ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಬ್ಯಾಟ್ ರಾಯನಪುರ

ಒಬ್ಬ ಛೋಟಾ ಸಚಿನ್ನೇ ಆಗಲಿ, ದೋಟಿ ಅಮಿತಾಭ್ಬೇ ಆಗಲಿ ತಮ್ಮ ಕ್ಷೇತ್ರವನ್ನು ಮೀರಿಯೂ ನಮ್ಮ ಪ್ರಭಾವಕ್ಕೆ ಕಾರಣರಾದವರು. ಅವರಿದ್ದಷ್ಟೂ ದಿನ...

Mainashree
Updated On : 20 Oct 2013, 12:54 pm

ತರಗತಿ ಅಂತ ತಲೆ ತಿನ್ನುವುದಿಲ್ಲ. ಇವೆಲ್ಲ ವ್ಯಕ್ತಿತ್ವದ ಪಾಠ. ಅಕಾಡೆಮಿಕ್ ಅಲ್ಲದ ಕಾರಣ ಇಲ್ಲ್ಯಾರೂ ಫೀಸುಗೀಸುಗಳ ರಶೀದಿ ಹರಿಯುವುದಿಲ್ಲ. ನಮ್ಮ ಕಿವಿ ಹಿಂಡುವಷ್ಟು ಹತ್ತಿರವೂ ಇರುವುದಿಲ್ಲ ಅವರು. ದೂರದಲ್ಲೇ ಇದ್ದವರು. ಅವರು ಅಯಸ್ಕಾಂತವಾಗದೆ, ನಾವು ಕಬ್ಬಿಣದ ಮಸಿಯೂ ಆಗದೆ ಬೆಸೆದ ಆಕರ್ಷಣೆ. ಅಂದಾಜಿನ ಟೇಪಿಗೆ ಸಿಗದ ಸೆಳೆತ. ಹೇಳದೆ ಕೇಳದೆ ನಮಗವರು ಗುರು. ಗಂಟೆಮಣಿ ಬಾರಿಸದೆ, ತಲೆಮೇಲೆ ಜುಜುಬಿ ಹೂವನ್ನೂ ಇರಿಸಿಕೊಳ್ಳದೆ ಆತ ದೇವರು. ಇದು ವಶೀಕರಣವಾ, ಪವಾಡವಾ ಇಲ್ಲಿಯ ತನಕ ಗೊತ್ತಿಲ್ಲ. ಅವನು ಹೇಳಿದ್ದೆಲ್ಲ ಸರಿ. ತಪ್ಪೆಂದು ತೀರ್ಪಿತ್ತರೆ ನಮಗೂ ಅದು ತಪ್ಪೇ. ಮುಲಾಜು ನೋಡೆವು.
ಸಚಿನ್ ತೆಂಡೂಲ್ಕರ್ ಬ್ಯಾಟು ಬದಿಗಿಡುತ್ತಾನೆ ಎಂದಾಗ ಎಲ್ಲೋ ಒರಿಸ್ಸಾದಲ್ಲಲ್ಲ, ನಮ್ಮೊಳಗೇ ಫೈಲಿನ್ ಚಂಡಮಾರುತ ಎದ್ದಿತ್ತೇನೋ ಎನ್ನುವಷ್ಟು ದುಃಖ ಪ್ರವಾಹಕ್ಕೆ ಸಿಲುಕಿದೆವು. ಈ ದುಃಖ ನಮ್ಮ ಅಂಚೆ ಡಬ್ಬಿಯಲ್ಲೇ ಇರುತ್ತದೆ. ಅದಕ್ಕೂ ಅವನ ವಿಳಾಸ ಗೊತ್ತಿರುವುದಿಲ್ಲ. ನಮ್ಮನ್ನು ಕೇಳದೆ ನಿರ್ಧಾರ ತೆಗೆಕೊಂಡನಲ್ಲ ಎನ್ನಲು ನಾವ್ಯಾರೂ ಅಲ್ಲ ಆತನಿಗೆ. ಅಥವಾ ಅವನು ಮೈಮುರಿದು ಆಡಿದರೆ ನಮ್ಮ ಬ್ಯಾಂಕಿನ ಅಕೌಂಟಿನಲ್ಲಿ ನಾಲ್ಕು ನೋಟುಗಳು ಹೆಚ್ಚಾಗುವುದಿಲ್ಲ. ಒಬ್ಬ ಛೋಟಾ ಸಚಿನ್ನೇ ಆಗಲಿ, ದೋಟಿ ಅಮಿತಾಭ್ಬೇ ಆಗಲಿ ತಮ್ಮ ಕ್ಷೇತ್ರವನ್ನು ಮೀರಿಯೂ ನಮ್ಮ ಪ್ರಭಾವಕ್ಕೆ ಕಾರಣರಾದವರು. ಅವರಿದ್ದಷ್ಟೂ ದಿನ ನಮ್ಮೊಳಗೆ ಪ್ರೇರಣೆಯ ತೊಟ್ಟಿಲು ತೂಗುತ್ತಿರುತ್ತದೆ. ಸಚಿನ್ ಆಟವನ್ನಷ್ಟೇ ಕಲಿಸದೆ ಒಂದು ವ್ಯಕ್ತಿತ್ವದ ಪರಿಪೂರ್ಣ ಪಾಠವನ್ನೂ ಹೇಳಿಕೊಟ್ಟ. ಬದುಕೂ ಒಂದು ಕ್ರಿಕೆಟ್ಟೆನ್ನುವ ಹಾಗೆ.
ಕಲಿಯಬೇಕು. ಯಾರಿಂದಾದರೂ ಸರಿ. ಅಪ್ಪ ರಮೇಶ್ ತೆಂಡೂಲ್ಕರ್ ಮಗನ ಗುಂಗುರು ತಲೆ ಸವರಿ ಹೊಸಾ ಬ್ಯಾಟು ಬಾಲು ಕೈಗಿಟ್ಟು, ಆಡಿಸಲು ಪುರುಸೊತ್ತಿಲ್ಲ ಮಗನೆ ಅಂತ ಬೇರೆಲ್ಲೋ ಸಾಹಿತ್ಯ ಕಮ್ಮಟಕ್ಕೆ ನಡೆದರು. ನಾಲ್ಕೈದು ವರುಷದ ಈ ಕುಳ್ಳನಿಗೆ ಬೌಲ್ ಮಾಡುವವರು ಯಾರು? ಬ್ರೆಟ್ ಲೀ ಬಂದನಾ? ಇಲ್ಲ. ಈತನ ಆರೈಕೆಗಿದ್ದ ದಾದಿ ಲಕ್ಷ್ಮಿಬಾಯಿ ಗಿಜೆ ತನಗೆ ತಿಳಿದಂತೆ ಚೆಂಡೆಸೆದಳು. ತೆಂಡೂಲ್ಕರನ ಬ್ಯಾಟಿಂಗ್ ಕಲಿಕೆ ಅಲ್ಲಿಂದಲೇ ಆರಂಭವಾಗಿದ್ದು. ಕಲಿಸುವವರು ಯಾರಾದರೇನು? ಶ್ರದ್ಧೆಯೆಂಬ ಮುಗ್ಧ ಮಗುವೊಂದು ಒಳಗಿನ ಜೋಳಿಗೆಯಲ್ಲಿರಬೇಕಷ್ಟೇ.
ತೆಂಡೂಲ್ಕರ್‌ನ ಪಾದಗಳು ಬಹಳ ಚುರುಕು. ನಲ್ವತ್ತಾದರೂ ಕೊಹ್ಲಿಗಿಂತ ರಭಸವಾಗಿ ಓಡುತ್ತಾನಲ್ಲ ಎಂದು ಅಚ್ಚರಿಯಾಗಬಹುದು. ಬೂಸ್ಟ್ ಕುಡಿದು ಬಾಯೊರೆಸಿಕೊಂಡ ಮೇಲೆ ಇಂಥ ಚುರುಕುತನ ಬಂದಿದ್ದಲ್ಲ. ಈ ವೇಗದ ಓಟದ ಹಿಂದೆಯೂ ಲಕ್ಷ್ಮಿಬಾಯಿ ಇದ್ದಾಳೆ. 'ಇನ್ನೊಂದೇ ಒಂದು ತುತ್ತು ತಿನ್ನೋ' ಎಂದು ಒತ್ತಾಯಿಸುತ್ತಿದ್ದರೆ ಪುಟ್ಟ ಸಚಿನ್ ಪುಳಕ್ಕನೆ ತಪ್ಪಿಸಿಕೊಂಡು, ಬಾಂದ್ರಾದ ಬೀದಿ ಬೀದಿಯಲ್ಲಿ ಓಡುತ್ತಿದ್ದ. 'ಮೈದಾನದಲ್ಲಿ ಓಡುವಾಗಲೆಲ್ಲ ನೀನೇ ತಟ್ಟೆ ಹಿಡಿದು ಹಿಂದೆ ಬಂದಂತಾಗುತ್ತದೆ' ಎಂದು ಮುಂದೊಮ್ಮೆ ಗಿಜೆ ಸಿಕ್ಕಾಗ ಸಚಿನ್ ಹೇಳಿಕೊಂಡ. ನಮ್ಮನ್ನು ಸದಾ ಕಾಡುವ ನೆನಪೊಂದು ಬೆನ್ನ ಹಿಂದಿರಬೇಕು. ಅದನ್ನು ನಮ್ಮ ಉದ್ಧಾರಕ್ಕೆ ಬಳಸಿಕೊಳ್ಳಬೇಕು.
ಬದುಕಿನಲ್ಲಿ ಕೆಲವೊಂದು ಸಲ ನೋಡಿಯೂ ನೋಡದ ಹಾಗಿರಬೇಕು. ಹೊರಗಿನ ವಿಚಾರಗಳಿಗೆ ಜಾಸ್ತಿ ತಲೆಕೆಡಿಸಿಕೊಳ್ಳಬಾರದು. ಹಾಗೆ ಮಾಡಿದ್ದಿದ್ದರೆ ಸಚಿನ್- ಕಾಂಬ್ಳಿ ಮೂರನೇ ವಿಕೆಟ್ ಜೊತೆಯಾಟದಲ್ಲಿ ವಿಶ್ವದಾಖಲೆ ಸ್ಥಾಪಿಸುತ್ತಿರಲಿಲ್ಲ. ಸಚಿನ್ ಆಗ ಶಾರದಾಶ್ರಮ ಸ್ಕೂಲಿನ ಕ್ಯಾಪ್ಟನ್. ಎರಡು ದಿನವಾದರೂ ತೆಂಡೂಲ್ಕರ್- ಕಾಂಬ್ಳಿ ಔಟಾಗದೆ ಆಡುತ್ತಲೇ ಇದ್ದರು. ಏನೋ ಕೆಲಸ ಇದೆ ಎಂದು ಕೋಚ್ ರಮಾಕಾಂತ್ ಅಚ್ರೇಕರ್ ಪಂದ್ಯವನ್ನು ಗಮನಿಸುವಂತೆ ಅಸಿಸ್ಟೆಂಟ್ ಕೋಚ್ ಲಕ್ಷ್ಮಣ್ ಚವ್ಹಾಣ್‌ಗೆ ಹೇಳಿ ಹೋದರು. ಕೆಲ ಹೊತ್ತಾದ ಮೇಲೆ ಅಚ್ರೇಕರ್ ಮನೆಯಿಂದ ಚವ್ಹಾಣ್‌ಗೆ ಫೋನು. ಇವರಿಬ್ಬರು ಇನ್ನೂ ಔಟಾಗಿಲ್ಲವೆಂದು ತಿಳಿಯಿತು. 'ಆಡಿದ್ದು ಸಾಕು. ಸಚಿನ್‌ಗೆ ಡಿಕ್ಲೇರ್ ಮಾಡಿಕೊಳ್ಳಲು ಹೇಳು' ಎಂದು ಸೂಚಿಸಿದರು ಅಚ್ರೇಕರ್. ಚವ್ಹಾಣ್ ಮೈದಾನದ ಸುತ್ತ ತಿರುಗುತ್ತಾ ಸಚಿನ್‌ಗೆ ಕೈ ಸನ್ನೆ ಮಾಡುತ್ತಲೇ ಇದ್ದ. ಕಾಂಬ್ಳಿ ಗಮನಿಸಿ, 'ಚವ್ಹಾಣ್ ಡಿಕ್ಲೇರ್ ಮಾಡ್ಕೊಳ್ಬೇಕು ಅಂತ ಹೇಳ್ತಿದ್ದಾರೆ ನೋಡು' ಎಂದ. 'ಯಾವುದೇ ಕಾರಣಕ್ಕೂ ಆ ಕಡೆ ನೋಡ್ಬೇಡ. ಆಟದ ಕಡೆಯಷ್ಟೇ ಗಮನ ಕೊಡು' ಎಂದ ಸಚಿನ್. ಕಾಂಬ್ಳಿ 349, ಸಚಿನ್ 326 ರನ್ ಪೇರಿಸಿದ ಇನ್ನಿಂಗ್ಸ್ ಅದು. ಅಂದು ಅಚ್ರೇಕರ್ ಸಿಟ್ಟಾಗಿದ್ದರು. ಮಹತ್ತರವಾದುದನ್ನು ಸಾಧಿಸುವಾಗ ಕೆಲವರಿಗೆ ಬೇಸರವಾಗಬಹುದು. ಮೊದಲು ಗುರಿ ಮುಟ್ಟೋಣ. ನಂತರ ಅವರ ಬೇಸರ ಒರೆಸೋಣ.
ಎದುರಾಳಿಯನ್ನು ಕೆಣಕಬಾರದು. ಶತ್ರು ಶೂರನೇ ಆಗಿದ್ದರೆ ಅವನ ಸಾಮರ್ಥ್ಯವನ್ನು ಮುಕ್ತವಾಗಿ ಶ್ಲಾಘಿಸಬೇಕು. ಆರಂಭದಲ್ಲಿ ಪಾಕ್ ಪ್ರವಾಸಕ್ಕೆ ಹೋದಾಗ ವಾಸೀಂ ಅಕ್ರಂ ಬೌಲಿಂಗ್‌ನಲ್ಲಿ ಸಚಿನ್ ಬೌಂಡರಿಯ ಮಳೆಗರೆದ. ನಂತರ ಬಂದ ಅಬ್ದುಲ್ ಖಾದಿರ್ ಈ ಎಳೆ ಹುಡುಗನ ಬಳಿ ಬಂದು, 'ನೀನು ಅಂಥ ಬ್ಯಾಟ್ಸ್‌ಮನ್ನೇ ಆಗಿದ್ದರೆ ನನ್ನ ಬೌಲಿಂಗ್‌ನಲ್ಲಿ ಚಚ್ಚು ನೋಡೋಣ' ಎಂದು ಸವಾಲೆಸೆದ. ಅದಕ್ಕೆ ಸಚಿನ್ ನಗುತ್ತಾ, 'ನನ್ನ ಪ್ರಕಾರ ನೀವು ಶ್ರೇಷ್ಠ ಬೌಲರ್. ಅಂಥದ್ದಕ್ಕೆ ಅವಕಾಶ ಮಾಡಿಕೊಡಲಾರಿರಿ' ಎಂದು ಬ್ಯಾಟಿಂಗಿಗೆ ಅಣಿಯಾಗಿ ನಿಂತ. ಖಾದಿರ್‌ಗೆ ಆ ಓವರ್‌ನಲ್ಲಿ ಬಾರಿಸಿದ್ದು 27 ರನ್! ನಮ್ಮನ್ನು ಅಳೆಯುವವರಿಗೆ ನಮ್ಮ ಸಾಮರ್ಥ್ಯದಿಂದಲೇ ಉತ್ತರಿಸಬೇಕು. ಬಾಯಿಯಿಂದಲ್ಲ.
ಕೆರಿಯರ್‌ನ ಆರಂಭದಲ್ಲಿ ಎಂಥದ್ದೇ ಜಟಿಲತೆಗೂ ಎದೆಗೊಡಬೇಕು. ಸುನಾಮಿಯೇ ಎದ್ದರೂ ಅದರಲ್ಲಿ ಸ್ನಾನ ಮಾಡಬೇಕು. ಜಾಗತಿಕ ಪಂದ್ಯಗಳಲ್ಲಿ ಸಚಿನ್‌ಗೆ ಮೊಟ್ಟ ಮೊದಲ ಚೆಂಡು ಎಸೆದವರು 'ಸೂಪರ್ ಸ್ಪೀಡರ್‌' ಖ್ಯಾತಿಯ ವಕಾರ್ ಯೂನಿಸ್. ಆಗ ಸಚಿನ್‌ಗೆ ವಯಸ್ಸು ಕೇವಲ ಹದಿನಾರು. 'ಬಾಲಕ ನೀನೇಕೆ ಮೈದಾನಕ್ಕೆ ಬಂದೆ?' ಎಂದು ಪೋಸ್ಟರ್ ಹಿಡಿದ ಪಾಕ್ ಪ್ರೇಕ್ಷಕರು ಆ ಕ್ಷಣ ದಂಗಾಗಿದ್ದರು. ಸಚಿನ್ ಮುಂದಡಿಯಿಟ್ಟು ಆ ಚೆಂಡಿಗೆ ಬಾರಿಸಿದ್ದ. ಸಮಸ್ಯೆಗೆ ಎದೆಗೊಡುವುದನ್ನು ಕಲಿಯಬೇಕು. ಹಿಂದಡಿ ಇಟ್ಟರೆ ಔಟಾಗಿಬಿಡುತ್ತೇವೆ.
ತಪ್ಪುಗಳಿಂದಲೇ ನಾವು ಬೆಳೆಯಬೇಕು. ಎಡವಿದಾಗಲೇ ಆ ಹಾದಿಯ ಅನುಭವ ಗಾಢವಾಗುತ್ತದೆ. 1998ರ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಮ್ಯಾಥ್ಯು ಹೇಡನ್, 'ನಾನು ದೇವರನ್ನು ಕಂಡಿದ್ದೀನಿ. ಆತ ಭಾರತ ಟೆಸ್ಟ್ ತಂಡದ 4ನೇ ಕ್ರಮಾಂಕದಲ್ಲಿ ಆಡುತ್ತಾನೆ' ಎಂದು ತೆಂಡೂಲ್ಕರನ ವ್ಯಕ್ತಿತ್ವಕ್ಕೆ ತಿಲಕವಿಟ್ಟಿದ್ದ. ಮುಂದೆ ಸಚಿನ್, 'ನಾನು ದೇವರಲ್ಲ. ದೇವರು ತಪ್ಪು ಮಾಡುವುದಿಲ್ಲ' ಎಂದು ಒದಗಿಬಂದ ಬಿರುದನ್ನು ನಯವಾಗಿ ಪರಾಮರ್ಶಿಸಿದ್ದ. ಸುಖಾಸುಮ್ಮನೆ ಎಲ್‌ಬಿಗೆ ಔಟಾಗಿ ನಡೆಯುವ ಸಚಿನ್‌ಗೆ ಹಾಗನ್ನಿಸಿರಲೂಬಹುದು, ತಪ್ಪುಗಳೆನ್ನುವುದು ಪಾಠ. ಆ ಪಾಠಗಳಿಂದಲೇ ನಾವು ಪಕ್ವ.
ಬದುಕಿನುದ್ದಕ್ಕೂ ವಿದ್ಯಾರ್ಥಿಯಾದವನೇ ಸಾಧಕ. ಹೊಸತನ್ನು ಅರಗಿಸಿಕೊಳ್ಳುತ್ತಾ ಹೋಗಬೇಕು. ದ್ರಾವಿಡ್ ಕ್ರಿಕೆಟ್ ದೇವರ ಬಗ್ಗೆ ಹೀಗನ್ನುತ್ತಾರೆ, 'ಸಚಿನ್ ಪ್ರತಿ ಎಸೆತ ಎದುರಿಸಿದಾಗಲೂ ಕಲಿಯುತ್ತಲೇ ಹೋಗುತ್ತಾರೆ. ಅವರು ರನ್ನುಗಳಿಗಾಗಿ ಹಸಿದವರು.' ಕಲಿಕೆ ಇಲ್ಲದಿದ್ದರೆ ಕೈ ಕಾಲೂ ಇಲ್ಲ.
ಕಾಲದೊಂದಿಗೆ ಅಪ್‌ಡೇಟ್ ಆಗಲು ಸಾಧ್ಯವಿಲ್ಲ. ಟೆಸ್ಟೋ, ಟಿ-ಟ್ವೆಂಟಿಯೋ... ನಮ್ಮನ್ನು ಅರ್ಪಿಸಿಕೊಳ್ಳಬೇಕು. ವಕಾರ್ ಯೂನಿಸ್‌ನಿಂದ ಜೇಮ್ಸ್ ಫಾಕ್ನರ್‌ವರೆಗೆ ಸಚಿನ್ ಪುಡಿಗಟ್ಟಿದ. 'ಕಾಲದೊಂದಿಗೆ ಹೆಜ್ಜೆ ಹಾಕಿ' ಅಂತ ಚಾರ್ಲ್ಸ್ ಡಾರ್ವಿನ್ನನೂ ಹೇಳಿದ್ದಾನಲ್ಲವೇ?  ಆಗಾಗ್ಗೆ ಕೆಟ್ಟ ಸಂಗತಿಗಳು ದಾಳಿ ಇಡುತ್ತವೆ. ಜಾಣ್ಮೆಯಿಂದ ತಪ್ಪಿಸಿಕೊಳ್ಳೋಣ. ಎದುರಾಳಿಗಳು ಸಚಿನ್‌ರನ್ನು ಕಟ್ಟಿಹಾಕಲು ಬಳಸುವುದು ಶಾರ್ಟ್ ಪಿಚ್ ಎಸೆತಗಳನ್ನು. ಚೆಂಡು ಎದೆ ಮೇಲೆ ಬಂದಾಗ ಗಲಿಬಿಲಿಗೊಳ್ಳಲಿ ಎಂದು. ಸಚಿನ್ ಅಂಥ ಎಸೆತಗಳಿಗೆ ಅನೇಕ ಸಲ ಉತ್ತರಿಸುವುದೇ ಇಲ್ಲ. 2003ರ ವರ್ಲ್ಡ್‌ಕಪ್ ಫೈನಲ್‌ನಲ್ಲಿ ಮೆಕ್‌ಗ್ರಾತ್, ತೆಂಡೂಲ್ಕರ್‌ನ ವಿಕೆಟನ್ನು ಐದು ರನ್ನಿಗೆ ಬಲಿಪಡೆದಿದ್ದು ಇಂಥ ಚೆಂಡು ಎಸೆದೇ. ನಮ್ಮೆದುರಿದ್ದವರು ಸವಾಲಿನಲ್ಲಿ ಸಿಲುಕಿಸಲೆತ್ನಿಸುತ್ತಾರೆ. ಅದರಿಂದ ಪಾರಾಗಲು ನಮಲ್ಲೇನಾದರೂ ಪರಿಹಾರವಿರಲೇಬೇಕು.
ಇಂದು ನಾವು ಎಲ್ಲೂ ಶಾಶ್ವತವಲ್ಲ, ಯಾರಿಗೂ ಅನಿವಾರ್ಯವೂ ಅಲ್ಲ. ಒಂದೆಡೆ ಸುದೀರ್ಘಾವಧಿ ಹೇಗಿರುವುದು? ಅದನ್ನೂ ತೆಂಡೂಲ್ಕರ್ ಹೇಳಿಕೊಟ್ಟ; ಮಹಾಮೌನಿಯಾಗಿ, ಮಹಾಸಂಯಮಿಯಾಗಿ, ಮಹಾನ್ ಶಿಸ್ತುಗಾರನಾಗಿ. 'ಟೀಕೆಗಳ ಕಲ್ಲುಗಳನ್ನೆಸೆದರು. ಅದನ್ನು ಮೈಲುಗಲ್ಲು ಮಾಡಿಕೊಂಡೆ' ಎಂದ. ಅವನ ಮೌನದೊಳಗೆ ಚೈತನ್ಯದ ನದಿ ಹರಿಯುತ್ತಲೇ ಇತ್ತು. ಇಪ್ಪತ್ನಾಲ್ಕು ವರುಷ ನಿರಂತರ ನಿಂತು, ಫಾರ್ಮನ್ನೂ ಕಾಪಾಡಿಕೊಂಡಿದ್ದಾನೆಂದರೆ ಅದು ನಮ್ಮ ವೃತ್ತಿ ಬದುಕಿಗೂ ಹೊರತಾದ ಹೋಲಿಕೆಯಾಗುವುದಿಲ್ಲ.
'ಅಯ್ಯೋ, ಎಂಥ ಕೆಲ್ಸ ಮಾಡ್ಬಿಟ್ಟೆ. ಇಲ್ಲಿಯ ತನಕ ಯಾರೂ ಹೀಗ್ ಮಾಡೇ ಇರ್ಲಿಲ್ಲ' ಎಂದು ಯಾರಾದರೂ ನಮ್ಮನ್ನು ದೂರಿದರೆ ಅದನ್ನು ನಿರ್ಲಕ್ಷಿಸೋಣ. 'ಇತಿಹಾಸ ನಿರ್ಮಿಸಿದೆನಲ್ಲ' ಎಂಬ ಹೆಮ್ಮೆಗೆ ಪಾತ್ರರಾಗೋಣ. 1992ರಲ್ಲಿ ಡರ್ಬನ್ ಟೆಸ್ಟ್‌ನಲ್ಲಿ ರನೌಟ್ ಆಗಿ ಮೊದಲ ಥರ್ಡ್ ಅಂಪೈರ್ ತೀರ್ಪಿಗೆ ತಲೆಬಾಗಿದವನು ಸಚಿನ್. ಒಂದು ತಪ್ಪಿನಿಂದಲೂ ನಾವು ಚರಿತ್ರೆ ನಿರ್ಮಿಸಿದರೆ, ಅದೊಂದು ಹೆಮ್ಮೆ. ನಿಶ್ಚಿಂತೆಯಿಂದ ಇರೋಣ.
ಅನೇಕ ಸಲ ನಮ್ಮ ಮೇಲೆ ಟಾರ್ಗೆಟ್ ನಡೆಯುತ್ತದೆ. ನಮ್ಮ ಶ್ರಮ, ಸಾಧನೆ ಅರಿಯುವಷ್ಟು ಸಾಮರ್ಥ್ಯ ಮೇಲಿನವರಿಗಿಲ್ಲದೆ ಇರಬಹುದು. ಅವರ ಆರೋಪ, ಶಿಕ್ಷೆಗಳಿಗೆ ತಲೆಬಾಗಲೇ ಬೇಕಾಗುತ್ತದೆ. ಅಂಪೈರ್ ನೀಡಿದ ತಪ್ಪು ತೀರ್ಪಿಗೆ 38 ಸಲ ಬಲಿಯಾಗಿದ್ದಾನೆ ಸಚಿನ್. ಆ ವೇಳೆ ಯಾವುದೇ ಸಿಡುಕಿನ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ ಆತ. ಆದರೆ, ಇಂಥದ್ದೇ ತಪ್ಪು ತೀರ್ಪು ಎದುರಾಳಿ ರಿಕಿ ಪಾಂಟಿಗ್‌ರಂಥವರನ್ನು ಬಲಿ ತೆಗೆದುಕೊಳ್ಳುತ್ತಿದೆಯೆಂದಾಗ 'ನೀವು ಔಟಾಗಿಲ್ಲ. ಥರ್ಡ್ ಅಂಪೈರ್ ತೀರ್ಪನ್ನು ಕಾಯೋಣ' ಎಂದು ಆತನನ್ನು ಕ್ರೀಸಿನಲ್ಲೇ ನಿಲ್ಲಿಸಿ ನ್ಯಾಯ ಕೊಡಿಸಿದ. ಅದು ಈತನ ಕ್ರೀಡಾ ಸ್ಫೂರ್ತಿ.
ಅಪ್ಪನೇನೋ ದೊಡ್ಡ ಉದ್ಯಮಿ, ಸಿನಿಮಾ ನಟ ಅಥವಾ ಇನ್ನಾವುದೋ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ. ಅವರಂತೆ ನಾವೂ ಆಗುವುದೆಂದರೆ? ಇಲ್ಲ, ನಾವು ಭಿನ್ನ ಹಾದಿ ಹಿಡಿಯೋಣ. ರಮೇಶ್ ತೆಂಡೂಲ್ಕರ್ ಮರಾಠಿ ಅಧ್ಯಾಪಕ, ಲೇಖಕ. ಮನಸ್ಸು ಮಾಡಿದ್ದಿದ್ದರೆ ಮಗ ಸಾಹಿತಿಯಾಗಬಹುದಿತ್ತು. ಆದರೆ, ಈತ ಹುಟ್ಟಿದ್ದೇ ಕ್ರಿಕೆಟ್ಟಿಗಾಗಿ ಆಗಿತ್ತು.
ನಾವು ನೆಚ್ಚಿದ ಕ್ಷೇತ್ರವನ್ನೂ ಒಂದು ಬದುಕೆಂದು ಪರಿಭಾವಿಸಿದಾಗ ನಮಗೂ ದೇವರಾಗಲು ಸಾಧ್ಯ. ಆ ಕಾರಣಕ್ಕಾಗಿಯೇ ಸಚಿನ್ ದೇವರಾದ. ಈ ಬ್ಯಾಟ್‌ರಾಯ ನಿರ್ಮಿಸಿದ ಪುರದೊಳಗೆ ಪಾಠಗಳೇ ಹೆಚ್ಚು. ಸ್ವತಃ ದೇವರೇ ಪ್ರತ್ಯಕ್ಷನಾದಾಗ ಪುರೋಹಿತ ಮಂತ್ರಗಳಿಗಾಗಿ ಪರದಾಡಿದಂತೆ, ತೆಂಡೂಲ್ಕರ್ ಕ್ರೀಸಿನಲ್ಲಿದ್ದಾಗ ವೀಕ್ಷಕ ವಿವರಣೆಕಾರರು ಹೊಗಳಿಕೆಯ ಪದಗಳಿಗೆ ಪರದಾಡುತ್ತಾರೆ. ಪುಟ್ಟ ಗೋಲಿ ಹಿಡಿದು ನಿಂತ ಅಂಪೈರ್‌ಗೂ ಈತ ಶತಕ ಬಾರಿಸಿದಾಗ ಅಭಿನಂದಿಸಿಯೇ ಬಿಡೋಣ ಎಂಬಂತೆ ಉದ್ರೇಕವಾಗುತ್ತದೆ. ಅದಕ್ಕಾಗಿಯೇ ನಮಗೆ ಪಕ್ಕದಲ್ಲಿ ಇಷ್ಟು ದಿನ ಕೆಲಸ ಮಾಡುತ್ತಿದ್ದವ ದಿಢೀರನೆ ಎದ್ದುಹೋಗುತ್ತಿದ್ದಾನಲ್ಲ ಎಂಬ ಅನುಭವ ತಟ್ಟುತ್ತಿದೆ. ಈ ಜೀವನವೇ ಕ್ರಿಕೆಟ್ಟು. ನಮ್ಮ ಆಟ ಗಮನಿಸುವವರು ಸಾವಿರಾರು. ನಮ್ಮ ಆಟ, ನಡತೆಯ ಮೂಲಕ ಅವರ ಪ್ರೀತಿ ಗಿಟ್ಟಿಸಿಕೊಂಡರೆ ಗುರುವಾಗಲು, ದೇವರಾಗಲು ನಮಗೂ ಜಾಸ್ತಿ ಮೈಲು ದೂರ ಇಲ್ಲ.
ತೆಂಡೂಲ್ಕರ್ ತರಗತಿ ಮುಗಿಸಿ ಹೊರಟಿದ್ದಾನೆ. ಅಂಥ ಮೇಷ್ಟ್ರು ಇನ್ನೊಬ್ಬ ಮೈದಾನಕ್ಕೆ ಬರುತ್ತಾನಾ... ಗೊತ್ತಿಲ್ಲ!

ಅರ್ಧ ಪಿಚ್ಚಿನಿಂದ ಬಾಲ್ ಎಸೆದರು!
ಕಠಿಣ ಶ್ರಮ ಸುರಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಸಚಿನ್ ಅದ್ಭುತ ಸಾಕ್ಷಿ. ಆತ ಚಿಕ್ಕಂದಿನಿಂದಲೂ ಅಷ್ಟೇ. ಮುಂಬೈನ ಶಾರದಾಶ್ರಮ ಶಾಲೆಯ ಮೈದಾನಕ್ಕೆ ಆತ ಸಣ್ಣ ಬಕೆಟಿನಲ್ಲಿ ನೀರು ತರಿಸಿಕೊಳ್ಳುತ್ತಿದ್ದ. ಬೇರೇನಕ್ಕೂ ಅಲ್ಲ. ಟೆನಿಸ್ ಬಾಲನ್ನು ನೀರಿನಲ್ಲಿ ಅದ್ದಿ ಅರ್ಧ ಪಿಚ್ಚಿನಿಂದ ಬೌಲಿಂಗ್ ಮಾಡುವಂತೆ ಗೆಳೆಯರಿಗೆ ಹೇಳುತ್ತಿದ್ದ. ಲೆದರ್ ಕಾರ್ಕ್‌ನಲ್ಲಿ ಪ್ರ್ಯಾಕ್ಟೀಸ್ ಮಾಡುವಾಗಲೂ ಅಷ್ಟೇ. ಭಾರತ ತಂಡದ ಎಷ್ಟೋ ವೇಗದ ಬೌಲರ್‌ಗಳಿಂದ ಮುಕ್ಕಾಲು ಪಿಚ್ಚಿನಿಂದ ಬೌಲಿಂಗ್ ಮಾಡಿಸಿಕೊಳ್ಳುತ್ತಿದ್ದ. ಇಂಥ ಸವಾಲುಗಳನ್ನು ಜೀವನದಲ್ಲೂ ಸ್ವೀಕರಿಸಿದರೆ? ನಮ್ಮ ಕೆಲಸದಲ್ಲೇ ಹೆಚ್ಚು ಶ್ರಮ ಹಾಕಿದರೆ... ನಾವೂ ಮಹತ್ತರದ ಎತ್ತರಕ್ಕೆ ತಲುಪಬಲ್ಲೆವು.

- ಕೀರ್ತಿ ಕೋಲ್ಗಾರ್
kolgarkeerthi@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments