ಮಾನವ ಎಷ್ಟಾದರೂ ಬುದ್ಧಿಜೀವಿಯಲ್ಲವೆ, ಭೂಮಂಡಲದ ಮೇಲಿನ ಜಲ, ನೆಲ, ಸಂಪನ್ಮೂಲಗಳು ಬರಿದಾಗುವ ಮುಂಚೆಯೇ ಮನುಷ್ಯ ಜೀವಿ ಬದುಕಲು ಅನುಕೂಲವಾಗುವಂತೆ ಮಂಗಳ ಗ್ರಹವನ್ನೇ ತನ್ನದಾಗಿಸಿಕೊಳ್ಳುವ ತಯಾರಿ ಮಾಡಲು ಹೊರಟಿದ್ದಾನೆ. ಮಾರ್ಸ್ ವನ್ ಎಂಬ ಡಚ್ ಕಂಪನಿ, ಊಹಿಸಲೂ ಅಸಾಧ್ಯವಾದ, ಮೈ ನವಿರೇಳಿಸುವ, ಈ ವಿಸ್ಮಯಕಾರಿ ಕೆಲಸಕ್ಕೆ ಮುಂದಾಗಿದೆ. ಈ ದೈತ್ಯ ಸಾಹಸಕ್ಕೆ ಮುಂದೆ ಬರಲಿಚ್ಛಿಸುವ ಅಭ್ಯರ್ಥಿಗಳನ್ನು ಹುಡುಕುವ ಕಾರ್ಯ ಏಪ್ರಿಲ್ 2013ರಿಂದ ಶುರುವಾಗಿದೆ.
ಪೃಥ್ವಿಗೆ ಅತ್ಯಂತ ಹತ್ತಿರವಿರುವುದರಿಂದ ಮಂಗಳನೆಡೆಗೆ ಲಗ್ಗೆ ಇಡುವ ಸಾಧ್ಯತೆಗಳನ್ನು ಮನುಜ ಶತಕಗಳಿಂದ ಮನಸ್ಸಿನಲ್ಲೇ ಚರ್ಚಿಸುತ್ತಲೇ ಬಂದಿದ್ದಾನೆ. ಅಲ್ಲಿನ ಉಸಿರುಗಟ್ಟುವ ವಾತಾವರಣದಲ್ಲಿ ನೀರಿನ ಇರುವಿಕೆ, ಕಲ್ಲುಮಣ್ಣಿನ ಸ್ವಭಾವ, ವೈವಿಧ್ಯ, ಜೀವಮಾರಕ ಅನಿಲಗಳ ಸಾಂದ್ರತೆಗಳ ಬಗೆಗಿನ ವಿಜ್ಞಾನದ ವಿಚಾರ-ವಿಶ್ಲೇಷಣೆಗಳು ಅಂದಿನಿಂದಲೂ ನಿರಂತರವಾಗಿ ಹರಿದಾಡುತ್ತಿವೆ. ನಮ್ಮ ಗ್ರಹಕ್ಕೂ ಮಂಗಳನಿಗೂ ಕೆಲವು ಸಾಮ್ಯಗಳು ಇರುವುದರಿಂದ, ಮಾನವ ಬೇರೆ ಗ್ರಹಗಳಿಗಿಂತ ಮಂಗಳನೆಡೆಗೇ ಹೆಚ್ಚು ಸೆಳೆತಕ್ಕೊಳಗಾಗಿದ್ದಾನೆ. ಅಲ್ಲಿಯ ಹವಾಮಾನವೂ ತಂಪಾಗಿದೆಯಂತೆ. ಮಾರ್ಸ್‌ನ 2/3 ಭಾಗ 3.5 ಬಿಲಿಯನ್ ವರ್ಷಗಳಷ್ಟು ಹಳೆಯದು. ನಮ್ಮಲ್ಲಿ ಹಗಲು ಎಷ್ಟು ದೀರ್ಘವಾಗಿದೆಯೋ ಅಲ್ಲೂ ಅಷ್ಟೇ ದೀರ್ಘವಾಗಿದೆ.
ಭೂಮಂಡಲದಂತೆಯೇ ಅಲ್ಲೂ ಹವಾಮಾನ ವೈಪರೀತ್ಯಗಳು, ಋತುಮಾನಗಳು ಇವೆ. ಅತ್ಯಂತ ಕ್ಷಿಪ್ರವಾದ ವೀಡಿಯೋ ಕರೆ ಮಂಗಳನಿಂದ ಭೂಮಿಗೆ ತಲುಪಲು ಏಳು ನಿಮಿಷ ಬೇಕು. ಮಂಗಳದಲ್ಲಿ ನೀರು ನೀರಾಗಿಲ್ಲ. ಹಿಮದ ಗಟ್ಟಿ ಚೆಕ್ಕೆಗಳಾಗಿವೆ. ಬಾಹ್ಯಾಕಾಶ ವಿಜ್ಞಾನಿಗಳು ಇಲ್ಲಿ ಸಿಲಿಕಾ ಇದೆ ಎಂದು ರೋಬೋಟ್ ಚಿತ್ರಣಗಳ ಮೂಲಕ ದೃಢಪಡಿಸಿದ್ದಾರೆ. ಮೀಥೇನ್, ಫಾರ್ಮಾಲ್ಡಿಹೈಡ್‌ನಂತಹ ಅನಿಲಗಳ ಇರುವಿಕೆಯನ್ನೂ ಸಾಬೀತುಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮಂಗಳನ ಮೇಲೆ ಪ್ರಾಣಿ ಸಂಕುಲ ಬದುಕುಳಿಯಲು ಸಾಧ್ಯವೇ ಇಲ್ಲ. ನೆಲ, ಜಲವೆಲ್ಲವೂ ಅಲ್ಲಲ್ಲಿ ಹಿಮಾಚ್ಛಾದಿತವಾಗಿದೆ. ಮಹಾಮಂಡಲವಿಡೀ ಅಲ್ಟ್ರಾ ವಯಲೆಟ್ ಕಿರಣಗಳಲ್ಲಿ ಮಿಂದೇಳುತ್ತದೆ. ಜೀವ ಜಂತುಗಳಿಗೆ ಅತಿಮಾರಕವಾದ ವಿಕಿರಣಾಂಶ (ರೇಡಿಯೇಷನ್) ಈ ಗ್ರಹಮಂಡಲವನ್ನು ತನ್ನ ಕಬಂದ ಬಾಹುಗಳಲ್ಲಿ ಅಪ್ಪಿ ಹಿಡಿದುಕೊಂಡಿದೆ. ಇಲ್ಲಿಯ ವಿಕಿರಣಾಂಶದ ಸಾಂದ್ರತೆ ಭೂಮಿಗಿಂತ 100 ಪಟ್ಟು ಮೇಲಿದೆಯಾದ್ದರಿಂದ ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆಗಳ ಸಾಧ್ಯತೆ ಬಲು ಜಾಸ್ತಿ. ಕಾರ್ಬನ್ ಡೈ ಆಕ್ಸೈಡ್‌ನ ಅಂಶವೂ ಇಲ್ಲಿ ತುಂಬಿ ತುಳುಕುತ್ತಿದೆ.
ಸ್ಪರ್ಧೆಯ ರೀತಿ ರಿವಾಜು
ಇಂತಹ ರುದ್ರಭೂಮಿಯಲ್ಲೂ ತನ್ನ ಛಾಪನ್ನು ಸ್ಥಿರಪಡಿಸಲು ಹೊರಟಿರುವ ಮನುಷ್ಯನ ದೃಢಸಂಕಲ್ಪವನ್ನು ನಾವು ಇಲ್ಲಿ ಮೆಚ್ಚಲೇಬೇಕು. ಬ್ಯಾನ್‌ಲ್ಯಾನ್ಸ್‌ಡಾರ್ಪ್ ಎಂಬ ಡಚ್ ಕಂಪನಿಯ ಮುಖ್ಯಸ್ಥ ಈ ಮೇರು ಜವಾಬ್ದಾರಿಯ, ಅತ್ಯಂತ ಅಪಾಯಕಾರಿಯಾದ, ಎಲ್ಲವೂ ಅಂದುಕೊಂಡಂತೆ ನಡೆದುಹೋಗಿ ಗುರಿ ತಲುಪಿಬಿಟ್ಟರೆ ವಿಶ್ವ ಸಂಕುಲದಿಂದಲೇ ಭೇಷ್ ಎಂದು ಬೆನ್ನು ತಟ್ಟಿಸಿಕೊಳ್ಳುವ ಮಹತ್ಕಾರ್ಯ ಹೆಗಲಿಗೇರಿಸಿಕೊಂಡಿದ್ದಾನೆ.
ಈ ಛಲದಂಕಮಲ್ಲ ಏಪ್ರಿಲ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಆಹ್ವಾನಿಸಿದ ಈ ಸಾಹಸ ಯಾತ್ರೆಗೆ ಜಗತ್ತಿನ ಎಲ್ಲೆಡೆಯಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಏಕಮುಖ ಪ್ರಯಾಣ, ಆದ್ದರಿಂದ ಯಾವುದೇ ಕಾರಣಕ್ಕೂ ಅಲ್ಲಿಂದ ತಿರುಗಿ ವಾಪಸು ಬರುವ ಸಾಧ್ಯತೆಗಳನ್ನೇ ಮರೆತುಬಿಡಬೇಕೆಂದು ಕಂಪನಿಯು ಮೊಟ್ಟ ಮೊದಲಿನಿಂದಲೇ ಸಾರಿ ಸಾರಿ ಹೇಳುತ್ತಾ ಬಂದಿದ್ದರೂ ಸಹ ಮಂಗಳನ ಅಂಗಳಕ್ಕೆ ಜಿಗಿಯುವ ಮಹದಾಸೆ ಅನೇಕ ಮಹಾತ್ವಾಕಾಂಕ್ಷಿಗಳಲ್ಲಿದೆ.
ಪ್ರಪಂಚದ 140 ದೇಶಗಳಿಂದ 1,65,000ಕ್ಕೂ ಮೀರಿ ಅರ್ಜಿಗಳು ಈ ಕಂಪನಿಗೆ ಬಂದಿವೆ. ಏಪ್ರಿಲ್‌ನಿಂದ ಆಗಸ್ಟ್‌ನವರೆಗೆ ಈ ಕುತೂಹಲಕಾರಿ ಸಾಹಸಕ್ಕೆ ಅರ್ಜಿ ಗುಜರಾಯಿಸಲು ಅವಕಾಶವಿತ್ತು. ಈ ಗಂಡೆದೆಯವರಲ್ಲಿ 37,852 ಜನ ಅಮೆರಿಕದವರು. ಹಿಂದೆಯೇ ಚೀನೀಯರು. ಈ ತಿರುಗಿ ಬರಲಾಗದ ಪ್ರಯಾಣಕ್ಕೆ 1,752 ಭಾರತೀಯರೂ ಸಹಾ ಅರ್ಜಿ ಹಾಕಿದ್ದಾರೆ. ಇವರಲ್ಲಿ ಹಲವು ಉತ್ಸಾಹಿಗಳು ಬೆಂಗಳೂರಿಗರೂ ಕೂಡಾ. ಅರ್ಜಿ ಗುಜರಾಯಿಸಲು ಯಾವುದೇ ವಿದ್ಯಾರ್ಹತೆ ಅಥವಾ ಬೇರೆ ಯಾವುದೇ ನಿಬಂಧನೆಗಳಿಲ್ಲದಿದ್ದರೂ 18 ವರ್ಷ ಮೇಲ್ಪಟ್ಟಿರಬೇಕು. ಅರ್ಜಿಯ ಶುಲ್ಕ ದೇಶದಿಂದ ದೇಶಕ್ಕೆ ವ್ಯತ್ಯಾಸವಾಗುತ್ತದೆ. ಸೋಮಾಲಿಯಾ ಅಥವಾ ಅಫಘಾನಿಸ್ತಾನದ ಅರ್ಜಿದಾರರಿಗೆ 5 ಡಾಲರ್ ವಿಧಿಸಿದರೆ, ಅಮೆರಿಕನ್ನರಿಗೆ 38 ಡಾಲರ್. ಈ ಉಡ್ಡಯನದ ಒಟ್ಟೂ ಖರ್ಚು 6 ಬಿಲಿಯನ್ ಡಾಲರ್.
