ಯಕ್ಷ ಯಾಜಿ
ಯಕ್ಷಗಾನವು ಕರಾವಳಿಗಳ ಪಾಲಿಗೆ ಸಿನಿಮಾ. ರಾತ್ರಿಯಿಡೀ ಕಣ್ಣರಳಿಸಿ ನೋಡುತ್ತಾ ಆಸ್ವಾದನೆಗಿಳಿಯುತ್ತಾರೆ. ಅಷ್ಟೊಂದು ಮನರಂಜನೆ, ಆಕರ್ಷಣೆ ಆ ಕಲೆಯಲ್ಲಡಗಿದೆ. ಯಕ್ಷ ಕಲೆ ಇಷ್ಟೊಂದು ಜನಪ್ರಿಯವಾಗಲು ಪಾತ್ರಧಾರಿಗಳ ಪಾತ್ರ ಅಷ್ಟಿಷ್ಟಲ್ಲ. ಅಂಥ ಗಮನಾರ್ಹರ ಸಾಲಿನಲ್ಲಿ ನಿಲ್ಲುವವರು ಬಳಕೂರು ಕೃಷ್ಣಯಾಜಿ.
ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಳಕೂರಿನವರು. ಹೈಸ್ಕೂಲಿನಲ್ಲಿರುವಾಗ 'ಮಾಗಧ ವಧೆ' ಪ್ರಸಂಗದಲ್ಲಿ ಮಾಗಧನ ಪಾತ್ರ ಮಾಡಿ ಬಾರಿ ಮೆಚ್ಚುಗೆ ಪಡೆದರು. ಅದೇ ಇವರ ಕಲಾಬದುಕಿಗೆ ತಿರುವು. ಅಷ್ಟಕ್ಕೂ ಯಾಜಿ ಅವರ ತಂದೆಗೆ ಮಗ 'ಯಕ್ಷಲೋಕ' ಸೇರುವುದು ಇಷ್ಟವಿರಲಿಲ್ಲ. ಆದರೆ, 'ಉಳುವವನೇ ಭೂ ಒಡೆಯ' ಕಾಯ್ದೆ ಬಂದಾಗ ಯಾಜಿ ಅವರ ಬಹಳಷ್ಟು ಜಮೀನು ಹೊರಟುಹೋಯಿತು. ಆಗ ವಿಧಿಯಿಲ್ಲದೆ ಜೀವನೋಪಾಯಕ್ಕಾಗಿ ಯಕ್ಷಗಾನವನ್ನೇ ಆಯ್ಕೆಮಾಡಿಕೊಂಡರು. 1972- 73ರಲ್ಲಿ ಪ್ರಸಿದ್ಧ ಕಲಾವಿದ ಡಾ. ಮಹಾಬಲ ಹೆಗಡೆ ಕೆರೆಮನೆಯವರ ಹತ್ತಿರ ಪ್ರಥಮ ಹೆಜ್ಜೆ ಹಾಕಲು ಕಲಿತರು. ನಂತರ ಇಡಗುಂಜಿ ಮೇಳದಲ್ಲಿ ಸಾರ್ಥಕ ಹೆಜ್ಜೆಹಾಕಿ, ಸಾಧನೆಯ ಉತ್ತುಂಗ ಶಿಖರವೇರಿದರು.
'ಯಕ್ಷಗಾನ ನನ್ನ ಸರ್ವಸ್ವ. ಪ್ರಸಂಗಗಳು ಇಲ್ಲದ ದಿನಗಳು ನನಗೆ ಗೌಣ. ಯಕ್ಷಗಾನವೆಂದರೆ ಕೇವಲ ಮನರಂಜನೆ ಅಷ್ಟೇ ಅಲ್ಲ. ಮನೋವಿಕಾಸಕ್ಕೆ ಕಾರಣವಾಗುವ ಕಲೆ. ಯಕ್ಷಗಾನಕ್ಕೆ ಸೇರಿ ಎಷ್ಟು ದಿನವಾಯಿತು ಎಂದು ಹೊರಳಿ ನೋಡಿದರೆ ನಲ್ವತ್ತು ವರ್ಷವಾಯಿತು ಎಂದರೆ ನಂಬಲಿಕ್ಕೇ ಆಗುವುದಿಲ್ಲ' ಎಂದು ತಮ್ಮ ಕಲಾಪ್ರೀತಿಗೆ, ಸಾಧನೆಗೆ ತಾವೇ ಬೆರಗುಗೊಳ್ಳುತ್ತಾರೆ ಯಾಜಿ.
ಇವರು ಕುಮಟಾದ ವಾಲಗಳ್ಳಿಯಲ್ಲಿ 'ಯಾಜಿ ಯಕ್ಷ ಮಿತ್ರ ಮಂಡಳಿ' ಸ್ಥಾಪಿಸಿ ಯಕ್ಷಗಾನಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ. ಯಕ್ಷ ಕಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಕಲಾವಿದರಿಗೆ ಅವರ ಸೇವೆ, ಆರ್ಥಿಕ ಸ್ಥಿತಿ ಗುರುತಿಸಿ 11,111 ರುಪಾಯಿ ಗೌರವ ಧನವನ್ನೂ ನೀಡುತ್ತಾರೆ. ಅರ್ಜುನನ ಪಾತ್ರವನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ ಯಾಜಿ. 1983ರಲ್ಲಿ ಬಹ್ರೇನ್ನಲ್ಲಿ 'ಕಾರ್ತಿವೀರ್ಯಾರ್ಜುನ'ದಲ್ಲಿ ಅರ್ಜುನನ ಪಾತ್ರದಲ್ಲಿ ಅಭಿನಯಿಸಿದ ಯಾಜಿ, ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದವರು. ಯಾಜಿ ಅವರ ಕಲಾಸೇವೆ ಇನ್ನಷ್ಟು ಪ್ರೇಕ್ಷಕರ ಎದೆಗೆ ತಲುಪಲಿ ಎಂಬುದು ಆಶಯ.
- ಚಿತ್ರ, ಲೇಖನ: ಬಳಕೂರು ವಿ.ಎಸ್. ನಾಯಕ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.