಗಿದ್ರು. ಬೀಳುತ್ತಿದ್ದ ಹನಿಗೆ ಮೈ ನವಿರೇಳುತ್ತಿತ್ತು. ಅದರುವ ತುಟಿಗಳ ಅಂಚಿನಿಂದಲೇ ಧನ್ಯತೆಯ ನಗುವಿನ ಭಾವ ನದಿಯಾಗಿ ಹರಿಯುತ್ತಿತ್ತು. ಮನದಾಸೆ ಹಕ್ಕಿಯಾಗಿತ್ತು. ಅದೆಷ್ಟು ದೂರ ಕೈ ಕೈ ಹಿಡಿದು ನಡೆದರೋ ಇಬ್ಬರೂ... ಅದು ಅನಂತ ಯುಗಗಳ ಹಾದಿ ಸವೆಸಿದ ಅನುಭವ. ಅಲ್ಲಿದ್ದದ್ದು ಅಷ್ಟು ತೀವ್ರವಾದ ಪ್ರೀತಿ. ಆ ಸಾಂಗತ್ಯ ಪ್ರಕೃತಿಯಲ್ಲಿ ಇಬ್ಬರನ್ನೂ ಮರೆಸಿತ್ತು. ತಾವಿಬ್ಬರು ಪ್ರೇಮಿಗಳಲ್ಲ... ಪ್ರಕೃತಿಯಿಂದ ಜಾರಿ ಬಿದ್ದ ಯಾವುದೋ ಅಪೂರ್ವ ಭಾವಗಳ ಪ್ರತಿರೂಪ ಎಂಬ ಭಾವ. ಅದು ಇಡೀ ಜಗತನ್ನೇ ಮರೆಸಿತ್ತು.
ಎತ್ತ ನೋಡಿದರೂ ಹಸಿರು... ಜಿಗಿಯುತ್ತಿರೋ ಹಸಿರು... ನಾಗರಿಕತೆಯ ಪುಟ ಹಿಂದಕ್ಕೆ ತಿರುವು ಹಾಕಲಾಗುತ್ತಿತ್ತು. ಮೊಬೈಲ್ ನೆಟ್ವರ್ಕ್ ಇಲ್ಲ. ಜೇಬಲ್ಲಿ ಕುಳಿತ ಪಗಾರಕ್ಕೆ ಪಾಡಿಲ್ಲ. ಹಸಿವಿಗೆ ಹಣ್ಣು ಹಂಪಲು, ಬಾಯಾರಿಕೆಗೆ ನದಿ ನೀರು, ಒಂಟಿತನ ಇಬ್ಬರಿಗೂ ಇಲ್ಲ. ಹಾಗೆಂದು ಅವರದು ಅದ್ವೈತ ಭಾವವಲ್ಲ. ಅದು ದ್ವೈತ ಚೇತನದ ಪ್ರತೀಕ. ಪ್ರಕೃತಿಯ ಗರ್ಭದೊಳಗೆ ಇಬ್ಬರು ಹೊಕ್ಕಿದ್ದರು. ನೇಸರ ಪಶ್ಚಿಮದ ಕಡೆ ಮುಖಮಾಡಿದ್ದ.
ಅವಳು: ಅಯ್ಯೋ ಕತ್ತಲು ಆವರಿಸಿಕೊಳ್ಳುತ್ತಿದ್ಯಲ್ಲ?
ಅವನು: ಕತ್ತಲಿಗೂ ಸೌಂದರ್ಯವಿದೆ ಅಂದ್ಯಲ್ಲ... ಕತ್ತಲು ನಂಗಿಷ್ಟ ಅಂದ್ಯಲ್ಲ... ಕತ್ತಲಲ್ಲಿ ನಿನ್ನೊಟ್ಟಿಗೆ ನಕ್ಷತ್ರ ನೋಡುತ್ತಾ ಆಕಾಶಕ್ಕೆ ಮುಖಮಾಡಿ ಮಲಗಬೇಕು ಅಂದ್ಯಲ್ಲ... ಕತ್ತಲಲ್ಲಿ ಕೈಹಿಡಿದು ದಾರಿ ಸವೆಸಬೇಕು ಅಂದ್ಯಲ್ಲ.. ಕತ್ತಲಲ್ಲಿ ನಿನ್ನ ಬೆಚ್ಚನೆಯ ಸ್ಪರ್ಶದ ಬೆಳಕೇ ಸಾಕು ಅಂದ್ಯಲ್ಲ. ಈಗ ಯಾಕೆ ಈ ಆತಂಕ?
ಅವಳು: ಅಯ್ಯೋ ಹುಡುಗ, ನಿನ್ನೊಟ್ಟಿಗೆ ಪ್ರಕೃತಿಯ ಅನಂತ ಭಾವಗಳನ್ನು ಕಳೆಯೋ ಅಸೆ. ಹಾಗೆಯೇ ಕಳೆದು ಹೋಗುತ್ತಿರೋ ಈ ದಿನವನ್ನು ಹಿಡಿದಿಟ್ಟು ಮತ್ತೆ ಅನುಭವಿಸುವಾಸೆ. ಎಷ್ಟು ಅದ್ಭುತ ಅನುಭವ ಅಲ್ಲವಾ? ನನಗೆ ಮತ್ತೊಮ್ಮೆ ಆ ದಿನ, ಆ ಕ್ಷಣ, ಆ ಘಳಿಗೆ ಬೇಕು ಹುಡುಗ. ಹೇಳೋ, ಗಡಿಯಾರದ ಮುಳ್ಳನ್ನು ಹಿಂದಕ್ಕೆ ಸರಿಸೋ ಹುಡುಗ... ಇವತ್ತಿನ ಕ್ಯಾಲೆಂಡರ್ನಲ್ಲಿ ಮತ್ತೊಮೆ ಸೂರ್ಯ ನೆತ್ತಿ ಮೇಲೆ ಬರಲೋ ಗೆಳೆಯ... ನನಗೆ ಕಳೆದುಹೋದ ಆ ಘಳಿಗೆ ಬೇಕೋ ಹುಡುಗ...
ಉದುರಿ ಬಿದ್ದ ಎಳೆಗಳ ಮೇಲೆ ಮಗುವಿನಂತೆ ರಚ್ಚೆ ಹಿಡಿದು ಕುಳಿತುಬಿಟ್ಟಳು ಹುಡುಗಿ.
ಅವನದು ಮತ್ತದೇ ಮುಗುಳು. ಕಿರು ಬೆರಳ ಆಸರೆ ನೀಡಿ ಪುಟ್ಟ ಕಂದನ ಮುಷ್ಟಿಯಲ್ಲಿ ಕರಗುವಂತೆ ಮಾಡಿದ ಅವಳನ್ನು. ಮುಂದೆ ಮುಂದೆ ಹೆಜ್ಜೆ ಹಾಕಿದ, ಹಾಕಿಸುತ್ತಿದ್ದ. ಅವನ ಎದೆಯ ಮೇಲೆ ಅವಳ ಕಣ್ಣಿರ ಹನಿಗಳು ಕಲೆ ಮೂಡಿಸುತ್ತಿದ್ದವು.
ಅವಳು: ಮುದ್ದು ನಂಗೆ ಆ ದಿನ ಬೇಕು ಕಣೋ...
ಇಬ್ಬರ ಪಾದಗಳು ಮಣ್ಣನ್ನು ಚುಂಬಿಸುತ್ತಲೇ ಹಾದಿ ಸವೆಸಿದ್ದವು. ಕತ್ತಲು ಆವರಿಸುತ್ತಿದ್ದ ಮುಸ್ಸಂಜೆಯ ಓಕುಳಿಯ ಬದಲು ಮತ್ತೆ ಸೂರ್ಯ ನೆತ್ತಿಗೆ ಬಂದಿದ್ದ. ಕತ್ತಲ ಬಾಗಿಲ ಬಳಿ ಇದ್ದ ಹುಡುಗಿಗೆ ಇದ್ದಕ್ಕಿದ್ದಂತೆ ರವಿಕಿರಣಗಳ ಚುಂಬನ, ಮೈಯೆಲ್ಲಾ ಕಂಪನ. ಅವಳ ಕಂಗಳಲ್ಲಿ ಅದ್ಭುತಗಳ ಅಕ್ಷರ.
ಅವಳು ಅಚ್ಚರಿಯಿಂದ ಎದ್ದು ಅವನ ಮುಖ ನೋಡಿದಳು. ಅವನು ಮರುಮಾತಿಗೆ ಅವಕಾಶ ನೀಡದಂತೆ ಪುಟ್ಟ ಉಡುಗೊರೆಯ ಬಾಕ್ಸ್ ಅನ್ನು ಅವಳ ಕೈಗಿತ್ತಿದ್ದ. ಅಚ್ಚರಿ, ಕುತೂಹಲದಿಂದಲೇ ಅವಳು ಉಡುಗೊರೆ ಬಾಕ್ಸ್ ಬಿಡಿಸಿಟ್ಟಳು. ಅಲ್ಲಿತ್ತು 'ಮಧ್ಯಾಹ್ನ ಮೂರು ಗಂಟೆ ತೋರಿಸುತ್ತಿದ್ದ ಕೈ ಗಡಿಯಾರ'. ಅವರಿಬ್ಬರೂ ಒಂದು ಹೆಜ್ಜೆ ಮುಂದಿರಿಸಿ ಕಾಲವನ್ನು ಹಿಂದಕ್ಕೆ ಸರಿಸಿದ್ದರು. ನೇಸರ ಅವನ ಜೊತೆಗಿದ್ದ. ಅವರಿಬ್ಬರ ಪಾದಗಳು ಆತುಕೊಂಡಿದ್ದು ಭಾರತದ ನೆಲದಲ್ಲಿ! ಭಾರತೀಯ ಕಾಲಮಾನದಲ್ಲಿ! ಟೋಕಿಯದಲ್ಲಿ ನೇಸರ ಬಹುದೂರ ಸಾಗಿದ್ದ. ಹುಡುಗಿ ಹಿಂತಿರುಗಿ ನೋಡಿದಾಗ ಟೋಕಿಯೋದಲ್ಲಿ ಸಂಜೆ 6.30ರ ಪ್ರತಿಬಿಂಬವಾಗಿತ್ತು. ಭಾರತದ ಮಡಿಲಲ್ಲಿ ಅವಳಿಗಾಗಿ ಅವ ಮತ್ತೆ ಮರಳಿ ಬಂದಿದ್ದ.
ಅವರ ಆ ಪ್ರಯಾಣ ನೆನಪು ಅಲ್ಲ. ಕಲ್ಪನೆಯಂತೂ ಅಲ್ಲವೇ ಅಲ್ಲ. ಇತಿಹಾಸ ಮರಳಿಸೋ ಪ್ರಶ್ನೆಯೇ ಇಲ್ಲ. ಅವಳು ಕೇಳಿದ್ದ ಆ ಕ್ಷಣ, ಆ ದಿನ, ಆ ಘಳಿಗೆ ಮತ್ತೊಮ್ಮೆ ಅವಳ ಪಾಲಿಗೆ ಬಂದಿತ್ತು. ಅವರಿಬ್ಬರೂ ಕಳೆದ ಆ ದಿನ ಮತ್ತೆ ಹೊಸ ಗಾನದಂತೆ ಪುಟಿಯುತ್ತಿತ್ತು. ಈ ಅವಿಸ್ಮರಣೀಯ ಉಡುಗೊರೆಯ ಜೊತೆ ಅವರಿಬ್ಬರೂ ಪ್ರಕೃತಿಯಲ್ಲಿ ಮತ್ತೆ ಅದೇ ಹಾದಿ ಸವೆಸುತ್ತಿದ್ದರು. ಇಬ್ಬರ ಹೆಜ್ಜೆಗಳು ಒಮ್ಮೆ ಭುವಿಯ ಸನಿಹ, ಮತ್ತೊಮ್ಮೆ ಭುವಿಯಿಂದ ವಿರಹ ಅನುಭವಿಸುತ್ತಿದ್ದವು.
- ಚೈತ್ರಾ ಭವಾನಿ