ಈ ಎಲ್ಲ ಅರ್ಜಿದಾರರನ್ನು ಪ್ರತ್ಯೇಕ ಗುಂಪುಗಳನ್ನಾಗಿ ಮಾಡಿ, 2014ರಿಂದ 2015ರ ತನಕ ನಾಲ್ಕು ಸುತ್ತಿನ ಸ್ಪರ್ಧೆಗಳಿಗೆ ಒಳಪಡಿಸಲಾಗುತ್ತದೆ. ಇವೆಲ್ಲವನ್ನು ಟಿವಿ ರಿಯಾಲಿಟಿ ಷೋದಂತೆ ಜನ ವೀಕ್ಷಿಸುವ ಅವಕಾಶವಿದೆ. ಮೊದಲ ಸುತ್ತಿನಲ್ಲಿ ಗೆದ್ದ ಸ್ಪರ್ಧಿಗಳು ಸ್ವಾಭಾವಿಕವಾಗಿಯೇ ಎರಡನೇ ಸುತ್ತಿಗೆ ಅರ್ಹರಾಗುತ್ತಾರೆ. ಈ ನಾಲ್ಕು ಸುತ್ತುಗಳಲ್ಲಿ ಅವರ ಆರೋಗ್ಯ, ಮನೋಸ್ಥೈರ್ಯ, ಅಂತರಿಕ್ಷಯಾನದ ಬಗೆಗಿನ ಜ್ಞಾನ, ಮಾರ್ಸ್ ಗ್ರಹದ ಮೇಲಿನ ಜನಜೀವನ, ಎದುರಿಸಬೇಕಾದ ಚಾಲೆಂಜ್‌ಗಳ ಸಂಬಂಧವಾಗಿ ಎಲ್ಲ ತರದ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಈ ಉತ್ಸಾಹಿಗಳಿಗೆ ಯಾನದ ಜೀವನ ಶೈಲಿ, ಆಹಾರ, ಪ್ರಯಾಣ, ಮಾರ್ಸ್ ಗ್ರಹದ ಬಗ್ಗೆ ಮಾಹಿತಿಗಳನ್ನೂ ನೀಡಲಾಗುತ್ತದೆ. ಕೊನೆಯ ಸುತ್ತಿನ ಸ್ಪರ್ಧೆಯಂತೂ ಥೇಟ್ ಮಂಗಳನ ಮೇಲೇ ಜೀವನ ಮಾಡಿದಂತಿರುತ್ತದೆ. ಸ್ಪರ್ಧೆಗಳು ಬಹಳ ಕ್ಲಿಷ್ಟಕರವಾಗಿರುತ್ತವೆ. ಕೊನೆಯ ಸುತ್ತಿನ ಸ್ಪರ್ಧೆಯನ್ನು ಮಾರ್ಸ್ ವನ್ ಕಂಪನಿಯೇ ನಡೆಸಿ 40 ಯಾನಿಗಳನ್ನು ಸಿದ್ಧಪಡಿಸಿಕೊಳ್ಳುತ್ತದೆ.
ಅಂತಿಮ 40 ಮಂದಿಗೆ ಆಗಸ್ಟ್ 2015ರಿಂದ ಸೆಪ್ಟೆಂಬರ್ 2022ರವರೆಗಿನ ಏಳು ವರ್ಷ ವಿಶೇಷ ತರಬೇತು ಕೊಡಲಾಗುತ್ತದೆ. ಪ್ರಯಾಣಿಕರ ದೇಹಬಲ, ಮನೋಸ್ಥೈರ್ಯಗಳನ್ನು ಒರೆಗೆ ಹಚ್ಚುವ ಕಾರ್ಯವಿದು. ಮೊದಲ ಸಲದ ಉಡ್ಡಯನದಲ್ಲಿ ಈ 40 ಮಂದಿಯಲ್ಲಿ ಬರೀ 4 ಜನ- ಇಬ್ಬರು ಪುರುಷರು ಹಾಗೂ ಇಬ್ಬರು ಸ್ತ್ರೀಯರನ್ನು ಒಯ್ಯುತ್ತಾರೆ. ದಂಪತಿಗಳಿಗೆ ಜೊತೆಗೆ ಹೋಗಲು ಅವಕಾಶವಿಲ್ಲ. ಜೀವನದ ಮಹತ್ತರ ಆಸೆಯೇ ಈ ಕೆಂಪು ಗ್ರಹದ ಮೇಲೆ ತಮ್ಮ ಪಾದವನ್ನಿರಿಸುವುದು ಎನ್ನುವ ಸ್ಪರ್ಧಿಗಳು ತಮ್ಮ ಬಂಧು ಬಳಗ, ಆಸ್ತಿ ಪಾಸ್ತಿಗಳಿಗೆ ವಿದಾಯ ಹೇಳಿ ಯಾತ್ರೆಯನ್ನು ಕೈಗೆತ್ತಿಕೊಳ್ಳುತ್ತಾರೆ. 200ಕ್ಕೂ ಹೆಚ್ಚು ದಿನ ನಭೋಮಂಡಲದಲ್ಲಿ ಹಾರಾಡಿದ ಮೇಲೆ, 2023 ಏಪ್ರಿಲ್‌ನಲ್ಲಿ ಮಂಗಳನ ಮೈಯನ್ನು ನೇವರಿಸುವ ರೋಮಾಂಚಕ ಅವಕಾಶ ಇವರಿಗೆ ಲಭ್ಯವಾಗುತ್ತದೆ. ಏಪ್ರಿಲ್- ಮೇ 2023ಕ್ಕೆ ಮೊದಲ ಪ್ರಯಾಣಿಕರ ದಂಡು ಮಂಗಳ ಗ್ರಹವನ್ನು ತಲುಪಿ, ಈ ಯಾನ ಯಶಸ್ವಿಯಾಗಿ ಮುಗಿದರೆ ಎರಡನೇ ಸರ್ತಿಯ ನಾಲ್ಕು ಪ್ರಯಾಣಿಕರ ಉಡ್ಡಯನ 2025ರಲ್ಲಿ ನಡೆಯುತ್ತದೆ. ಅಂತೆಯೇ ಮಂದಿನ ಪ್ರಯಾಣಗಳನ್ನು ಎರಡು ವರ್ಷಗಳಿಗೊಮ್ಮೆ ಮುಂದುವರಿಸಲಾಗುವುದು ಎಂದು ಬ್ಯಾಸ್ ಲ್ಯಾನ್ಸ್‌ಡಾರ್ತ್ ತನ್ನ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾನೆ.
ಈ ನಾಲ್ಕು ಮಂದಿ ಯಾನಿಗಳು ಮಂಗಳ ಗ್ರಹ ತಲುಪುವ ಮುಂಚೆಯೇ ಪರಿಣತ ಅಂತರಿಕ್ಷ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಹೋಗಿ ಅಲ್ಲಿಯ ಹವಾಮಾನ ವಾಸಯೋಗ್ಯವಾಗಿದೆ ಎಂದು ಮನದಟ್ಟು ಮಾಡಿಕೊಂಡು ಬರುತ್ತಾರೆ. ನೌಕೆ ಗ್ರಹದ ಮೇಲೆ ಇಳಿಯುವ ಮುನ್ನ, ಎಂಟು ಸಲ ಪ್ರಯೋಗ ಮಾಡಿ ಪರಿಶೀಲಿಸಲಾಗುತ್ತದೆ. ವಿಜ್ಞಾನಿಗಳ ಪ್ರಕಾರ ಮಂಗಳನನ್ನು ತಲುಪುವುದು ಚಂದ್ರನಲ್ಲಿಗೆ ಹೋಗುವುದಕ್ಕಿಂತ ಸುಲಭ.
ಅರ್ಜಿ ಸಲ್ಲಿಸಿದ ಸಾಹಸಿಗರಲ್ಲಿ ಒಬ್ಬನಾದ ಹತ್ತೊಂಬತ್ತು ವಯಸ್ಸಿನ ಕಮರ್ ಮಾಟ್ಲೇ ಹೀಗೆ ಹೇಳುತ್ತಾನೆ- 'ವಾಪಸ್ಸು ಬರಲಾಗುವುದಿಲ್ಲ, ಇನ್ನು ಮುಂದೆಂದೂ ನನ್ನವರನ್ನು ನೋಡುವ ಅವಕಾಶವೇ ಇಲ್ಲ, ಸತ್ತರೆ ಅಲ್ಲೇ ಸಾಯಬೇಕು ಎಂಬ ಕಟುವಾದ ಸತ್ಯ ನನಗೆ ತುಂಬಾ ಭಯ ಹುಟ್ಟಿಸುತ್ತದೆಯಾದರೂ, ಮನುಕುಲವನ್ನು ಊಹಿಸಲಾಗದಷ್ಟು ಮುಂದೊಯ್ಯುವ ಈ ಸದವಕಾಶದಲ್ಲಿ ನಾನ್ಯಾಕೆ ಭಾಗಿಯಾಗಬಾರದು ಎಂದೆಣಿಸಿ ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಏನಾದರೂ ಒಳ್ಳೆಯದು ಸಾಧಿಸಬೇಕಾದರೆ ಸ್ವಲ್ಪ ಮಟ್ಟಿಗಾದರೂ ಅಪಾಯ ಎದುರಿಸಬೇಕಾಗುತ್ತದೆ ಎನ್ನುವುದು ವಾಸ್ತವ ಅಲ್ಲವೆ?' ಎಂದು ಆತ್ಮವಿಶ್ವಾಸದಿಂದಲೇ ಕೇಳುತ್ತಾನೆ. ಅವನ ಅಮ್ಮ ಅಂಡಾ ಮಾರ್ಟ್ಸ್ ಹೇಳುವಂತೆ 'ಈ ಪ್ರಯಾಣ ನನಗೆ ಭಯಂಕರ ಅಂಜಿಕೆ ಹಾಗೂ ಆತಂಕ ತಂದಿದೆ. ಆದರೆ 2022ನೇ ಇಸವಿಗೆ ಇನ್ನೂ 9-10 ವರ್ಷಗಳಿವೆಯಲ್ಲ, ಅಲ್ಲಿಯ ತನಕ ಏನಾಗುತ್ತದೋ ನೋಡೋಣ. ಕೊಮರ್ ಮನಸ್ಸು ಬದಲಾಯಿಸಿದರೂ ಬದಲಾಯಿಸಬಹುದು'.
ಮಂಗಳ ತಲುಪಿದ ಮೇಲೆ
ಅಂತೂ ಇಂತು ಏಳು ತಿಂಗಳ ನೌಕಾ ಪ್ರಯಾಣ ಮುಕ್ತಾಯವಾದ ಮೇಲೆ ಬದುಕುಳಿದವರು ಮಂಗಳನ ಮೇಲೆ ಇಳಿಯುತ್ತಾರೆ. ಮಂಗಳನ ಮಣ್ಣನ್ನು ಮುಷ್ಠಿಯಲ್ಲಿ ಹಿಡಿಯುವ ಈ ಸಾಹಸ, ರೋಮಾಂಚನ, ಸಂತೋಷದ ಪರಮಾವಧಿಯ ಮಿಶ್ರಿತ ಭಾವಗಳಿಗೆ ಸರಿಸಾಟಿ ಯಾವುದು? ವಿಶ್ವವನ್ನೇ ಗೆದ್ದಂತೆ ಲಭಿಸುವ ಈ ಹೆಮ್ಮೆಯ ಭಾವವನ್ನು ಹಂಚಿಕೊಳ್ಳಲು, ಎದೆ ಬೀಗಿ ನಿಂತು ತೋರಿಸಲು, ಬಂಧು ಬಳಗ ಯಾರೂ ಜೊತೆಗಿಲ್ಲ ಎನ್ನುವುದೊಂದೇ ಬೇಸರ. ಭುವಿಯ ಕೊಂಡಿಯನ್ನೇ ಕಳಚಿಕೊಂಡ ಈ ನಾಲ್ವರು ಮಂಗಳನ ಮೇಲೆ ಬದುಕುವ ಹೊಸ ಉಪಾಯಗಳನ್ನು, ಚಮತ್ಕಾರಗಳನ್ನು, ರೀತಿನೀತಿಗಳನ್ನು ಒಂದೊಂದಾಗಿ ಕಲಿತುಕೊಳ್ಳುವ, ಹವಾ ವೈಪರೀತ್ಯಗಳಿಂದ ರಕ್ಷಿಸಿಕೊಳ್ಳುವ ವಿದ್ಯೆಗಳನ್ನು ಹುಡುಕಿಕೊಳ್ಳಬೇಕು. ಸ್ನಾನಕ್ಕೆ ನೀರು, ಅಡಿಗೆ ಮಾಡಲು ಬೆಂಕಿ, ಮೈ ಮುಚ್ಚಿಕೊಳ್ಳಲು ಬಟ್ಟೆಯಿಂದ ಹಿಡಿದು ಒಂದೊಂದಾಗಿ ಹೊಂದಿಸಿಕೊಂಡು, ಕಾಲಕ್ರಮೇಣ ಒಂದು ಚೌಕಟ್ಟಿನಲ್ಲಿ ಬಾಳ್ವೆ ನಡೆಸಲು ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಇವರು ಕಟ್ಟಿದ ಮನೆಗಳು ಒಂದಕ್ಕೊಂದು ಹೊಂದಿಕೊಂಡಂತೆಯೇ ಇರುತ್ತದೆ. ಮುಂದಿನ ನಾಲ್ಕು ಜನರ ತಂಡ 2025ಕ್ಕೆ ಹೋಗಿ ಸೇರುತ್ತದೆ. ಅಂತೆಯೇ ಕ್ರಮೇಣ ಮಂಗಳನ ಮೇಲೆ ಮಾನವನ ಹೆಜ್ಜೆಗುರುತುಗಳು ಜಾಸ್ತಿಯಾಗುತ್ತದೆ ಎನ್ನುತ್ತಾನೆ ಲ್ಯಾನ್ಸ್ ಡಾರ್ಪ್. ಅವನೆಣಿಕೆಯಂತೆ ನಡೆಯದೆ ಹೋದರೆ ಮುಂದಿನ ಪ್ರಯಾಣಿಕರನ್ನು ಮಂಗಳನೆಡೆಗೆ ಕಳಿಸುವ ಈ ಪ್ರಾಜೆಕ್ಟನ್ನೇ ಕೈ ಬಿಡುತ್ತಾನಂತೆ. ಸಂಗ್ರಹವಾದ ಅಷ್ಟೂ ಹಣವನ್ನು ಈ ಮಂಗಳ ಕಾರ್ಯಕ್ಕೆ ಸಹಾಯ ಮಾಡಿದ ಸಂಸ್ಥೆಗಳಿಗೆ ಅಥವಾ ಬೇರೆ ಬಾಹ್ಯಾಕಾಶ ಕಂಪನಿಗಳಿಗೆ ಹಂಚಿ ಬಿಡುತ್ತಾನೆ. ಹೊಸ ಗ್ರಹ, ಹೊಸ ಪ್ರಪಂಚ, ಹೊಸ ನೆಲ, ಅಲ್ಲಿ ನಮ್ಮ ಹೊಸ ಮನೆ, ಹೊಸ ಜನರ ಪರಿಚಯ ಈ ಎಲ್ಲ ಅತ್ಯದ್ಭುತಗಳ ವಿಚಿತ್ರ ಆದರೂ ನಿಜ ಎಂಬ ದಿನಗಳು ವಿಜ್ಞಾನದ ಆವಿಷ್ಕಾರದಿಂದ ನಿಜವಾಗುತ್ತಿವೆ. ಮೈ ಜುಂ ಎನ್ನಿಸುವ, ಕಲ್ಪಿಸಿಕೊಂಡರೇ ರೋಮರೋಮಗಳು ಸೆಟೆದು ನಿಲ್ಲುವ ಈ ಸಾಹಸ ಕಾರ್ಯಕ್ಕೆ ಮಂಗಳವಾಗಲಿ ಎಂದು ನಾವೆಲ್ಲರೂ ಮನಃಪೂರ್ವಕವಾಗಿ ಹಾರೈಸೋಣ ಅಲ್ಲವೆ?
ಬಾಹ್ಯಾಕಾಶ ನೌಕೆಯೊಳಗೆ
ಈ ಪ್ರಾಜೆಕ್ಟ್‌ನ ನಿರ್ವಾಹಕರ ಅಭಿಪ್ರಾಯದಂತೆ ಉಡ್ಡಯನ ಸಮಯದಲ್ಲಿ ಆಗುವ ಅಪಘಾತಗಳ ಸಂಭವ, ನೌಕೆಯ ಬಿಡಿಭಾಗಗಳ ಕಾರ್ಯ ವೈಫಲ್ಯ, ಪೃಥ್ವಿಯ ಕಕ್ಷೆಯಿಂದ ಹೊರಬೀಳುವಾಗ ಹಾಗೂ ಮಂಗಳನ ಹೊರಾಂಗಣವನ್ನು ಪ್ರವೇಶಿಸುವಾಗ ಆಗಬಹುದಾದ ಹವಾಮಾನ ವೈಪರೀತ್ಯ, ಮಂಗಳನ ಮಣ್ಣಿನ ಮೇಲೆ ನೌಕೆ ಇಳಿಯುವಾಗಿನ ಆಕಸ್ಮಿಕಗಳು ಹೀಗೆ ಅನಿರೀಕ್ಷಿತ ಅವಘಡಗಳು ಹೆಜ್ಜೆ ಹೆಜ್ಜೆಗೂ ಯಾತ್ರಿಕರನ್ನು ಎದುರುಗೊಳ್ಳಬಹುದು. ಕಿರಿದಾದ ನೌಕೆಯಲ್ಲಿ ಒಬ್ಬರಿಗೆ ಅಂಟಿಕೊಂಡೇ ಇನ್ನೊಬ್ಬರು ಸಮಯ ಕಳೆಯಬೇಕು. ಟಿಷ್ಯೂ ಪೇಪರ್ ಬಳಸಬಹುದಂತೆ. ಕಿವಿಗಡಚಿಕ್ಕುವ ನೌಕೆಯ ಶಬ್ದ ಕಿವಿಗಳಿಗೆ ಅಭ್ಯಾಸವಾಗಬೇಕು. ತಿಂಗಳುಗಟ್ಟಲೆ ಒಣಗಿದ ಡಬ್ಬಿಯಲ್ಲಿ ಶೇಖರಿಸಿದ ಮಾತ್ರೆ ರೂಪದ ಆಹಾರಗಳನ್ನು ಸೇವಿಸಬೇಕು. ಅವರವರ ಮೂತ್ರವನ್ನೇ ಪುನರ್ಬಳಸಿ ತಯಾರಿಸಿದ ನೀರನ್ನೇ ಕುಡಿಯಬೇಕು. ಕಾಯಿಲೆ ಕಸಾಲೆಗಳಿಗೆ ಅವರವರೇ ವೈದ್ಯರಾಗುವಷ್ಟು ವೈದ್ಯಕೀಯ ಜ್ಞಾನ ಸಂಪಾದಿಸಿರಬೇಕು. ಸಹಪ್ರಯಾಣಿಕರು ಅಕಾಲಿಕ ಮರಣಕ್ಕೊಳಗಾದರೆ ಅವರನ್ನು ಅಲ್ಲೇ ಬಿಟ್ಟು ಮುಂದುವರಿಯುವಷ್ಟು ನಿರ್ಲಿಪ್ತತೆ ಇರಬೇಕು. ಈ ಇನ್ನೂರು ದಿನಗಳ ಅವಧಿಯಲ್ಲಿ ಇವರಿಗೆ ಸ್ನಾನದ ಸೌಲಭ್ಯವಿಲ್ಲ.
ಮಾರ್ಸ್ ಪಾರ್ಸ್
ಏಪ್ರಿಲ್ 2013ರಿಂದ ಆಗಸ್ಟ್ 2013: ಅರ್ಜಿ ಸ್ವೀಕರಿಸುವಿಕೆ
ಜನವರಿ 2014ರಿಂದ ಆಗಸ್ಟ್ 2015: ಉಡ್ಡಯನಿಗಳ ಆಯ್ಕೆಗೆ ಸ್ಪರ್ಧೆ
ಆಗಸ್ಟ್ 2015ರಿಂದ ಸೆಪ್ಟೆಂಬರ್ 2022: ಆಯ್ಕೆಯಾದ ನಲ್ವತ್ತು ಉಡ್ಡಯನಿಗಳಿಗೆ ತರಾವರಿ ತರಬೇತಿ
ಸೆಪ್ಟೆಂಬರ್ 2022ರಿಂದ ಏಪ್ರಿಲ್ 2023: ನಾಲ್ಕು ಜನರ ಬಾಹ್ಯಾಕಾಶ ಯಾನ
ಏಪ್ರಿಲ್/ಮೇ 2023: ಮಂಗಳನ ಕೆಂಪು ಮಣ್ಣಿನ ಮೇಲೆ ಮಾನವ
- ಡಾ. ರೇಖಾ ರಾಜೇಂದ್ರಕುಮಾರ್