ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಜನ್ನಿ ಮಂಟಪ

Mainashree
Updated On : 19 Oct 2013, 4:43 am

ಕರ್ನಾಟಕ ರಂಗಭೂಮಿಗೆ ಮತ್ತು ರಂಗಭೂಮಿ ಚಳವಳಿಗೆ ಹೊಸ ಆಯಾಮ, ದಿಕ್ಕು ದೆಸೆ ತೋರಿಸಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಆರಂಭಗೊಂಡ ರಂಗಾಯಣಕ್ಕೆ ಈಗ ನಿರ್ದೇಶಕರಾಗಿರುವ ಎಚ್. ಜನಾರ್ದನ್ (ಜನ್ನಿ) ಮನೆಗಿಂತ ಬೀದಿಗಳಲ್ಲೇ ಹೆಚ್ಚು ನಿದ್ದೆ ಮಾಡಿದವರು. ಹಾಡುತ್ತಾ, ನಟಿಸುತ್ತಾ ಜನರ ಗುಂಪಿನಲ್ಲೇ ಕಾಲ ಕಳೆದವರು, ಬೆಳೆದವರು. ಬೀದಿನಾಟಕ ಮತ್ತಿತರ ರಂಗ ಪ್ರಕಾರಗಳ ಮೂಲಕ ಸಮಾಜಕ್ಕೆ ಬಿದ್ದವರು ಜನ್ನಿ. ರಂಗಭೂಮಿ ಮೂಲಕ ಸಾಮಾಜಿಕ ಪರಿವರ್ತನೆಯ ಕನಸು ಕಾಣುತ್ತಿರುವ ಅವರು ರಂಗಾಯಣ ನಿರ್ದೇಶಕರಾಗಿರುವುದು ರಂಗಾಸಕ್ತರ ಖುಷಿ ಹೆಚ್ಚಿಸಿದೆ.
ರಂಗಾಯಣ ಹೇಗಿರಬೇಕು ಎಂಬುದನ್ನು ವಾಸ್ತವ ನೆಲೆಯಲ್ಲಿ ತೋರಿಸಿಕೊಟ್ಟ ದಿವಂಗತ ಬಿ. ವಿ.ಕಾರಂತರ  ಬಲು ಮೆಚ್ಚಿನ ಶಿಷ್ಯ ಜನ್ನಿ. ಹಸುವಿನ ಹಿಂದೆ ಕರು ಬರುವಂತೆ ಕಾರಂತರು ರಂಗಾಯಣ ನಿರ್ದೇಶಕರಾದ ನಂತರ ಸಮುದಾಯದ ನಾಟಕ  ಚಳವಳಿ ನೆಪ ಮಾಡಿಕೊಂಡು ಮೈಸೂರಿಗೆ ಬಂದ ಜನ್ನಿ, ಕಾರಂತರ ಸನಿಹದಲ್ಲಿ ಇದ್ದುಕೊಂಡು ಹಲವು ನಾಟಕಗಳನ್ನು ನಿರ್ದೇಶಿಸಿದರಲ್ಲದೇ, ರಂಗಗೀತೆಗಳಿಗೆ ರಚನಾತ್ಮಕ ಸ್ಪರ್ಶ ನೀಡಿದರು.
ಸಾಹಿತಿ ದೇವನೂರ ಮಹಾದೇವರ 'ಕುಸುಮ ಬಾಲೆ' ಕಾದಂಬರಿ ಚಾಮರಾಜನಗರ, ನಂಜನಗೂಡು  ಸುತ್ತಮುತ್ತಲಿನ ಆಡುಭಾಷೆಯಲ್ಲೇ ರಚಿತವಾದ ಕೃತಿ. ಅಂತಹ ನಾಟಕವನ್ನು ನಿರ್ದೇಶಿಸುವ ಮೂಲಕ ಜನ್ನಿ ತಾವೊಬ್ಬ ಸಮರ್ಥ ರಂಗ ನಿರ್ದೇಶಕ ಎನ್ನುವುದನ್ನು ಸಾಬೀತುಪಡಿಸಿದರು. ಸರಿಸುಮಾರು 3 ದಶಕಗಳಿಗೂ ಹೆಚ್ಚು ಕಾಲ ರಂಗ ಚಟುವಟಿಕೆಯನ್ನೇ ಉಂಡು, ಹೊದ್ದ ಮಲಗಿದವರು ಜನ್ನಿ. ರಂಗಭೂಮಿಯಲ್ಲಿ ಅವರದು ಬಹುಮುಖ ಪ್ರತಿಭೆ. ಅವರೊಳಗೆ ಚಿಂತಕನ ಒಳನೋಟವಿದೆ. ಅಂತರಾಳದಲ್ಲಿ ಸಂತನ ಮನೋಭಾವ ಇದೆ. ಸಂಘಟನಾ ಚತುರತೆಯೂ ಇದೆ.
ಸಮಾಜದ ಅನಿಷ್ಟಗಳ ವಿರುದ್ಧ ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಜನ್ನಿ, ತಮ್ಮ ಹೋರಾಟದ ಹೆಜ್ಜೆಗಳನ್ನು ಗುರುತಿಸುವ ಹಾಡುಗಳ ಮೂಲಕ ಜನರ ಮನಸುಗಳನ್ನು ಹೊಕ್ಕಿದ್ದಾರೆ. ಜನಮನ ನಾಟಕ ತಂಡವನ್ನು ಕಟ್ಟಿ ಊರು ಕೇರಿಗಳನ್ನು ಸುತ್ತಿ ವೈಚಾರಿಕ ಚಿಂತನೆಗಳನ್ನು ಬಿತ್ತಿದ್ದಲ್ಲದೇ, ಕೆಲ ಕಾಲ ಸಾಕ್ಷರತಾ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾಟಕ, ಹಾಡಿನ ಮೂಲಕ ಅಕ್ಷರ ಮಹತ್ವವನ್ನು ಹಳ್ಳಿಹಳ್ಳಿಗಳಲ್ಲಿ ಸಾರಿ, ಅನಕ್ಷರಸ್ಥರ ಎದೆಗೆ ಅಕ್ಷರ ಬೀಜವನ್ನು ಬಿತ್ತಿದವರು ಕೂಡ. ಜನ್ನಿ ತಮಟೆ ಹಿಡಿದು ಹಾಡುವ ಶೈಲಿ ಹೋರಾಟದ ಕಿಚ್ಚನ್ನು ಹಚ್ಚದಿದ್ದರೆ ಹೇಳಿ. ಜನ್ನಿ ಹಾಡುವ ಹಕ್ಕಿ.
ಸಂತ ಶಿಶುನಾಳ ಷರೀಫರ 'ನಾಗಲಿಂಗ ಸ್ವಾಮಿ ತಾನು ತಿರುಗೋದು ಏತಕೋ' ತತ್ವಪದ ಇರಬಹುದು, ಕುವೆಂಪು ಅವರ 'ಓ ನನ್ನ ಚೇತನ ಆಗು ನೀ ಅನಿಕೇತನ' ಇರಬಹುದು, ಕವಿ ಸಿದ್ದಲಿಂಗಯ್ಯನವರ 'ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ' ಇರಬಹುದು, ಮನತುಂಬಿ ಹಾಡತೊಡಗಿದರು ಎಂದರೆ ಆ ಮಾಂತ್ರಿಕ ಧ್ವನಿ, ಶೈಲಿಗೆ ಮನಸೋಲದವರಿಲ್ಲ. ರಂಗಗೀತೆ, ಜಾನಪದ ಗೀತೆ, ತತ್ವಪದ, ಬಂಡಾಯದ ಹಾಡುಗಳು, ಸಿನಿಮಾ ಗೀತೆ... ಯಾವುದೇ ಇರಲಿ. ಅವರ ಕಂಠದಿಂದ ಹೊರಹೊಮ್ಮಿದರೆ ಅದರ ಸೊಗಸೇ ಬೇರೆ. ದುನಿಯಾ ಚಿತ್ರ 'ಸಾಲ ಮಾಡಿಯಾದ್ರೂ ತುಪ್ಪ ತಿನ್ನು' ಇವತ್ತಿಗೂ ಸೂಪರ್ ಹಿಟ್ ಗೀತೆ.
ರಂಗಾಯಣದ ಬಗ್ಗೆ ಅವರಿಗೆ ಹತ್ತಾರು ಕನಸುಗಳಿವೆ. ರಂಗಚಟುವಟಿಕೆಗಳನ್ನು ಹಳ್ಳಿಹಳ್ಳಿಗಳಿಗೆ ತಲುಪಿಸಬೇಕು ಎನ್ನುವ ಕನಸಿದೆ. 'ಸರ್ಕಾರ ಕೂಡ ಕಾಲಕಾಲಕ್ಕೆ ಆರ್ಥಿಕ ನೆರವು ನೀಡಬೇಕು. ಆದರೆ ಅದಕ್ಕಾಗಿ ಬೆನ್ನು ಬಾಗಿ ನಿಲ್ಲುವುದಿಲ್ಲ. ನನ್ನ ಆತ್ಮಪ್ರಜ್ಞೆಗೆ ತಕ್ಕಂತೆ ರಂಗಾಯಣದಲ್ಲಿ ಪಯಾಣ ಮಾಡುತ್ತೇನೆ' ಎನ್ನುವ ಜನ್ನಿ ಅವರ ಧ್ವನಿಯ ತಾಕತ್ತು ಕುಗ್ಗಿಲ್ಲ. ಉತ್ಸಾಹ ಬತ್ತಿಲ್ಲ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಪದವೀಧರ, ಈಗ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಶಾಲೆಯಲ್ಲಿ ನಾಟಕ ಮೇಷ್ಟ್ರರಾಗಿ ಮಕ್ಕಳಿಗೆ ರಂಗಭೂಮಿ ಪಾಠ ಮಾಡುತ್ತಿದ್ದಾರೆ. ರಂಗಭೂಮಿಯ ಒಳಹೊರಗುಗಳನ್ನು ಚೆನ್ನಾಗಿ ಬಲ್ಲ ಅವರಿಗೆ ಆಡಳಿತ್ಮಾಕ ವ್ಯವಸ್ಥೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಇದನ್ನು ಅರಿತೇ ರಂಗಾಯಣದಲ್ಲಿ ಸಾಗಬೇಕಾಗಿದೆ. ರಂಗಭೂಮಿ ಎಲ್ಲಾ ಬಗೆಯ ಮಜಲುಗಳನ್ನು ಅನುಭವಿಸಿಯೇ ದಟ್ಟ ಅನುಭವ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಜನ್ನಿ ಅವರ ಬಗ್ಗೆ  ಸಹಜವಾಗಿಯೇ ಅಪಾರ ನಿರೀಕ್ಷೆ ಹುಟ್ಟಿಕೊಂಡಿದೆ.

- ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments