ಮುಂಜಾವಿನಲ್ಲಿ ರೇಡಿಯೊ ಕಾರ್ಯಕ್ರಮದಿಂದ ದೃಶ್ಯಗಳು ಕಣ್ತೆರೆಯುತ್ತವೆ. ಹರಕು ಮುರಕು ಬಾಗಿಲಿನ ಚಿಕ್ಕಚಿಕ್ಕ ಕೋಣೆಗಳು, ಗೂಡುಗಳು, ಶಿಥಿಲ ಮಂಚ, ಪುಟ್ಟ ಅಟ್ಟ, ಅಲ್ಲಲ್ಲಿ ಹರಡಿಕೊಂಡ ಕಸವಿರುವ ಪರಿಸರ ಹೀಗೆ ಬೆಳಕು ಹರಿದಂತೆ ತೆರೆದುಕೊಳ್ಳುತ್ತದೆ. ಗೂಡುಗಳಲ್ಲಿ, ಗೂಡಿನ ಕೆಳಗೆ, ಮಂಚಗಳಲ್ಲಿ, ಮಂಚದ ಕೆಳಗೆ ಸಿಕ್ಕಲ್ಲಿ ಚಳಿಗೆ ಮುದುಡಿ ಮಲಗಿದ ಜನರು. ಇಂಥ ಹಳೇ ಛತ್ರವನ್ನು ಪ್ರತಿಬಿಂಬಿಸುವ ರಂಗ ಸಜ್ಜಿಕೆಯೇ ಪ್ರೇಕ್ಷಕನನ್ನು ನಾಟಕ ವೀಕ್ಷಿಸಲು ಸಜ್ಜುಗೊಳಿಸುತ್ತದೆ. ಬೆಳಕು ಹರಿದಂತೆ ಇಲ್ಲಿನ ಪಾತ್ರಗಳೂ ಹರಿದಾಡಲು ಶುರುವಾಗುತ್ತವೆ.
ಇಲ್ಲಿನ ಕೆಲವು ಪಾತ್ರಗಳು ದಿಕ್ಕಿಲ್ಲದೆ, ಕೆಲವು ದಿವಾಳಿ ಎದ್ದು, ಮತ್ತೆ ಕೆಲವು ಕೌಟುಂಬಿಕ ಸಮಸ್ಯೆಗಳ ಫಲವಾಗಿ ಈ ಛತ್ರದಲ್ಲಿ ಸೇರಿಕೊಂಡು ವಿಭಿನ್ನತೆಯಲ್ಲೂ ಏಕತೆ ಮೆರೆದಿವೆ. ದೃಶ್ಯಗಳು ಬಿಚ್ಚಿಕೊಳ್ಳುತ್ತಾ ಹೋದಂತೆ ಇದು ತಿಳಿಯುತ್ತಾ ಹೋಗುತ್ತದೆ. ಇಲ್ಲಿನ ರಂಗ ಸಜ್ಜಿಕೆಗೆ ಪಾತ್ರಗಳ ವೇಷಭೂಷಣಗಳು ಮತ್ತು ರಂಗ ಪರಿಕರಗಳು ಹೊಂದಾಣಿಕೆಯಾಗಿ ನಾಟಕದ ಯಶಸ್ವಿ ನಡೆಗೆ ಸಹಕಾರಿಯಾಗಿದೆ.
ಸದಾ ಕೆಮ್ಮುತ್ತಾ ಗೊರ ಗೊರ ಎನ್ನುವ ಹೆಂಗಸು, ಡಬ್ಬಾ ರಿಪೇರಿ ಕಾಯಕವೇ ಕೈಲಾಸವೆಂದುಕೊಂಡ ಆ ಹೆಂಗಸಿನ ಗಂಡ, ಹಿಂದೊಮ್ಮೆ ನಟನಾಗಿದ್ದವ, ಪ್ರಿಯಕರನ ಹಿಂದೆ ಓಡಿಹೋದ ಹೆಂಡತಿಯಿಂದ ಮುಕ್ತಿ ಪಡೆದ ಗಂಡ; ಜಹಗೀರದಾರನಾಗಿದ್ದವ, ಕಳ್ಳತನವೇ ಸುಖವೆಂದು ಬದುಕುವವ, ನಿರಂತರವಾಗಿ ಕಥೆ ಪುಸ್ತಕದಲ್ಲೇ ಮುಳುಗಿರುವ ಸುಂದರಿ. ಛತ್ರದ ಯಜಮಾನ, ಕಳ್ಳನೊಡನೆ ಕಳ್ಳ ಸಂಬಂಧವಿರಿಸಿಕೊಂಡಿರುವ ಛತ್ರದ ಯಜಮಾನನ ಹೆಂಡತಿ, ಇವಳ ತಂಗಿ, ನಮಾಜು ಮಾಡುವ ಹಸನ, ತಮಟೆ ಹೊಡೆಯುವ ಡಂಗುರಕ, ದಫೇದಾರ ಹೀಗೆ ಸಾಕಷ್ಟು ಪಾತ್ರಗಳಿವೆ. ಇವೆಲ್ಲದರ ಮಧ್ಯ ಲಕ್ಕಜ್ಜನ ಪಾತ್ರ ಪ್ರವೇಶದಿಂದ ನಾಟಕದಲ್ಲಿ ಸಂಚರಿಸುತ್ತವೆ. ಇತರ ಪಾತ್ರಗಳಲ್ಲಿನ ಎಂದಿನ ಸಾಧಾರಣ ಚಟುವಟಿಕೆಗಳಲ್ಲಿ ಹೊಸ ಆಯಾಮ ಮೂಡಿಸಿ ಪಾತ್ರಗಳ ಒಳಗಿನ ಹೊಯ್ದಾಟಗಳನ್ನು ತಹಬದಿಗೆ ತರುತ್ತದೆ. ಧಾರ್ಮಿಕ, ಸೈದ್ಧಾಂತಿಕ, ಪಾರಮಾರ್ಥಗಳನ್ನು ಇಲ್ಲಿನ ಕೆಳಸ್ತರದ ಮಂದಿಗೆ ಅರ್ಥವಾಗುವಂತೆ ತಿಳಿಹೇಳಿ ಕಾಣೆಯಾಗುತ್ತಾನೆ. ಲಕ್ಕಜ್ಜ ಎರಡು ಗೊಂಬೆಗಳನ್ನು ಹಿಡಿದುಕೊಂಡು ಕಥೆ ಹೇಳುವ ಕ್ರಮ ನಾಟಕಕ್ಕೆ ಹೊಸ ಆಯಾಮವನ್ನೇ ಒದಗಿಸಿದೆ. ಎಷ್ಟೇ ಮೆರೆದರೂ ಕಾಲ ಚಕ್ರಕ್ಕೆ ಸಿಕ್ಕಿ ಹಣ್ಣಾಗಿ ಅಂಡಲೆಯುವ ಪಾತ್ರಗಳಿವೆ.
ಸಂಭಾಷಣೆಯ ಉಚ್ಚಾರ, ಆಂಗಿಕ ಅಭಿನಯ, ರಂಗದ ನಡೆ, ಪಾತ್ರಗಳೊಂದಿಗಿನ ಹೊಂದಾಣಿಕೆ, ಬೆಳಕಿಗೆ ಒಡ್ಡಿಕೊಳ್ಳುವ ಕ್ರಮವನ್ನು ನೋಡಿದಾಗ ನಿರ್ದೇಶಕರು ಕಾಣಸಿಗುತ್ತಾರೆ. ನುರಿತ ಕಲಾವಿದರಿಗಿಂತ ನಾವೇನೂ ಕಡಿಮೆ ಇಲ್ಲ ಎಂಬ ಆತ್ಮಸ್ಥೈರ್ಯ ಸಕಲ ಕಲಾವಿದರಿಗೂ ಇದೆ. ತಲ್ಲೀನತೆಯನ್ನು ನಿರ್ದೇಶಕರು ಎರಕ ಹೊಯ್ದಿದ್ದಾರೆ. ನಾಟಕದ ಅಂತ್ಯದಲ್ಲಿ ಬರುವ ಹೊಡೆದಾಟ ದೃಶ್ಯಕ್ಕೆ ಉಪಯೋಗಿಸಿರುವ ತಂತ್ರಜ್ಞಾನ ಗಮನಾರ್ಹ. ಇಡೀ ನಾಟಕದಲ್ಲಿ ಒಂದೇ ರಂಗಸಜ್ಜಿಕೆ. ರಂಗ ಪರಿಕರಗಳ ಸ್ಥಾನ ಪಲ್ಲಟದಿಂದಲೇ ವಿವಿಧ ಮಜಲುಗಳ ದೃಶ್ಯಗಳನ್ನು ತೆರೆದಿಟ್ಟಿರುವುದು ನಿರ್ದೇಶಕರ ಜಾಣ್ಮೆಗೆ ಸಾಕ್ಷಿ.
ಲಕ್ಕಜ್ಜನು ಸಾವಿನ ಕುರಿತು ಆಡುವ ಮಾತುಗಳು ಪ್ರೇಕ್ಷಕನ ಮನದಲ್ಲಿ ನೆಲೆ ಮಾಡುತ್ತವೆ. ಸಂಭಾಷಣೆಯು ಚುರುಕಾಗಿದ್ದು, ಎಲ್ಲರ ಜೀವನದ ಒಳಗಿನ ವ್ಯಥೆಯನ್ನು ಬಯಲುಗೊಳಿಸಿ ಚಿಂತನೆಗೆ ಹಚ್ಚುತ್ತದೆ. ಗಂಭೀರದ ನಡುವೆಯೇ ಹಾಸ್ಯದ ಹೊನಲನ್ನು ಹರಿಸುತ್ತದೆ. 'ಯಾರಾದ್ರೂ ಹೆಣಾನಾ ಪ್ರೀತಿ ಮಾಡ್ತಾರಾ?', 'ಸದ್ಯ ಈ ಗೂರಲು ಮುದುಕಿ ಸತ್ತಳಾ? ಕೆಮ್ಮು ನಿಂತ್ಹಂಗಾಯ್ತು, ನೆಮ್ಮದಿಯಾಯ್ತು' ಎಂಬ ಸಂಭಾಷಣೆಯು ಮನಸ್ಸಿಗೆ ನಾಟುತ್ತದೆ. ಉತ್ತರ ಕನ್ನಡದ ಆಡು ಭಾಷೆ ಇಲ್ಲಿರುವುದರಿಂದ ಇದು ಕನ್ನಡದ್ದೇ ಕೃತಿ ಎನ್ನಿಸುತ್ತದೆ. ಅಭಿನಯದಲ್ಲಿ ಲವಲವಿಕೆಯಿದ್ದರೂ, ಇಲ್ಲಿನ ಕಲಾವಿದರು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿದೆ.
ಮನಗೆದ್ದ ಈ ಕೆಳಗಿನವರು
ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ಮೊದಲ ತಂಡದ ಶಿಬಿರಾರ್ಥಿಗಳು ತರಬೇತಿ ಮುಗಿಸಿದ್ದಾರೆ. ಈ 20 ವಿದ್ಯಾರ್ಥಿಗಳ ತಂಡ ಇತ್ತೀಚೆಗೆ 'ಈ ಕೆಳಗಿನವರು' ನಾಟಕ ಪ್ರದರ್ಶಿಸಿತು. ರಷ್ಯ ಮೂಲದ ಮಾಕ್ಸಿಂ ಗಾರ್ಕಿಯವರ ರಶಿಯನ್ ಕೃತಿ 'ಲೋಯರ್ಸ್ ಡೆಪ್ತ್' ಕನ್ನಡ ರೂಪಾಂತರ ಈ ನಾಟಕ. ಬಿ.ಟಿ. ದೇಸಾಯಿಯವರು ಕನ್ನಡಕ್ಕೆ ವಿಶಿಷ್ಟವಾಗಿ ಭಾವಾಂತರಿಸಿದ್ದಾರೆ. ಪರಿಕಲ್ಪನೆ ಮತ್ತು ನಿರ್ದೇಶನ ಚಿದಂಬರ ರಾವ್ ಜಂಬೆ...
- ಸಂಕೇತ್ ಗುರುದತ್