ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಕಾಣದ ಕಡಲಿಗೆ ಹಂಬಲಿಸಿದೆ ಮನ...

Mainashree
Updated On : 19 Oct 2013, 4:33 am

ನನ್ನ ಚಿಕ್ಕಂದಿನ ಸಂಗತಿ. ನನ್ನ ತಂದೆ ತಾಯಿಗೆ ದೇವರಲ್ಲಿ ಭಯ ಭಕ್ತಿ ನಂಬಿಕೆ ಇದ್ದವು. ನೇಮ ನಿಷ್ಠೆ ಇತ್ತು. ಆದರೆ ಮಡಿ ಮೈಲಿಗೆ ಅಷ್ಟಾಗಿರಲಿಲ್ಲ. ಹಬ್ಬ ಹರಿದಿನಗಳನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದರು.
ತಂದೆ ಪ್ರತಿದಿನ, ತಮಗೆ ಬರುತ್ತಿದ್ದ ಕೆಲವು ಮಂತ್ರ ಮತ್ತು ಕೀರ್ತನೆಗಳೊಂದಿಗೆ ತಪ್ಪದೆ ದೇವರ ಪೂಜೆ ಮಾಡಿದ ನಂತರವಷ್ಟೇ ತಮ್ಮ ಫೋಟೊ ಸ್ಟುಡಿಯೊ ಕೆಲಸಕ್ಕೆ ತೊಡಗುತ್ತಿದ್ದರು. ತಾಯಿ ಮೌನಭಕ್ತಿಯೊಂದಿಗೆ ಅವರಿಗೆ ಸಹಕರಿಸುತ್ತಿದ್ದರು. ಇದನ್ನೆಲ್ಲ ನೋಡುತ್ತಿದ್ದ ನನ್ನಲ್ಲೂ ಸಹಜವಾಗಿ ದೈವಭಕ್ತಿ, ಶ್ರದ್ಧೆ ಅಂಕುರಿಸಿದವು. ನನ್ನ ತಂದೆ ಊರಲ್ಲಿ ಇಲ್ಲದಿದ್ದ ದಿನ ನಾನೇ ಶ್ರದ್ಧಾಭಕ್ತಿಯಿಂದ, ನಾನು ಸಿನಿಮಾಗಳಿಂದ ಕಲಿತಿದ್ದ ದೇವರನಾಮಗಳನ್ನು ಹಾಡಿಕೊಂಡು, ಯಥಾ ವಿಧಿ ದೇವರ ಪೂಜೆ ಮಾಡುತ್ತಿದ್ದೆ. ಕಂಡವರು 'ಆಹಾ, ಇಷ್ಟು ಚಿಕ್ಕ ವಯಸ್ಸಿಗೇ ಎಂಥಾ ದೈವಭಕ್ತಿ!' ಎಂದು ಕೊಂಡಾಡುತ್ತಿದ್ದರು.
ನಾನು 9ನೇ ತರಗತಿಯಲ್ಲಿದ್ದಾಗ, ಅಂದರೆ ಸುಮಾರು 14 ವರ್ಷದವನಿದ್ದಾಗ, ಅಂತರ ರಾಜ್ಯ ಪ್ರೌಢಶಾಲಾ ವಿದ್ಯಾರ್ಥಿಗಳ ಚರ್ಚಾಸ್ಪರ್ಧೆಯಲ್ಲಿ ನನ್ನ ಶಾಲೆಯನ್ನು ಪ್ರತಿನಿಧಿಸಿದ್ದೆ. ಚರ್ಚೆಯ ವಿಷಯ; 'ದೇವರು, ದೆವ್ವ ಬರೀ ಭ್ರಮೆ'. (ಬಹುಶಃ ಎಚ್. ನರಸಿಂಹಯ್ಯನವರು ಸೂಚಿಸಿದ ವಿಷಯ ಇರಬೇಕು.) ವಿಷಯವನ್ನು ಸಮರ್ಥಿಸಿ ಮಾತಾಡಿದ ನನಗೆ ಮೂರನೇ ಬಹುಮಾನ ಮತ್ತು ನಮ್ಮ ಶಾಲೆಗೆ ಪರ್ಯಾಯ ಪಾರಿತೋಷಕ ಬಂದವು. ಎಲ್ಲರೂ ನನ್ನ ಬೆನ್ನು ತಟ್ಟಿ ಅಭಿನಂದಿಸಿದರು. ಆದರೆ ನನ್ನ ತಂದೆ, 'ಅದ್ಯಾವ ಮಹಾನುಭಾವ ಚರ್ಚೆಗೆ ಆ ವಿಷಯ ಕೊಟ್ಟೋನು? ಬೇರೆ ಯಾವುದೂ ಹೊಳೀಲಿಲ್ಲವಾ? ಅದರ ಪರವಾಗಿ ಬೇರೆ ನೀ ಮಾತಾಡಿದ್ದೀಯಲ್ಲ, ಧೀರ' ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ನಾನು ಪೆಚ್ಚಾದೆ.
ಅದೇ ವರ್ಷ ಇನ್ನೊಂದು ಘಟನೆ ನಡೆಯಿತು. ಅದು ಕಾಮನಹಬ್ಬದ ಸಮಯ. ನಮ್ಮ ಬೀದಿಯ ನಾವು ಒಂದಷ್ಟು ಪುಂಡ ಹುಡುಗರು ಕಾಮದಹನಕ್ಕೆಂದು ಸಾಕಷ್ಟು ಹಳೆಯ ಬಟ್ಟೆ, ಮರದ ಸಾಮಾನು, ಮೊರ, ಪೊರಕೆ, ಸೌದೆ ಇತ್ಯಾದಿ ಸಂಗ್ರಹಿಸಿದ್ದೆವು. ಇವುಗಳನ್ನೆಲ್ಲ ಒಟ್ಟುಮಾಡಿ ಸುಡುವ ರಾಶಿಯ ನಡುವೆ ನೆಡಲು ಒಂದು ಕತ್ತಾಳೆಮರ ಬೇಕಿತ್ತು. ಅದನ್ನು ತರಲೆಂದು ಕಾಮನಹಬ್ಬದ ದಿನ ಬೆಳಗ್ಗೆ ನಾವು ಕೆಲವರು ಗೆಳೆಯರು ಉತ್ಸಾಹದಿಂದ ಕಾಲ್ನಡಿಗೆಯಲ್ಲಿ ಹೊರಟೆವು. ತಕ್ಕ ಮರ ಸಿಕ್ಕದೆ, ಸಿಕ್ಕಿದರೂ ಸಂಬಂಧಪಟ್ಟವರು ಬಿಟ್ಟಿಯಾಗಿ ಕೊಡಲೊಪ್ಪದೆ, ಹೀಗೇ ಹುಡುಕುತ್ತಾ, ಅಲೆಯುತ್ತಾ, ಊರಾಚೆ ಐದಾರು ಮೈಲು ದೂರ ಬಂದೆವು. ಕೊನೆಗೂ ಯಾವುದೋ ಒಂದು ಕುಗ್ರಾಮದ ಸ್ಮಶಾನದಲ್ಲಿ ನಮಗೆ ಪ್ರಶಸ್ತವೆನಿಸಿದ ಕತ್ತಾಳೆಮರ ಕಂಡಿತು. ಹೇಳಕೇಳುವವರಿಲ್ಲದ ಆ ತಬ್ಬಲಿ ಮರದ ಬುಡವನ್ನು, ನಾವು ಕೊಂಡು ಹೋಗಿದ್ದ ಕೈಕೊಡಲಿಯಿಂದ ಕಡಿದು, ಅದನ್ನು ಹೊತ್ತುಕೊಂಡು, ವಿಜಯೋತ್ಸಾಹದಲ್ಲಿ ಊರಿಗೆ ಹಿಂತಿರುಗುವ ವೇಳೆಗೆ ಸಂಜೆಯಾಗಿತ್ತು.
ಬೆಳಗ್ಗೆ ಹೋದವನು, ಮಧ್ಯಾಹ್ನದ ಊಟಕ್ಕೂ ಬಾರದೆ, ಸಂಜೆ ಮನೆಗೆ ಬಂದ ನನ್ನನ್ನು ಕಂಡು, ಅದಕ್ಕೆ ಕಾರಣವಾದ ರಾಜಕಾರ್ಯದ ಬಗ್ಗೆ ತಿಳಿದುಕೊಂಡು, ತಂದೆ ಕೆಂಡಾಮಂಡಲವಾದರು. ನಾಲ್ಕು ಲತ್ತೆಯೂ ಬಿತ್ತು. ಎಂದಿನಂತೆ ತಾಯಿ ನನ್ನ ರಕ್ಷಣೆಗೆ ಧಾವಿಸಿದಳು. ಬಸವಳಿದು ಬಂದಿದ್ದ ಮಗರಾಯನಿಗೆ ಊಟಕ್ಕಿಟ್ಟು ಸಂತೈಸಿದಳು.
ಅಂದು ರಾತ್ರಿ, ಕಾಮದಹನ ನಮ್ಮ ಬೀದಿಯಲ್ಲಿ, ಪಡ್ಡೆ ಹೈಕಳಾದ ನಮ್ಮ ಗದ್ದಲ, ಕೋಲಾಹಲಗಳೊಂದಿಗೆ ವೈಭವೋಪೇತವಾಗಿ ನಡೆಯಿತು.
ಅಲ್ಲಿದಾಂಚೆಗೆ ನನ್ನಲ್ಲಿ ಒಂದು ವಿಲಕ್ಷಣ ವೈಪರೀತ್ಯ ಕಂಡುಬರಲು ಶುರುವಾಯಿತು. ರಾತ್ರಿ ನಿದ್ದೆಯಲ್ಲಿ ಭಯಂಕರ ದುಃಸ್ವಪ್ನಗಳು ಬೀಳತೊಡಗಿದವು. ದುಷ್ಟ ಜೀವಜಂತುಗಳು, ವಿಕಾರ ಭಯಾನಕ ಆಕೃತಿಗಳು ನನ್ನ ಮೇಲೆ ಆಕ್ರಮಣ ಮಾಡಲು ನುಗ್ಗಿ ಬರುತ್ತಿದ್ದವು. ನಾನು ಕಿಟಾರನೆ ಚೀರಿಕೊಂಡು, ಅವುಗಳಿಂದ ತಪ್ಪಿಸಿಕೊಳ್ಳಲು, ನನ್ನ ಹಾಸಿಗೆಯಿಂದ ಎದ್ದುಬಿದ್ದೋಡುತ್ತಿದ್ದೆ. ಚಿಲಕ ಹಾಕಿದ್ದ ಮುಂಬಾಗಿಲನ್ನು ಧಡಾರನೆ ತೆಗೆದು, ಬೀದಿಗೆ ಜಿಗಿಯುತ್ತಿದ್ದೆ. ನನ್ನನ್ನು ತಡೆಯುವುದು, ಹಿಡಿಯುವುದು, ನನ್ನ ಮನೆಮಂದಿಗೆ ಪ್ರತಿ ರಾತ್ರಿಯ ಕಾಯಕವಾಗತೊಡಗಿತು.
ಅದೆಲ್ಲ ಒಂದೆರಡು ನಿಮಿಷಗಳ ಸಂಗತಿಯಷ್ಟೇ. ದುಃಸ್ವಪ್ನ ಒಡೆದು, ನನಗೆ ಎಚ್ಚರಾದ ಕೂಡಲೇ ನಾನು ಮಾಮೂಲಿನ ಸ್ವಸ್ಥ ಸ್ಥಿತಿಗೆ ಮರಳುತ್ತಿದ್ದೆ. ಒಂದು ರಾತ್ರಿಗೆ ಒಮ್ಮೆ ಮಾತ್ರ. ಮತ್ತೆ ನಿದ್ದೆಗೆ ಮರಳಿದರೆ ಅಂಥ ದುಃಸ್ವಪ್ನ ಮರುಕಳಿಸುತ್ತಿರಲಿಲ್ಲ.
ದೇವರ ವಿರುದ್ಧವಾಗಿ ಚರ್ಚಾಸ್ಪರ್ಧೆಯಲ್ಲಿ ನಾನು ಮಾತಾಡಿದ್ದು ಮತ್ತು ಕಾಮದಹನದ ದಿನ ಮಟಮಟ ಮಧ್ಯಾಹ್ನ ಸ್ಮಶಾನದಿಂದ ಕತ್ತಾಳೆಮರವನ್ನು ಕಡಿದು ತಂದದ್ದೇ ಇದಕ್ಕೆ ಕಾರಣವೆಂದು ನನ್ನ ತಂದೆ ತೀರ್ಮಾನಿಸಿದರು. ಆ ಕತ್ತಾಳೆಮರದ ನಿವಾಸಿಯಾಗಿದ್ದ ದೆವ್ವದ್ದೇ ಈ ಚೇಷ್ಟೆಯೆಂದು ನಿರ್ಧಾರವಾಯಿತು. ಜೊತೆಗೆ, ದೇವರೂ ಕೋಪಗೊಂಡು ಕೈಬಿಟ್ಟಿದ್ದಾನೆ ಎಂದಾಯಿತು. ಸರಿ, ದೇವರ ಸಂತುಷ್ಟಿಗಾಗಿ ಮತ್ತು ದೆವ್ವದ ಉಚ್ಛಾಟನೆಗಾಗಿ ಏನೆಲ್ಲ ಪೂಜೆ ಪುನಸ್ಕಾರ, ಮಾಟ ಮಂತ್ರ ಶುರುವಾದವು. ಆದರೆ ಸುಲಭಕ್ಕೆ ದೇವರೂ ಒಲಿಯಲಿಲ್ಲ, ದೆವ್ವವೂ ಜಗ್ಗಲಿಲ್ಲ. ಕ್ರಮೇಣ ದೆವ್ವದ ಆಟಾಟೋಪ ಕಡಿಮೆಯಾಯಿತಾದರೂ ಸಂಪೂರ್ಣ ನಿಲ್ಲಲಿಲ್ಲ. ಪ್ರತಿರಾತ್ರಿಯಿಂದ ಅದು ವಾರಕ್ಕೊಮ್ಮೆ, ನಂತರ ತಿಂಗಳಿಗೊಮ್ಮೆ, ಹೀಗೆ ಅದರ ಪುನರಾವರ್ತನೆಯ ಮಧ್ಯಂತರ ಹೆಚ್ಚುತ್ತಾ ಹೋಯಿತು. ನಿದ್ದೆಯಲ್ಲಿ ಕಿರುಚಿಕೊಂಡು ಎದ್ದು ಓಡುತ್ತಿದ್ದವನು, ಕ್ರಮೇಣ ಕಿರುಚಿಕೊಂಡು ಎದ್ದು ಹಾಸಿಗೆಯಲ್ಲೇ ಕೂರುವಷ್ಟರ ಮಟ್ಟಿಗೆ ಸ್ಥಿತಿ ಸುಧಾರಿಸಿತು. ಬರಬರುತ್ತ ಇದು ನಮ್ಮ ಕುಟುಂಬದ ಮತ್ತು ಪರಿಚಿತರ ವಲಯದಲ್ಲಿ ಒಂದು ಮಾಮೂಲಿ ಸಂಗತಿಯಾಗಿ, ತನ್ನ ವಿಶೇಷತೆಯನ್ನು ಕಳೆದುಕೊಂಡಿತು.
1963ರಲ್ಲಿ ನಾನು ಪಿಯುಸಿ ಓದಲು ದಾವಣಗೆರೆಗೆ ಬಂದು, ನನ್ನ ಸೋದರತ್ತೆಯ ಮನೆಯಲ್ಲಿ ನೆಲೆಸಿದ್ದೆ. ಆಗ ಒಂದು ರಾತ್ರಿ ನಾನು ಕಿರುಚಿಕೊಂಡ ಶಬ್ದದ ಭೀಕರತೆಗೆ ಇಡೀ ಬೀದಿಯ ಜನರೆಲ್ಲ ಓಡಿಬಂದು, ನಮ್ಮ ಮನೆಯ ಮುಂದೆ ಘೇರಾಯಿಸಿದ್ದರು. ನನ್ನ ಸೋದರತ್ತೆ ನನ್ನ ಸಮ್ಮುಖದಲ್ಲೇ ಅವರಿಗೆಲ್ಲ ನನ್ನ ವಿಲಕ್ಷಣತೆಯನ್ನು ಸಾದ್ಯಂತ ವಿವರಿಸಿ, ನನ್ನ ಮರ್ಯಾದೆ ಕಳೆದರು. ಕೊಲೆಯೋ, ಮತ್ತೇನೋ ಭಯಾನಕ ಅನಾಹುತವನ್ನು ನಿರೀಕ್ಷಿಸಿ ಬಂದಿದ್ದ ಜನಸಂದಣಿ ನಿರಾಸೆಯಿಂದ ಹಿಂತಿರುಗಿತು.
ತದನಂತರ 1964ರಲ್ಲಿ ನಾನು ಬಿ.ಎ. ಓದಲು ಬೆಂಗಳೂರಿಗೆ ಬಂದು ಗವಿಪುರ ಬಡಾವಣೆಯ 'ಶ್ರೀ ರಾಮಕೃಷ್ಣ ವಿದ್ಯಾರ್ಥಿ ಮಂದಿರ'ದ ನಿವಾಸಿಯಾಗಿದ್ದೆ. ನನಗೆ ಕೆಳ ಅಂತಸ್ತಿನ ಮೂಲೆಯ ಕೊಠಡಿಯಲ್ಲಿ ಸ್ಥಳಾವಕಾಶ ದೊರೆತಿತ್ತು. ಮೇಲಂತಸ್ತು ಪದವಿಯ ವಿಜ್ಞಾನ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೀಸಲಾಗಿತ್ತು. ಕೆಳ ಅಂತಸ್ತು ಪಿಯುಸಿ ವಿದ್ಯಾರ್ಥಿಗಳಿಗಷ್ಟೇ ಮೀಸಲಾಗಿದ್ದು, ಆಗ್ಗೆ ಇನ್ನೂ ವಿದ್ಯಾರ್ಥಿಗಳು ಪ್ರವೇಶ ಪಡೆದಿರಲಿಲ್ಲವಾದ್ದರಿಂದ ನಾನು ಅಲ್ಲಿ ಒಬ್ಬಂಟಿಯಾಗಿದ್ದೆ. ನನಗೆ ಯಾವುದೇ ಭಯ, ಭೀತಿ ಇರಲಿಲ್ಲ. ಆದರೂ ಅಭ್ಯಾಸದಂತೆ ಒಂದು ರಾತ್ರಿ ನನಗೇ ಅರಿವಿಲ್ಲದಂತೆ ಭಯಾನಕವಾಗಿ ಚೀರಿಕೊಂಡೆ. ಕೂಡಲೇ ಎಚ್ಚರಾಗಿ, ಎದ್ದು ಬಂದು, ಕೊಠಡಿಯ ಬಾಗಿಲು ತೆರೆದು, ನನ್ನ ಚೀರಾಟದ ಪರಿಣಾಮವನ್ನು ನಿರೀಕ್ಷಿಸುತ್ತ ನಿಂತೆ. ಧಡಧಡ ಶಬ್ದದೊಂದಿಗೆ ಮೇಲಂತಸ್ತಿನಲ್ಲಿದ್ದ ಇಡೀ ವಿದ್ಯಾರ್ಥಿ ಸಮುದಾಯವೇ, ವಾರ್ಡನ್ ಸ್ವಾಮೀಜಿಯವರ ನೇತೃತ್ವದಲ್ಲಿ ನನ್ನ ಕೊಠಡಿಯ ಕಡೆಗೆ ಧಾವಿಸಿ ಬಂತು. ಈ ಬಾರಿ ವಿವರಣೆಯನ್ನು ನಾನೇ ಖುದ್ದಾಗಿ ಕೊಡಬೇಕಾಗಿ ಬಂತು.
ಅದೇ ಕೊನೆ. ಅಲ್ಲಿಂದಾಚೆಗೆ ನನ್ನ ಆ ವಿಲಕ್ಷಣ ಅಭ್ಯಾಸ ಹಠಾತ್ತನೆ ನಿಂತು ಹೋಯಿತು. ಅದಕ್ಕೆ ಕಾರಣ ನನ್ನ ಗಟ್ಟಿಗೊಳ್ಳುತ್ತಿದ್ದ ವ್ಯಕ್ತಿತ್ವ, ಒಳಮನಸ್ಸು. ಏಕೆಂದರೆ ಆ ವೇಳೆಗೆ ಯೌವನದ ನನ್ನ ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಾನು ಒಬ್ಬ ಪ್ರಸಿದ್ಧ ಮನೋವೈದ್ಯರನ್ನು ಸಂಪರ್ಕಿಸಿದ್ದೆ. ನನ್ನ ಆ ವಿಲಕ್ಷಣ ಅಭ್ಯಾಸವನ್ನೂ ಒಳಗೊಂಡಂತೆ, ನನ್ನ ಎಲ್ಲ ದೌರ್ಬಲ್ಯಗಳನ್ನೂ ನಾನು (ಅವರ ಆದೇಶದಂತೆ) ಅವರ ಮುಂದೆ ಮನಬಿಚ್ಚಿ ತೋಡಿಕೊಂಡೆ. ನನ್ನ ಅಂತರಾಳದಲ್ಲಿ ಸುಪ್ತವಾಗಿದ್ದ ಎಲ್ಲ ಭೀತಿ, ಭ್ರಮೆಗಳನ್ನೂ ನಿರ್ಮೂಲಗೊಳಿಸುವ ಮಾರ್ಗೋಪಾಯಗಳನ್ನು ಅವರು ಹಂತ ಹಂತವಾಗಿ ನನಗೆ ಕಲಿಸಿದರು. ಜೊತೆಗೆ, ಆಗ ನಾನು ಓದುತ್ತಿದ್ದ ಉತ್ಕೃಷ್ಟ ಸಾಹಿತ್ಯ, ಮನೋವಿಜ್ಞಾನ ಮತ್ತು ತತ್ವಶಾಸ್ತ್ರದ ಪುಸ್ತಕಗಳೂ ನನ್ನ ಮೇಲೆ ಗಾಢ ಪ್ರಭಾವ ಬೀರತೊಡಗಿದ್ದವು. ಹೀಗಾಗಿ ನನಗೆ ಹಿಡಿದಿದ್ದ ಭೂತ ಕೊನೆಗೂ ಉಚ್ಛಾಟನೆಗೊಂಡಿತು.
ಅಧ್ಯಯನ, ಮನನ ಮತ್ತು ಜೀವನಾನುಭವ ಹೆಚ್ಚಾದಂತೆ ದೇವರು, ಧರ್ಮ ಮತ್ತು ಅಧ್ಯಾತ್ಮದಲ್ಲೂ ನನ್ನ ಶ್ರದ್ಧೆ ಕುಂದುತ್ತ ಹೋಯಿತು. ಪ್ರಶ್ನಿಸದೆ, ಸ್ವಾನುಭವದ ನಿಕಷಕ್ಕೆ ಒಡ್ಡದೆ, ಯಾವುದನ್ನೂ ಕುರುಡಾಗಿ ಒಪ್ಪಬಾರದೆಂಬ ಹಠ ಬಲಿಯುತ್ತ ಹೋಯಿತು.
ಒಮ್ಮೆ ಹಾಸ್ಟೆಲಿನ ನೀತಿಪಾಠದ ತರಗತಿಯಲ್ಲಿ ಸ್ವಾಮೀಜಿ ಒಂದು ದೃಷ್ಟಾಂತವನ್ನು ನೀಡಿದರು, 'ಒಂದು ಕಲ್ಲುಸಕ್ಕರೆಯ ತುಣುಕನ್ನು ಹಾಲಿನ ಬಟ್ಟಲಿಗೆ ಹಾಕಿ. ಏನಾಗುತ್ತೆ? ಅದು ಹಾಲಿನಲ್ಲಿ ಕ್ರಮೇಣ ಕರಗಿ ಲೀನವಾಗುತ್ತೆ. ಅದೇ ಒಂದು ಕಲ್ಲಿನ ತುಣುಕನ್ನು ಹಾಲಿಗೆ ಹಾಕಿ. ಅದು ಕಲ್ಲಾಗಿಯೇ ಉಳಿಯುತ್ತೆ. ಹಾಗೆಯೇ, ಜ್ಞಾನಿಯು ಕಲ್ಲುಸಕ್ಕರೆಯ ತುಣುಕಿನಂತೆ ಪರಮಾತ್ಮನೆಂಬ ಹಾಲಿನಲ್ಲಿ ಕ್ರಮೇಣ ಕರಗಿ ಲೀನವಾಗುತ್ತಾನೆ. ಅದೇ, ಅಜ್ಞಾನಿಯು ಕಲ್ಲಿನ ತುಣುಕಿನಂತೆ ಕರಗದೆ, ಅಜ್ಞಾನದ ಮಾಯಾಪ್ರಪಂಚದಲ್ಲೇ ಉಳಿಯುತ್ತಾನೆ.
ಬೇರೆಲ್ಲ ವಿದ್ಯಾರ್ಥಿಗಳೂ ಕೋಲೆಬಸವರಂತೆ ಗೋಣಾಡಿಸಿದರು. ಆದರೆ ಮನಸ್ಸು ತಡೆಯದೆ ನಾನೆಂದೆ, 'ಅದು ಸರಿ, ಸ್ವಾಮೀಜಿ, ಆದರೆ ಆ ಕಲ್ಲುಸಕ್ಕರೆಯ ತುಣುಕನ್ನು ಹಾಲಿನ ಬಟ್ಟಲಿಗೆ ಬದಲು ಚರಂಡಿಗೆ ಹಾಕಿದರೆ ಆ ಕೊಚ್ಚೆನೀರಿನಲ್ಲೂ ಅದು ಕರಗಿ ಲೀನವಾಗುತ್ತೆ. ಅದೇ ಆ ಕಲ್ಲಿನ ತುಣುಕು ಅಲ್ಲಿಯೂ ತನ್ನ ಕಲ್ಲುತನವನ್ನು ಉಳಿಸಿಕೊಳ್ಳುತ್ತೆ, ಅಲ್ಲವೇ?' ವಿದ್ಯಾರ್ಥಿಗಳೆಲ್ಲ ಗೊಳ್ಳೆಂದು ನಕ್ಕರು. ನನ್ನ ವಿತಂಡವಾದದಿಂದ ಸ್ವಾಮೀಜಿ ಅವರಿಗೆ ಮುಖಭಂಗವಾಯಿತು. ಪರಿಣಾಮವಾಗಿ ನಾನು ಆ ಹಾಸ್ಟೆಲ್ ಬಿಡಬೇಕಾಗಿ ಬಂತು.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಕಟ್ಟಾ ನಾಸ್ತಿಕನಲ್ಲ. ಆಸ್ತಿಕನಂತೂ ಮೊದಲೇ ಅಲ್ಲ. 'ಗೊತ್ತಿಲ್ಲ. ತಿಳಿಯಬೇಕೆಂಬ ಕುತೂಹಲವಂತೂ ಖಂಡಿತ ಇದೆ' ಎಂಬ ಮುಕ್ತಮನಸ್ಸಿನ ಸಂದೇಹವಾದಿ ಅನ್ನಬಹುದು. ನನಗೆ ಈ ವರೆಗೆ ಯಾವುದೇ ಅಲೌಕಿಕ, ಅನುಭಾವಿಕ ಅಥವಾ ಅಧ್ಯಾತ್ಮಿಕ ಅನುಭವಗಳೂ ಆಗಿಲ್ಲ. ಆದರೆ ನಿಗೂಢ ಅದ್ಭುತಗಳ ಮತ್ತು ವಿಸ್ಮಯಗಳ ಹೆಗ್ಗೂಡಾದ ಈ ಬ್ರಹ್ಮಾಂಡದ ವಿಶ್ವರೂಪ ದರ್ಶನದೆದುರು ನಾನೂ ಪಾರ್ಥನಂತೆ ಮೂಕವಿಸ್ಮಿತನಾಗಿ, ವಿನೀತನಾಗಿ, ಶಿರ ಬಾಗಿ ನಿಂತವನೇ. ಇಂಥ ಅಣೋರಣೀಯವೂ, ಮಹತೋ ಮಹೀಯವೂ ಆದ ಅದ್ಭುತ ಕಲಾಸೃಷ್ಟಿಯ ಹಿಂದಿರಬಹುದಾದ ಅಗೋಚರ ಮೆದುಳಿನ ಬಗ್ಗೆ, ಚಾಲಕ ಶಕ್ತಿಯ ಬಗ್ಗೆ, ಅದರ ಉದ್ದೇಶ ಮತ್ತು ಪರಮಾರ್ಥದ ಬಗ್ಗೆ ತಲೆ ಕೆಡಿಸಿಕೊಂಡವನೇ. ಕವಿತೆ ಬರೆದವನೇ. ಅಂಥ ಹಲವು ಕವಿತೆಗಳಲ್ಲಿ ಮೂರು: 'ಸಂದಿಗ್ಧ', 'ಕೊಲಂಬಸ್‌' ಮತ್ತು 'ಯೂಲಿಸಿಸ್‌'.

ಯೂಲಿಸಿಸ್
ಅಗೊ ಅಗೋ, ಗೆಳೆಯರೇ, ಅದೇ ಆ ದ್ವೀಪ,
ಪಕ್ಷಿಕನ್ಯೆಯರ ಬೀಡು.
ತೇಲಿ ಬರುತ್ತಿದೆ, ಕೇಳಿ, ಸಣ್ಣಗೆ ಆಲಾಪ
ಹಿಡಿದು ಈ ನೌಕೆಯ ಜಾಡು.
 
ಕಂಡಿತೇ ಆ ಕೋಡುಗಲ್ಲ ತುದಿಯಲ್ಲಿ
ರೆಕ್ಕೆಗಳ ಬಿಚ್ಚಿಕೊಂಡು,
ಒಕ್ಕೊರಲಿನಿಂದ ದನಿಯೆತ್ತಿ ಹಾಡುತ್ತಿರುವ
ನಗ್ನ ಚೆಲುವೆಯರ ಹಿಂಡು.
 
ತೀರದುದ್ದಕ್ಕೂ ಹೇಗೆ ಚೆಲ್ಲಿಬಿದ್ದಿವೆ ನೋಡಿ
ಮಾನವರ ಅಸ್ಥಿಪಂಜರ,
ಆ ಗಾನಕ್ಕೆ ವಶರಾಗಿ ನಿದ್ರಾಹಾರ ತೊರೆದು
ಈ ಲೋಕವನ್ನೇ ಮರೆತವರ.
 
ಬಿಗಿದುಕಟ್ಟಿ ನನ್ನನ್ನು ಕೂವೆಕಂಬಕ್ಕೆ,
ತುಂಬಿಕೊಳ್ಳಿ ಕಿವಿಗಳಲ್ಲಿ ಮಯಣ.
ನಾ ಸವಿಯಬೇಕು ಇಲ್ಲಿಂದಲೇ ಆ ಮೋಹಕ ಗಾನ,
ನಿಲ್ಲಿಸದೆ ಊರತ್ತ ಪಯಣ.
 
ಬಿಚ್ಚಬೇಡಿ ನನ್ನನ್ನು ನಾ ಅಂಗಲಾಚಿದರೂ,
ತೆರೆಯಬೇಡಿ ಗಾನಕ್ಕೆ ನಿಮ್ಮ ಕಿವಿಗಳ.
ಒಮ್ಮೆ ಮರುಳಾದರೆ ಆ ನಾದದ ಸೆಳೆತಕ್ಕೆ
ಕಾಣಲಾರೆವು ನಮ್ಮ ತಾಯ್ನೆಲ.
 
-2-
 
'ವೀರನೇ ಬಾ, ಹಮ್ಮೀರನೇ ಬಾ,
ಈ ಗಾನದ ಗುಡಿಗೆ;
ಇಲ್ಲಿದೆ ಅಪೂರ್ವ ನಾದಸುಧೆ, ಬಾ
ಹೊಸಲೋಕದ ತಡಿಗೆ.
 
ಏಕೆ ದೊರೆ, ಈ ಮುಚ್ಚುಮರೆ? ಬಾ
ಗಾನವಿಮಾನವನೇರು;
ಭವ ನೀಗಿ, ಗರಿ ಹಗುರಾಗಿ,
ಅನುಭಾವ ತುರೀಯವ ಸೇರು.
 
ನಾನಾ ನಾದವೇ ನಾಲಿಗೆ ಸವಿಯಲು
ದಿವದ ಮಕರಂದವ;
ಗಾನಯೋಗ ಸೋಪಾನ ತಲುಪಲು
ಸಚ್ಚಿದಾನಂದವ.
 
ಬಿಟ್ಟರೆ ಸಿಕ್ಕದ ಅವಕಾಶ, ಬಾ
ಕಟ್ಟುಗಳನು ಕಳಚಿ;
ಸ್ವರದ ಮೂಲಕ ಪರಾತ್ಪರವರಿಯಲು,
ಇಹವನು ಧಿಕ್ಕರಿಸಿ.
 
-3-
 
ಎಂಥ ದಿವ್ಯಧ್ವನಿ, ದಿವ್ಯನಾದ, ಅಹಾ,
ಅಂತರಾತ್ಮವ ಸೆಳೆದಿದೆ!
ಬೇಡ ಹೆಂಡತಿ ಮಗ ಮನೆಮಾರು, ಕಣ್ಣೆದುರೇ
ನಿಜದ ನೆಲೆ ಮೈ ತಳೆದಿದೆ.
 
ಹೋಗಬೇಕು, ನಾ ಹೋಗಲೇ ಬೇಕು
ಆ ಅಲೌಕಿಕ ಕರೆಗೆ ಓಗೊಟ್ಟು;
ಹೋಗಗೊಡಿ, ಗೆಳೆಯರೇ,
ಬೇಡುವೆನು ಕೈ ಮುಗಿದು,
ಬಿಚ್ಚಿ ಕಟ್ಟುಗಳ ದಯವಿಟ್ಟು.
 
ಮೀರಲೊಲ್ಲರು ನನ್ನ ಕಟ್ಟಾಜ್ಞೆ ಅನುಚರರು
ಮರುಗಲೊಲ್ಲರು, ಅಯ್ಯೋ, ಮೊರೆಗೆ
ನಾನೇ ನಿರ್ಮಿಸಿಕೊಂಡ ಭವಪಾಶ ಬಂಧವಿದು,
ಮುಕ್ತಿಯುಂಟೇ ನನ್ನ ಸೆರೆಗೆ?

ಸಂದಿಗ್ಧ
ಪ್ರಭೂ,
ಚಳಿಗಾಲದ ಒಂದು ಮುಸ್ಸಂಜೆ
ಹಿತ್ತಿಲ ಬೋಳು ಮರದ ಕೆಳಗೆ
ತರಗೆಲೆಗಳನ್ನು ರಾಶಿ ಮಾಡುತ್ತಿದ್ದೆ
ಮೈ ಕಾಯಿಸಿಕೊಳ್ಳಲು
ಬಚ್ಚಲ ಒಲೆಯ ಮುಂದೆ.
 
ತರಗೆಲೆಗಳಲ್ಲಿ ಒಂದು
ನನ್ನ ಕೈ ಸೋಕಿದ ಕೂಡಲೇ
ಥಟ್ಟನೆ
ಚಿಟ್ಟೆಯಾಗಿ ಪಟಪಟ ಹಾರಿಹೋಯಿತು.
ಕಂಡು ದಂಗಾಗಿ ನಿಂತೆ:
 
ಆ ಥೇಟು ತರಗೆಲೆಯಂಥ ರೆಕ್ಕೆ
ಆ ಚಿಟ್ಟೆಗೆ
ತನ್ನ ವಿಕಾಸದ ಫಲವಾಗಿ ಮೂಡಿ ಬಂದ
ನೈಸರ್ಗಿಕ ಕವಚವೋ,
ಅಥವಾ ನಿನ್ನ ಅನುಗ್ರಹದ
ಕಾರುಣ್ಯ ರಕ್ಷೆಯೋ,
ಪರಿಭಾವಿಸಲಾರದೆ ಹೋದೆ.
 
ಪ್ರಭೂ,
ಇಂಥ ಸಂದಿಗ್ಧದಲ್ಲಿ
ನನ್ನನ್ನೇಕೆ ನಿಲ್ಲಿಸಿದೆ?
 
ಹಸಿದಾಗ
ತಕ್ಕ ಅನ್ನವಿಲ್ಲದ ಮಿದುಳು
'ವಿಧಿ ಯಿಲ್ಲದೆ
ತನ್ನನ್ನು ತಾನೇ ಜೀರ್ಣಿಸಿಕೊಳ್ಳುತ್ತಿದೆ.
ಮನಸ್ಸಿನ ತುಂಬ
ಕೆಟ್ಟ ಹುಣ್ಣುಗಳಾಗಿವೆ.
 
ಆದ್ದರಿಂದ, ಪ್ರಭೂ,
ದಯವಿಟ್ಟು ಮಿದುಳನ್ನು
ಹಿಂತೆಗೆದುಕೊ,
ಅಥವಾ ತಕ್ಕ ಅನ್ನ ಕೊಡು,
ನಿನ್ನ ಕೊಡು.

- ಬಿ.ಆರ್. ಲಕ್ಷ್ಮಣ್‌ರಾವ್
lakshmanaraobr@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments