ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಅನಂತಾನಂತ ಆಲೋಚನೆಗಳು

Mainashree
Updated On : 19 Oct 2013, 4:51 am

ಸಮಕಾಲೀನ ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ಕೆ. ಸತ್ಯನಾರಾಯಣ ಅವರು ಬರೆದ ಅಂಕಣ ಬರೆಹಗಳ ಸಂಕಲನ 'ಮುಂದಣ ಅನಂತ'. ಅಂಕಣ ಬರೆಹಗಳ ಅನುಕೂಲ ಇರುವುದು ಅವುಗಳ ಮುಕ್ತ ಬಂಧದಲ್ಲಿ. ಅನನುಕೂಲ ಇರುವುದು ಕಾಲದ ಮತ್ತು ಸ್ಥಳಾವಕಾಶದ ಮಿತಿಯಲ್ಲಿ. ಪ್ರತಿವಾರವೂ ಒಪ್ಪಿಕೊಂಡ ಸಮಯಕ್ಕೆ ಮತ್ತು ನಿಗದಿಪಡಿಸಿದ ಪದಗಳ ಮಿತಿಯಲ್ಲಿ ಒಂದು ಆಲೋಚನೆಯನ್ನು ಕಟ್ಟಿಕೊಡುವುದು ಪ್ರತಿಯೊಬ್ಬ ಅಂಕಣ ಬರೆಹಗಾರನ ಮುಂದಿರುವ ಸವಾಲು.
ಈ ಅನುಕೂಲ ಮತ್ತು ಅನನುಕೂಲಗಳನ್ನು ಎಷ್ಟರಮಟ್ಟಿಗೆ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎನ್ನುವುದರ ಮೇಲೆ ಅಂಕಣದ ಹೆಚ್ಚುಗಾರಿಕೆ ನಿಂತಿರುತ್ತದೆ. ಸಾರ್ವಜನಿಕವಾಗಿರುವ ವಸ್ತುವೊಂದನ್ನು ವೈಯಕ್ತಿಕ ನೆಲೆಯಲ್ಲಿ ಗ್ರಹಿಸಿ ಅದಕ್ಕೆ ಪ್ರತಿಕ್ರಿಯೆಯನ್ನು ದಾಖಲಿಸುವ ಅಂಕಣ ಬರೆಹಗಳು ಓದುಗನನ್ನು ಹಿಡಿದಿಡುವಂತೆ ಮಾಡುವುದು ಆ ಲೇಖಕನ ಮಂಡನ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಮೂಲತಃ ಕತೆಗಾರರಾಗಿರುವ ಸತ್ಯನಾರಾಯಣ ಅವರ ಇಲ್ಲಿಯ ಬರೆಹಗಳು ಕಥನಗಾರಿಕೆಯ ಶೈಲಿಯ ಮೂಲಕ ಓದುಗನನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ.
ಹಲವು ಊರುಗಳನ್ನು ಸುತ್ತಿರುವ ಲೇಖಕರ ಅನುಭವ ವಿಸ್ತಾರ ದೊಡ್ಡದು. ಅದೇ ರೀತಿ ಅವರ ಓದಿನ ವಿಸ್ತಾರವೂ ಅಚ್ಚರಿ ಮೂಡಿಸುತ್ತದೆ. ಒಂದು ನಗರಕ್ಕೆ ಕಾಸ್ಮಾಪಾಲಿಟನ್ ಸ್ವರೂಪ ಹೇಗೆ ಬರುತ್ತದೆ ಎಂಬುದನ್ನು ಈ ಸಂಕಲನದ ಮೊದಲ ಲೇಖನ 'ಬೆಂಗಳೂರಿನೊಳಗಿರುವ ಹಲವು ಬೆಂಗಳೂರುಗಳು...' ಲೇಖನದಲ್ಲಿ  ಸತ್ಯನಾರಾಯಣ ಅವರು ತುಂಬ ಸೊಗಸಾಗಿ ಹೇಳಿದ್ದಾರೆ. 'ಒಂದು ನಗರಕ್ಕೆ ಕಾಸ್ಮಾಪಾಲಿಟನ್ ಲಯ ಮೂಡಿ ಬರುವುದು ಹಲವು ಸಂಸ್ಕೃತಿಗಳ ಜನ ದಿನನಿತ್ಯದ ಜೀವನದಲ್ಲಿ ಭಾಗವಹಿಸಿದಾಗ. ತಮ್ಮ ಶ್ರಮ, ವಿಶಿಷ್ಟತೆ, ಕನಸುಗಾರಿಕೆಯಿಂದ ಕಾಣಿಕೆ ನೀಡಿದಾಗ.' ಆದರೆ ಬೆಳೆಯುವ ಎಲ್ಲ ನಗರಗಳೂ ಈ ಕಾಸ್ಮಾಪಾಲಿಟನ್ ಲಯವನ್ನು ಸಾಧಿಸುವುದಿಲ್ಲ ಎನ್ನುವುದಕ್ಕೆ ಅವರು ಚೆನ್ನೈ ಮತ್ತು ಕೋಲ್ಕತ್ತಾಗಳ ಉದಾಹರಣೆ ನೀಡುತ್ತಾರೆ. ಬೆಂಗಳೂರು ಮಾತ್ರ ಅವುಗಳಿಂದ ಭಿನ್ನವಾಗಿ ಹಲವು ಸಂಸ್ಕೃತಿಗಳ ಜನರನ್ನು ಆಕರ್ಷಿಸುತ್ತದೆ ಎನ್ನುವುದನ್ನು ಗುರುತಿಸುತ್ತಾರೆ. ಅವರ ನಿರೀಕ್ಷಣೆ ಎಷ್ಟು ಸೂಕ್ಷ್ಮವಾಗಿದೆ ಎಂದರೆ ಬೆಂಗಳೂರಿನಿಂದ ಹೊರಡುವ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್, ರಾಜಸ್ಥಾನಿ, ತೆಲುಗು, ತಮಿಳು ದೈನಿಕಗಳು ಹೊರತರುವ ಮೆಟ್ರೋ ಪುರವಣಿಗಳು ಒಂದರ ಹಾಗೆ ಇನ್ನೊಂದಿಲ್ಲ ಎಂಬುದನ್ನು ಹೇಳಿದ್ದಾರೆ. ಅವುಗಳಲ್ಲಿ ಬಿಂಬಿತವಾಗುವ ವೈವಿಧ್ಯವೇ ಬೆಂಗಳೂರಿನ ವೈವಿಧ್ಯ ಎನ್ನುವುದನ್ನು ಅವರು ಮನಗಾಣಿಸುತ್ತಾರೆ.
'ನಮ್ಮ ಸಾಂಸ್ಕೃತಿಕ ಲೋಕದಲ್ಲಿ ನೌಕರಶಾಹಿ..' ಲೇಖನದಲ್ಲಿ ನೌಕರಶಾಹಿಯ ಗುಣಲಕ್ಷಣಗಳನ್ನು ಅವರು ಹೀಗೆ ಪಟ್ಟಿಮಾಡಿದ್ದಾರೆ: 'ನೌಕರಶಾಹಿ ಎಂದರೆ ಒಂದು ರೀತಿಯ ಜಡತೆ, ವಿಧಿವಿಧಾನಗಳ ಸಂಕೇತ. ಯಾವುದೇ ರೀತಿಯ ಸಂಪನ್ನತೆಯಿಲ್ಲ, ಸೋಪಜ್ಞತೆಯಿಲ್ಲ. ಮೇಲು- ಕೀಳು ಭಾವನೆ, ಸಂಪ್ರದಾಯ ಶರಣತೆ ಇವುಗಳ ಜೊತೆಗೆ ನೌಕರಶಾಹಿಯು ತನ್ನ ಸ್ವಭಾವದಲ್ಲೇ ಸ್ವಮಗ್ನ. ತನ್ನನ್ನ ತಾನೇ ಗಮನಿಸಿಕೊಳ್ಳುತ್ತದೆ, ಪುರಸ್ಕರಿಸಿಕೊಳ್ಳುತ್ತಿರುತ್ತದೆ. ತಾನು ಭಾಗವಾಗಿರುವ ಸಮಾಜದ ಬಗ್ಗೆಯಾಗಲೀ, ದೇಶದ ಬಗ್ಗೆಯಾಗಲೀ ಯಾವುದೇ ರೀತಿಯ ಕಾಳಜಿ ಇರುವುದಿಲ್ಲ.' ಆದರೆ, ಸಾಂಸ್ಕೃತಿಕ ಲೋಕದಿಂದ ಇದಕ್ಕೆ ಭಿನ್ನವಾದ ಕಾರ್ಯವಿಧಾನ ಮತ್ತು ಮೌಲ್ಯಗಳನ್ನು ನಿರೀಕ್ಷಿಸುತ್ತೇವೆ. ವಾಸ್ತವ ಹಾಗಿಲ್ಲ. ಸಾಂಸ್ಕೃತಿಕ ಲೋಕವೂ ತನ್ನ ಹಿತವನ್ನು ಕಾಯ್ದುಕೊಳ್ಳಲು ಯಾವ ಯಾವ ರೀತಿಯಲ್ಲಿ ಹುನ್ನಾರಗಳನ್ನು ನಡೆಸುತ್ತದೆ ಎಂಬುದನ್ನು ವಿವರಿಸುತ್ತಾರೆ. ಸರ್ಕಾರ, ಕಾರ್ಪೋರೇಟ್ ವಲಯಗಳು ಸಾಂಸ್ಕೃತಿಕ ವಲಯದ ಪ್ರಮುಖರನ್ನು ಹೇಗೆ ಭ್ರಷ್ಟರನ್ನಾಗಿ ಮಾಡುತ್ತವೆ ಎಂಬುದನ್ನು ಅವರು ವಿವೇಚಿಸುತ್ತಾರೆ. ಈ ವಲಯಗಳಿಂದ ಪುರಸ್ಕೃತರಾದವರು ಹೇಗೆ ಋಣ ತೀರಿಸುತ್ತಾ ಕಳೆದುಹೋಗುತ್ತಾರೆ ಎಂಬುದರ ಕಡೆಗೆ ಗಮನ ಸೆಳೆಯುತ್ತಾರೆ.
ಔದ್ಯೋಗೀಕರಣ ನಮ್ಮ ವೃತ್ತಿಕುಶಲತೆಯನ್ನು ಹೇಗೆ ನಾಶ ಮಾಡುತ್ತಿದೆ ಎಂಬ ವಿಷಾದದಲ್ಲಿ ಬರೆದದ್ದು 'ಕಮ್ಮಾರ- ಚಮ್ಮಾರರಿಲ್ಲದ ನಾಡು'. ನಮ್ಮ ಕುಶಲಕರ್ಮಿಗಳನ್ನು ವೃತ್ತಿಯಾಧಾರದ ಮೇಲೆ ಸಂಘಟಿಸದೆ ಜಾತಿಯಾಧಾರದ ಮೇಲೆ ಸಂಘಟಿಸುತ್ತಿರುವುದರ ಪ್ರತಿಕೂಲ ಪರಿಣಾಮವನ್ನೂ ಅವರು ಹೇಳುವರು. ಹೊಸ ಕಾಲದ ವಿದ್ಯಾಭ್ಯಾಸವು ಕರಕುಶಲತೆ ಮತ್ತು ವೃತ್ತಿಪರತೆಯಿಂದ ಮಾತ್ರ ವಿಮುಖವಾಗಿಲ್ಲ, ಮನುಷ್ಯನನ್ನು ಸ್ವಕೇಂದ್ರಿತವಾಗಿರುವಂತೆ, ಸಮಾಜವಿಮುಖಿಯಾಗಿರುವಂತೆ ಕೂಡ ಪ್ರೇರೇಪಿಸುತ್ತದೆ ಎಂಬ ಮಹತ್ವದ ಸತ್ಯವನ್ನು ಸತ್ಯನಾರಾಯಣರು ಇಲ್ಲಿ ಹೇಳಿದ್ದಾರೆ.
ದೀರ್ಘ ಶ್ರಮ, ದೈಹಿಕ ನೋವಿನಿಂದ ಮುಕ್ತಿಪಡೆಯಲು ಮಾನವನಿಗೆ ಯಂತ್ರಗಳು ನೆರವಾಗಲು ಬಂದವು. ಆದರೆ ಹೊಸ ತಂತ್ರಜ್ಞಾನವು ಮನುಷ್ಯ ಶ್ರಮವನ್ನೇ ಹೇಗೆ ಅಪ್ರಸ್ತುತಗೊಳಿಸುತ್ತಿದೆ ಎಂಬ ಕಳವಳವನ್ನು ಅವರು ವ್ಯಕ್ತಪಡಿಸುತ್ತಾರೆ. ಸಮಾಜವೊಂದು ಉತ್ತರಶೀಲವಾಗಬೇಕಾದ ಅಗತ್ಯವನ್ನು ಅವರು ಮನಗಾಣಿಸುತ್ತಾರೆ. ಉತ್ತರಶೀಲ ಸಮಾಜವೆಂಬ ಕಲ್ಪನೆಯಾಗಲೀ, ಸಮಾಜವಾಗಲೀ ಒಂದು ಕ್ಷಣವೂ ನಿಂತ ನೀರಲ್ಲ. ಪ್ರತಿಕ್ಷಣವೂ ಬದಲಾಗುವ, ಬೆಳೆಯುವ ಪರಿಕಲ್ಪನೆ ಮತ್ತು ಸಮಾಜ ಎನ್ನುವ ಚಿಂತನೆ ಹೊಸದು.
ನೆಹರೂ ಬಗ್ಗೆ ಒಂದು ಆಪ್ತವಾದ ಚಿತ್ರಣ ಈ ಕೃತಿಯಲ್ಲಿದೆ. ಗಾಂಧಿ, ಲೋಹಿಯಾ, ಅಂಬೇಡ್ಕರ್ ಕುರಿತಷ್ಟು ಇರುವ ಗೌರವ, ಪ್ರಸ್ತಾಪ ಕನ್ನಡದಲ್ಲಿ ನೆಹರೂ ಬಗ್ಗೆ ಕಂಡುಬಂದಿಲ್ಲ ಎಂಬುದರ ಕಡೆ ನಮ್ಮ ಗಮನ ಸೆಳೆಯುತ್ತ ಇದಕ್ಕೆ ಕಾರಣಗಳನ್ನು ಅವರು ಹುಡುಕುತ್ತಾರೆ. ನೆಹರು ಪ್ರಧಾನಿಯಾಗಿದ್ದುದರಿಂದಲೇ, ರಾಜಕೀಯಾಧಿಕಾರದ ಶಿಖರದಲ್ಲಿದ್ದುದರಿಂದಲೇ ನಾವು ಅವರನ್ನು ಕೇವಲ ರಾಜಕಾರಣಿಯೆಂದು ಭಾವಿಸಿ ಗಾಂಧಿ, ರವೀಂದ್ರನಾಥ ಠಾಕೂರ್ ಇವರಿಗಿಂತ ಒಂದೆರಡು ಹಂತ ಕೆಳಗಿಳಿಸಿ ಕೀಳಾಗಿ ಕಾಣುತ್ತೇವೆ. ಸರ್ದಾರ್ ಪಟೇಲ್, ಸುಭಾಶ್ಚಂದ್ರ ಬೋಸ್ ಇತರರ ಬಗ್ಗೆ ನಮಗಿರುವ ಒಲವೂ ಇದಕ್ಕೆ ಕಾರಣ ಎನ್ನುತ್ತಾರೆ. ಜೊತೆಗೆ ನೆಹರು ಅವರನ್ನು ನಾವು ಏಕಾಗಿ ಮೆಚ್ಚಿಕೊಳ್ಳಬೇಕು, ಅವರ ಹೆಚ್ಚುಗಾರಿಕೆ ಏನು ಎನ್ನುವುದನ್ನು ಮನಮುಟ್ಟುವಂತೆ ಹೇಳಿದ್ದಾರೆ. ನೆಹರು ಕುರಿತು ಕನ್ನಡದಲ್ಲಿ ಬಂದಿರುವ ಒಂದು ವಸ್ತುನಿಷ್ಠ ಬರೆಹ ಇದು.
