ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಭೇರುಂಡ ಪಕ್ಷಿ

Vishwanath S
Updated On : 6 Oct 2013, 11:54 am

ಬಹಳ ಹಿಂದೆ ನಮ್ಮೊಂದಿಗೆ ವಿಚಿತ್ರವೆನಿಸಬಹುದಾದ ಎರಡು ತಲೆಯ ಒಂದೇ ದೇಹದ ಭೇರುಂಡ ಪಕ್ಷಿಗಳು ಇದ್ದವು. ಪ್ರಾಕೃತಿಕ ವಿಕೋಪಗಳ ಕಾರಣಗಳಿಂದಾಗಿ ಇಂದು ಅವು ಸಂಪೂರ್ಣವಾಗಿ ನಾಶವಾಗಿವೆ. ಆದರೆ ಅಂತಿಮವಾಗಿ ಉಳಿದಿದ್ದ ಒಂದೇ ಒಂದು ಭೇರುಂಡ ಪಕ್ಷಿ ಹೇಗೆ ತನ್ನ ಅಂತ್ಯವನ್ನು ಕಂಡಿತು ಎಂಬುದನ್ನು ತಿಳಿಯೋಣ.
ಒಂದು ದಿನ ಭೇರುಂಡ ಪಕ್ಷಿ ತುಂಬಾ ಹಸಿದಿತ್ತು. ಆಹಾರಕ್ಕಾಗಿ ಅಲ್ಲಲ್ಲಿ ಹುಡುಕುತ್ತಿತ್ತು. ಆಗ ಪಕ್ಷಿಯ ಎಡತಲೆ ನೆಲದ ಮೇಲೆ ಬಿದ್ದಿದ್ದ ಎರಡು ಹಣ್ಣುಗಳನ್ನು ನೋಡಿತು. ತಕ್ಷಣವೇ ಅಲ್ಲಿಗೆ ಹೋಗಿ ಹಣ್ಣೊಂದನ್ನು ತುಂಡು ಮಾಡಿ ತಿಂದು, ರಸ ಕುಡಿದು 'ಆಹಾ! ಎಷ್ಟೊಂದು ರುಚಿಯಾಗಿದೆ' ಎಂದಿತು. ಆಗ ಪಕ್ಷಿಯ ಬಲತಲೆಯು 'ನನಗೂ ಒಂದು ಹಣ್ಣು ಕೊಡು ಅದರ ರುಚಿ ನೋಡುತ್ತೇನೆ ಅದು ರಸಭರಿತವಾಗಿರುವಂತಿದೆ' ಎಂದು ಕೇಳಿತು. 'ಇಲ್ಲ, ನಾನು ಕೊಡುವುದಿಲ್ಲ. ಈ ಹಣ್ಣುಗಳು ತುಂಬಾ ಸಿಹಿಯಾಗಿವೆ. ನಾನೊಬ್ಬನೇ ತಿನ್ನುತ್ತೇನೆ. ಇದೇನು ಅಂಥ ದೊಡ್ಡ ಸಂಗತಿಯಲ್ಲ. ಹೇಗಿದ್ದರೂ ನಮ್ಮಿಬ್ಬರ ಹೊಟ್ಟೆ ಒಂದೇ ಅಲ್ಲವೇ?' ಎಂದು ಪಕ್ಷಿಯ ಎಡತಲೆಯು ಹೇಳಿತು.
ಇಂಥ ಅನಿರೀಕ್ಷಿತವಾದ ಮಾತಿನಿಂದ ಪಕ್ಷಿಯ ಬಲತಲೆಗೆ ಬೇಸರವಾಯಿತು. ಅದು ಯೋಚಿಸಲು ಪ್ರಾರಂಭಿಸಿತು. 'ತುಂಬಾ ಜಾಣನಂತೆ ಆಡುತ್ತಿದ್ದಾನೆ. ನಾನು ಹಣ್ಣಿನ ರುಚಿ ನೋಡಲು ಬಯಸಿದೆನೆಯೇ ಹೊರತು ಹೊಟ್ಟೆ ತುಂಬಿಸಿಕೊಳ್ಳಲು ಅಲ್ಲ. ಇವನಿಗೆ ಸರಿಯಾದ ಪಾಠ ಕಲಿಸುತ್ತೇನೆ' ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿತು. ಈ ಬಗೆಯ ಆಲೋಚನೆಯು ಬರುತ್ತಿದ್ದಂತೆಯೇ ಪ್ರತೀಕಾರ ಮಾಡುವ ಮನಸ್ಸಿನಿಂದ ಪಕ್ಷಿಯ ಬಲತಲೆಯು ಸುತ್ತಲೂ ನೋಡಿತು. ಹತ್ತಿರದ ಪೊದೆಯೊಂದರ ಬಳಿಯಿದ್ದ ವಿಷ ಹಣ್ಣುಗಳನ್ನು ಕಂಡು ಎಡತಲೆಯನ್ನೂ ಎಳೆದೊಯ್ದು ಹಣ್ಣನ್ನು ಕೊಕ್ಕಿನಿಂದ ಕುಕ್ಕಿ ಅದು ಕಹಿಯಾಗಿದ್ದರೂ ನುಂಗಿತು. 'ನಮ್ಮಿಬ್ಬರ ಹೊಟ್ಟೆ ಒಂದೇ. ಆದ್ದರಿಂದ ನಾನು ಈ ವಿಷದ ಹಣ್ಣನ್ನು ತಿಂದಿದ್ದೇನೆ. ಈಗ ನೀನು ಇದರ ಪರಿಣಾಮ ಎದುರುಸುತ್ತೀಯಾ' ಎಂದಿತು. ಆದರೆ, ಈ ಮೂರ್ಖತಲೆಗೆ ನಾನೂ ಈ ವಿಧಿಯಲ್ಲಿ ಭಾಗಿಯಾಗಿರುತ್ತೇನೆಂಬುದು ತಿಳಿಯಲಿಲ್ಲ.
ಹಣ್ಣಿನ ವಿಷ ಪಕ್ಷಿಯ ಹೊಟ್ಟೆ ಸೇರಿ ದೇಹವನ್ನೆಲ್ಲಾ ವ್ಯಾಪಿಸಿತು. ಸಂಕಟಪಡುತ್ತಾ ಭೇರುಂಡ ಪಕ್ಷಿ ಸಾವನ್ನಪ್ಪಿತು. ಪಕ್ಷಿಯ ಎರಡು ತಲೆಗಳಲ್ಲಿ ಸಾಮರಸ್ಯವಿಲ್ಲದೆ ಸ್ವಾರ್ಥ, ಅಸೂಯೆಯ ಪರಿಣಾಮವಾಗಿ ಅಂತಿಮವಾಗಿ ಉಳಿದಿದ್ದ ಒಂದೇ ಒಂದು ಭೇರುಂಡ ಪಕ್ಷಿ ತನ್ನ ಅಂತ್ಯ ಕಂಡಿತು ಎಂಬುದು ಪ್ರತೀತಿ.

- ಎಂ.ಎಸ್. ಶಿವಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments