ಮಗನ ಪೆನ್ಷನ್ಗೆ ನೀವು ಅರ್ಹರಲ್ಲ
ಮಗನ ಪೆನ್ಷನ್ಗೆ ನೀವು ಅರ್ಹರಲ್ಲ
ಭಾಗ್ಯ ಎಸ್., ನಂಜನಗೂಡು
ನನ್ನ ಗಂಡ ಸರ್ಕಾರಿ ನೌಕರಿಯಲ್ಲಿದ್ದು ನಿವೃತ್ತಿಯ ನಂತರ ಮರಣ ಹೊಂದಿರುತ್ತಾರೆ. ನನ್ನ ಮಗನೂ ಸರ್ಕಾರಿನೌಕರಿಯಲ್ಲಿದ್ದು, ಸೇವೆಯಲ್ಲಿರುವಾಗಲೇ ಮರಣ ಹೊಂದಿರುತ್ತಾನೆ. ಆತ ಅವಿವಾಹಿತನಾಗಿದ್ದರಿಂದ ಅವನ ಎಲ್ಲ ನಿವೃತ್ತಿಯ ಸವಲತ್ತುಗಳನ್ನೂ ನಾನೇ ಪಡೆದಿದ್ದೇನೆ. ಈಗ ನಾನು ಮಗನ ಕುಟುಂಬವೇತನ ಪಡೆಯಬಹುದೇ?
- ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿವೇತನ) 2002ರ ನಿಯಮ 8ರಂತೆ ಕುಟುಂಬವೆಂದರೆ ಗಂಡ ಹೆಂಡತಿ ಮಕ್ಕಳು ಮಾತ್ರ. ಆದ್ದರಿಂದ ನಿಮಗೆ ಮಗನ ಪೆನ್ಷನ್ (ಕುಟುಂಬ ವೇತನ) ಪಡೆಯಲು ಅರ್ಹತೆ ಇಲ್ಲ.
ಅಮಾನತು ಶಿಕ್ಷೆಯಲ್ಲ
ಹನುಮಂತರಾಯಪ್ಪ, ಅರಸುಭವನ, ಬೆಂಗಳೂರು
ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾಗ ಭಿಕ್ಷುಕರು ಮರಣ ಹೊಂದಿದಾಗ ವಿಚಾರಣಾ ವರದಿಯ ಆಧಾರದ ಮೇಲೆ ನಾನೂ ಸೇರಿ ನಾಲ್ಕು ಜನರನ್ನು ಮುನ್ಸೂಚನೆ ನೀಡದೆ ಅಮಾನತುಗೊಳಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಇದರ ವಿರುದ್ಧ ಹೈಕೋರ್ಟ್ನಲ್ಲಿ ತಡೆಯಾಜ್ಞೆ ತಂದಿದ್ದೇವೆ. ಈ ಆಜ್ಞೆ ತೆರವುಗೊಳಿಸಲು ಎಷ್ಟು ದಿನ ಬೇಕಾಗುತ್ತದೆ? ನಮ್ಮ ಅಮಾನತು ಶಿಕ್ಷೆ ಎನಿಸಿಕೊಳ್ಳುವುದೇ? ವೇತನ ಮುಂಬಡ್ತಿ ಹಾಗೂ ಮುಂಬಡ್ತಿಯ ಮೇಲೆ ಪರಿಣಾಮ ಬೀರುವುದೇ?
- ನೀವು ಹೇಳುವಂತೆ ಭಿಕ್ಷುಕರ ಮರಣ ಸ್ವಾಭಾವಿಕವಾಗಿದ್ದರೆ ಅದೇ ಕಾರಣದಿಂದ ನೀವು ಹೈಕೋರ್ಟ್ನಲ್ಲಿ ಅರ್ಜಿ ಹಾಕಿ ಪ್ರಥಮ ವರ್ತಮಾನ ವರದಿ(ಎಫ್ಐಆರ್)ಯನ್ನು ರದ್ದುಗೊಳಿಸುವಂತೆ ಕೋರಬಹುದು. ಹಾಗಾದಾಗ ಸ್ವಾಭಾವಿಕವಾಗಿ ನಿಮ್ಮ ಮೇಲಿನ ಶಿಸ್ತು ಕ್ರಮವೂ ಅನೂರ್ಜಿತವಾಗುತ್ತದೆ.
ಅಮಾನತು ಶಿಕ್ಷೆಯಲ್ಲ. ಆದ್ದರಿಂದ ಬರಿಯ ಅಮಾನತು ನಿಮ್ಮ ಬಡ್ತಿಗೆ ಯಾವುದೇ ರೀತಿ ಬಾಧಕವಾಗುವುದಿಲ್ಲ.
ತಡೆಯಾಜ್ಞೆ ತರಬಹುದು
ಸರೋಜಮ್ಮ, ಮಾದಿಗೊಂಡನಹಳ್ಳಿ, ರಾಮನಗರ ಜಿಲ್ಲೆ
ಪತಿಯು ಪಂಚಾಯತ್ ರಾಜ್ ವಿಭಾಗದ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ಗ್ಯಾಂಗ್ಮನ್ ಆಗಿ ಕೆಲಸ ಮಾಡುತ್ತಿದ್ದು, 12.11.2012ರಂದು ನಿಧನ ಹೊಂದಿರುತ್ತಾರೆ. ಕಚೇರಿಯಲ್ಲಿ ವಿಚಾರಿಸಿದಾಗ ಎರಡನೇ ಹೆಂಡತಿ ಹೆಸರು ಸೇವಾ ಪುಸ್ತಕದಲ್ಲಿ ದಾಖಲಾಗಿದೆ ಎಂದು ತಿಳಿಸಿ, ಎಲ್ಲಾ ಸೌಲಭ್ಯಗಳೂ ಅವಳಿಗೇ ಹೊಗುತ್ತವೆಂದು ತಿಳಿಸಿದ್ದಾರೆ. ಹಾಗಾದರೆ ನನಗೆ ಸಿಗುವ ಪರಿಹಾರವೇನು?
- ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಪ್ರಕಾರ ಒಬ್ಬ ಹೆಂಡತಿ ಬದುಕಿರುವಾಗ ಎರಡನೇ ಮದುವೆ ಮಾಡಿಕೊಳ್ಳುವಹಾಗಿಲ್ಲ. ಹಾಗೆ ಮಾಡಿಕೊಂಡರೂ ಕಾನೂನಿನಂತೆ ಅದು ಸಿಂಧುವಾಗುವುದಿಲ್ಲ. ಅಲ್ಲದೆ, ಇಲಾಖೆಯವರು ಎರಡನೇ ಹೆಂಡತಿಯ ಹೆಸರು ನಮೂದಿಸುವಂತೆಯೂ ಇಲ್ಲ. ಆದ್ದರಿಂದ ನೀವು ಇಲಾಖೆಯ ವಿರುದ್ಧ ಎಡನೇ ಹೆಂಡತಿಯನ್ನು ಪ್ರತಿವಾದಿಯಾಗಿ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಸೌಲಭ್ಯ ವಿತರಣೆಗೆ ತಡೆಯಾಜ್ಞೆ ತರಬಹುದು.
ಜಿಲ್ಲಾಧಿಕಾರಿಗಳಲ್ಲಿ ಮಾಹಿತಿ ಸಿಗುತ್ತದೆ
ವೆಂಕಟೇಶ್, ನಂಜನಗೂಡು
ದೇವಸ್ಥಾನದ ಹತ್ತಿರ ವಾಸಮಾಡುತ್ತಿದ್ದೇನೆ. ನನ್ನ ಮನೆ ದೇವಸ್ಥಾನದ 100 ಮೀಟರ್ ಒಳಗೆ ಇದೆ. ದೇವಸ್ಥಾನದ 100 ಮೀಟರ್ ವ್ಯಾಪ್ತಿಯಲ್ಲಿ ಇರುವ ಎಲ್ಲ ಮನೆಗಳನ್ನೂ ಸರ್ಕಾರಕ್ಕೆ ಬಿಟ್ಟುಕೊಡಬೇಕಾಗುತ್ತದೆಂದು ಒಂದು ಸುದ್ದಿಯಿದೆ. ಇದರ ಖಚಿತ ಮಾಹಿತಿ ಯಾರ ಬಳಿ ಸಿಗುತ್ತದೆ? ಒಂದು ವೇಳೆ ಕೊಡಬೇಕಾಗಿ ಬಂದರೆ ಪರಿಹಾರ ಸಿಗುವುದೇ? ಸಿಕ್ಕರೆ ನನ್ನ ತಂಗಿಯರಿಗೂ ಕೊಡಬೇಕೇ?
- ಹಾಗೆ ವಶಪಡಿಸಿಕೊಳ್ಳಬೇಕಾದರೆ ಭೂಸ್ವಾಧೀನ ಕಾನೂನಿನನ್ವಯ ಸಾರ್ವಜನಿಕ ನೋಟೀಸ್ ಕೊಡಬೇಕು. ಆಗಲೂ ನೀವು ನ್ಯಾಯಾಲಯದ ಮೆಟ್ಟಿಲು ಹತ್ತಬಹುದು. ಖಚಿತ ಮಾಹಿತಿಗಾಗಿ ನಿಮ್ಮ ಜಿಲ್ಲಾಧಿಕಾರಿಗಳಿಗೆ ಮಾಹಿತಿಹಕ್ಕು ಕಾನೂನಿನಂತೆ ಅರ್ಜಿ ಸಲ್ಲಿಸಿ ಉತ್ತರ ಪಡೆಯಬಹುದು. ಒಂದು ವೇಳೆ ಸ್ವಾಧೀನಪಡಿಸಿಕೊಂಡರೆ ಪರಿಹಾರ ಸಿಗುತ್ತದೆ. ಆ ಆಸ್ತಿ ಪಿತ್ರಾರ್ಜಿತವಾಗಿದ್ದರೆ ನಿಮ್ಮ ತಾಯಿ, ಸಹೋದರ, ಸಹೋದರಿಯರು ಎಲ್ಲರಿಗೂ ಸಮಪಾಲು ಸಿಗುತ್ತದೆ.
- ಎಚ್.ಆರ್. ಕಸ್ತೂರಿರಂಗನ್