ನೆಹರೂ ಸಮಗ್ರ ಬರವಣಿಗೆ 60 ಸಂಪುಟಗಳಷ್ಟಾಗುತ್ತವೆ. ನೆಹರೂ ಎಲ್ಲ ಮುಖ್ಯಮಂತ್ರಿಗಳಿಗೂ ಕಾಲಕಾಲಕ್ಕೆ ಪತ್ರಬರೆಯುತ್ತಿದ್ದರು ಎಂಬ ವಿವರಗಳನ್ನು ನೀಡಿರುವ ಸತ್ಯನಾರಾಯಣ ಅವರು, ಒಂದು ಪತ್ರದಲ್ಲಿ ನೆಹರೂ, ಜಾಡಮಾಲಿಗಳು ಉಪಯೋಗಿಸುವ ಕಸಬರಿಗೆಯ ಹಿಡಿ ಉದ್ದವಿರಬೇಕು. ಇಲ್ಲದಿದ್ದರೆ ಕಸ ಗುಡಿಸಲು ತೊಂದರೆಯಾಗುತ್ತದೆ, ಜೊತೆಗೆ ಪೌರಕಾರ್ಮಿಕರ ಆತ್ಮಸ್ಥೈರ್ಯಕ್ಕೂ ಕುಂದು ಬರುತ್ತದೆ ಎಂದು ಸೂಚಿಸಿದ್ದನ್ನು ನೆನಪಿಸಿದ್ದಾರೆ. ಇದು ವಿನಾಕಾರಣ ನೆಹರೂರ ಮೇಲೆ ಮುನಿಯುವವರಿಗೆ ಆತ್ಮನಿರೀಕ್ಷಣೆ ಮಾಡಿಕೊಳ್ಳಲು ಸಹಾಯ ಮಾಡುವ ಒಂದು ಝಳಕು.
ನೆಹರೂ ಪ್ರಗತಿಶೀಲ ಸಾಹಿತ್ಯದ ಬಗ್ಗೆ ಬರೆದ ಲೇಖನದ ಅನುವಾದ 'ಜಯಕರ್ನಾಟಕ'ದಲ್ಲಿ 1938ರಲ್ಲಿಯೇ ಪ್ರಕಟವಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಲು ಬಯಸುತ್ತೇನೆ. ಜನರೇಕೆ ನಗರಗಳಿಗೆ ವಲಸೆ ಬರುತ್ತಾರೆ ಎಂಬುದನ್ನು ಚಿಂತಿಸುತ್ತ, ನಗರ ಕೇಂದ್ರಗಳು ನಮ್ಮ ವ್ಯಕ್ತಿತ್ವದ ಸ್ವರೂಪವನ್ನೂ ನಮಗೇ ಗೊತ್ತಿಲ್ಲದಂತೆ ಬದಲಾಸುತ್ತವೆ ಎನ್ನುತ್ತಾರೆ. ಯಾವ ವಿಷಯವನ್ನು ಎತ್ತಿಕೊಂಡರೂ ಅದನ್ನು ಮನಂಬೊಗುವಂತೆ ಹೇಳುವ ಕಲೆ ಸತ್ಯನಾರಾಯಣರಿಗೆ ಸಿದ್ಧಿಸಿದೆ. ಇದರಲ್ಲಿ 32 ಲೇಖನಗಳಿವೆ. ಇವುಗಳಲ್ಲಿ 'ಕುವೆಂಪು ಹೀಗೆ ಓದುತ್ತಿದ್ದರು' ಲೇಖನ ಅವರ 'ಸುಮ್ಮನೆ ಓದೋಣ' ಸಂಕಲನದಲ್ಲಿಯೂ ಇದೆ.

ಕೃತಿ: ಮುಂದಣ ಅನಂತ,
ಪ್ರಕಾರ: ಅಂಕಣ
ಏಕೆ ಓದಬೇಕು? ಓದುವ ಖುಷಿಗೆ
ಪ್ರ: ಐಬಿಎಚ್ ಪ್ರಕಾಶನ, ಬೆಂಗಳೂರು,
ಪುಟಗಳು 186, ಬೆಲೆ ರು. 130
===

ಸಮ್ಮೇಳನಾಧ್ಯಕ್ಷರ ಭಾಷಣ
ಬಿಜಾಪುರದಲ್ಲಿ ನಡೆದ 79ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೋ.ಚೆನ್ನಬಸಪ್ಪನವರು ಮಾಡಿದ ಭಾಷಣವನ್ನು 'ಜನರನ್ನು ಬದುಕಿಸುವ ಸಾಹಿತ್ಯ ಬೇಕು' ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಇದನ್ನು ಸಂಪಾದಿಸಿರುವ ಡಾ.ಎಸ್.ಎಂ.ವೃಷಭೇಂದ್ರಸ್ವಾಮಿಯವರು, ಸಮ್ಮೇಳನದಲ್ಲಿ ಭಾಗವಹಿಸಿದವರು ಈ ಭಾಷಣ ಕೇಳಿದ್ದಾರೆ, ಕೆಲವರು ಅದರ ಮುದ್ರಿತ ಪ್ರತಿಯನ್ನು ಓದಿದ್ದಾರೆ, ಕೆಲವರು ಪತ್ರಿಕೆಗಳಲ್ಲಿ ಬಂದ ಭಾಷಣದ ವರದಿಯನ್ನು ಓದಿದ್ದಾರೆ. ಇವು ಯಾವವೂ ಸಿಗದವರಿಗಾಗಿ ಇದನ್ನು ಪ್ರಕಟಿಸಲಾಗಿದೆ ಎಂದು ಪ್ರಕಟಣೆಯ ಔಚಿತ್ಯವನ್ನು ಹೇಳಿದ್ದಾರೆ. ಸಾಹಿತ್ಯ ಪರಿಷತ್ತೇ ಸಮ್ಮೇಳನಾಧ್ಯಕ್ಷರ ಭಾಷಣಗಳನ್ನು ಪ್ರಕಟಿಸಿರುವ ಪರಂಪರೆಯೂ ನಮ್ಮಲ್ಲಿದೆ. ಇದರ ಜೊತೆಯಲ್ಲಿ ಕೋ.ಚೆ.ಯವರು 1993ರಲ್ಲಿ ನಡೆದ 8ನೆ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಭಾಷಣವನ್ನೂ ಸೇರಿಸಲಾಗಿದೆ. ಈ ಭಾಷಣದ ಕುರಿತು ವಿವಿಧೆಡೆ ಬಂದ ಪ್ರತಿಕ್ರಿಯೆಗಳನ್ನು ಇದರಲ್ಲಿ ಸೇರಿಸಿದ್ದರೆ ಸಂಪಾದನೆಗೊಂದು ತೂಕ ಬರುತ್ತಿತ್ತು.

ಕೃತಿ: ಜನರನ್ನು ಬದುಕಿಸುವ ಸಾಹಿತ್ಯ ಬೇಕು,
ಪ್ರಕಾರ: ಭಾಷಣ
ಏಕೆ ಓದಬೇಕು? ನಾಡಿನ ಹಿರಿಮೆ ಅರಿಯಲು
ಪ್ರ: ಶ್ರೀಅರವಿಂದ ಪ್ರಕಾಶನ, ಬೆಂಗಳೂರು,
ಪುಟಗಳು 80, ಬೆಲೆ ರು. 60
===
ಧೂಮಕೇತು
ಆಕಾಶಕಾಯಗಳ ಬಗ್ಗೆ ಮಕ್ಕಳಿರುವಾಗಿನಿಂದಲೇ ಕುತೂಹಲ ಇರುತ್ತದೆ. ಕತೆ, ಪುರಾಣಗಳ ಮೂಲವೂ ಅವುಗಳಿಗೆ ಸುತ್ತಿಕೊಂಡಿರುತ್ತದೆ. ವಿದೇಶಗಳಲ್ಲಿಯೂ ಧೂಮಕೇತುವಿನ ಬಗ್ಗೆ ಬಗೆಬಗೆಯ ಕತೆಗಳಿವೆ. ಆದರೆ ಅವುಗಳ ವೈಜ್ಞಾನಿಕ ಸತ್ಯಗಳನ್ನು ಮನಗಾಣುವುದು ದೊಡ್ಡವರಾದ ಮೇಲೆಯೇ. ಖಗೋಳ ವಿಜ್ಞಾನದಲ್ಲಿ ಸಂಶೋಧನೆಯನ್ನು ಮಾಡಿರುವ ಬಿ.ಎಸ್.ಶೈಲಜಾ ಅವರು ಧೂಮಕೇತುಗಳ ಕುರಿತು ರಚಿಸಿರುವ ಕೃತಿ 'ಬಾಲಂಕೃತ ಚುಕ್ಕಿ ಧೂಮಕೇತು'. ಧೂಮದ ಬಾಲವನ್ನು ಹೊಂದಿರುವ ಆಕಾಶಕಾಯಗಳೇ ಧೂಮಕೇತುಗಳು. ಧೂಮಕೇತುಗಳು ಕಾಣಿಸಿಕೊಂಡರೆ ಅನಿಷ್ಟವೆಂಬ ನಂಬಿಕೆಯೂ ಇದೆ. ಆದರೆ ಅದು ವೈಜ್ಞಾನಿಕವಾದುದಲ್ಲ. ಮೂಢನಂಬಿಕೆಯನ್ನು ಹೋಗಲಾಡಿಸುವ ಅನೇಕ ಅಮೂಲ್ಯ ವೈಜ್ಞಾನಿಕ ಮಾಹಿತಿಯನ್ನು ಈ ವಿಶೇಷ ಆಕಾಶಕಾಯದ ಬಗ್ಗೆ ಹೊಂದಿರುವ ಕೃತಿ ಇದು.

ಕೃತಿ: ಬಾಲಂಕೃತ ಚುಕ್ಕಿ ಧೂಮಕೇತು
ಪ್ರಕಾರ: ವಿಜ್ಞಾನ,
ಏಕೆ ಓದಬೇಕು?: ಧೂಮಕೇತು ಅರಿಯಲು
ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು,
ಪುಟಗಳು 112, ಬೆಲೆ ರು. 80
===
ಅನಂತ ಅನಾವರಣ
ಕನ್ನಡದ ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಅವರ ವೈಚಾರಿಕತೆ ಹಾಗೂ ಸಾಹಿತ್ಯವನ್ನು ಕುರಿತು ಹಿರಿಯ ವಿಮರ್ಶಕ ಜಿ.ಎಸ್. ಆಮೂರ ಅವರು ಬರೆದಿರುವ ಕೃತಿ ಇದು. ಅನಂತಮೂರ್ತಿಯವರ ಕೃತಿಗಳ ಬಗ್ಗೆ ಕನ್ನಡದ ಬಹುತೇಕ ವಿಮರ್ಶಕರು ಒಂದಲ್ಲ ಒಂದು ವಿಮರ್ಶೆಯ ಲೇಖನ ಬರೆದಿದ್ದಾರೆ. ಅವರ ವೈಚಾರಿಕತೆಯನ್ನು ಒರೆಗೆ ಹಚ್ಚಿದ್ದಾರೆ. ಆಮೂರರು ತಮ್ಮ ಈ ಕೃತಿಯನ್ನು ಐದು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ಭಾಗ ಒಂದರಲ್ಲಿ ಅನಂತಮೂರ್ತಿಯವರ ವೈಚಾರಿಕತೆ ಹಾಗೂ ವಿಮರ್ಶೆಯವನ್ನು ವಿಶ್ಲೇಷಿಸಿದ್ದಾರೆ. ಎರಡನೇ ಭಾಗದಲ್ಲಿ ಅವರ ಕಾವ್ಯ ಮತ್ತು ಅನುವಾದಗಳ ಬಗ್ಗೆ ಬರೆದಿದ್ದಾರೆ. ಮೂರನೇ ಭಾಗದಲ್ಲಿ ಅವರ ಕಾದಂಬರಿಯ ಕುರಿತು, ಭಾಗ ನಾಲ್ಕರಲ್ಲಿ ಅವರ ಸಣ್ಣ ಕತೆಗಳ ಕುರಿತು, ಐದನೇ ಭಾಗದಲ್ಲಿ ಅವರ ನಾಟಕ, ಸಿನಿಮಾ, ಆತ್ಮಚರಿತ್ರೆಯ ಕುರಿತು ಬರೆದಿದ್ದಾರೆ. ಆಮೂರರೇ ಹೇಳಿಕೊಂಡಂತೆ ಈ ಮೊದಲೇ ಅವರು ಅನಂತಮೂರ್ತಿಯವರ ಕೃತಿಗಳ ಬಗ್ಗೆ ಬೇರೆ ಬೇರೆ ಸಂದರ್ಭಗಳಲ್ಲಿ ಬರೆದಿದ್ದರು. ಈಗ ಮನೋಹರ ಗ್ರಂಥಮಾಲೆಗಾಗಿ ಇದನ್ನು ರಚಿಸಿದ್ದಾರೆ. ಅನಂತಮೂರ್ತಿಯವರ ಆತ್ಮ ಚರಿತ್ರೆ 'ಸುರಗಿ' ವಿಮರ್ಶೆಯ ಚಿಂತನೆಗೆ ಹೊಸ ಆಯಾಮವನ್ನು ಒದಗಿಸಿದೆ. ಅನಂತಾನುಸಂಧಾನಕ್ಕೆ ಇದೊಂದು ಹೊಸ ಸಾಧನ.

ಕೃತಿ: ಯು.ಆರ್.ಅನಂತಮೂರ್ತಿ ವೈಚಾರಿಕತೆ ಹಾಗೂ ಸಾಹಿತ್ಯ,
ಪ್ರಕಾರ: ವಿಮರ್ಶೆ
ಏಕೆ ಓದಬೇಕು? ಅನಂತಮೂರ್ತಿಯವರನ್ನು ಅರಿಯಲು,
ಪ್ರ: ಮನೋಹರ ಗ್ರಂಥಮಾಲಾ ಧಾರವಾಡ,
ಪುಟಗಳು 194, ಬೆಲೆ ರು. 150

- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments