ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಪನೊಲಿ ಪುಷ್ಪ

Vishwanath S
Updated On : 5 Oct 2013, 5:42 am

ಜನಮಾನಸದಿಂದ ಶಾಶ್ವತವಾಗಿ ಮರೆಯಾಗುತ್ತಿರುವ ಸಸ್ಯಗಳಲ್ಲಿ ಪನೊಲಿ ಪ್ರಮುಖ ಸ್ಥಾನದಲ್ಲಿದೆ. ಆಕೃತಿಯಲ್ಲಿ ತಾಳೆಮರದಂತಿರುವುದಾದರೂ ಇದರ ಗರಿಗಳು ನೀಳವಾಗಿದ್ದು ತಾಳೆಯಂತೆ ಮುಳ್ಳುಗಳಿಲ್ಲ. ಇದರ ಗರಿ ಕೊಡೆಗಳು ಹಿಂದೆ ಧನಿಕರ ಪ್ರತಿಷ್ಠೆಯ ಗುರುತಾಗಿದ್ದವು. ಬಡವರು ಈ ಗರಿಗಳಿಂದ ಗೊರಬೆ ಮಾಡಿ ಮಳೆಯಿಂದ ರಕ್ಷಣೆ ಪಡೆಯುತ್ತಿದ್ದರು. ದೈವಗಳಿಗೆ ಉತ್ಸವಗಳಲ್ಲಿ ಇದರ ಹನೆಕೊಡೆ ಹಿಡಿಯುವುದು ಪದ್ಧತಿ. ಹಿಂದಿನ ಕಾಲದ ವಾಲೆ ಗ್ರಂಥಗಳೂ ಇದರ ಮೇಲೇ ಬರೆದಿವೆ.
ಈ ಸಸ್ಯವನ್ನು ವೈಜ್ಞಾನಿಕವಾಗಿ ಕೊರಿಫಾ ಅಂಬ್ರಕುಲಿಫೆರ ಎಂದು ಕರೆಯಲಾಗುತ್ತದೆ. ಅದರ ಜೀವಿತ ಅರವತ್ತರಿಂದ ನೂರು ವರುಷ. ಬದುಕಿನಲ್ಲಿ ಒಂದೇ ಸಲ ಹೂ ಬಿಡುತ್ತದೆ, ಅದೂ ಬದುಕಿನ ಕೊನೆಗೆ. ಅಂಥದೊಂದು ಅಪರೂಪದ ಮರ ಬೆಳ್ತಂಗಡಿ ತಾಲೂಕಿನ ಕಡಂಬಿನ ಬಳಿಯ ಪದ್ಮನಾಯ್ಕರ ಮನೆಯ ಬಳಿ ಹೂ ಬಿಟ್ಟಿದೆ. ಎಲೆ ಮೂಡಿ ಬರುವಲ್ಲಿ ಹೂಗಳ ದಂಡೆ ಕಾಣಿಸಿದರೆ ಮತ್ತೆ ಎಲೆಗಳಾಗುವುದಿಲ್ಲ. ಹೂ ಅರಳಿ ಮುಗಿಯಲು ಒಂದು ವರ್ಷ ಬೇಕು. ಈ ಅವಧಿಯಲ್ಲಿ ಎಲೆ ಒಣಗಿ ಮರ ಸಾಯುತ್ತದೆ. ಒಮ್ಮೆ ಹೂ ಅರಳಿ ಕಾಯಿಗಳಾದರೆ ಮರದ ಬದುಕಿಗೆ ಅದು ಅಂತಿಮ ದಿನದ ಮುನ್ಸೂಚನೆ.
ಈ ಮರಕ್ಕೆ ಎಷ್ಟು ಪ್ರಾಯವಾಯಿತು? ಪದ್ಮನಾಯ್ಕರ ಅತ್ತೆಗೆ ಈಗ ಎಪ್ಪತ್ಮೂರು. ಹದಿಮೂರು ವಯಸ್ಸಿನಲ್ಲಿ ಮದುವೆಯಾಗಿ ಈ ಮನೆಗೆ ಬಂದಾಗ ಪನೊಲಿ ಮರ ಸಾಧಾರಣ ಬೆಳೆದಿತ್ತು. ಈಗ ನೆತ್ತಿಯಲ್ಲಿ ಗರಿ ಗರಿಯಾಗಿ ಹೂಗಳನ್ನು ಹರಡಿದೆ. ಸುಮಾರು ಮೂವತ್ತರ ತನಕ ದುಂಡುಮಲ್ಲಿಗೆಯಂತಹ ಹೂಗಳ ಗುಚ್ಛಗಳು ಅರಳಿ ಮರ ತೇರಿನಂತೆ ಸಿಂಗಾರಗೊಂಡಿದೆ. ಹೂವಿನ ದುರ್ಗಂಧ ಊರಿಡೀ ಹರಡಿದೆ. ಇನ್ನೊಂದೆರಡು ವರ್ಷದಲ್ಲಿ ಕಾಯಿ ಬಿಟ್ಟು ಮರ ಸತ್ತು ಹೋಗುತ್ತದೆ.
ವಾಸ್ತವವಲ್ಲದ ಅನೇಕ ನಂಬಿಕೆಗಳು ಈ ಅಪರೂಪದ ಸಸ್ಯವನ್ನು ವಿನಾಶದಂಚಿಗೆ ತಳ್ಳಿವೆ. ಮರವನ್ನು ಹೂ ಬಿಟ್ಟ ಮೇಲೆ ಕಡಿಯದಿದ್ದರೆ ಅದರಲ್ಲಿರುವ ವಿಷ ಇಡೀ ಊರಿಗೆ ಹರಡುತ್ತದಂತೆ, ಮರ ಕಡಿಯುವಾಗಿನ ದನಿ ಯಜಮಾನನ ಕಿವಿಗೆ ಬಿದ್ದರೆ ಬದುಕಲಾರನಂತೆ. ಹಾಗಾಗಿ ಮರ ಕಡಿಯುವಾಗ ವಾದ್ಯಗಳು ಸಿಡಿಮದ್ದುಗಳ ಅಬ್ಬರವಿರುತ್ತದೆ.
ಪನೊಲಿ ಮರದ ಒಳಗಡೆ ಹಿಟ್ಟಿನಂತಹ ಹುಡಿಯಿದೆ. ಮರ ಕಡಿದ ಬಳಿಕ ಗಟ್ಟಿಯಾದ ಹಿಟ್ಟಿನ ಮುದ್ದೆಗಳನ್ನು ಕಡೆದು ಹಿಟ್ಟನ್ನು ನೀರಿನಲ್ಲಿ ಕರಗಿಸಿ ಸೋಸಿದ ಬಳಿಕ ಒಣಗಿಸುತ್ತಾರೆ. ಮರಗೆಣಸಿನ ರುಚಿಯಿರುವ ಇದರಿಂದ ತಯಾರಿಸುವ ಮಣ್ಣಿ ಮೊದಲಾದ ಖಾದ್ಯ ಸ್ತ್ರೀಯರ ಅನೇಕ ಕಾಯಿಲೆಗಳಿಗೆ ಪರಿಣಾಮಕಾರಿ ಔಷಧ. ಮರವನ್ನು ಕಡಿಯದೆ ಬಿಟ್ಟರೆ ಹಿಟ್ಟಿನೊಂದಿಗಿರುವ ಬೀಜಗಳು ಹುಟ್ಟಿ ಅಸಂಖ್ಯ ಸಸಿಗಳಾಗುತ್ತವೆ. ಆದರೆ ಹೊಸದಾಗಿ ಯಾರೂ ಈ ಅಪರೂಪದ ಗಿಡ ನೆಟ್ಟು ಬೆಳೆಸುವುದಿಲ್ಲ. ಮೂಢನಂಬಿಕೆಗೆ ಬಲಿಯಾಗಿ ಮರದಲ್ಲಿ ಕಾಯಿಗಳಾಗುವ ಮೊದಲೇ ಬುಡದಿಂದ ಕತ್ತರಿಸಿ ಹಾಕುತ್ತಾರೆ.

- ಪ.ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments